ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೂರ್ಯನಾಥ ಕಾಮತ್


 ಅಪೂರ್ವ ಇತಿಹಾಸಜ್ಞ 
ಡಾ. ಸೂರ್ಯನಾಥ ಕಾಮತ್


ಡಾ. ಸೂರ್ಯನಾಥ ಕಾಮತ್ ಎಂದರೆ ಇತಿಹಾಸಾಕ್ತರಿಗೆ ಕರ್ನಾಟಕದ ಇತಿಹಾಸವನ್ನು ಸಮಗ್ರವಾಗಿ ಬಲ್ಲ ಇತಿಹಾಸಕಾರ ಮತ್ತು ಅವರ ಶಿಷ್ಯರಿಗೆ ಅವರು ಒಳ್ಳೆಯ ಸರ್.  ನಮಗೇನಾದರೂ ಕರ್ನಾಟಕದ  ಬಗೆಗಿನ ಯಾವುದೇ ಊರು, ಹಳ್ಳಿ, ಕಲ್ಲು ಇತ್ಯಾದಿಗಳ ಯಾವುದೇ ವಿಚಾರದ ಬಗ್ಗೆ ತಿಳುವಳಿಕೆ ಬೇಕಿದ್ದರೂ ಸೂರ್ಯನಾಥ ಕಾಮತ್ ಅವರಲ್ಲಿ ಕೇಳಬೇಕು ಎಂಬ  ಮಾತು  ವಾಡಿಕೆಯಾಗಿಹೋಗಿತ್ತು.  ಅದೊಂದು ಸುಂದರ ಕಥೆಯಾಗಿ ಒಂದು ವಿಚಾರಕ್ಕೆ ಇಷ್ಟೊಂದು ಸೊಗಸಾದ ಹಿನ್ನೆಲೆಯ ಭಾವವಿದೆಯೇ ಎಂದು ಅಚ್ಚರಿ ಮೂಡುತ್ತಿತ್ತು.  ಸೊಗಸಾದ ಕಥೆಯನ್ನು ಮಕ್ಕಳಾಗಿದ್ದಾಗ ಕೇಳುತ್ತಾ ಮೈಮರೆತು, ಮತ್ತಷ್ಟು ಬೇಕು ಆ ಕಥೆ ಎಂದು ಕೇಳುತ್ತಿದ್ದಂತೆ, ನಿರಂತರವಾಗಿ ನಮ್ಮ ಮನದ ಕಿವಿಗಳಿಗೆ ಇನ್ನೂ ನಿನಾದವಾಗಿ ಹರಿಯುತ್ತಲೇ ಇರಬೇಕೆಂಬ ತೀರದ ಆಸೆ ಮೂಡತೊಡಗುತ್ತಿತ್ತು.  ಅವರ ಉಪನ್ಯಾಸಗಳನ್ನು ನೇರವಾಗಿ ಮತ್ತು ದೂರದರ್ಶನದ ಪ್ರಸಾರಗಳಲ್ಲಿ ಕೇಳಿ ಈ ಭಾವವನ್ನು ಅನುಭವಿಸಿದ್ದೇನೆ.  ಶಿಸ್ತಿಗೆ ಆದ್ಯತೆ ನೀಡುತ್ತಿದ್ದ ಅಧ್ಯಯನಶೀಲ ಇತಿಹಾಸಕಾರರವರು.  ಸಂಘಟನೆಯಲ್ಲೂ ಕಾಮತರದು ವಿಶಿಷ್ಟ ಹೆಸರು.  ಇತಿಹಾಸವನ್ನು ಜನಪ್ರಿಯಗೊಳಿಸುವ ಪ್ರಯತ್ನದಲ್ಲಿ ಅವರದು
ಮಹತ್ವದ ಸೇವೆ.  ಅವರು ವೃತ್ತಿ ಜೀವನದಿಂದ ನಿವೃತ್ತರಾದರೂ ಇತಿಹಾಸದ ಬಗ್ಗೆ ತಮ್ಮ ಕೊನೆಯವರೆವಿಗೂ  ವಿಶ್ವಾಸವನ್ನು ಉಳಿಸಿಕೊಂಡಿದ್ದವರು.

