ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೀಣೆ ಶೇಷಣ್ಣ


ವೀಣೆ ಶೇಷಣ್ಣ

‘ವೀಣೆ’,  ಇದರ ಇನ್ನೊಂದು ಅನ್ವರ್ಥನಾಮವೇ ಶೇಷಣ್ಣನವರು.  ಮೈಸೂರು ಬಾನಿಯ ಪ್ರಮುಖ ಪ್ರವರ್ತಕರಾದ   ಶೇಷಣ್ಣನವರು ಆದಪ್ಪಯ್ಯನವರ ವಂಶದ ಇಪ್ಪತ್ತನಾಲ್ಕನೇ ತಲೆ. ಇವರ ತಂದೆ ಭಕ್ಷಿ ಚಿಕ್ಕರಾಮಪ್ಪನವರು ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನ ವಿದ್ವಾಂಸರು. 1852ರಲ್ಲಿ ಜನಿಸಿದ ಶೇಷಣ್ಣನವರು ಏಳು ವರ್ಷದ ಹುಡುಗನಾಗಿದ್ದಾಗಲೇ ಆಸ್ಥಾನದಲ್ಲಿ ಹಾಡಿ ಮಹಾರಾಜರಿಂದ ಕಂಠೀಹಾರವನ್ನು ಪಡೆದ ಬಾಲಪ್ರತಿಭೆ. ಎಳೆಯವಯಸ್ಸಿನಿಂದಲೇ ತಂದೆಯವರಿಂದ ಶಿಕ್ಷಣ ಪಡೆದರೂ ಬಾಲ್ಯದಲ್ಲೇ ತೀರ್ಥರೂಪುರವನ್ನು ಕಳೆದುಕೊಂಡಿದ್ದರಿಂದ ದೊಡ್ಡ ಶೇಷಣ್ಣನವರಲ್ಲಿ ವೀಣಾಭ್ಯಾಸ ಮುಂದುವರಿಸಿದರು. ಪ್ರತಿದಿನ ನಾಲ್ಕಾರು ಪಲ್ಲವಿಗಳು, ವಿವಿಧ ಬಗೆಯ ತಾನಗಳನ್ನು ಎಂಟು ಗಂಟೆಗಳ ಕಾಲ ಸಾಧನೆ ಮಾಡುತ್ತಿದ್ದ ಶೇಷಣ್ಣನವರ ಶ್ರದ್ಧೆ, ಏಕಾಗ್ರತೆ ಹಾಗೂ ತಲ್ಲೀನತೆಗಳು ಅಪೂರ್ವವಾದುವು. ಅವರ ಸಾಧನೆಗೆ ಅಕ್ಕ ವೆಂಕಮ್ಮನವರೇ ಪ್ರೇರಕ ಶಕ್ತಿ. ಸಾಧನೆ-ಕೇಳ್ಮೆ ಹಾಗೂ ಪ್ರತಿಭೆಗಳಿಂದ ಶೇಷಣ್ಣನವರು ವೀಣೆಯ ಮೇಲೆ ಅಸಾಧ್ಯ ಪ್ರಭುತ್ವ, ಮಧುರ ನಾದ ಹಾಗೂ ಎಣೆ ಇಲ್ಲದ ಮನೋಧರ್ಮ ಗಳಿಸಿಕೊಂಡರು. ಜೊತೆಗೆ ಮೈಸೂರು ಸದಾಶಿವರಾಯರಲ್ಲಿ ಗಾಯನದ ಅಭ್ಯಾಸವನ್ನೂ ಮುಂದುವರೆಸಿದರು. ರಾಯರು ತ್ಯಾಗರಾಜರ ಪ್ರಶಿಷ್ಯರು. ಹೀಗಾಗಿ, ಶೇಷಣ್ಣನವರು ತ್ಯಾಗರಾಜರ ನೇರ ಶಿಷ್ಯಪರಂಪರೆಗೆ ಸೇರುತ್ತಾರೆ. ಗಾಯನ ಹಾಗೂ ವೀಣಾಭ್ಯಾಸ ಎರಡರಲ್ಲೂ ವೀಣೆ ಸುಬ್ಬಣ್ಣನವರು ಶೇಷಣ್ಣನವರ ಸಹಪಾಠಿಗಳು.

