ಮುಖೇಶ್
ಮುಖೇಶ್
ಮುಖೇಶ್ ಭಾರತೀಯ ಚಿತ್ರರಂಗದ ಅಮರ ಗಾಯಕರಲ್ಲೊಬ್ಬರು.
ಮುಖೇಶ್ 1923ರ ಜುಲೈ 22ರಂದು ಜನಿಸಿದರು. 1950ರ ದಶಕದಿಂದ ಎಪ್ಪತರ ದಶಕದಲ್ಲಿ ಅವರ ಕಂಠದಿಂದ ಹರಿದ ಗಾನಸುಧೆಯನ್ನು ತಣಿಸದ ಕಿವಿಗಳೇ ಇಲ್ಲ. ತಟ್ಟದ ಹೃದಯಗಳೇ ಇಲ್ಲ. ಒಂದಷ್ಟು ನಟನಾಗಿ ಸಿನಿಮಾ ಗಾಯಕನಾಗಿ ಮತ್ತು ಭಕ್ತಿಗೀತೆಗಳ ಹಾಡುಗಾರನಾಗಿ ಮುಖೇಶ್ ಮಾಡಿದ ಮೋಡಿ ಮೋಹಕವಾದದ್ದು.
ಸಂಗೀತ ಶಿಕ್ಷಕರೊಬ್ಬರು ತಮ್ಮ ಸೋದರಿಗೆ ಕಲಿಸಲು ಬರುತ್ತಿದ್ದಾಗ ಅದನ್ನು ಪಕ್ಕದ ಕೋಣೆಯಿಂದ ಆಲಿಸಿ ಹಾಡಲು ಪ್ರಾರಂಭಿಸಿದ ಮುಖೇಶ್ ಮುಂದೆ ಬೆಳೆದ ರೀತಿ ಮಹೋನ್ನತವಾದದ್ದು. ‘ನಿರ್ದೋಷ್’ ಎಂಬ ಚಿತ್ರದಲ್ಲಿ ಗಾಯಕ ನಟನಾಗಿ ಚಿತ್ರಜೀವನ ಪ್ರಾರಂಭಿಸಿದ ಮುಖೇಶ್ ಸುಮಾರು ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ಗಾನಸುಧೆ ಹರಿಸಿದರು.
ಕೆಲವು ವರ್ಷಗಳ ಕಾಲ ಯುಗಳಗೀತೆಗಳನ್ನು ಹಾಡಿದ ಮುಖೇಶ್ 1945ರಲ್ಲಿ ಪಹಲೀ ನಜರ್ ಚಿತ್ರದಲ್ಲಿ ಮೊದಲ ಬಾರಿಗೆ ‘ದಿಲ್ ಜಲ್‌ತಾ ಹೈ ತೋ ಜಲ್‌ನೇ ದೇ’ಹಾಡನ್ನು ಹಾಡಿದರು. ಅದು ಯಶಸ್ವಿಯಾಯಿತು. ಮುಂದೆ ನೌಶಾದ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡಿದ ‘ಅಂದಾಜ್’ ಚಿತ್ರದಲ್ಲಿ ಹಾಡಿದ ‘ತೂ ಕಹೇ ಅಗರ್...’, ‘ಝೂಮ್ ಝೂಮ್ ಕೇ ನಾಚೇ ಆಜ್...’ , ‘ಹಮ್ ಆಜ್ ಕಹೀಂ ದಿಲ್ ಖೋ ಬೈಠೇ...’ ಮತ್ತು ‘ಟೂಟೇ ನ ದಿಲ್ ಟೂಟೇ ನ...’ ಹಾಡುಗಳಲ್ಲಿ ಮುಖೇಶರ ಸ್ವಂತಿಕೆ ಎದ್ದು ತೋರುತ್ತವೆ
‘ರಾಜ್ ಕಪೂರರ ಗಾಯನ ಸ್ವರ ಮುಖೇಶ್’ ಎಂಬ ಪ್ರಸಿದ್ಧವಾದ ಮಾತು 1948ರಲ್ಲಿ ರಾಜ್ ಕಪೂರ್ ನಿರ್ಮಿಸಿ ನಟಿಸಿದ ‘ಆಗ್’ ಚಿತ್ರದಿಂದ ಆರಂಭವಾಯಿತು. ರಾಜ್ ಕಪೂರರ ‘ಆವಾರಾ’ ಮತ್ತು ‘ಶ್ರೀ 420’ ಚಿತ್ರಗಳಲ್ಲಿ ಮುಖೇಶ್ ಹಾಡಿದ ಹಾಡುಗಳು ಎಲ್ಲೆಲ್ಲೂ ಪ್ರಸಿದ್ಧವಾಗಿಬಿಟ್ಟವು.
