ಉಪೇಂದ್ರ ಕುಮಾರ್
ಉಪೇಂದ್ರ ಕುಮಾರ್
ಕನ್ನಡ ಸಿನಿಮಾ ಸಂಗೀತದಲ್ಲಿ ಉಪೇಂದ್ರ ಕುಮಾರ್ ಸುಪ್ರಸಿದ್ಧ ಹೆಸರು.
ಉಪೇಂದ್ರ ಕುಮಾರ್ ಅವರು 1941ರ ಜುಲೈ 18ರಂದು ಒದಿಷಾ ರಾಜ್ಯದಲ್ಲಿ ನೆಲೆಸಿದ್ದ ತೆಲುಗು ಕುಟುಂಬದಲ್ಲಿ ಜನಿಸಿದರು. ತಂದೆ ಲಕ್ಷ್ಮಣ ಸ್ವಾಮಿ ಅವರು ಜ್ಯೋತಿಷಿಗಳಾಗಿದ್ದರು.
ಉಪೇಂದ್ರ ಕುಮಾರ್ 7ನೇ ತರಗತಿಯವರೆಗೆ ಓದಿದ ನಂತರ ಸೋದರಮಾವಂದಿರಾದ ಅಪ್ಪಾರಾವ್ ಅವರ ಬೆಂಬಲದಿಂದ ಸಂಗೀತದೆಡೆಗೆ ಹೊರಳಿದರು. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಕಟುನಿಟ್ಟಿನ ಶಿಕ್ಷಣ ಪಡೆದರಲ್ಲದೆ, ಪಾಶ್ಚಿಮಾತ್ಯ ವಾದ್ಯ ಸಂಗೀತ ಮತ್ತು ಭಾರತೀಯ ತಂತಿ ವಾದ್ಯಗಳಲ್ಲಿ ಕ್ರಮಬದ್ಧ ಸಾಧನೆಗಳನ್ನು ಮಾಡಿದರು. ಭುವನೇಶ್ವರ್ ಮಿಶ್ರ ಅವರ ಬಳಿ ಪಿಟೀಲು, ಬಾಲಕೃಷ್ಣ ದಾಸ್ ಬಳಿ ಹಿಂದೂಸ್ತಾನಿ, ದೀನ್ ಭಜನ್ ಸಿಂಗ್ ಬಳಿ ಪಾಶ್ಚಾತ್ಯ ಸಂಗೀತ ಕಲಿತರು. ಉತ್ಕಲ್ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲಿ ಸಂಗೀತ ಪದವಿಯನ್ನು ಗಳಿಸಿದರು.
1965ರಲ್ಲಿ ಅವಕಾಶ ಅರಸಿ ಮದ್ರಾಸಿಗೆ ಬಂದ ಉಪೇಂದ್ರ ಕುಮಾರ್ ಅವರಿಗೆ ಆರಂಭದಲ್ಲಿ ವಾದ್ಯ ಗೋಷ್ಠಿಯಲ್ಲಿ ಅವಕಾಶ ಸಿಕ್ಕಿತು. ಸಂಗೀತ ಪಾಠ ಹೇಳಿ ಹೊಟ್ಟೆಪಾಡು ನೋಡಿಕೊಳ್ಳುತಿದ್ದರು. ಹೀಗೆ ಅವರ ಶಿಷ್ಯೆಯಾಗಿ ಬಂದ ಗೀತಾ ಮುಂದೆ ಅವರ ಮಡದಿಯಾದರು.