ಶೇಷಣ್ಣನವರು ಪ್ರವರ್ಧಮಾನಕ್ಕೆ ಬರುವ ಕಾಲದಲ್ಲಿ ಮೈಸೂರನ್ನು ಚಾಮರಾಜ ಒಡೆಯರು ಆಳುತ್ತಿದ್ದರು. ಅವರು ಶೇಷಣ್ಣನವರನ್ನು ಆಸ್ಥಾನ ವಿದ್ವಾಂಸರಾಗಿ ನೇಮಿಸಿದರು. ಪ್ರಭು ಚಾಮರಾಜ ಒಡೆಯರ ಪಿಟೀಲು, ಸುಬ್ಬಣ್ಣನವರ ಗಾಯನ ಹಾಗೂ ಶೇಷಣ್ಣನವರ ವೀಣೆ ಒಂದು ಅಪರೂಪ ಮೇಳ. ಪ್ರಭು ಆಸ್ಥಾನಿಕರ ಸಂಬಂಧವನ್ನು ಮೀರಿದ ಸ್ನೇಹ, ಆತ್ಮೀಯತೆಗಳು ಮಹಾರಾಜರು ಮತ್ತು ಶೇಷಣ್ಣನವರಲ್ಲಿ ಬೆಳೆಯಿತು.

ಕನ್ಯಾಕುಮಾರಿಯಿಂದ ದೆಹಲಿಯವರೆಗೆ ವಿವಿಧ ಪ್ರಾಂತ್ಯ, ಅರಮನೆ, ಉತ್ಸವಗಳಲ್ಲಿ ಶೇಷಣ್ಣನವರ ವಿನಿಕೆ ನಡೆಯುತ್ತಿದ್ದವು. ಅವರ ಕಚೇರಿಯನ್ನು ಏರ್ಪಡಿಸುವುದು ಪ್ರತಿಷ್ಠೆ-ಗೌರವದ ಸಂಕೇತವಾಗಿತ್ತು. ರಾಮನಾಥಪುರಂ, ಅಂದಿನ ಪರಿಚಿತ ಸಂಸ್ಥಾನವಲ್ಲದೆ, ಒಂದು ಪ್ರಮುಖ ಸಂಗೀತ ಕೇಂದ್ರವೂ ಆಗಿತ್ತು. ಸ್ವತಃ ಮಹಾರಾಜರೇ ಸಂಗೀತಗಾರರಾಗಿದ್ದುದರಿಂದ ಸಂಗೀತ ಕಲೆಗೆ ವ್ಯಾಪಕ ಪ್ರೋತ್ಸಾಹ ಕೊಡುತ್ತಿದ್ದರು. ಅಂದಿನ ಮಹಾರಾಜ ಭಾಸ್ಕರ ಸೇತುಪತಿ ಅವರು ನವರಾತ್ರಿಯ ವಿಶೇಷ ದರ್ಬಾರಿನಲ್ಲಿ ಒಮ್ಮೆ ಶೇಷಣ್ಣನವರ ಕಚೇರಿಯನ್ನು ಏರ್ಪಡಿಸಿದರು. ಶೇಷಣ್ಣನವರ ವಿನಿಕೆಗೆ ರಾಜರ ಹೃದಯ ಮಿಡಿಯಿತು.  ಮರುದಿನವೂ ಅವರದೇ ವೀಣಾ ಕಚೇರಿ ಏರ್ಪಾಡಾಯಿತು. ಅಂದೂ ವೀಣೆಯ ದಿವ್ಯಾನುಭವದ, ಅಮೃತದ ಸವಿ. ಹೀಗೇ ನವರಾತ್ರಿಯ ಒಂಬತ್ತು ದಿನಗಳೂ ಶೇಷಣ್ಣನವರದೇ ವೀಣಾ ಕಚೇರಿ. ಅರಮನೆಯಲ್ಲೆಲ್ಲಾ ವೀಣಾ ಝೇಂಕಾರ. ಶೇಷಣ್ಣನವರಿಗೆ ಮಹಾರಾಜರು ಕನಕಾಭಿಷೇಕ ಮಾಡಿ ಆನೆಯ ಮೇಲೆ ಕೂಡಿಸಿ ಅಂಬಾರಿಯಲ್ಲಿ ಮೆರವಣಿಗೆ ಮಾಡಿಸಿದರು. ಅಲ್ಲಿಂದ ಮುಂದೆ ಶೇಷಣ್ಣನವರ ಕಚೇರಿ ರಾಮನಾಥಪುರಂ ಆಸ್ಥಾನದಲ್ಲಿ ಪ್ರತಿವರ್ಷವೂ ನಡೆಯತೊಡಗಿತು.

