ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಧ್ಯಾ ಹೆಗಡೆ


 ಸಂಧ್ಯಾ ಹೆಗಡೆ


ಡಾ. ಸಂಧ್ಯಾ ಹೆಗಡೆ ಅವರು ಬಹುಮುಖಿ ಪ್ರತಿಭಾನ್ವಿತರು, ಪ್ರಾಧ್ಯಾಪಕರು ಮತ್ತು ಹೆಸರಾಂತ ಬರಹಗಾರ್ತಿ.‍


ಜುಲೈ 12, ಸಂಧ್ಯಾ ಅವರ ಹುಟ್ಟುಹಬ್ಬ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ದೊಡ್ಡ ಹೊಂಡ ಇವರ ತವರು. ಸಂತೆಗುಳಿ, ಅರೆ ಅಂಗಡಿಯಲ್ಲಿ ಪ್ರಾಥಮಿಕ ಶಿಕ್ಷಣ ನಡೆಸಿದ ಇವರು ನಂತರದಲ್ಲಿ ಹೊನ್ನಾವರ, ಧಾರವಾಡಗಳಲ್ಲಿ ಉನ್ನತ ಶಿಕ್ಷಣ ಪೂರೈಸಿದರು.  ಎಂ.ಎ., ಎಂ.ಫಿಲ್, ಪಿಎಚ್.ಡಿ, ಎನ್ಇಟಿ, ಕೆಎಸ್ಇಟಿ ಮುಂತಾದ ವಿದ್ಯಾಸಾಧನೆಗಳು ಇವರೊಂದಿಗಿವೆ. 


ಸಂಧ್ಯಾ ಹೆಗಡೆ ಅವರು ಶಂಕರ ಮೊಕಾಶಿ ಪುಣೆಕರ್ ಅವರ ಗಂಗವ್ವ ಗಂಗಾಮಾಯಿ ಕೃತಿಯ ಮೇಲೆ ಸಂಪ್ರಬಂಧ ಮೂಡಿಸಿದ್ದಾರೆ. 'ಆಧುನಿಕ ಕನ್ನಡ ಸಾಹಿತ್ಯ ಮೀಮಾಂಸೆ: ಕಾವ್ಯ’ ಎಂಬುದು ಇವರಿಗೆ  ಕರ್ನಾಟಕ ವಿಶ್ವವಿದ್ಯಾಲಯದಿಂದ  ಪಿಎಚ್.ಡಿ ತಂದುಕೊಟ್ಟ ಸಂಶೋಧನಾ ಮಹಾಪ್ರಬಂಧ. 


ಸಂಧ್ಯಾ ಹೆಗಡೆ ಅವರು ಎನ್. ಎಂ. ಕೆ. ಆರ್. ವಿ. ಮಹಿಳಾ ಕಾಲೇಜಿನಲ್ಲಿ ಕನ್ನಡ ವಿಭಾಗ‍ದ ಮುಖ್ಯಸ್ಥರಾಗಿದ್ದಾರೆ.‍


ಸಂಧ್ಯಾ ಅವರ ಕಥೆ, ಕವನ, ವಿಮರ್ಶೆ, ಸಂಶೋಧನಾ ಲೇಖನಗಳು ನಾಡಿನ ಪ್ರಸಿದ್ಧ ನಿಯತಕಾಲಿಕಗಳಲ್ಲಿ  ನಿರಂತರವಾಗಿ ಮೂಡಿಬರುತ್ತಿವೆ.  ಲಕ್ಷ್ಮೀಶ ತೋಳ್ಪಾಡಿ ಅಂತಹ ವಿದ್ವಾಂಸರನ್ನು, ಭಾಗೀರಥಿ ಹೆಗಡೆ ಅಂತಹ ಅನೇಕ ಹಿರಿಯ ಬರಹಗಾರರನ್ನು ಮತ್ತು ಲಲಿತಾ ಶ್ರೀನಿವಾಸನ್ ಅಂತಹ ಮಹಾನ್ ಕಲಾವಿದರನ್ನು ವಿದ್ವತ್ಪೂರ್ಣವಾಗಿ ಇವರು ಪತ್ರಿಕೆಗಳಲ್ಲಿ ಸಂದರ್ಶಿಸಿರುವುದನ್ನು ನಾವು ಓದಿದ್ದೇವೆ. 