ಉಪೇಂದ್ರ ಕುಮಾರ್ 'ಕಠಾರಿ ವೀರ' ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು. ಹಸಿರು ತೋರಣ ಚಿತ್ರದ 'ಒಂದು ದಿನ ಎಲ್ಲಿಂದಲೋ', ಪರೋಪಕಾರಿ ಚಿತ್ರದ 'ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ', 'ಕಣ್ಣು ರೆಪ್ಪೆ ಒಂದನೊಂದು ಮರೆವುದೆ', 'ಜೋಕೆ ನಾನು ಬಳ್ಳಿಯ ಮಿಂಚು'; ಸಿಪಾಯಿ ರಾಮು ಚಿತ್ರದ 'ವಾಹರೇ ಮೇರೆ ಮುರುಗ'; ತ್ರಿವೇಣಿ ಚಿತ್ರದ 'ನೀನಾ ಭಗವಂತ', 'ಕವಿಯ ಮಧುರ ಕಲ್ಪನಾ' ಮುಂತಾದವು ಉಪೇಂದ್ರ ಕುಮಾರ್ ಅವರ ಪ್ರಾರಂಭಿಕ ಹಂತದ ಮಹತ್ವದ ಸಂಯೋಜನೆಗಳು.
ಪ್ರೇಮದ ಕಾಣಿಕೆ ಚಿತ್ರದಲ್ಲಿನ 'ಇದು ಯಾರೋ ಬರೆದ ಕತೆಯೋ', ಶಂಕರ್ ಗುರು ಚಿತ್ರದಲ್ಲಿನ 'ಏನೇನೋ ಆಸೆ', ಧರ್ಮ ಸೆರೆಚಿತ್ರದ 'ಮೂಕ ಹಕ್ಕಿಯು ಹಾಡುತಿದೆ','ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ'; ಧ್ರುವತಾರೆ ಚಿತ್ರದ 'ಆ ರತಿಯೇ ಧರೆಗಿಳಿದಂತೆ', ರಥಸಪ್ತಮಿ ಚಿತ್ರದ 'ಶಿಲೆಗಳು ಸಂಗೀತವ ಹಾಡಿವೆ' ಮುಂತಾದ ಸಂಗೀತ ಸಂಯೋಜನೆಗಳು ಆ ಚಿತ್ರಗಳನ್ನೇ ಅಮರವಾಗಿಸಿವೆ. ನಂಜುಂಡಿ ಕಲ್ಯಾಣದ 'ಒಳಗೆ ಸೇರಿದರೆ ಗುಂಡು', 'ಇನ್ನು ಗ್ಯಾರಂಟಿ ನಂಜುಂಡಿ ಕಲ್ಯಾಣ' ಮುಂತಾದವು ಆ ಚಿತ್ರದ ಯಶಸ್ಸಿಗೆ ಪುಟವಿಟ್ಟಂತಿದ್ದವು. ಹೃದಯ ಹಾಡಿತು ಚಿತ್ರದ 'ನಲಿಯುತ ಹೃದಯ ಹಾಡನು ಹಾಡಿದೆ' ಕೇಳಿ ನಲಿಯದ ಹೃದಯವೇ ಇಲ್ಲ. 'ನಿನ್ನಂಥ ಅಪ್ಪ ಇಲ್ಲ, ನಿನ್ನಂಥ ಮಗಳು ಇಲ್ಲ' ತಂದೆ ಮಗಳ ಸಂಬಂಧದ ಚೆಲುವು ನಲಿವುಗಳನ್ನು ಕಟ್ಟಿಕೊಟ್ಟಿರುವ ಸೊಗಸಿನ ಸಂಯೋಜನೆ.