ಉತ್ತರ ಭಾರತದ ಬರೋಡಾ ಸಂಸ್ಥಾನವು ಸಂಗೀತ ಪ್ರೋತ್ಸಾಹಕ್ಕೂ ಸಂಗೀತಗಾರರ ಪೋಷಣೆಗೂ ಪ್ರಸಿದ್ಧವಾದುದು. ಮೈಸೂರು ಮತ್ತು ಬರೋಡಾ ಅರಮನೆಗಳ ಆಸ್ಥಾನಿಕರಲ್ಲಿ ಪರಸ್ಪರ ಮೈತ್ರಿ, ವಿನಿಮಯ, ಸನ್ಮಾನಗಳು ನಡೆಯುತ್ತಿದ್ದವು. ಶೇಷಣ್ಣನವರ ಖ್ಯಾತಿಯನ್ನು ಕೇಳಿದ ಬರೋಡ ಮಹಾರಾಜ ಸಯ್ಯಾಜೀರಾವ್‌ ಗಾಯಕವಾಡರು ‘ವೈಣಿಕ ಶಿಖಾಮಣಿ’ಯನ್ನು ತಮ್ಮ ಆಸ್ಥಾನಕ್ಕೆ ಆಹ್ವಾನಿಸಿದರು. ಏರ್ಪಾಡಾಗಿದ್ದ ಒಂದು ದಿನದ ಬದಲು ಮೂರು ದಿನ ಕಚೇರಿ ನಡೆಯಿತು. ಸರಸ್ವತಿಯೇ ಪುರುಷರೂಪದಲ್ಲಿ ಬಂದು ನುಡಿಸುತ್ತಿದ್ದಂತೆ ಭಾಸವಾಯಿತು. ಈ ಅಪೂರ್ವ ಅನುಭವದಿಂದ ಮಹಾರಾಜರು ಪ್ರೇರಿತರಾಗಿ ಮಹಾರಾಣಿಯವರು ಸ್ವತಃ ಉಪಯೋಗುಸುತ್ತಿದ್ದ, ಸುಂದರವಾದ ಮೇನಾವನ್ನು ಶೇಷಣ್ಣನವರಿಗೆ ನೀಡಿದರು. ಈ ಸುದ್ದಿ ಕ್ಷಿಪ್ರದಲ್ಲೇ ಮೈಸೂರು ಮುಟ್ಟಿತು. ತಮ್ಮ ಆಸ್ಥಾನಿಕರಿಗೆ ಬೇರೊಂದು ಸಂಸ್ಥಾನದಲ್ಲಿ ದೊರೆತ ಈ ಸನ್ಮಾನದಿಂದ ಮಹಾರಾಜರಿಗೆ ಸಂತೋಷ ಹೆಮ್ಮೆ ಆದುದು ಸಹಜವೇ. ದೊರೆಗಳ ಅಪ್ಪಣೆಯಂತೆ ಶೇಷಣ್ಣನವರನ್ನು ಆ ಮೇನೆಯಲ್ಲಿ ಕುಳ್ಳಿರಿಸಿ ಅರಮನೆಯ ಧ್ವಜಪತಾಕೆ, ರಾಜಲಾಂಛನ, ಜೋಡಿಸುತ್ತು ದಿಂಡುಹಾರಗಳ ಮರ್ಯಾದೆ ಸಹಿತ ಮೆರವಣಿಗೆ ಮಾಡಲು ಸಿದ್ಧತೆಗಳಾದವು. ಆದರೆ, ‘ಈ ಗೌರವವೆಲ್ಲಾ ಸರಸ್ವತಿಗೆ ಸಲ್ಲಬೇಕು, ತಮಗೆ ಅಲ್ಲ’ ಎಂದು ಭಾವಿಸಿದ ಶೇಷಣ್ಣನವರು ವೀಣೆಯನ್ನು ಪಲ್ಲಕ್ಕಿಯಲ್ಲಿಟ್ಟು ವಾಗ್ದೇವಿಗೆ ನಮಿಸಿದರು. ಮೇನಾದ ಮುಂದೆ ಬರಿಗಾಲಿನಲ್ಲಿ ಕೈಜೋಡಿಸಿ ನಡೆದರು. ಹೀಗೆ ಶೇಷಣ್ಣನವರು ‘ವೈಣಿಕ ಶಿಖಾಮಣಿ’ ಮಾತ್ರವಲ್ಲ “ಗುಣಶಿಖಾಮಣಿ”ಯೂ ಆಗಿ ಬೆಳಗಿದವರು.