ಸಂಧ್ಯಾ ಹೆಗಡೆ ಅವರ ಪ್ರಕಟಿತ ಕೃತಿಗಳಲ್ಲಿ

'ಪೂರ್ಣದೆಡೆಗೆ', 'ಅರಿವಿನೆಡೆಗೆ', 'ಕನಸು' ಮುಂತಾದ ಸಂಪಾದಿತ ಕೃತಿಗಳಿವೆ.  ಹಲವಾರು ಮುದ್ರಣಗಳನ್ನು ಕಂಡಿರುವ ಇವರ 'ಗುಲಾಬಿ ಕಚ್ಚಿನ ಬಳೆಗಳು' ಕಥಾ ಸಂಕಲನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಲೇಖಕರ ಚೊಚ್ಚಲ ಕೃತಿ ಸಹಾಯಧನ ಲಭಿಸಿತ್ತು.  ಶಂಕರ ಮೊಕಾಶಿ ಪುಣೆಕರ್ ಅವರ ಗಂಗವ್ವ ಗಂಗಾಮಾಯಿ ಹಾಗೂ 'ಎಲ್ಲರಿಗೊಳಿತನು ಬಯಸಲಿ' ಎಂಬ ಕೆ ಎಸ್ ನರಸಿಂಹಸ್ವಾಮಿ ಅವರ ಕಾವ್ಯಮೀಮಾಂಸೆ ಇವರ ಪ್ರಕಟಿತ ಕೃತಿಗಳಲ್ಲಿ ಸೇರಿವೆ.   ಕವಿ, ತಿರುಮಲೇಶರ ಸಾಹಿತ್ಯಾವಲೋಕನ, ಕೀರ್ತನ ಸಾಹಿತ್ಯದಲ್ಲಿ ಭೂಮಿ ಮತ್ತು ಹೆಣ್ಣು, ಆಧುನಿಕ ನಾಟಕಗಳ ಅಭಿವ್ಯಕ್ತಿಯ ನೆಲೆಯಲ್ಲಿ ಪೌರಾಣಿಕ ಮತ್ತು ಐತಿಹಾಸಿಕ ಸ್ತೀ ಪಾತ್ರಗಳು, ಗುಳ್ಳವ್ದನ

ಕಟ್ಟಿ ಮತ್ತೆ ಕರ್ನಾಟಕ ಏಕೀಕರಣ ಇತಿಹಾಸ ಸೇರಿದಂತೆ ಮೊವತ್ತಕ್ಕೂ ಹೆಚ್ಚು

ಸಂತೋಧನಾ ಲೇಖನಗಳನ್ನು ಹಾಗೂ ಪ್ರಬಂಧಗಳನ್ನು ಇವರು ಪ್ರಸ್ತುತಪಡಿಸಿದ್ದಾರೆ. 


ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಮಲ್ಲಿಕಾ ದತ್ತಿ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ 'ಪುಸ್ತಕ ಸೊಗಸು", ಭಾರತೀಯ ಪ್ರಕಾಶಕರ ಒಕ್ಕೂಟದ 'ಅತ್ಯುತ್ತಮ ಪುಸ್ತಕ ಪ್ರಕಟಣಾ ಪ್ರಶಸ್ತಿ,  ಅಮೆರಿಕದ ನಾವಿಕ ಸಂಸ್ಥೆಯ ಕಥಾಸ್ಪರ್ಧೆಯಲ್ಲಿ ಬಹುಮಾನ, ಕೆ. ಎಸ್. ನ ಟ್ರಸ್ಟ್‌ನ ಅಧ್ಯಯನ ಪುರಸ್ಕಾರ ಸೇರಿದಂತೆ ಹಲವು ಗೌರವಗಳು ಇವರಿಗೆ ಸಂದಿವೆ. 


ಓದು, ಚೆಸ್, ಸಂಗೀತ ಇವು ಸಂಧ್ಯಾ ಹೆಗಡೆ ಅವರ ವೈವಿಧ್ಯಪೂರ್ಣ ಹವ್ಯಾಸಗಳಲ್ಲಿ ಸೇರಿವೆ. 


