ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿಳಿಮಲೆ


 ಪುರುಷೋತ್ತಮ ಬಿಳಿಮಲೆ


ಜಾನಪದ, ಸಾಂಸ್ಕೃತಿಕ, ಯಕ್ಷಗಾನ ಮುಂತಾದ ಕ್ಷೇತ್ರಗಳಲ್ಲಿ ಅಧ್ಯಯನ , ಪ್ರಾಧ್ಯಾಪನ ಮತ್ತು ಸಂಶೋಧನೆಗಳ ಜೊತೆ ಜೊತೆಗೆ ಅನೇಕ ಚಳವಳಿಗಳಲ್ಲಿ ನೇರ‍ವಾಗಿ ಭಾಗಿಯಾಗಿ ಹೆಸರಾದವರು ಡಾ. ಪುರುಷೋತ್ತಮ ಬಿಳಿಮಲೆ.

ಪುರುಷೋತ್ತಮ ಬಿಳಿಮಲೆ  ದಕ್ಷಣಕನ್ನಡ ಜಿಲ್ಲೆಯ ಪಂಜದಲ್ಲಿ 1955ರ ಆಗಸ್ಟ್ 21ರಂದು ಜನಿಸಿದರು. ತಂದೆ ಬಿ.ಶೇಷಪ್ಪಗೌಡ, ತಾಯಿ ಗೌರಮ್ಮ. ಪ್ರಾಥಮಿಕ ಶಿಕ್ಷಣ ನಡೆದದ್ದು ಸುಳ್ಯದ ಬಳಿಯ ಕೂತ್ಕುಂಜದಲ್ಲಿ. ಪ್ರೌಢಶಾಲೆಗೆ ಸೇರಿದ್ದು ಪಂಜದಲ್ಲಿ. ಕಾಲೇಜು ವಿದ್ಯಾಭ್ಯಾಸ ಸುಬ್ರಹ್ಮಣ್ಯೇಶ್ವರ ಜ್ಯೂನಿಯರ್ ಕಾಲೇಜು, ಮತ್ತು ವಿವೇಕಾನಂದ ಕಾಲೇಜು ಪುತ್ತೂರಿನಲ್ಲಿ.

ಪುರುಷೋತ್ತಮ ಬಿಳಿಮಲೆ ಅವರು ಮದರಾಸು ವಿಶ್ವವಿದ್ಯಾಲಯದಿಂದ 1979ರಲ್ಲಿ ಮೊದಲ ರ‍್ಯಾಂಕ್ ಪಡೆದು ಎಂ.ಎ. ಪದವಿ ಗಳಿಸಿದರು. ಮಂಗಳೂರು ವಿಶ್ವವಿದ್ಯಾಲಯದಿಂದ “ಸುಳ್ಯ  ಪರಿಸರದ ಗೌಡಜನಾಂಗ : ಒಂದು ಸಾಂಸ್ಕೃತಿಕ ಅಧ್ಯಯನ” ಮಹಾ ಪ್ರಬಂಧ ಮಂಡಿಸಿ  ಪಿಎಚ್.ಡಿ. ಗಳಿಸಿದರು. 

ಪುರುಷೋತ್ತಮ ಬಿಳಿಮಲೆ  1979ರಲ್ಲಿ ಸುಳ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ, ನಂತರ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಉದ್ಯೋಗ ಮಾಡಿದರು. 1992ರಿಂದ 98ರವರೆಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕರ ಹುದ್ದೆ ನಿರ್ವಹಿಸಿ  1998ರಿಂದ ದೆಹಲಿಯ ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್‌ನಲ್ಲಿ ಜನಾಂಗಿಯ ಸಂಗೀತ ಪತ್ರಾಗಾರ ಮತ್ತು ಸಂಶೋಧನಾ ಕೇಂದ್ರದಲ್ಲಿ ಉಪನಿರ್ದೇಶಕರಾಗಿ, ನಿರ್ದೇಶಕರಾಗಿ ಜವಾಬ್ದಾರಿ ನಿರ್ವಹಿಸಿದರು.  ಕಳೆದ ಹಲವು ವರ್ಷಗಳಿಂದ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪುರುಷೋತ್ತಮ ಬಿಳಿಮಲೆ  ಹಂಪಿ ವಿಶ್ವವಿದ್ಯಾಲಯದಲ್ಲಿದ್ದಾಗಲೇ ಜಾನಪದ ವಿಭಾಗದ ಮುಖ್ಯಸ್ಥರಾಗಿ, ಕರ್ನಾಟಕ ಜಾನಪದ ಅಕಾಡಮಿಯ ಸದಸ್ಯರಾಗಿ, ರಾಜ್ಯ ವಯಸ್ಕರ ಶಿಕ್ಷಣ ಸಮಿತಿ ಸದಸ್ಯರಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು.  ಟೋಕಿಯೋ, ಜೆರೂಸಲೇಮ್‌ಗೆ ಮುಂತಾದ ಸ್ಥಳಗಳಿಗೆ ಹಲವಾರು ಬಾರಿ ಆಹ್ವಾನಿತರಾಗಿ ಭೇಟಿ ನೀಡಿದ್ದರು.

