ಹೃಷಿಕೇಶ ಮುಖರ್ಜಿ
ಹೃಷಿಕೇಶ ಮುಖರ್ಜಿ
ಚಲನಚಿತ್ರಗಳನ್ನು ಹಲವು ಬಗೆಯಲ್ಲಿ ನೋಡುವ ಸಾಧ್ಯತೆಗಳಿವೆ. ಮನರಂಜನೆ, ಟೈಮ್ ಪಾಸ್, ಬುದ್ಧಿವಂತಿಕೆಯ ಚಿಂತನೆ, ಸಾಹಸ, ತಂತ್ರಜ್ಞಾನ, ಹೀಗೆ ಹಲವು ಕಾರಣಗಳಿರುತ್ತವೆ. ಇವೆಲ್ಲವುಗಳ ನಡುವೆ ಆಪ್ತತೆಯಿಂದ ಸಂತೋಷಕ್ಕಾಗಿ ನೋಡುವ ಸಾಧ್ಯತೆ ವಿಶಿಷ್ಟವಾದದ್ದು. ಈ ಸಾಧ್ಯತೆಯ ಚಿತ್ರಗಳನ್ನು ಕೊಟ್ಟ ಅಪರೂಪದ ನಿರ್ದೇಶಕರ ಸಾಲಿನಲ್ಲಿ ಹೃಷಿಕೇಶ ಮುಖರ್ಜಿ ಪ್ರಮುಖರು. ಇಂದು ಅವರ ಸಂಸ್ಮರಣೆ ದಿನ.
ಹೃಷಿಕೇಶ ಮುಖರ್ಜಿ 1922ರ ಸೆಪ್ಟೆಂಬರ್ 30ರಂದು ಕೋಲ್ಕತ್ತಾದಲ್ಲಿ ಜನಿಸಿದರು. ವಿಜ್ಞಾನ ಪದವೀಧರರಾದ ಅವರು ಕೆಲಕಾಲ ವಿಜ್ಞಾನ ಮತ್ತು ಗಣಿತ ಬೋಧಿಸುತ್ತಿದ್ದರು.
ಹೃಷಿಕೇಶ ಮುಖರ್ಜಿ ಬಾಲಿವುಡ್‌ಗೆ ಕಾಲಿಟ್ಟದ್ದು 1951ರಲ್ಲಿ. ಮುಂಬೈಗೆ ಬರುವ ಮೊದಲು ಅವರು ಕೋಲ್ಕತ್ತಾ ಆಕಾಶವಾಣಿ ಕೇಂದ್ರದಲ್ಲಿ ಸಿತಾರ್ ವಾದಕರಾಗಿದ್ದರು. ಅವರಲ್ಲಿ ಹರಿಯುತ್ತಿದ್ದ ಸಂಗೀತ ಪ್ರಜ್ಞೆ ಅವರ ಚಿತ್ರಗಳಲ್ಲಿ ಮೂಡಿದ ಸಾಂಸ್ಕೃತಿಕ ಇಂಪಿಗೆ ಕಾರಣವೂ ಆಗಿತ್ತು.
ಹೃಷಿಕೇಶ್ ಮುಖರ್ಜಿ ಬಿಮಲ್ ರಾಯ್ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಬಿಮಲ್ ರಾಯ್ ಅವರ 'ಮಧುಮತಿ' ಅಂತಹ ಚಿತ್ರಗಳಿಗೆ ಅವರು ಸಂಕಲನ ಕೂಡಾ ಮಾಡಿ ಅನುಭವ ಗಳಿಸಿದರು.
ಮುಖರ್ಜಿ ‘ಮುಸಾಫಿರ್’ ಮೂಲಕ ಪೂರ್ಣ ಪ್ರಮಾಣದ, ಸ್ವತಂತ್ರ ನಿರ್ದೇಶಕರಾದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತರೂ ರಾಜ್ ಕಫೂರ್ ಅವರು ಹೃಷಿಕೇಶ್ ಮುಖರ್ಜಿಯವರಲ್ಲಿ ಎಂತದ್ದೋ. ಸಾಧ್ಯತೆಗಳನ್ನು ಕಂಡಿದ್ದರು. ಹೀಗಾಗಿ ರಾಜ್‌ಕಪೂರ್ ತಮ್ಮ ‘ಅನಾರಿ’ (1959) ಚಿತ್ರಕ್ಕೆ ಹೃಷಿದಾ ಅವರನ್ನೇ ನಿರ್ದೇಶಕರನ್ನಾಗಿ ಶಿಫಾರಸು ಮಾಡಿದರು. ರಾಜ್‌ಕಪೂರ್– ನೂತನ್ ಅಭಿನಯದ ಈ ಚಿತ್ರ ಭಾರಿ ಗೆಲುವು ಕಂಡಿತು. 1960ರಲ್ಲಿ ಹೃಷಿದಾ ನಿರ್ದೇಶಿಸಿದ 'ಅನುರಾಧ' ಚಿತ್ರಕ್ಕೆ ರಾಷ್ಟ್ರಪತಿಗಳ ಚಿನ್ನದ ಪದಕ ಲಭಿಸಿತು. ಈ ಚಿತ್ರಕ್ಕೆ ಪಂಡಿತ್ ರವಿಶಂಕರ್ ಸಂಗೀತ ಸಂಯೋಜಿಸಿದ್ದರು.
ಮುಂದೆ ಹೃಷಿಕೇಶ್ ಮುಖರ್ಜಿ ಅಭಿಮಾನ್, ಆನಂದ್, ಅನುಪಮ, ಚುಪ್ಕೆ ಚುಪ್ಕೆ, ಛಾಯಾ, ಖೂಬ್ ಸೂರತ್, ಗುಡ್ಡಿ, ಬಾವರ್ಚಿ, ನಮಕ್ ಹರಾಮ್, ಗೋಲ್ಮಾಲ್, ರಂಗ್ ಬಿರಂಗಿ ಅಂತಹ ಸುಮಧುರ ಚಿತ್ರಗಳನ್ನು ಸಾಲು ಸಾಲಾಗಿ ನೀಡಿದರು.
ಸುನಿಲ್ ದತ್, ಅಶೋಕ್ ಕುಮಾರ್, ಉತ್ಪಲ್ ದತ್, ಸಂಜೀವ್ ಕುಮಾರ್, ರಾಜೇಶ್ ಖನ್ನ, ಅಮಿತಾಬ್ ಬಚ್ಚನ್, ಧರ್ಮೇಂದ್ರ, ಜಯಾ ಭಾಧುರಿ, ರೇಖಾ, ಶರ್ಮಿಳ ಠಾಗೂರ್, ಅಮೋಲ್ ಪಾಲೇಕರ್, ಫರೂಕ್ ಶೇಖ್, ದೀಪ್ತಿ ನವಲ್, ದೇವನ್ ವರ್ಮ ಮುಂತಾದ ಕಲಾವಿದರಿಂದ ವಿನೂತನ ಅಭಿನಯ ತೆಗೆದು ಅವರ ಕಲಾ ಬಾಳನ್ನು ಪ್ರಜ್ವಲಿಸುವಂತೆ ಮಾಡಿದವರು ಹೃಷಿಕೇಶ್ ಮುಖರ್ಜಿ.
ಒಟ್ಟು 42 ಚಿತ್ರಗಳನ್ನು ನಿರ್ದೇಶಿಸಿದ್ದ ಹೃಷಿಕೇಶ್ ಮುಖರ್ಜಿ ದೂರದರ್ಶನಕ್ಕಾಗಿ 'ತಲಾಷ್' ಎಂಬ ಧಾರಾವಾಹಿಯನ್ನೂ ನಿರ್ದೇಶಿಸಿದ್ದರು.
ಹೃಷಿಕೇಶ್ ಮುಖರ್ಜಿ ಕೇಂದ್ರೀಯ ಚಲನಚಿತ್ರ ಸೆನ್ಸಾರ್ ಮಂಡಳಿ ಮತ್ತು ಎನ್ ಎಫ್ ಡಿ ಸಿ ಸಂಸ್ಥೆಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದರು.
ಹೃಷಿಕೇಶ್ ಮುಖರ್ಜಿ ಅವರಿಗೆ ಅನೇಕ ಚಲನಚಿತ್ರಗಳಿಗೆ ಸಂದ ಪ್ರಶಸ್ತಿಯೇ ಅಲ್ಲದೆ ಪದ್ಮವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಮುಂತಾದ ಹಿರಿಯ ಗೌರವಗಳು ಸಂದಿದ್ದವು.
ಹೃಷಿದಾ 2006ರ ಆಗಸ್ಟ್ 27ರಂದು ಈ ಲೋಕದ ಬದುಕಿಗೆ ವಿದಾಯ ಹೇಳಿದರು.
On Remembrance Day of great film director Hrishikesh Mukherjee
ಕಾಮೆಂಟ್‌ಗಳು