ಸೂರ್ಯನಾಥ  ಕಾಮತ್  1937ರ ಏಪ್ರಿಲ್ 26ರಂದು ಜನಿಸಿದರು. ಸೂರ್ಯನಾಥ ಕಾಮತರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಹುಟ್ಟಿ ಪ್ರಾಥಮಿಕ ಶಿಕ್ಷಣವನ್ನು ಅಲ್ಲೇ ಪಡೆದರು.  ಬಂಟ್ವಾಳದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದು ನಂತರ ಮಂಗಳೂರಿನ ಸೆಂಟ್ ಎಲೂಷಿಯಸ್ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ ಮುಗಿಸಿ ಧಾರವಾಡದಲ್ಲಿ ಬಿ.ಎ ಪದವಿ ಪಡೆದರು.  ಸೂರ್ಯನಾಥ ಕಾಮತ್ ಬಾಲ್ಯದಲ್ಲಿ ಕಾಂಗ್ರೆಸ್ಸಿಗರೊಡನೆ ಹೆಚ್ಚು ಸಂಪರ್ಕ ಹೊಂದಿದ್ದರು.  ನಾರಾಯಣಾಚಾರ್ಯ ನಾವೂರಕರರ ಪ್ರಭಾವದಿಂದ ಸಾಹಿತ್ಯ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು 1952ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ವೈಕುಂಠ ಬಾಳಿಗ ಮತ್ತು ಬೆನಗಲ್ ಶಿವರಾಯರ ಪರವಾಗಿ ಶಾಲೆ ಬಿಟ್ಟು ಪ್ರಚಾರವನ್ನೂ ಮಾಡಿದ್ದರು.  ಆಗಿನಿಂದಲೇ ಪತ್ರಿಕೆಗಳನ್ನು ಓದುವ ಆಸಕ್ತಿ ಬೆಳೆಸಿಕೊಂಡ ಕಾಮತರು ವಿದ್ಯಾರ್ಥಿಯಾಗಿದ್ದಾಗಲೇ ಬರವಣಿಗೆಯನ್ನೂ ಆರಂಭಿಸಿದರು.  ಮಂಗಳೂರಿನಲ್ಲಿ ಓದುತ್ತಿದ್ದಾಗ ಸೋದರಮಾವನ ಮಕ್ಕಳ ಮೂಲಕ ಆರ್ಎಸ್ಎಸ್ ಶಾಖೆಯ ಸಂಪರ್ಕ ಪಡೆದು ಸ್ನೇಹಿತರು ಮತ್ತು ಸಾಹಿತ್ಯದಿಂದ ಪ್ರಭಾವಿತರಾಗಿ ನಿಷ್ಠಾವಂತ ಕಾರ್ಯಕರ್ತರಾದರು.  ಓದುತ್ತಿದ್ದಾಗಲೇ ಐತಿಹಾಸಿಕ ಕಥೆಗಳನ್ನು ಬರೆಯತೊಡಗಿದ ಅವರು ಭಾಷಣಕಾರರಾಗಿಯೂ ರೂಪುಗೊಂಡರು.

ಅವರ ನೆನಪಿನ ಶಕ್ತಿಯ ಬಗ್ಗೆ ಅಚ್ಚರಿ ಮೂಡುತ್ತಿತ್ತು.  ತಾವು ಐದು ವರ್ಷದ ಮಗುವಾಗಿದ್ದಾಗಲೇ ತಮ್ಮ ಅಣ್ಣನ ಜೊತೆಗೆ  ಸ್ವಾತಂತ್ರ್ಯ ಹೋರಾಟದ ಚಳುವಳಿಗಳಲ್ಲಿ ಪಾಲ್ಗೊಳ್ಳುತ್ತಿದ್ದುದು ಕಾಮತರ ನೆನಪಿನಲ್ಲಿತ್ತು.  ಕೆಲವರಿಗೆ ವಯಸ್ಸಿಗೆ ತಕ್ಕ ಮರೆವು ಇರುತ್ತದೆ.  ಸೂರ್ಯನಾಥ ಕಾಮತರಿಗೆ ಅದು ಕೊನೆಯ ದಿನಗಳಲ್ಲಿ  ಇದ್ದಿರಬಹುದಾದರೂ ಇತಿಹಾಸದ ಯಾವುದೇ ಪುಟದ ಯಾವುದೇ ಸಾಲು ಇಸವಿಯ ಸಮೇತ ಸದಾ ನೆನಪಿನಲ್ಲಿರುತ್ತಿತ್ತು.  ಕರ್ನಾಟದ ಇತಿಹಾಸದ ಬಗ್ಗೆ ಪ್ರೀತಿ ಇರುವ ಎಲ್ಲರಿಗೂ ಕಾಮತ್ ವಿಶ್ವಾಸಾರ್ಹ ವ್ಯಕ್ತಿಯಾಗಿದ್ದರು.