ಸಂಧ್ಯಾ ಹೆಗಡೆ ಅವರು ಮನಮುಟ್ಟುವ 'ಪರಿಚಯ' ಕವಿತೆ ಇಲ್ಲಿದೆ:


ಯಾರೋ ಬರುತ್ತಾರೆ...ಹೋಗುತ್ತಾರೆ..

ಮಾತು-ಕಥೆ, ಇದರತ್ತ ...ಅದರ ಸುತ್ತ..

ನೋವು-ನಲಿವು ಕಷ್ಟ-ಸುಖ

ಅಪರಿಚಿತತೆಯ ಭಾರದಲ್ಲಿನರಳುತ್ತೇನೆ..

ಪರಿಚಿತತೆಯ ಹಗುರಕ್ಕೆ ತಪಿಸುತ್ತೇನೆ..

ಹತ್ತಿರ ಬಂದವರೆಲ್ಲ ಪರಿಚಿತರಲ್ಲ.

ಪರಿಚಿತತೆಯಲ್ಲೂ ಅಪರಿಚಿತತೆಯ

ನೋಟಕ್ಕೆ ಬೆದರುತ್ತೇನೆ.

ಮನುಷ್ಯನ ಮನಸ್ಸಿನಾಳದ ಕಮರಿಗಳಲ್ಲಿಣುಕಿ ಮಿಡುಕುತ್ತೇನೆ..

ಅವರಲ್ಲ ಇವರಲ್ಲ ತೀರಾ ನಾನು ಮೆಚ್ಚುವ

ಯಾರೂ ಪರಿಚಿತರಲ್ಲ..

ಭಾವಗಳ ಗಿರಿಕಂದರ ಕಣಿವೆಗಳಲ್ಲಿ ಅಲೆಯುತ್ತೇನೆ.

ಪರಿಚಯದ ಹಿಂಸೆಯ ಹಿಕಮತ್ತು....ನೋಯುತ್ತೇನೆ.

ಒಂಟಿತನವೆಂಬ ಅನಿವಾರ್ಯ ಅಗ್ಗಷ್ಟಿಕೆ.... ಚಳಿಯಲ್ಲ

ಮೈ ಕಾಯಿಸುತ್ತಾ ಕುಳಿತಿದ್ದೇನೆ.....

ಬಿಸಿಗೆ ಬೆಂದಿದ್ದೇನೆ...

ಬೆಳಗಿನ ನಸುಕಿನಲ್ಲಿ ಹಿತವಾದ ಮಂಜು...

ದೂರವಾಗಲಿ ಮನುಜ ಲೋಕ.

ಹನಿ ಹನಿಯ ತಂಪಿನಲಿ ಕರಗುತ್ತೇನೆ.

ನೀಲಿಯಾಗಸದಲ್ಲಿ ಸ್ವಚ್ಛಂದ ರೆಕ್ಕೆ ಬಿಚ್ಚಿದ ಹಕ್ಕಿ

ಹಾರದೆ ಕುಳಿತಿರಲು 

ಒಂದು ಪುಟ್ಟ ಗೂಡು ..

ವಿಶ್ರಾಂತಿ ಪಡೆಯುತ್ತೇನೆ..

ಹಾರಿಬಂದು ಮೈ ಮೇಲೆ ಕುಳಿತ 

ರಂಗು-ರಂಗಿನ ಚಿಟ್ಟೆ!

ಆಹಾರದ ಗುಂಗಿನಲ್ಲಿ ಎಲೆ ಮುಕ್ಕುತ್ತಿರುವ

ಕಂಬಳಿಹುಳು...

ಒಂದೇ ಗುಕ್ಕಿನಲ್ಲಿನೀರ ಗುಟುಕರಿಸುತ್ತಿರುವ 

ಮುಂಚುಳ್ಳಿ!!

ತುಟಿಯಂಚಲ್ಲಿ ಮಿಂಚು ನಗೆ

ಪರಿಚಿತ ಭಾವಕ್ಕೆ ಸೋಲುತ್ತೇನೆ!

ಸೃಷ್ಟಿ ಕೌಶಲದ ಚಾತುರ್ಯಕ್ಕೆ ಮಣಿಯುತ್ತೇನೆ!!


ಆತ್ಮೀಯರಾದ ಸಂಧ್ಯಾ ಹೆಗಡೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.


Sandhya Hegde

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