ಯತಿರಾಜ ವೀರಾಂಬುಧಿ
ಯತಿರಾಜ ವೀರಾಂಬುಧಿ
ಯತಿರಾಜ ವೀರಾಂಬುಧಿ ವಿಭಿನ್ನ ನೆಲೆಗಳ ವಿಶಿಷ್ಟ ಬರಹಗಾರರು.
ಯತಿರಾಜ ವೀರಾಂಬುಧಿ 1957ರ ಆಗಸ್ಟ್ 11ರಂದು ಜನಿಸಿದರು. ಮೈಸೂರಿನಲ್ಲಿ ತಮ್ಮ ಬಾಲ್ಯವನ್ನು ಕಳೆದ ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಅವರು ಬೆಂಗಳೂರು ಮತ್ತು ಒಮಾನ್ ದೇಶದ ಮಸ್ಕತ್ನಲ್ಲಿ ಒಟ್ಟಾರೆ ಸುಮಾರು ಮೂರೂವರೆ ದಶಕಗಳ ಕಾಲ ವೃತ್ತಿ ಜೀವನವನ್ನು ನಡೆಸಿದವರು. ಬದುಕನ್ನು ಕೇವಲ ವೃತ್ತಿ ಮತ್ತು ಗಳಿಕೆಗೆ ಸೀಮಿತಗೊಳಿಸದ ವೀರಾಂಬುಧಿ, ಸಾಹಿತ್ಯದ ಓದು, ಸಂಗೀತದ ಆಲಿಕೆ, ಸ್ನೇಹ, ಲೋಕಾನ್ವೇಷಣೆ ಹೀಗೆ ವಿಭಿನ್ನ ಸಾಂಸ್ಕೃತಿಕ ನೆಲೆಗಳಲ್ಲಿ ತಮ್ಮ ಆಸಕ್ತಿ ಮತ್ತು ಅಭಿವ್ಯಕ್ತಿಗಳನ್ನು ಅರಸಿ ಹೊರಟವರು.
ಕೇವಲ ಬದುಕಿನ ಮೇಲ್ಮೆಯ ಹೊರನೋಟಕ್ಕೆ ಸೀಮಿತಗೊಳ್ಳದ ಯತಿರಾಜ ವೀರಾಂಬುಧಿ ಅವರ ಸೃಜನಶೀಲ ಮನಸ್ಸು, ಅಂತರಂಗದ ಹುಡುಕಾಟಕ್ಕೆ ಕೂಡ ಹೇಗೆ ಕಾತರಿಸುತ್ತದೆ ಎಂಬುದಕ್ಕೆ ಅವರ ಪ್ರಸಿದ್ಧ ಪುಸ್ತಕದ ಶೀರ್ಷಿಕೆ ’ಭಗವದ್ಗೀತೆ ಬಚ್ಚಿಟ್ಟಿದ್ದ ಪಾಠಗಳು’ ಒಂದು ಸೂಚ್ಯವೇನೋ!. ಅವರ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಮಂಗಳ ಕೃತಿಯಲ್ಲಿ ಪ್ರಕಟಗೊಂಡಿತು. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿಯಾಗಿ ಮೂಡಿಬಂತು. ಅವರ ಬಹುತೇಕ ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿರುವುದು ವಿಶೇಷವಾಗಿದ್ದು, ಓದುಗ ಬಳಗದಲ್ಲಿ ಗಳಿಸಿಕೊಂಡಿರುವ ಜನಪ್ರಿಯತೆಗೂ ನಿದರ್ಶನವಾಗಿದೆ.