ಹಲವು ಚಿತ್ರಗಳಲ್ಲಿ ಅಭಿನಯ ಮತ್ತು ನಿರ್ಮಾಣ ಮಾಡಲು ಹೋಗಿ ಸೋಲು ಕಂಡ ಮುಖೇಶ್, 1953ರಲ್ಲಿ ಬಿಡುಗಡೆಯಾದ ರಾಜ್ ಕಪೂರರ ಆಹ್ ನಲ್ಲಿ ‘ಛೋಟಿಸೀ ಯಹ್ ಜಿಂದ್‌ಗಾನೀರೇ...’ ಎಂಬ ಹಾಡನ್ನು ಟಾಂಗೇವಾಲನಾಗಿ ಹಾಡಿ ಅಭಿನಯಿಸಿದ ನಂತರ ಅಭಿನಯಕ್ಕೆ ವಿದಾಯ ಹೇಳಿ ಗಾಯನಕ್ಕಷ್ಟೇ ತಮ್ಮನ್ನು ಮುಡಿಪಿಟ್ಟರು.
1958ರಲ್ಲಿ ದಿಲೀಪ್ ಕುಮಾರ್ ಅಭಿನಯದ ಯಹೂದಿ ಚಿತ್ರದ ‘ಯೆಹ್ ಮೇರಾ ದೀವಾನಾಪನ್ ಹೈ...’ ಹಾಡು ಬಿಡುಗಡೆಯಾದಾಗ ಹಲವುಕಾಲ ನಿಧಾನವಾಗಿ ಹರಿದ ಮುಖೇಶ್ ಅವರ ಬದುಕಿಗೆ ಮತ್ತೊಂದು ಮಿನುಗು ನಕ್ಷತ್ರವಾಯಿತು. ದಿಲೀಪ್ ಕುಮಾರರ ಆ ವರ್ಷದ ಇನ್ನೊಂದು ಚಿತ್ರ ಬಿಮಲ್ ರಾಯ್ ನಿರ್ದೇಶನದ ಮಧುಮತಿ ಚಿತ್ರದಲ್ಲಿ ಸಲಿಲ್ ಚೌಧುರಿ ಸಂಗೀತ ನಿರ್ದೇಶನದಲ್ಲಿ ಹಾಡಿದ ಎಲ್ಲ ಹಾಡುಗಳೂ ಜನಪ್ರಿಯವಾದವು. ಅಲ್ಲದೆ ‘ಪರ್ವರಿಶ್’ ಹಾಗೂ ಮರುವರ್ಷದ ‘ಫಿರ್ ಸುಬಹ್ ಹೋಗೀ’ ಚಿತ್ರಗಳ ಹಾಡುಗಳ ಜೊತೆಗೆ 1960ರಿಂದ 1976ರವರೆಗಿನ ಸಮಯದಲ್ಲಿ ಅತ್ಯಂತ ಹೃದಯಂಗಮ ಹಾಡುಗಳಿಂದ ಮುಖೇಶ್ ರಸಿಕರನ್ನು ರಂಜಿಸಿದರು. ನಾಲ್ಕು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಮತ್ತು ಒಮ್ಮೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಶ್ರೇಷ್ಠ ಹಿನ್ನೆಲೆ ಗಾಯನಕ್ಕಾಗಿ ಪಡೆದರು.