ಶೇಷಣ್ಣನವರ ವೀಣಾವಾದನ ಕಚೇರಿಗಳು ಸಾಮಾನ್ಯವಾಗಿ ನಾಲ್ಕು ಗಂಟೆಗಳ ಅವಧಿಯವು. ಕೃತಿಗಳು ಕಡಿಮೆ. ಪ್ರಧಾನವಾಗಿ ರಾಗ, ಮಧ್ಯಮಕಾಲ ಮತ್ತು ಪಲ್ಲವಿಗಳನ್ನೇ ಆರಿಸಿಕೊಳ್ಳುತ್ತಿದ್ದರು. ಒಂದೇ ರಾಗವನ್ನು ಹತ್ತು ಸಲ ನುಡಿಸಿದರೂ ಪ್ರತಿಭಾರಿ ಆ ರಾಗಕ್ಕೆ ಹೊಸಬಣ್ಣ, ಹೊಸಾಕಾರ, ಹೊಸರುಚಿ. ಹೀಗಾಗಿ ರಾಗದ ಶಕ್ತಿಗಳನ್ನು ಅರಿತು ಹಂತಹಂತವಾಗಿ ರಾಗಪುಷ್ಪವನ್ನು ಅರಳಿಸಿ, ಸಂಗೀತದ ಕಂಪನ್ನು ಬೀರುತ್ತಿದ್ದರು. ಕಚೇರಿಯ ಕೊನೆಯಲ್ಲಿ ಜಾವಳಿ, ತಿಲ್ಲಾನಗಳ ಮೇಲೋಗರ. ಕರ್ಕಶತೆಗಳಿಲ್ಲದ ಮೃದುವಾದ ಮೀಟು. ನಾದ ಭಾವಕ್ಕೆ ಗಮನ ಕೊಡುತ್ತಿದ್ದರೇ ಹೊರತು ವಾದ್ಯ ತಂತ್ರಕ್ಕೆ ಅಲ್ಲ. ವೀಣೆಯು ಶೇಷಣ್ಣನವರಿಗೆ ಕೇವಲ ಒಂದು ವಾದ್ಯವಾಗಿರದೆ ಒಂದು ಉಪಾಸನೆಯಾಗಿತ್ತು. ‘ನಮ್ಮ ಶಕ್ತಿಗೆ ಒಳಪಟ್ಟು ನುಡಿಸುತ್ತೇವೆಯೇ ಹೊರತು ವೀಣೆಯ ಸಾಮರ್ಥ್ಯಕ್ಕೆ ತಕ್ಕಂತೆ ನುಡಿಸಲು ಸಾಧ್ಯವೇ?’ ಎಂಬ ಶೇಷಣ್ಣನವರ ಮಾತು ಕೇವಲ ಸೌಜನ್ಯದ್ದಲ್ಲ ಗಾಢ ಚಿಂತನೆಗೂ ಅರ್ಹವಾದ ಅಭಿಪ್ರಾಯ. ಯಾರು ಹೋಗಿ ಕೇಳಿದರೂ ವೀಣೆ ನುಡಿಸುತ್ತಿದ್ದ ಅವರ ಸ್ವಭಾವ ಆದರ್ಶಪ್ರಾಯವಾದುದು. ತಮ್ಮ ಕೊನೆಯ ದಿನಗಳಲ್ಲಿ ವೀಣೆ ನುಡಿಸಲು ಅಶಕ್ತರಾದಾಗ ‘ಸಾಯಲು ನನಗೆ ಅಂಜಿಕೆ ಇಲ್ಲ; ಆದರೆ, ವೀಣೆಯನ್ನು ಬಿಟ್ಟುಹೋಗಲು ನೋವಾಗುತ್ತದೆ’ ಎನ್ನುತ್ತಿದ್ದರು.

ಶೇಷಣ್ಣನವರು ಇಪ್ಪತ್ತನೆಯ ಶತಮಾನದ ಪ್ರಮುಖ ವಾಗ್ಗೇಯಕಾರರಲ್ಲಿ ಒಬ್ಬರು. ತಿರುಪತಿ ಶ್ರೀನಿವಾಸ, ಸರಸ್ವತೀ, ಲಕ್ಷ್ಮೀ, ಚಾಮುಂಡೇಶ್ವರಿ ಮುಂತಾದ ದೇವರುಗಳ ಮೇಲೆ ಶೇಷಣ್ಣನವರು ಕನ್ನಡ ಪದಗಳನ್ನು ರಚಿಸಿದ್ದಾರೆ. ಶೇಷ, ಶೇಷದಾಸ ಎಂಬ ಅಂಕಿತದಲ್ಲಿ ಬಹುತೇಕ ರಚನೆಗಳಿದ್ದರೂ ತಿಲ್ಲಾನಗಳನ್ನು ತಮ್ಮ ಪ್ರಭುಗಳ ಮೇಲೆ (ಚಾಮರಾಜ ಒಡೆಯರು ಮತ್ತು ಕೃಷ್ಣರಾಜ ಒಡೆಯರ) ನಾಮಾಂಕಿತ ಮಾಡಿದ್ದಾರೆ. ಹಿಂದುಸ್ತಾನಿ ಶೈಲಿಯಲ್ಲಿ ಒಂದು ಜಾವಡಿಯೂ ಉಂಟು.