ಇದುವರೆವಿಗೆ ಯತಿರಾಜ ವೀರಾಂಬುಧಿ ಅವರು ಇಪ್ಪತ್ತಾರು ಕಾದಂಬರಿಗಳು, ಏಳು ಕಥಾ ಸಂಕಲನಗಳು, ಹತ್ತೊಂಬತ್ತು ಸ್ವಂತ ಲೇಖನಮಾಲೆಗಳು, ಒಂಬತ್ತು ಅನುವಾದ ಕಾದಂಬರಿಗಳು ಮತ್ತು ಒಂಬತ್ತು ಅನುವಾದ ಲೇಖನಮಾಲೆಗಳನ್ನು ಪ್ರಕಟಿಸಿದ್ದಾರೆ. ಆಪತ್ತಿಗೆ ಆಹ್ವಾನ, ಪರಿಶೋಧ, ಗಾಥೆ, ಮರದಡಿ ಮಳೆ, ಪಂಚಾನನ, ಜೀವನ್ಮುಖಿ, ಅವಿನಾಭಾವ, ಕುರುಡು ತಿರುವು, ಕರೆದರೆ ಬಾರೆ!, ಒಂದೊಂದಾಗಿ ಜಾರಿದರೆ..!, ರಣವೀಳ್ಯ, ಹಸ್ತಕ್ಷೇಪ, ಸ್ವಪ್ನಸೃಷ್ಟಿ, ಉದ್ಯೋಗ ಪರ್ವ, ಸುಖಿಯಾಗಿರು ಓ ಸಖೀ!, ಹಾಸು ಹೊಕ್ಕು, ಕಪ್ಪು ನದಿ, ಸಾಬೀತು, ಚಿರಸ್ಮಿತ, ಶಬ್ದಬಲೆ, ಬೇಹು, ಛದ್ಮವೇಷ, ಪರಾಭವ ಭಾವನಾ, ಸ್ವಪ್ನ ವಾಸ್ತವದತ್ತ, ಪಥಗಾಮಿ, ನಿಃಸಂಗ ಇವರ ಕಾದಂಬರಿಗಳಲ್ಲಿ ಸೇರಿವೆ. ಇವರು ಯಂಡಮೂರಿ ವೀರೇಂದ್ರನಾಥ್ ಅವರ ಪ್ರಖ್ಯಾತ ಕಾದಂಬರಿಗಳನ್ನು ಅನುವಾದಿಸಿದ್ದು ಅವುಗಳಲ್ಲಿ ಕೆಂದಾವರೆಯ ಮಾಲೆ, ರಾಕ್ಷಸ ಪರ್ಣಕುಟೀರ, ನಿಶ್ಶಬ್ದ ನನ್ನ ನಿನ್ನ ನಡುವೆ, ಒಬ್ಬ ರಾಧೆ ಇಬ್ಬರು ಕೃಷ್ಣರು, ಥ್ರಿಲ್ಲರ್, ಅಷ್ಟಾವಕ್ರ, ಸ್ವರಬೇತಾಳ, ನಿಶ್ಶಬ್ದ ವಿಸ್ಫೋಟನ ಸೇರಿವೆ. ಯಂಡಮೂರಿ ವೀರೇಂದ್ರನಾಥ್ ಅವರ ವ್ಯಕ್ತಿತ್ವ ವಿಕಸನದ ಕೃತಿಯ ಕನ್ನಡ ಅನುವಾದವಾದ ’ಕಣಿವೆಯಿಂದ ಶಿಖರಕ್ಕೆ’ ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ ಪ್ರಕಟಗೊಂಡಿತ್ತಲ್ಲದೆ, ಪುಸ್ತಕವಾಗಿ ಸಹಾ ಬಹು ಜನಪ್ರಿಯಗೊಂಡಿದೆ. ಇವರು ಅನುವಾದಿಸಿರುವ ಯಂಡಮೂರಿ ವೀರೇಂದ್ರನಾಥ್ ಅವರ ಇತರ ಲೇಖನ ಮಾಲೆಗಳಲ್ಲಿ ಸಾಧನೆಗೆ ಸಾಧನ, ನನ್ನ ಏಳ್ಗೆಗೆ ನಾನೇ ಏಣಿ, ಪ್ರೇಮ ಒಂದು ಕಲೆ, ಮಕ್ಕಳ ಹೆಸರಿನ ಪ್ರಪಂಚ, ಯಶಸ್ವೀಭವ, ಬೆಳಕು ಬೆಳದಿಂಗಳ ದೀಪಗಳು ಸೇರಿವೆ. ಬಿಂದು ಬಿಂದು ಸೇರಿ ಸಿಂಧು, ತೆನೆ ತೆನೆ ಕೂಡಿದ್ರೆ ಬಳ್ಳ, ಹನನ, ಕೃತಾಕೃತ ಇವರ ಕಥಾ ಸಂಕಲನಗಳು. ೧೦೦೬, ಸಿಬುರು, ಕಣ್ಣೊರೆಸುವ ಕರಗಳು ಇವರ ನೀಳ್ಗತೆಗಳು. ಯತಿರಾಜ ವೀರಾಂಬುಧಿ ಅವರ ಲೇಖನ ಮಾಲೆಗಳಲ್ಲಿ ವಿವಿಧ ಪ್ರಸಿದ್ಧ ಪತ್ರಿಕೆಗಳಲ್ಲಿ ಮೂಡಿರುವ ’ಮನೆ ಮಾತು’, ’ಮಾಸದ ಮಾತು’, ’ಮಾಸದ ಸುಖ’, ’ಮಾಸದ ದಾಸವಾಣಿ’, ’ಮನೋಲ್ಲಾಸ’, ಗುಣ-ಗಣಿ, ಜೀವನಮೌಲ್ಯ, ಯುವ-ಕಥೆ, ಯಶಸ್ಸೇ ಹಾದಿ..!, ಲೈಫು ಇಷ್ಟೇನೇ, ಜಯ ನಿಶ್ಚಯ, ಬರೆಯುವುದು ಹೇಗೆ, ಬದುಕು ಭಾರ ಗೀತಾ ಪರಿಹಾರ, ಕರ್ಮಸಾಕ್ಷಿ, ಮಕ್ಕಳ ಕತೆಗಳ ಮುಂತಾದವು ಓದುಗರಿಗೆ ಪರಿಚಿತವಾಗಿವೆ. ನಮ್ಮ ಉಪ್ಪಿ (ಸುಂದರಬಾಬು ಅವರೊಂದಿಗೆ) ಮೂಡಿಸಿರುವ ಜೀವನ ಚರಿತ್ರೆ. ಮಸ್ಕತ್ ಜೀವನ ಮತ್ತ ಅಮೆರಿಕ ಯಾತ್ರೆಯ ಕುರಿತಾಗಿ ಪ್ರವಾಸ ಕಥನ ಕೂಡ ಬರೆದಿದ್ದಾರೆ. ಡಾ.ವೆಲುವೋಲು ನಾಗರಾಜ್ಯಲಕ್ಷ್ಮಿ ಅವರ ತೆಲುಗು ಕೃತಿಯ ಅನುವಾದ ಭಗವದ್ಗೀತೆ ವ್ಯಕ್ತಿತ್ವ ವಿಕಾಸ. ಇವರು ಇನ್ನೂ ಹದಿನಾರು ಕಾದಂಬರಿಗಳು ಮತ್ತು ಹಲವು ವೈವಿಧ್ಯಗಳನ್ನು ಪ್ರಕಟಣೆಗೆ ಸಿದ್ಧಗೊಳಿಸಿದ್ದಾರೆ.
ಸದಾ ನಗೆಮೊಗದ ಯತಿರಾಜ ವೀರಾಂಬುಧಿ ಅವರ ಹಾಸ್ಯ ಬರಹಗಳು ’ವೀರಾಂಬುಧಿ ಜೋಕ್ಸ್’ ಕೃತಿಯಲ್ಲಿ ಲಭ್ಯ. ಅಂತರಜಾಲದಲ್ಲಿ ’ಯತೀ ಸ್ವಂತಿ’ ಎಂಬ ಶೀರ್ಷಿಕೆಯಲ್ಲಿ ಅವರು ತಮ್ಮ ಬದುಕಿನ ವಿವಿಧ ನೆಲೆಗಳನ್ನು ಸುದೀರ್ಘವಾಗಿ ಪರಿಚಯಿಸಿದ್ದಾರೆ.
ಹೀಗೆ ನಿರಂತರವಾಗಿ ತಮ್ಮ ಸಾಂಸ್ಕೃತಿಕ ಅಭಿರುಚಿ, ಅಭಿವ್ಯಕ್ತಿ ಹಾಗೂ ಸರಳ ಸಜ್ಜನಿಕೆಗಳಿಂದ ಎಲ್ಲೆಡೆ ಆತ್ಮೀಯವಾಗಿ ಸಲ್ಲುತ್ತಿರುವ ಯತಿರಾಜ ವೀರಾಂಬುಧಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಹೇಳೋಣ.
On the birthday of writer and our affectionate Yathiraj Veerambudhi, Yathiraja
ಕಾಮೆಂಟ್‌ಗಳು