ಧಾರವಾಡದಲ್ಲಿ ಇತಿಹಾಸದ ಸ್ನಾತಕೋತ್ತರ ವಿದಾರ್ಥಿಯಾದ ಸೂರ್ಯನಾಥ ಕಾಮತರು ಪ್ರೊ. ಬಿ.ವಿ. ಕಾಳೆ, ಪ್ರೊ. ಬಿ. ಎ. ಸಾಲೆತ್ತೂರ್, ಪ್ರೊ. ಜಿ. ಎಸ್. ದೀಕ್ಷಿತ್ ಅವರಂತಹ ಪ್ರಾಧ್ಯಾಪಕರಿಂದ ಇತಿಹಾಸ ಕಲಿತರು.  ಅವರ ಮಾರ್ಗದರ್ಶನ ಕಾಮತರ ಪಾಲಿಗೆ ಸಂಜೀವಿನಿ ಆಯಿತು.  ಪ್ರೊ. ಬಿ. ಎ. ಸಾಲೆತ್ತೂರ್ ಅವರ  ಪ್ರಭಾವದಿಂದ ಕಾಮತರು ಕರ್ನಾಟಕದ ಇತಿಹಾಸದ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡರು.  ಕಾಲೇಜಿಗೆ ರಜೆ ಇದ್ದ ಸಂದರ್ಭದಲ್ಲಿ ಆರ್ಎಸ್ಎಸ್ ಕೆಲಸಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಕೊಳ್ಳುತ್ತಿದ್ದರು.  ಇದರಿಂದ ಅವರಿಗೆ ಅನೇಕ ಸ್ಥಳಗಳ ಪರಿಚಯ ಮಾತ್ರವಲ್ಲದೆ ವಿಭಿನ್ನ ಮನೋಭಾವದ ಜನರ ಪರಿಚಯವಾಗಿ ಅನುಭವ ಶ್ರೀಮಂತವಾಯಿತು.  

ಜನಸಂಪರ್ಕದ ಮೂಲಕ ಅನೇಕ ಸಂಕುಚಿತ ವಿಚಾರಗಳು ಮರೆಯಾದವು.  ಎಂ. ಎ. ಆದ ತಾರುಣ್ಯದಲ್ಲಿ ಸಂಘದ ಪ್ರಚಾರಕರಾದ ಕಾಮತರು ಮೂರು ವರ್ಷಗಳ  ಕಾಲ ಅಲ್ಲಿ ದುಡಿದರು.  ಪ್ರಚಾರಕ ಕಾರ್ಯದಿಂದ ಬಿಡುಗಡೆ ಪಡೆದು ಸಾಲೆತ್ತೂರ್ ಮಾರ್ಗದರ್ಶನದಲ್ಲಿ ಪಿಎಚ್.ಡಿ ಗೆ ನೋಂದಣಿ ಮಾಡಿಸಿಕೊಂಡರೂ, ಪ್ರೊ.ಜಿ. ಎಸ್. ದೀಕ್ಷಿತ್ ಅವರ ಮಾರ್ಗದರ್ಶನದಲ್ಲಿ ಮುಂದುವರೆಸಿದರು.  ಉದ್ಯೋಗವನ್ನು ಅರಸಿಕೊಂಡು ಮುಂಬಯಿಗೆ ಹೋದರು.  ಆ ಹೊತ್ತಿಗೆ ತಮ್ಮ ಲೇಖನಗಳ ಮೂಲಕ ಕನ್ನಡ ಓದುಗರಿಗೆ ಪರಿಚಿತರಾಗಿದ್ದ ಕಾಮತ್ ಮುಂಬಯಿಯ ಫ್ರೀಪ್ರೆಸ್ಸ್ ಜರ್ನಲ್‍ನಲ್ಲಿ ಉಪಸಂಪಾದಕರಾಗಿ ಸೇವೆ ಸಲ್ಲಿಸುವ ಅವಕಾಶ ಮಾಡಿಕೊಂಡರು.  ಪ್ರೊ. ವಿಲಿಯಂ ಕೊಯಿಲ್ಹೋ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ವಿಜಯನಗರ ಕಾಲದ ತುಳುನಾಡು’ ಪ್ರಬಂಧಕ್ಕೆ ಮುಂಬಯಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದು, ಕರ್ನಾಟಕಕ್ಕೆ ಹಿಂದಿರುಗಿದರು.  ಪಿಎಚ್.ಡಿ. ಪಡೆಯಲೆಂದು ಮಾತ್ರ ಅವರು ಮುಂಬಯಿಗೆ ಹೋಗಿದ್ದರು.  ಅಲ್ಲಿ ಅಧ್ಯಯನ ನಡೆದಿದ್ದಾಗ ಜೀವನಕ್ಕಾಗಿ ಕೆಲಸ ಮಾಡಿದರು.  ಅವರ ಗುರಿ ಕರ್ನಾಟಕದ ಇತಿಹಾಸವನ್ನು ಅಭ್ಯಾಸ ಮಾಡಿ ಆ ಬಗ್ಗೆ ಕೃತಿಗಳನ್ನು ರಚಿಸುವುದೇ ಆಗಿತ್ತು.  

