ರಂ. ಶಾ. ಲೋಕಾಪುರ
ರಂ. ಶಾ. ಲೋಕಾಪುರ
'ತಾಯಿ ಸಾಹೇಬ', 'ಸಾವಿತ್ರಿ', 'ಜ್ಞಾನೇಶ್ವರಿ' ಮುಂತಾದ ಹಲವಾರು ಕೃತಿಗಳಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ‘ರಂ. ಶಾ’ ಎಂದೇ ಪ್ರಸಿದ್ಧರಾಗಿದ್ದವರು ರಂಗನಾಥ ಶಾಮಾಚಾರ್ಯ ಲೋಕಾಪುರ ಅವರು.
ರಂ. ಶಾ. ಲೋಕಾಪುರ ಅವರು 1932ರ ಜುಲೈ 13ರಂದು ಜಮಖಂಡಿ ತಾಲ್ಲೂಕಿನ ಹುನ್ನೂರಿನಲ್ಲಿ ಜನಿಸಿದರು. ತಂದೆ ಶಾಮಾಚಾರ್ಯರು ಮತ್ತು ತಾಯಿ ಇಂದಿರಾಬಾಯಿಯವರು. ಲೋಕಾಪುರ ಅವರ ಪ್ರಾರಂಭಿಕ ಶಿಕ್ಷಣ ಬೆಳಗಾವಿಯಲ್ಲಿ ನೆರವೇರಿತು. ತಂದೆ ಹಳಗನ್ನಡ, ಛಂದಸ್ಸುಗಳಲ್ಲಿ ವಿದ್ವಾಂಸರಾಗಿದ್ದುದರ ದೆಸೆಯಿಂದಾಗಿ ಲೋಕಾಪುರರಿಗೆ ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಮೊಳೆಯಲು ಪ್ರೇರಣೆ ದೊರಕಿತ್ತು. ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ಅವರಿಗೆ ಕನ್ನಡ, ಸಂಸ್ಕೃತದಲ್ಲಿ ಆಸಕ್ತಿ ಹುಟ್ಟಿತು. ಪ್ರ. ಗೋ. ಕುಲಕರ್ಣಿಯವರಿಂದ ಹಳೆಗನ್ನಡ ಪಾಠವಾಯಿತು. ಬೆಳಗಾವಿಯಲ್ಲಿ ಇಂಟರ್ ಮೀಡಿಯೆಟ್ ಕಾಲೇಜು, ಕೊಲ್ಹಾಪುರದ ರಾಜಾರಾಂ ಕಾಲೇಜಿನಿಂದ ಬಿ.ಎಸ್ಸಿ ಪದವಿ ಪಡೆದರು. ಕಾಲೇಜಿನ ದಿನಗಳಲ್ಲಿಯೇ ರಂ. ಶಾ. ಲೋಕಾಪುರ ಅವರಿಗೆ ಪ್ರಾಚಾರ್ಯರಾಗಿದ್ದ ವಿ. ಕೃ. ಗೋಕಾಕರೊಡನೆ ಸಂಪರ್ಕ ಲಭಿಸಿತು. ಇಂಗ್ಲಿಷ್ ಸಾಹಿತ್ಯದ ಪರಿಚಯವೂ ಚೆನ್ನಾಗಿ ದೊರಕಿತು. ಇದಲ್ಲದೆ ಹಿಂದೀ ಭಾಷೆಯನ್ನೂ ಕಲಿತು ಹಿಂದೀ ಸಾಹಿತ್ಯವನ್ನು ಅಭ್ಯಾಸ ಮಾಡಿದ್ದಲ್ಲದೆ ಪ್ರೇಮಚಂದರ ಎಂಟು ಹಿಂದಿ ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು. ರಂ. ಶಾ. ಲೋಕಾಪುರ ಅವರು ಉದ್ಯೋಗಕ್ಕಾಗಿ ಸೇರಿದ್ದು ಮುಂಬೈನ ಅಕೌಂಟೆಂಟ್ ಜನರಲ್ರವರ ಕಚೇರಿಯಲ್ಲಿ.