ಉಪೇಂದ್ರ ಕುಮಾರ್ ಅವರು ಸುಂದರ ಭಕ್ತಿಗೀತೆಗಳ ಅಲ್ಬಮ್ಗಳನ್ನೂ ಹೊರತಂದರು. ರಾಜ್‍ಕುಮಾರ್ ಅವರ ಧ್ವನಿಯಲ್ಲಿ ಅವರು ಸಂಯೋಜಿಸಿದ ಗುರು ರಾಘವೇಂದ್ರರು ಮತ್ತು ಹನುಮಾನ್ ಸ್ಮರಣೆಯ ಗೀತೆಗಳೆಲ್ಲ ಒಂದಕ್ಕಿಂದ ಒಂದು ಎಂಬಷ್ಟು ಸುಂದರವಾದದ್ದು. ಚಲನಚಿತ್ರದಲ್ಲಿಯೂ ಮೂಡಿದ 'ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು ರಾಘವೇಂದ್ರ' ಮುಂತಾದವು ಭಕ್ತಿಗೀತೆಗಳಲ್ಲಿ ಹೊಸತನ ತುಂಬಿಕೊಂಡಿರುವ ಸಂಯೋಜನೆಗಳು. ಅಂದು ಪುಟ್ಟ ಬಾಲಕಿಯಾಗಿದ್ದ ನಮ್ಮ ಪ್ರಖ್ಯಾತ ಹಾಡುಗಾರ್ತಿ ಸಂಗೀತಾ ಕಟ್ಟಿ Sangeeta Katti Surbahar ಅವರಿಂದ 'ದಾಸಮಂಜರಿ' ಎಂಬ ಮೊದಲ ಆಲ್ಬಂ ಮಾಡಿ ಪ್ರಸಿದ್ಧಿಗೊಳಿಸಿದವರು ಉಪೇಂದ್ರಕುಮಾರ್.
ಜೀವನ ಚೈತ್ರ ಚಿತ್ರದ 'ನಾದಮಯ' ಝೇಂಕರಿಸಿದ ರೀತಿ ಅಮರತ್ವದ್ದು. ರಾಜ್‍ಕುಮಾರ್ ಅವರಿಗೆ ಗಾಯನದಲ್ಲಿ ರಾಷ್ಟ್ರೀಯ ಗೌರವ ತಂದದ್ದು ಈ ಗೀತೆ.
ಸುಮಾರು 210 ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದ ಉಪೇಂದ್ರ ಕುಮಾರ್, ಬಹುತೇಕ ಕನ್ನಡ ಚಿತ್ರಗಳಿಗೇ ಸಂಗೀತ ನೀಡಿದ್ದರು. ತೆಲುಗು, ತಮಿಳು, ಒರಿಯಾ, ಮಲಯಾಳ, ಬಂಗಾಳಿ ಮತ್ತು ತುಳುವಿನಲ್ಲಿ ಕೆಲವೊಂದು ಚಿತ್ರಗಳಿಗೆ ಸಹಾ ಅವರು ಸಂಗೀತ ನೀಡಿದ್ದರು.
ಉಪೇಂದ್ರ ಕುಮಾರ್ ಅವರಿಗೆ ನಂಜುಂಡಿ ಕಲ್ಯಾಣ, ಹೃದಯ ಹಾಡಿತು, ಜೀವನ ಚೈತ್ರ ಚಿತ್ರಗಳಿಗೆ ಶ್ರೇಷ್ಠ ಸಂಗೀತ ನಿರ್ದೇಶಕ ರಾಜ್ಯ ಪ್ರಶಸ್ತಿ ಸಂದಿತು. ಅವರು ಸಂಗೀತ ನೀಡಿದ 18 ಚಿತ್ರಗಳು 25ವಾರ ಓಡಿದ ಯಶಸ್ಸು ಕಂಡಿದ್ದವು.
ಉಪೇಂದ್ರ ಕುಮಾರ್ 2002 ವರ್ಷದ ಜನವರಿ 24ರಂದು ಈ ಲೋಕವನ್ನಗಲಿದರು. ಅವರು ಸಂಯೋಜಿಸಿದ ಸಂಗೀತ ನಿತ್ಯದಲ್ಲಿ ನಮ್ಮ ನಡುವೆ ಮಧುರವಾಗಿ ಅಣುರಣಿಸುತ್ತಲೇ ಇದೆ.
On the birth anniversary of great music director Upendra Kumar

ಕಾಮೆಂಟ್‌ಗಳು