ಆಗ ತಾನೇ ಬೆಂಗಳೂರಿನಲ್ಲಿ ಆರಂಭವಾಗಿದ್ದ ಒಂದು ಹೊಸ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯಾರಂಭ ಮಾಡಿ, ಕಾರಣಾಂತರಗಳಿಂದ ಕೆಲವು ತಿಂಗಳುಗಳಲ್ಲಿಯೇ ಅಲ್ಲಿಂದ ಬಿಡುಗಡೆ ಪಡೆದು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಹದಿನಾರು ತಿಂಗಳು ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದರು.  ಇತಿಹಾಸಕಾರನಾಗಬೇಕೆನ್ನುವ ಹಂಬಲವೇ ಪ್ರಬಲವಾಗಿದ್ದ ಕಾಮತ್ ಅವರಿಗೆ ಬೋಧಕ ವೃತ್ತಿ ಪ್ರಿಯವಾಗಿತ್ತು.  ಅದಕ್ಕೆ ಅನುಕೂಲವಾಗುವಂತೆ ಆಚಾರ್ಯ ಪಾಠಶಾಲಾ ಸಂಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.  ‘ಪ್ರಜಾವಾಣಿ’ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ ಅವರು ‘ಕರ್ನಾಟಕದ ಸಂಕ್ಷಿಪ್ತ ಇತಿಹಾಸ’ ಪ್ರಕಟಿಸಿದರು.

ಕಾಮತ್ ಮೂರು ಸಂಪುಟಗಳಲ್ಲಿ ಸಂಪಾದಿಸಿದ ‘ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು’ (ಸುಮಾರು 3200ಕ್ಕೂ ಹೆಚ್ಚು ಪುಟಗಳ ಈ ಕೃತಿಯಲ್ಲಿ ಸುಮಾರು 800 ಹಿರಿಯ ಸ್ವಾತಂತ್ರ ಹೋರಾಟಗಾರರ ನೆನಪುಗಳಿವೆ).  ಇಂಗ್ಲಿಷಿನಲ್ಲಿ ಬರೆದ ‘ಕ್ವಿಟ್ ಇಂಡಿಯಾ ಮೂವ್ಮೆಂಟ್ ಇನ್ ಕರ್ನಾಟಕ’ ಕೃತಿಗಳು ಅವರ ಅಧ್ಯಯನಶೀಲತೆಗೆ ಉದಾಹರಣೆಗಳಾಗಿವೆ.