ಅಫ್‌ಸಾನಾ ಚಿತ್ರದ ‘ಕಿಸ್‌ಮತ್ ಬಿಗ್‌ಡೀ, ದುನಿಯಾ ಬದ್‌ಲೀ’, ಯಹೂದೀ ಚಿತ್ರದ ‘ಯೆಹ್ ಮೇರಾ ದೀವಾನಾಪನ್ ಹೈ’, ದೇವರ್ ಚಿತ್ರದ ‘ಬಹಾರೋಂ ನೆ ಮೇರಾ ಚಮನ್ ಲೂಟ್ ಕರ್’, ಮೇರಾ ನಾಮ್ ಜೋಕರ್ ಚಿತ್ರದ ‘ಜಾನೆ ಕಹಾ ಗಯೇ ಓ ದಿನ್’, ಆನಂದ್ ಚಿತ್ರದ ‘ಕಹಿಂ ದೂರ್ ಜಬ್ ದಿನ್ ಡಲ್ ಜಾಏ...’ ಕಭೀ ಕಭೀ ಚಿತ್ರದ ‘ಕಭೀ ಕಭೀ ಮೇರೆ ದಿಲ್ ಮೇ’, ಮುಂತಾದ ಹಾಡುಗಳಲ್ಲಿ ಹಾಡಿನಲ್ಲಿ ಮಾಧುರ್ಯದ ಜತೆ ದುಃಖದ ಒಳತೋಟಿಯೊಂದು ಹರಿಯುವದನ್ನು ಅನುಭವಿಸಬಹುದು.
ರಾಜ್ ಕಪೂರರ ಸಂಗೀತಸ್ವರವೆಂದು ಗುರುತಿಸಲ್ಪಟ್ಟ ಮುಖೇಶ್ ಮನೋಜ್ ಕುಮಾರನಿಗೇ ಹೆಚ್ಚು ಹಾಡಿದರಲ್ಲದೆ, ಶಂಕರ್-ಜೈಕಿಶನರ ಸಂಗೀತ ನಿರ್ದೇಶನಕ್ಕಿಂತ ಅಧಿಕವಾಗಿ ಕಲ್ಯಾಣ್‌ಜೀ-ಆನಂದ್‌ಜೀಯವರ ನಿರ್ದೇಶನದಲ್ಲಿ ಹಾಡಿದರು. ರಾಜ್ ಕಪೂರರ ಸತ್ಯಮ್ ಶಿವಮ್ ಸುಂದರಮ್ ಚಿತ್ರದಲ್ಲಿ ಲಕ್ಷ್ಮೀಕಾಂತ್-ಪ್ಯಾರೇಲಾಲರ ಸಂಗೀತ ನಿರ್ದೇಶನದಲ್ಲಿ ಧ್ವನಿಮುದ್ರಿಸಲ್ಪಟ್ಟ ‘ಚಂಚಲ್, ಶೀತಲ್, ನಿರ್ಮಲ್, ಕೋಮಲ್ ಸಂಗೀತ್ ಕೀ ದೇವೀ ಸ್ವರ್ ಸಜ್‌ನೀ’ ಹಾಡು ಕೊನೆಯದಾಯಿತು. ನಂತರ ಲತಾ ಜತೆಗೂಡಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಸಂಗೀತ ಪರ್ಯಟನೆಗೆ ಹೋದ ಅವರು ಆ ಪ್ರವಾಸದ ಸಮಯದಲ್ಲಿ 1976ರ ಆಗಸ್ಟ್ 27ರಂದು ನಿಧನರಾದರು. ಕೇವಲ 53 ವರ್ಷ ಜೀವಿಸಿದ್ದ ಮುಖೇಶ್ ತಮ್ಮ ಧ್ವನಿಯಲ್ಲಿ ಉಳಿಸಿಹೋದ ಮಾಧುರ್ಯದ ಹಾಡುಗಳು ಚಿರಂತನವಾಗುಳಿದಿವೆ.
On the birth anniversary of great playback singer Mukesh
ಕಾಮೆಂಟ್‌ಗಳು