ಪಿ.ಜಿ. ವುಡ್ಹೌಸರ ಪುಸ್ತಕಗಳನ್ನೋದಿ ಪ್ರಭಾವಿತರಾದ ರಂ.ಶಾ. ಲೋಕಾಪುರ ಅವರು ಸುಧಾ, ಮಯೂರ ಪತ್ರಿಕೆಗಳಲ್ಲಿ ಅನೇಕ ಹಾಸ್ಯ ಲೇಖನಗಳನ್ನು ಮೂಡಿಸಿದ್ದರು. ಸುಧಾ ಯುಗಾದಿ ಕಾದಂಬರಿ ಸ್ಪರ್ಧೆಯಲ್ಲಿ ಇವರ ‘ಸಾವಿತ್ರಿ’ ಕಾದಂಬರಿಗೆ ಮೊದಲ ಬಹುಮಾನ ಸಂದಿತ್ತು. ಟಿ.ಎಸ್. ರಂಗಾ ಅವರು ಈ ಕಥೆಯನ್ನಾಧರಿಸಿ ಇದೇ ಹೆಸರಿನಿಂದ ಚಲನಚಿತ್ರವನ್ನು ಮೂಡಿಸಿದ್ದರು. ರಂ. ಶಾ ಅವರ ಎರಡನೆಯ ಕಾದಂಬರಿ ‘ತಾಯಿ ಸಾಹೇಬ’. ಈ ಕಥೆಯನ್ನು ಇದೇ ಹೆಸರಿನಿಂದ ಗಿರೀಶ್ ಕಾಸರವಳ್ಳಿಯವರು ಚಲನಚಿತ್ರವನ್ನಾಗಿಸಿದರು. ಈ ಎರಡೂ ಚಿತ್ರಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ ಪಡೆದವು. ಮುಂದೆ ಇವರ ಮೂರನೆಯ ಕಾದಂಬರಿ ‘ನೂರು ತಲೆ ಹತ್ತು ಕಾಲು’ ಪ್ರಕಟಗೊಂಡಿತು.
ರಂ. ಶಾ. ಲೋಕಾಪುರ ಅವರ ಹಲವಾರು ಸಣ್ಣಕಥೆಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆಯಲ್ಲದೆ ಕಥಾಸಂಕಲನಗಳಾಗಿಯೂ ಪ್ರಕಟಗೊಂಡಿವೆ. ರಂ. ಶಾ. ಲೋಕಾಪುರ ಅವರು ಅನಂತಮೂರ್ತಿಯವರ ‘ಸಂಸ್ಕಾರ’ ಮತ್ತು ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ ಕಾದಂಬರಿಗಳನ್ನು ಮರಾಠಿಗೆ ಅನುವಾದ ಮಾಡಿದ್ದಾರೆ. ವಿ. ಗ. ಕಾನಿಟ್ಕರರ ಪ್ರಸಿದ್ಧ ಮರಾಠಿ ಕಾದಂಬರಿ ‘ಹೋರಪಳ’ವನ್ನು ‘ಅಗ್ನಿದಿವ್ಯ’ ಹೆಸರಿನಿಂದ ಕನ್ನಡಕ್ಕೆ ತಂದಿದ್ದಾರೆ.
‘ಜ್ಞಾನೇಶ್ವರೀ’ ಭಾರತೀಯ ಸಂಸ್ಕೃತಿಯಲ್ಲಿ ತುಂಬ ವಿಶಿಷ್ಟವಾದ ಕೃತಿ. ಇದು ಭಗವದ್ಗೀತೆಯ ಮರಾಠಿ ಅನುವಾದ ಎನಿಸಿಕೊಂಡರೂ, ಸ್ವತಂತ್ರಗ್ರಂಥದಂತೆ ಶಕ್ತವಾಗಿಯೂ ಸುಂದರವಾಗಿಯೂ ಇದೆ. 13ನೇ ಶತಮಾನದ ಮರಾಠಿ ಸಂತ ಜ್ಞಾನೇಶ್ವರರು ರಚಿಸಿದ್ದ ಈ ಕೃತಿಯನ್ನು ರಂ. ಶಾ. ಲೋಕಾಪುರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಗೆ ಕೀರ್ತಿನಾಥ ಕುರ್ತಕೋಟಿ ಅವರು ವಿಸ್ತಾರವಾದ ಪೀಠಿಕೆಯನ್ನು ಬರೆದಿದ್ದಾರೆ. ರಂ.ಶಾ. ಅವರ ‘ಜ್ಞಾನೇಶ್ವರಿ' ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ 2006ನೇ ಸಾಲಿನ ಅನುವಾದ ಪ್ರಶಸ್ತಿ ಗಳಿಸಿತು.