ಶೇಷಣ್ಣನವರು ಒಂದು ದೊಡ್ಡ ಶಿಷ್ಯವರ್ಗವನ್ನೇ ತರಬೇತುಗೊಳಿಸಿ ಮೈಸೂರು ವೀಣಾ ಪರಂಪರೆ ಅವ್ಯಾಹತವಾಗಿ ಮುಂದುವರಿಯುವಂತೆ ಮಾಡಿದ್ದರು. ಅವರಲ್ಲಿ ಪ್ರಮುಖರು ವೆಂಕಟಗಿರಿಯಪ್ಪ, ಶರ್ಮಾದೇವಿ ಸುಬ್ರಹ್ಮಣ್ಯ ಶಾಸ್ತ್ರೀ, ಭೈರವಿ ಲಕ್ಷ್ಮೀನಾರಾಯಣಪ್ಪ, ಚಿತ್ರಶಿಲ್ಪಿ ವೆಂಕಟಪ್ಪ, ವಿ. ನಾರಾಯಣ ಅಯ್ಯರ್‌, ತಿರುಮಲೆ ರಾಜಮ್ಮ, ಎಂ.ಎಸ್‌. ಭೀಮರಾವ್‌ ಹಾಗೂ ಶೇಷಣ್ಣನವರ ಅಣ್ಣನ ಮೊಮ್ಮಗ ಎ.ಎಸ್‌. ಚಂದ್ರಶೇಖರಯ್ಯ ಮತ್ತು ಮೊಮ್ಮಗ ವಿ.ಎನ್‌. ರಾವ್‌(ಸ್ವರಮೂರ್ತಿ). ಸುಬ್ಬಣ್ಣನವರೂ ಅವರಲ್ಲಿ ಕೆಲಕಾಲ ಕಲಿತದ್ದಲ್ಲದೆ, ಬಿಡಾರಂ ಕೃಷ್ಣಪ್ಪನವರೂ ಶಿಷ್ಯರಾಗಿಯೇ ವರ್ತಿಸಿದರು. ಮೈಸೂರು ಪ್ರಾಂತ್ಯದ ಬಹುಮಂದಿ ಕಲಾವಿದರು ಈ ತ್ರಿಮೂರ್ತಿಗಳಾದ ಶೇಷಣ್ಣ, ಸುಬ್ಬಣ್ಣ, ಕೃಷ್ಣಪ್ಪನವರ  ಪರಂಪರೆಗೆ ಸೇರಿದವರೇ. ಹೀಗಾಗಿ ರಾಜ್ಯದ ಮುಂದಿನ ಬಹುತೇಕ ಹಿರಿಯ ವೈಣಿಕರುಗಳು ಶೇಷಣ್ಣನವರ ಶಿಷ್ಯ ಪರಂಪರೆಗೆ ಸೇರುತ್ತಾರೆ.

ಬರೋಡಾ ಆಸ್ಥಾನದಿಂದ ಮೌಲಾಭಕ್ಷ್‌ಎಂಬ ವಿದ್ವಾಂಸರು ಚಾಮರಾಜ ಒಡೆಯರ ಆಸ್ಥಾನಕ್ಕೆ ಆಗಮಿಸಿದರು. ಅವರ ಜಲತರಂಗ್‌ವಾದನ (ಹಿಂದುಸ್ತಾನಿ) ಅರಮನೆಯಲ್ಲಿ ನಡೆಯಿತು. ಆ ವಾದ್ಯದ ಕಿಣ ಕಿಣ ನಾದಕ್ಕೆ ಮಹಾರಾಜರು ಆಕರ್ಷಿತರಾದರು. ಇದರಿಂದ ಪ್ರೇರಿತರಾಗಿ ಶೇಷಣ್ಣನವರು ಆ ವಾದ್ಯವನ್ನು ಅತಿ ಕ್ಷಿಪ್ರದಲ್ಲೇ ಕರಗತ ಮಾಡಿಕೊಂಡರು. ಅಲ್ಲಿಂದ ಮುಂದೆ ವೀಣೆಯ ಜೊತೆ ಶೇಷಣ್ಣನವರ ಜಲತರಂಗ್‌ ಕಚೇರಿಗಳು ಸಹಾ  ಎಲ್ಲ ಕಡೆ ನಡೆಯತೊಡಗಿದವು. ಕರ್ನಾಟಕ ಶಾಸ್ತ್ರೀಯ ಸಂಗೀತ ವೇದಿಕೆಯ ಮೇಲೆ ಜಲತರಂಗ ವಾದ್ಯಕ್ಕೆ ಒಂದು ಗೌರವಾನ್ವಿತ ಸ್ಥಾನ ತಂದುಕೊಟ್ಟವರು ಶೇಷಣ್ಣನವರೇ.  ಇದಲ್ಲದೆ ಶೇಷಣ್ಣನವರು, ಪಿಟೀಲು, ಸ್ವರಬತ್‌, ಪಿಯಾನೋ ಮುಂತಾದ ವಾದ್ಯಗಳಲ್ಲೂ ಪ್ರಾವೀಣ್ಯತೆ ಪಡೆದಿದ್ದರು.

