ಸ್ನೇಹ ದಿನ
ನಿಮ್ಮ ಸ್ನೇಹಕ್ಕೆ ನಾನು ಚಿರಋಣಿ
ಆತ ಬದುಕು ಕೊಡದಿದ್ದರೆ ನಾನೆಲ್ಲಿರುತ್ತಿದ್ದೆ
ಅಮ್ಮ ಉಣಿಸದಿದ್ದರೆ ನಾನೆಲ್ಲಿ ಉಳಿಯುತ್ತಿದ್ದೆ,
ಅಪ್ಪ ಪೊರೆಯದಿದ್ದರೆ ನಾನೆಲ್ಲಿ ಬೆಳೆಯುತ್ತಿದ್ದೆ,
ಅಣ್ಣ ಜೊತೆ ಆಡದಿದ್ದರೆ ನಾನೆಲ್ಲಿ ಆಡುತ್ತಿದ್ದೆ,
ಅಕ್ಕ ನಡೆಸದಿದ್ದರೆ ನಾನೆಲ್ಲಿ ಹೆಜ್ಜೆಯಿಡುತ್ತಿದ್ದೆ,
ರೈತ ಬೆಳೆಯದಿದ್ದರೆ ನಾನೆಲ್ಲಿ ಉಣ್ಣುತ್ತಿದೆ,
ಯೋಧ ಕಾಯದಿದ್ದರೆ ನಾನೆಲ್ಲಿ ಉಸುರುತ್ತಿದ್ದೆ,
ಗುರು ಕರುಣಿಸದಿದ್ದರೆ ನಾನೆಲ್ಲಿ ತಿಳಿಯುತ್ತಿದ್ದೆ,
ಸಖಿ ಪ್ರೀತಿಸದಿದ್ದರೆ ನಾನೆಲ್ಲಿ ಸವಿಯುತ್ತಿದ್ದೆ,
ಮಗು ನೀಕರೆಯದಿದ್ದರೆ ನಾನೆಲ್ಲಿ ಮುದಗೊಳ್ಳುತ್ತಿದ್ದೆ,
ಜಗ ಗೆಳೆಯರೀಯದಿದ್ದರೆ ನಾನೆಲ್ಲಿ ಸುಖಿಸುತ್ತಿದ್ದೆ
ಜಗದಸ್ನೇಹವೇ ನಿನಗೆ ಸಾಷ್ಟಾಂಗ ನಮನ,
ಈ ಅರಿವು ನಮ್ಮ ಸದಾ ಪೊರೆಯಲಿ
ಓ ಸ್ನೇಹವೇ ನಿನಗೆ ನಾ ಸದಾ ಚಿರಋಣಿ.
ನಮ್ಮ ನಡೆಸುತ್ತಿರುವ ಆ ದಿವ್ಯಶಕ್ತಿಯನ್ನೂ ಒಳಗೊಂಡಂತೆ, ಈ ಪರಿಸರ, ನನ್ನ ಕುಟುಂಬ, ನನ್ನ ಬಾಲ್ಯದ, ಕಲಿಕೆಯ, ಬೆಳವಣಿಗೆಯ, ಕಾಯಕದ, ಬದುಕಿನ ವಿವಿಧ ಸ್ಥರಗಳ, ಫೇಸ್ ಬುಕ್ ಅಂತಹ ಅಂತರ್ಜಾಲದ ಮತ್ತು ವಿಶ್ವದ ಎಲ್ಲೆಡೆಯಿಂದ ಪ್ರೀತಿ ವಿಶ್ವಾಸಗಳ ಮಳೆ ಸುರಿಸಿ ನಿಮ್ಮ ಗೆಳೆತನದಲ್ಲಿ ತೋಯಿಸಿ ನನ್ನನ್ನು ಕೃತಕೃತ್ಯನನ್ನಾಗಿಸಿರುವ ನಿಮಗೆ ಈ 'ಸ್ನೇಹ ಕೃತಜ್ಞತಾ ದಿನ -Friendship Day' ಸಂದರ್ಭದಲ್ಲಿ ಹೃತ್ಪೂರ್ವಕವಾಗಿ ವಂದಿಸಿ ಶುಭ ಕೋರುತ್ತೇನೆ.
ಕಾಮೆಂಟ್‌ಗಳು