ಈ ಎಲ್ಲ ಸಾಧನೆಗಳ ಜೊತೆಗೆ ರಂ. ಶಾ ಅವರು ಕನ್ನಡ-ಮರಾಠಿ ಭಾಷೆಗಳ ತೌಲನಿಕ ಅಧ್ಯಯನ ನಡೆಸಿದ ಫಲವಾಗಿ ‘ಹಳೆಗನ್ನಡ ಮತ್ತು ಮರಾಠಿ’ ಎಂಬ ಸಂಶೋಧನಾ ಗ್ರಂಥವನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮೂಲಕ 1994ರಲ್ಲಿ ಪ್ರಕಟಿಸಿದ್ದಾರೆ. ಇದೇ ಕೃತಿಯನ್ನು ಮರಾಠಿ ಭಾಷೆಯಲ್ಲಿ “ಜ್ಞಾನೇಶ್ವರೀ ಕಾಲೀನ ಮರಾಠಿ ಭಾಷೇವಾರ ಕನ್ನಡ ಪ್ರಭಾವ” ಎಂದು 3 ಸಂಪುಟಗಳಲ್ಲಿ ಸ್ವಂತ ಖರ್ಚಿನಲ್ಲಿ ಪ್ರಕಟಿಸಿದ್ದಾರೆ. ಮಹಾರಾಷ್ಟ್ರದ ಗ್ರಂಥೋತ್ತೇಜಕ ಸಂಸ್ಥೆಯಿಂದ ಈ ಕೃತಿಗೆ ಪುರಸ್ಕಾರ ಲಭಿಸಿದೆ. ಹೀಗೆ ರಂ. ಶಾ ಅವರು ಕನ್ನಡ-ಮರಾಠಿ ಎರಡೂ ಭಾಷೆಗಳನ್ನು ಅಧ್ಯಯನ ಮಾಡಿ ಪರಸ್ಪರ ಕೊಡುಕೊಳ್ಳುವಿಕೆಯ ತಿಳುವಳಿಕೆಯನ್ನು ನೀಡಿದ್ದಾರೆ.
ಬ್ರೆಕ್ಟನ ನಾಟಕ ‘ಗುಡ್ ಪರ್ಸನ್ ಆಫ್ ಶೆಜುವಾನ್’ ಕೃತಿಯನ್ನು ‘ಸಂಕಾನ್ತೇಯ ಚಂದ್ರಿ’ ಎಂಬ ಹೆಸರಿನಿಂದ ಅನುವಾದ ಮಾಡಿದ್ದಾರೆ. ಫೆಲೊಶಿಪ್ ಪಡೆದು ನಾಥ್ ಸಂಪ್ರದಾಯದ ಬಗ್ಗೆ ಸಂಶೋಧನಾ ಗ್ರಂಥ ರಚನೆ ಮಾಡಿದ್ದಾರೆ. ‘ನೆಳಲಿಯ ಪ್ರಸಂಗ’ ಎಂಬುದು ರಂ. ಶಾ ಅವರ ಮತ್ತೊಂದು ನಾಟಕ. ‘ಕರ್ನಾಟಕದಲ್ಲಿ ಅವೈದಿಕ ಸಾಹಿತ್ಯ ಪರಂಪರೆಗಳು’ ರಂ. ಶಾ ಅವರ ಮತ್ತೊಂದು ಮಹತ್ವದ ಕೃತಿ.
ರಂ.ಶಾ. ಲೋಕಾಪುರ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೇ ಅಲ್ಲದೆ, ಜೋಳದ ರಾಶಿ ದೊಡ್ಡನಗೌಡ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗಳಗನಾಥ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು
ರಂ.ಶಾ. ಲೋಕಾಪುರ ಅವರು 2019ರ ನವೆಂಬರ್ 18ರಂದು ನಿಧನರಾದರು.
On the birth anniversary of great Kannada and Mararthi writer R. S. Lokapura
ಕರ್ನಾಟಕದಲ್ಲಿ ಅವೈದಿಕ ಸಾಹಿತ್ಯಕ ಪರಂಪರೆಗಳು - ರಂ ಶಾ ಲೋಕಾಪುರ ಈ ಕೃತಿ ಬೇಕಾಗಿದೆ, ಹಾಗೂ ಲೋಕಾಪುರ ಸರ್ ಅವರನ್ನು ಸಂಪರ್ಕಿಸಲು ಮಾಹಿತಿ ಬೇಕಾಗಿದೆ , ತಿಳಿಸಿದರೆ ಅನುಕೂಲವಾಗುತ್ತದೆ
ಪ್ರತ್ಯುತ್ತರಅಳಿಸಿರಘು ಎಸ್ ಕೆ
ಕನ್ನಡ ಸಂಶೋಧನಾರ್ಥಿ
ಕುವೆಂಪು ವಿಶ್ವವಿದ್ಯಾಲಯ
ಫೋ : 7349218214