ಸುಪ್ರಸಿದ್ಧ ಥಿಯೊಸೊಫಿಸ್ಟರಾದ ಡಾ. ಕಸಿನ್ಸ್‌, ಎ.ಎಚ್‌. ಫಾಕ್ಸ್‌ ಸ್ಟ್ರಾಂಗ್ವೇಸ್‌, ಸರ್ ಈವಾನ್‌ ಮೆಕಾಂಜೆ ಮುಂತಾದವರು ಶೇಷಣ್ಣನವರ ವಿನಿಕೆ ತಮ್ಮ ಮೇಲೆ ಮಾಡಿದ ಪ್ರಭಾವವನ್ನು ದಾಖಲೆಗೊಳಿಸಿದ್ದಾರೆ. ‘ದಿ ಮ್ಯೂಸಿಕ್‌ ಆಫ್‌ ಒರಿಯೆಂಟ್‌ ಅಂಡ್‌ ಆಕ್ಸಿಡೆಂಟ್‌’ ಗ್ರಂಥದಲ್ಲಿ ಮಾರ್ಗರೇಟ್‌ ಕಸಿನ್ಸ್‌ರವರು ಶೇಷಣ್ಣನವರನ್ನು ‘ದಿ ಕಿಂಗ್ ಆಫ್ ವೀಣಾ ಪ್ಲೇಯರ್ಸ್’ ಎಂದು ಕರೆದಿದ್ದಾರೆ. ‘ಮ್ಯೂಸಿಕ್‌ ಆಫ್‌ ಹಿಂದೂಸ್ತಾನ್‌’ ಗ್ರಂಥದಲ್ಲಿ ಶೇಷಣ್ಣನವರ ಅಸಾಧ್ಯ ಪ್ರತಿಭೆ, ಎಣೆ ಇಲ್ಲದ ಮನೋಧರ್ಮಗಳನ್ನು ಕೊಂಡಾಡಿದ್ದಾರೆ. ದೇವುಡು, ಡಾ. ಡಿ.ವಿ. ಗುಂಡಪ್ಪ, ಡಾ. ರಾಳ್ಲಪಲ್ಲಿ ಅನಂತ ಕೃಷ್ಣಶರ್ಮ, ಡಾ. ವಿ.ಸೀತಾರಾಮಯ್ಯ, ತಿರುಮಲೆ ರಾಜಮ್ಮ, ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಪ್ರೊ.ಎ.ಎನ್‌. ಮೂರ್ತಿರಾವ್‌, ಸ್ವರಮೂರ್ತಿ ವಿ. ಎನ್‌. ರಾವ್‌ ಮುಂತಾದವರುಗಳು ಶೇಷಣ್ಣನವರ ಜೀವನ ಸಾಧನೆಗಳನ್ನು ಕುರಿತು ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ.

ಶೇಷಣ್ಣನವರ ಎಲ್ಲ ರಚನೆಗಳನ್ನು ಮೈಸೂರಿನ ಸಂಗೀತ ಕಲಾವರ್ಧಿನೀ ಸಭಾದವರು ಪ್ರಕಟಿಸಿದ್ದಾರೆ, ಅಲ್ಲದೆ, ಭವನುತ, ಶ್ರೀ ರಘುವರ, ರಘುನಾಯಕ ಮುಂತಾದ ಕೆಲ ಕೀರ್ತನೆಗಳಿಗೆ ಚಿಟ್ಟೇ ಸ್ವರವನ್ನೂ ಹೆಣೆದಿದ್ದಾರೆ. ಬ್ರಿಟಿಷ್‌ ಚಕ್ರವರ್ತಿ ಐದನೇ ಜಾರ್ಜ್‌ರವರು ದೆಹಲಿಯಲ್ಲಿ ಒಂದು ರಾಜಸಭೆ ನಡೆಸಿದರು. ಅಲ್ಲಿ ಸಂಗೀತ ಕಚೇರಿ ಮಾಡಿದ ದಕ್ಷಿಣ ಭಾರತದ ಏಕೈಕ ಕಲಾವಿದರು  ಶೇಷಣ್ಣನವರು! ಅವರ ವಿನಿಕೆ ಪಾಶ್ಚಾತ್ಯ ದೊರೆಯ ಮೇಲೆ ಗಾಢ ಪ್ರಭಾವವನ್ನು ಬೀರಿತು. ಆ ನಾದ ಸವಿಯನ್ನು ಸದಾ ಹಸಿರಾಗಿ ಇಟ್ಟುಕೊಳ್ಳಲು ಶೇಷಣ್ಣನವರ ಒಂದು ಭಾವಚಿತ್ರವನ್ನು ಜಾರ್ಜ್ ದೊರೆ ತಮ್ಮೊಂದಿಗೆ ತೆಗೆದುಕೊಂಡು ಹೋಗಿ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಅಲಂಕರಿಸಿದರು.

1924ರಲ್ಲಿ ಬೆಳಗಾಂನಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆಯಿತು. ಮಹಾತ್ಮಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್‌ ಅಧಿವೇಶನವಿದು. ಆ ಸಂದರ್ಭದಲ್ಲಿ ವೀಣೆ ಶೇಷಣ್ಣನವರ ಸಂಗೀತವನ್ನು ತಲ್ಲೀನರಾಗಿ ಸವಿದ ಮಾಹಾತ್ಮರು ‘ಇದು ದೇವಗಾನ! ಇದನ್ನು ಕೇಳಿದ ನಾವೇ ಧನ್ಯರು!’ ಎಂದು  ಉದ್ಗರಿಸಿದರು.

ತಂಜಾವೂರಿನ ಕೃಷ್ಣಸ್ವಾಮಿನಾಯಕರ ಮನೆಯಲ್ಲಿ ಒಂದು ಸಂಗೀತ ಗೋಷ್ಠಿ. ಕರ್ನಾಟಕ ಸಂಗೀತದ ಪ್ರಸಿದ್ಧ ವಿದ್ವಾಂಸರುಗಳಾದ ಮಹಾ ವೈದ್ಯನಾಥ ಅಯ್ಯರ್‌, ಶರಭ ಶಾಸ್ತ್ರಿ, ತಿರುಕ್ಕೋಡಿ ಕಾವಲ್‌ಕೃಷ್ಣಯ್ಯರ್‌, ವೀಣೆ ಶೇಷಣ್ಣ, ನಾರಾಯಣಸ್ವಾಮಪ್ಪ ಮುಂತಾದ ದಿಗ್ಗಜಗಳು ಸೇರಿದ್ದ ಅಪರೂಪ ಸಭೆ. ಈ ಹಿರಿಯರನ್ನು ಉದ್ದೇಶಿಸಿ ಕೃಷ್ಣಸ್ವಾಮಿ ನಾಯಕರು. “ತಾವೆಲ್ಲ ವಿದ್ವಾಂಸರುಗಳಿದ್ದೀರಿ! ತಮ್ಮಲ್ಲೇ ಶ್ರೇಷ್ಠರು ಯಾರು? ಎಂದು ತಾವುಗಳೇ ನಿರ್ಧರಿಸಬೇಕು. ತಾವುಗಳೇ ನಿರ್ಧರಿಸಿದ ಅಗ್ರರಲ್ಲಿ ಅಗ್ರಗಣ್ಯರಾದ ಕಲಾವಿದರಿಗೆ ಈ ಸೀಮೆ ಕಮಲದ ಉಂಗುರವನ್ನು ಪ್ರಧಾನ ಮಾಡಬೇಕು”  ಎಂದು ಅರಿಕೆ ಮಾಡಿಕೊಂಡರು. ಕಚೇರಿ ಪ್ರಾರಂಭವಾಯಿತು. ಪೈಪೋಟಿಯಂತಿದ್ದ ವಿದ್ವತ್ಪೂರ್ಣ ಕಚೇರಿಗಳು! ಒಬ್ಬರನ್ನು ಮೀರಿಸಿದ ಪ್ರತಿಭೆ ಇನ್ನೊಬ್ಬರದು. ಪಾಂಡಿತ್ಯ, ಪ್ರತಿಭೆ, ಸೃಜನಶೀಲತೆಗಳು ಮುಪ್ಪರಿಗೊಂಡ ವಿದ್ವಾಂಸರುಗಳು!. ಅವರಲ್ಲಿ ಪ್ರಶಸ್ತಿಗೆ ಚುನಾಯಿಸುವುದು ತೀರಾ ಕಷ್ಟದ ಕೆಲಸವಾಗಿ ಕಂಡಿತು. ಆಗ, ಮಹಾವೈದ್ಯನಾಥ ಅಯ್ಯರ್‌ಅವರು ಎದ್ದುನಿಂತು. “ನಾವೆಲ್ಲಾ ಹಿರಿಯ ಕಲಾವಿದರೇ, ಪಾಂಡಿತ್ಯಪೂರ್ಣವಾಗಿ ಹಾಡಿ-ನುಡಿಸಿದ್ದೇವೆ. ಆದರೆ, ಒಬ್ಬ ವಿದ್ವಾಂಸರನ್ನು ಮಾತ್ರ ಯಾರೂ ಮೀರಿಸಲಾಗಲಿಲ್ಲ. ಆ ಅದ್ವಿತೀಯ ಕಲಾವಿದರೇ ವೀಣೆ ಶೇಷಣ್ಣನವರು! ಅವರ ನಾದ ಮಾಧುರ್ಯ, ಎಣೆ ಇಲ್ಲದ ಮನೋಧರ್ಮ, ಸುಖವಾದ ವಿನಿಕೆ. ಅದ್ಭುತವಾದುದು. ಆದ್ದರಿಂದ ಈ ಪ್ರಶಸ್ತಿ ಅವರಿಗೇ ಸಲ್ಲಬೇಕು” ಎಂದರು. ಈ ಅಭಿಪ್ರಾಯವನ್ನು ತಿರುಕ್ಕೋಡಿವಲ್‌ ಕೃಷ್ಣಯ್ಯರ್‌ ಅವರು ಅನುಮೋದಿಸಿ, ಶೇಷಣ್ಣನವರನ್ನು “ಪುರುಷ ಸರಸ್ವತಿ” ಎಂದು ಕರೆದರು. ಸಭೆ ಈ ಅಭಿಪ್ರಾಯವನ್ನು ಒಪ್ಪಿ ಅನುಮೋದಿಸಿತು. ಹೀಗೆ ಶೇಷಣ್ಣನವರು ತಮ್ಮ ಸಮಕಾಲೀನ ಕಲಾ ಪ್ರಪಂಚದಲ್ಲೇ ಗೌರವಾನ್ವಿತರಾಗಿ “ವಿದ್ವಾಂಸರ ವಿದ್ವಾಂಸರಾಗಿ”  ಬೆಳಗಿದರು.

