ಮಲಾಲ ಯೂಸುಫ್ ಜೈ
ಮಲಾಲ ಯೂಸುಫ್ ಜೈ
ತಾಲಿಬಾನ್ ಅಂತಹ ಮೂಲಭೂತವಾದಿ ಉಗ್ರಗಾಮಿ ಸಂಘಟನೆಗಳ ಬಗ್ಗೆ ಮಾತನಾಡಲು ದೇಶ ವಿದೇಶಗಳ ಸರ್ಕಾರಗಳೇ ಹಿಂದೆಗೆಯುವಾಗ, ತನ್ನ ಸುತ್ತಮುತ್ತಲೂ ತಾಲೀಬಾನಿಗಳೇ ತುಂಬಿರುವ ಊರಿನಲ್ಲಿರುವ ಒಂದು ದಿಟ್ಟ ಬಾಲೆ “ವಿದ್ಯಾಭ್ಯಾಸ ಎಂಬುದು ಎಲ್ಲರ ಹಕ್ಕು, ಇದಕ್ಕೇಕೆ ಕಲ್ಲು ಹಾಕುತ್ತೀರ ಎಂದು ತನ್ನ ಬ್ಲಾಗಿನಲ್ಲಿ ಕೇಳಿದಳು”. ಪರಿಣಾಮ ಘೋರವಾದದ್ದೇ. 2012ರ ವರ್ಷದ ನವೆಂಬರ್ ಮಾಸದಲ್ಲಿ ಆಕೆ ಶಾಲೆಯಿಂದ ಹಿಂದಿರುಗುವಾಗ ಬಸ್ ನಿಲ್ಲಿಸಿ ಆ ಹುಡುಗಿಗೆ ಮತ್ತು ಆ ಹುಡುಗಿಯ ಪಕ್ಕದಲ್ಲಿದ್ದ ಕೆಲವು ಹೆಣ್ಣು ಮಕ್ಕಳಿಗೆ ಉಗ್ರಗಾಮಿಗಳು ಗುಂಡು ಹಾರಿಸಿದರು. ಆ ದಿಟ್ಟ ಬಾಲೆ ಮಲಾಲ ಯೂಸುಫ್ ಜೈ.
ಈ ಹುಡುಗಿ ತನ್ನ ಬ್ಲಾಗಿನಲ್ಲಿ ಹೀಗೆ ಪ್ರಶ್ನಿಸುವಾಗ ಇಂಥಹ ಆಘಾತ ತನಗೆ ಕಾದಿತ್ತು ಎಂದು ಎಷ್ಟರ ಮಟ್ಟಿಗೆ ಊಹಿಸಿದ್ದಳೋ ಹೇಳುವುದು ಕಷ್ಟ. ಆದರೆ ಆಕೆಯ ಪ್ರಶ್ನೆ ಪ್ರಾಮಾಣಿಕ ಅನಿಸಿಕೆಯಿಂದ ಹುಟ್ಟಿದ್ದುದಾಗಿದ್ದು, ಆಕೆ ಇದರಿಂದ ಗುಂಡೇಟು ಪಡೆದಿದ್ದರ ಸಲುವಾಗಿಯಾದರೂ ವಿಶ್ವದಾದ್ಯಂತ, ಅದರಲ್ಲೂ ಪ್ರಮುಖವಾಗಿ ಆಕೆಯ ದೇಶವಾದ ಪಾಕಿಸ್ಥಾನದಲ್ಲಿ ಸಾಕಷ್ಟು ಸಂಚಲನ ಮೂಡಿಸಿತು. ವಿದೇಶದಲ್ಲಿ ಸಿಕ್ಕ ಉತ್ತಮ ವೈದ್ಯಕೀಯ ಸೌಲಭ್ಯದಿಂದ ಈ ಹುಡುಗಿ ಪುನಃ ಆರೋಗ್ಯ ಕಂಡುಕೊಂಡಳು. ನೊಬೆಲ್ ಶಾಂತಿ ಪುರಸ್ಕಾರವೂ ಸೇರಿದಂತೆ ಆಕೆಗೆ ಅನೇಕಾನೇಕ ಪ್ರಶಸ್ತಿ ಗೌರವಗಳ ಸುರಿಮಳೆಯೇ ಆಗಿದೆ.
ಜುಲೈ 12ರ ಈ ದಿನ, ಈ ದಿಟ್ಟ ಹೃದಯವಂತ ಹುಡುಗಿ 'ಮಲಾಲ ಯೂಸುಫ್ ಜೈ'ಗೆ 26ನೆಯ ಹುಟ್ಟಿದ ಹಬ್ಬ. ಈ ದಿನವನ್ನು ‘ಮಲಾಲ ದಿನ’ ಎಂದು ಕರೆಯಲಾಗಿದೆ.
ನಮ್ಮ ವಿರುದ್ಧ ಕಷ್ಟದ ಪರಿಸ್ಥಿತಿಗಳಿದ್ದಾಗ ನಮ್ಮ ಕೈಲೇನಾಗುತ್ತದೆ ಎಂದು ನಿರಾಶರಾಗಿಯೋ; ಅದು ಸರಿಯಿಲ್ಲ, ಅವರು ಸರಿಯಿಲ್ಲ, ವ್ಯವಸ್ಥೆ ಸರಿಯಿಲ್ಲ ಎಂದು ಟೀಕಾಕಾರರಾಗಿಯೋ ಬದುಕುವ ನಮ್ಮ ಸಮುದಾಯದಲ್ಲಿ ಮಲಾಲ ಅಂಥಹ ಪ್ರಾಮಾಣಿಕ ಧ್ವನಿಗಳು ಹೊಂದಿರುವ ಶಕ್ತಿಗಳು ಭರವಸೆ ನೀಡುವಂತದ್ದಾಗಿವೆ.
ವಿಶ್ವದಾದ್ಯಂತ ಸಹೃದಯ ಧ್ವನಿಗಳ ಪ್ರಾರ್ಥನಾ ಬೆಂಬಲದಿಂದ ಪುನಃ ಬದುಕುಳಿದಿರುವ ಈ ಮಲಾಲ ಬದುಕು ಹಸನಾಗಿರಲಿ. ತಮ್ಮ ಬೇಳೆಕಾಳುಗಳನ್ನು ಬೇಯಿಸಿಕೊಳ್ಳುವುದಕ್ಕೆ ಮೂಲಭೂತವಾದಿತ್ವವನ್ನು ಬೆಂಬಲಿಸಿ ಪೋಷಿಸುವ ಶಕ್ತಿಗಳೆಲ್ಲವೂ ಇನ್ನು ಮುಂದಾದರೂ ತಕ್ಕ ಪಾಠ ಕಲಿತುಕೊಂಡು ಹಿಂಸೆ, ಮೂಲಭೂತವಾದಿತ್ವ, ಉಗ್ರಗಾಮಿತ್ವಗಳನ್ನು ಇಲ್ಲವಾಗಿಸುವಂತಾಗಲಿ.
On the birth day of brave girl Malala Yousafzai who risked her life for the rights of education to girls
ಕಾಮೆಂಟ್‌ಗಳು