ಪುರುಷೋತ್ತಮ ಬಿಳಿಮಲೆ ಬಂಡಾಯ-ದಲಿತ ಸಾಹಿತ್ಯ ಚಳುವಳಿಯಲ್ಲಿ ನೇರವಾಗಿ ಭಾಗವಹಿಸಿದವರು ಮತ್ತು ಅನೇಕ ಜನಪರ ಹೋರಾಟಗಳನ್ನು ಸಂಘಟಿಸಿದವರು. ಬಡವರ, ಹಿಂದುಳಿದವರ, ಅಲ್ಪಸಂಖ್ಯಾತರ ಮತ್ತು ದಲಿತರ ಪರವಾಗಿ ನಿರಂತರವಾಗಿ ಬರೆಯುತ್ತಲೇ ಬಂದಿರುವ ಅವರು ಸಾಹಿತ್ಯವನ್ನು ತಮ್ಮ ಹೋರಾಟಗಳಿಗೆ ಪೂರಕವಾಗಿ ಬಳಸಿಕೊಂಡಿದ್ದಾರೆ.  ಜನಪದ ಸಾಹಿತ್ಯವನ್ನು ಗಂಭೀರವಾಗಿ ಅಭ್ಯಸಿಸಿರುವ ಅವರು ಆ ಮೂಲಕ ಶಿಷ್ಟ ಸಾಹಿತ್ಯದ ಕೆಲವು ಜನವಿರೋಧಿ ನೆಲೆಗಳನ್ನು ಗಂಭೀರವಾಗಿ ಪ್ರಶ್ನಿಸುತ್ತಾ ಬಂದವರು. 

ಪುರುಷೋತ್ತಮ ಬಿಳಿಮಲೆ ಅವರ ಬರಹಗಳಲ್ಲಿ ಮೆಕೆಂಜಿಯ ಕೈಫಿಯತ್ತುಗಳು, ಲಿಂಗರಾಜ ಹುಕುಂ ನಾಮ, ಕಂಬುಳ, ದಲಿತ ಜಗತ್ತು, ಬಂಡಾಯ ದಲಿತ ಸಾಹಿತ್ಯ, ಕರಾವಳಿ ಜಾನಪದ, ಶಿಷ್ಟ-ಪರಿಶಿಷ್ಟ, ಕೊರಗರು, ಜಾನಪದ ಕ್ಷೇತ್ರಕಾರ್ಯ, ಕೋಮುವಾದ ಮತ್ತು ಜನ ಸಂಸ್ಕೃತಿ, ಹಂಪಿ ಜಾನಪದ, ಕೂಡುಕಟ್ಟು, ಹುಲಿಗೆಮ್ಮ, ಕುಮಾರರಾಮ, ಕನ್ನಡ ಭಾಷಾ ಪಠ್ಯ ಪುಸ್ತಕಗಳು, ಲೋಹಿಯಾವಾದ ಕೆಲವು ಟಿಪ್ಪಣಿಗಳು, ದೇವರು ದೆವ್ವ ವಿಜ್ಞಾನ, ಯಕ್ಷಗಾನ ಪ್ರಸಂಗಗಳು, ಅಕ್ಷರ ವಿಮೋಚನೆ, ವಿಚಾರ ಸಾಹಿತ್ಯ, ಕೊಡಗು ಮತ್ತು ದ. ಕನ್ನಡ ಜಿಲ್ಲಾ ದರ್ಶನ, ಸಿರಿ, ಬಹುರೂಪ, ಮೆಲುದನಿ, ಕಾಗೆ ಮುಟ್ಟಿದ ನೀರು (ಚದುರಿ ಬಿದ್ದ ಆತ್ಮದ ತುಣುಕುಗಳು) ಮುಂತಾದ ಹಲವಾರು ಸಂಶೋಧನಾತ್ಮಕ, ವಿಚಾರಪೂರ್ಣ, ಅವಲೋಕನದ  ಕೃತಿಗಳು ತುಂಬಿವೆ.  ಅವರು ಹಲವಾರು ನಿಯತ ಕಾಲಿಕಗಳ ಸಂಪಾದಕತ್ವವನ್ನೂ ನಿರ್ವಹಿಸಿದ್ದಾರೆ.

ಪುರುಷೋತ್ತಮ ಬಿಳಿಮಲೆ ಅವರು ದೆಹಲಿ ಕನ್ನಡ ಸಂಘದ ಬಹುಮುಖ ಏಳಿಗೆಗೆ ದುಡಿದ ಪ್ರಮುಖರಲ್ಲಿ ಒಬ್ಬರಾಗಿದ್ದು ಎರಡು ಅವಧಿಗೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಪುರುಷೋತ್ತಮ ಬಿಳಿಮಲೆ ಅವರ ಕರಾವಳಿ ಜಾನಪದ ಕೃತಿಗೆ ಗುಂಡ್ಮಿ ಚಂದ್ರಶೇಖರ ಐತಾಳ ಪ್ರಶಸ್ತಿ, ಶಿಷ್ಟ-ಪರಿಶಿಷ್ಟ  ಕೃತಿಗೆ ಬಿ.ಎಚ್. ಶ್ರೀಧರ ಪ್ರಶಸ್ತಿ, ಮಲ್ಲಿಕಾರ್ಜುನ ಮನಸೂರ ಪ್ರಶಸ್ತಿ, ಆರ‍್ಯಭಟ ಪ್ರಶಸ್ತಿ, ಕೂಡುಕಟ್ಟು ಕೃತಿಗೆ ಸಾರಂಗ ಮಠ ಪ್ರಶಸ್ತಿ, ಕು.ಶಿ. ಹರಿದಾಸಭಟ್ಟ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,  ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ 2018ನೆಯ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಮುಂತಾದ ಅನೇಕ  ಗೌರವಗಳು ಸಂದಿವೆ.

On the birth day of writer Dr. Purushotham Bilimale

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