ಶೇಷಣ್ಣನವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರು 1902ರಲ್ಲಿ ನೀಡಿದ ‘ವೈಣಿಕ ಶಿಖಾಮಣಿ’ ಬಿರುದು ಅನ್ವರ್ಥವಾಯಿತು. ಮಹಾರಾಜರ ಸಮ್ಮುಖದಲ್ಲಿ ಕಚೇರಿ ಮಾಡಬಯಸುವವರು ಮೊದಲು ಶೇಷಣ್ಣನವರ ಮುಂದೆ ಹಾಡಬೇಕಿತ್ತು. ಅರ್ಹರಾದ ಕಲಾವಿದರನ್ನು ಶೇಷಣ್ಣನವರು ಅರಮನೆಗೆ ಶಿಫಾರ್ಸು ಮಾಡುತ್ತಿದ್ದರು. ಕಲಾವಿದರ ಎಲ್ಲ ಒಳ್ಳೆಯ ಸಂಗತಿಗಳಿಗೆ ತಲೆದೂಗಿ ಶಹಭಾಸ್‌ಗಿರಿ ಹೇಳಿ ಪ್ರೋತ್ಸಾಹಿಸುತ್ತಿದ್ದರು. “ಸುನಾದ ನನ್ನ ಕೈನಲ್ಲಿ ಬಂದರೇನು? ಇನ್ನೊಬ್ಬರ ಕೈಯಲ್ಲಿ ಬಂದರೇನು” ಎಂಬ ಅವರ ಮಾತು ಒಬ್ಬ ನಾದೋಪಾಸಕನಿಗೆ ತಕ್ಕುದಾದುದು. 1926ರ ಜುಲೈ 25ರಂದು ಶೇಷಣ್ಣನವರು ಸರಸ್ವತಿಯ ಪಾದಾರವಿಂದವನ್ನು ಸೇರಿದರು. ಆಗ ಎ.ಆರ್‌.ಕೃಷ್ಣಶಾಸ್ತ್ರಿಗಳು ಪ್ರಬುದ್ಧ ಕರ್ನಾಟಕದ ಸಂಪಾದಕೀಯದಲ್ಲಿ “ಸರಸ್ವತಿಯ ಮನೆಯಲ್ಲಿ ಕಳುವಾಯಿತು” ಎಂದು ಬರೆದುದು ಎಷ್ಟು ಅರ್ಥಪೂರ್ಣ! ಸಂಗೀತ ಕ್ಷೇತ್ರದ ಧ್ರುವತಾರೆಗಳಲ್ಲಿ ಒಬ್ಬರಾದ ಶೇಷಣ್ಣನವರು ಎಂದೂ ಪ್ರಾತಃ ಸ್ಮರಣೀಯರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

(ಕೃಪೆ: ಮೈಸೂರು ವಿ. ಸುಬ್ರಹ್ಮಣ್ಯ ಅವರ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಕಟಣೆಯಾದ  ‘ಕಲಾ ಚೇತನ’ದಲ್ಲಿನ ಲೇಖನದ ಸಂಕ್ಷಿಪ್ತ ರೂಪ)

On Remembrance Day of great musician Veene Sheshanna


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