1982ರಲ್ಲಿ ಕೆಲವು ತಿಂಗಳುಗಳ ಕಾಲ ಕರ್ನಾಟಕ ರಾಜ್ಯ ಪತ್ರಾಗಾರದ ನಿರ್ದೇಶಕರಾಗಿ ಮತ್ತು ಕರ್ನಾಟಕ ಗೆಜೆಟಿಯರ್ ಇಲಾಖೆಯ ಮುಖ್ಯ ಸಂಪಾದಕರಾಗಿ ಕಾಮತ್ ಸಲ್ಲಿಸಿರುವ ಸೇವೆ ವಿಶಿಷ್ಟವಾದುದು.  ಸಮಗ್ರ ಕರ್ನಾಟಕಕ್ಕೆ ಸಂಬಂಧಿಸಿದ ಕರ್ನಾಟಕ ರಾಜ್ಯ ಗೆಜೆಟಿಯರಿನ ಎರಡು ಸಂಪುಟಗಳು (ಕನ್ನಡದಲ್ಲಿ ಮೂರು) ಮಾತ್ರವಲ್ಲದೆ, ಆರು ಜಿಲ್ಲೆಗಳ ಗೆಜೆಟಿಯರ್ ಗಳನ್ನು ತಮ್ಮ ಅಧಿಕಾರಾವಧಿಯಲ್ಲಿ ಪ್ರಕಟಿಸಿರುವ ಕಾಮತ್ ಬಿಡುವಿನ ವಿರೋಧಿ.  ಅವರ ಕರ್ನಾಟಕ ಕೈಪಿಡಿ ಕರ್ನಾಟಕದ ಬಗ್ಗೆ ತಿಳಿಯಬೇಕೆನ್ನುವವರಿಗೆ ನಿಜಕ್ಕೂ ಒಂದು ಕೈಪಿಡಿ.

ಹಲವು ವರ್ಷಗಳಿಂದ ಮಿಥಿಕ್ ಸೊಸೈಟಿಯ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದ ಕಾಮತ್, ಅದರ ಗೌರವ ಕಾರ್ಯದರ್ಶಿಗಳಾಗಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.  ವಿಶ್ವಮನ್ನಣೆ ಪಡೆದ ಮಿಥಿಕ್ ಸೊಸೈಟಿಯ ತ್ರೈಮಾಸಿಕ ವಿದ್ವತ್ ಪತ್ರಿಕೆಯನ್ನೂ ಹಲವಾರು ವರ್ಷಗಳವರೆಗೆ  ಅವರು ಸಂಪಾದಿಸುತ್ತಿದ್ದರು.

ಸುವರ್ಣ ವರ್ಷವನ್ನು ಆಚರಿಸಿಕೊಂಡ ‘ಕರ್ನಾಟಕ ಇತಿಹಾಸ ಅಕಾಡೆಮಿ’ಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ, ಹತ್ತು ವರ್ಷಗಳಿಗೂ ಹೆಚ್ಚು ಕಾಲ ಅದರ ಅಧ್ಯಕ್ಷರಾಗಿ ಸಂಘಟನೆಯಲ್ಲೂ ತಮ್ಮ ಛಾಪನ್ನು ಒತ್ತಿದ್ದ  ಕಾಮತ್ ಕೊನೆಯವರೆವಿಗೂ   ಕರ್ನಾಟಕ ಇತಿಹಾಸ ಅಕಾಡೆಮಿಯ ಗೌರವಾಧ್ಯಕ್ಷರಾಗಿದ್ದರು.  ಸೂರ್ಯನಾಥ ಕಾಮತರ ‘ಹಿಂದಿರುಗಿ ನೋಡಿದಾಗ’ ಪ್ರಬಂಧ ಅವರ ಅತ್ಮಚರಿತ್ರೆಯೂ ಹೌದು.  

ಹಲವು ಕೃತಿಗಳು ಮತ್ತು ಶಿಷ್ಯರ ಮೂಲಕ ಕರ್ನಾಟಕದ ಇತಿಹಾಸಕಾರರೆಂದು ಖ್ಯಾತಿ ಪಡೆದಿದ್ದ ಕಾಮತ್  ತಮ್ಮ 78ನೆಯ ವರ್ಷದಲ್ಲಿ,  2015ರ ಅಕ್ಟೋಬರ್ 21ರಂದು ಈ ಲೋಕವನ್ನಗಲಿದರು.  

(ಆಧಾರ:  ಡಾ. ಎಚ್. ಎಸ್. ಗೋಪಾಲರಾವ್ 
Gopala Rao ಅವರ ಪ್ರಜಾವಾಣಿಯಲ್ಲಿ ಪ್ರಕಟಿತ ಲೇಖನ)

On the birth anniversary of great historian Dr Suryanath Kamath 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