ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಿ. ರಂ. ನಾಗರಾಜ


ಕಿ.  ರಂ. ನಾಗರಾಜ

ಕನ್ನಡ ಸಾಹಿತ್ಯಲೋಕದ ವಿಶಿಷ್ಟ ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ ಮತ್ತು ಬರಹಗಾರರಾಗಿ ಕಿ. ರಂ. ನಾಗರಾಜ ಅವರು ಹೆಸರಾದವರು. ಆಪ್ತ ಶಿಷ್ಯವೃಂದ  ಮತ್ತು ಸಾಹಿತ್ಯಾಭಿಮಾನಿ ಬಳಗದಲ್ಲಿಅವರು ಕಿರಂ ಎಂದೇ ಚಿರಪರಿಚಿತರು. ಇಂದು ಕಿರಂ ಅವರ ಸಂಸ್ಮರಣಾ ದಿನ

ಕಿತ್ತಾನೆ ರಂಗಪ್ಪ ನಾಗರಾಜ ಅವರು 1943ರ ಡಿಸೆಂಬರ್ 25ರಂದು ಹಾಸನ ಜಿಲ್ಲೆಯ ಕಿತ್ತಾನೆಯಲ್ಲಿಜನಿಸಿದರು.  ತಮ್ಮ ಊರು ಕಿತ್ತಾನೆಯಲ್ಲಿ ಪ್ರಾಥಮಿಕ ಅಭ್ಯಾಸವನ್ನು ಪೂರ್ಣಗೊಳಿಸಿದರು. ಬಿ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಡೆದು,  ಎಂ.ಎ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 
ಗಳಿಸಿದರು.

ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಕಿರಂ,  ನಿರಂತರ ಮೂರು ದಶಕಗಳ ಕಾಲ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಕೇಂದ್ರದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಈ ನಡುವೆ ಎರಡು ವರ್ಷಗಳಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಜೊತೆಗೆ, ಬೆಂಗಳೂರಿನಲ್ಲಿ ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ಎಂ.ಫಿಲ್, ಪಿಎಚ್.ಡಿ ಪದವಿಗಾಗಿ ಸಂಶೋಧನೆಗೆ ಅವಕಾಶ ಕಲ್ಪಿಸಿದರು. ಕಾವ್ಯಮಂಡಲ ಹೆಸರಿನಲ್ಲಿ ಸಂಶೋಧನಾ ಕೇಂದ್ರವನ್ನುತೆರೆದು, ಇದರಲ್ಲಿ ಸಂಶೋಧನಾಸಕ್ತರಿಗೆ ಅವಕಾಶ ಕಲ್ಪಿಸಿದರು. ನಿವೃತ್ತಿಯ ನಂತರ ಕಾವ್ಯಮಂಡಲದ ನಿರ್ದೇಶಕರಾಗಿ, ಬೆಂಗಳೂರು ವಿಶ್ವವಿದ್ಯಾಲಯ, ನ್ಯಾಷನಲ್ ಕಾಲೇಜು ಹಾಗೂ ಜೈನ್ ವಿಶ್ವವಿದ್ಯಾಲಯಗಳ ಕನ್ನಡ ಸ್ನಾತಕೋತ್ತರ ಕೇಂದ್ರಗಳ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು. ಜೊತೆಗೆ, ಕೆಲವು ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಹಾಗೂ ಸ್ನಾತಕ ಪದವಿಗಳ ಪಠ್ಯಕ್ರಮ ರಚನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಕಿ.ರಂ.ನಾಗರಾಜ ಅವರು ಹಲವು ಪಠ್ಯಪುಸ್ತಕಗಳ ಸಂಪಾದನೆ, ನೂರಾರು ಲೇಖನಗಳು, ಮುನ್ನುಡಿಗಳನ್ನು ಬರೆದಿದ್ದಾರೆ. ಕೃತಿ ಬಿಡುಗಡೆಯಲ್ಲಿ ಆಡಿರುವ ಮಾತುಗಳು, ವಿಚಾರಸಂಕಿರಣಗಳಲ್ಲಿ ಮಂಡಿಸಿರುವ ಪ್ರಬಂಧಗಳು, ಸಾವಿರಾರು ಉಪನ್ಯಾಸಗಳು, ಅನೇಕ ಸಾಹಿತ್ಯಶಿಬಿರಗಳ ಆಯೋಜನೆ ಮೂಲಕ ಇವರು ಕನ್ನಡ ಸಾಹಿತ್ಯಕ್ಕೆ ಅಭೂತಪೂರ್ವ ಕೊಡುಗೆಯನ್ನುಸಲ್ಲಿಸಿದ್ದಾರೆ. ಇದೇ ಅವಧಿಯಲ್ಲಿ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕಸಾಹಿತ್ಯ ಅಕಾಡಮಿಗಳ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದರು.

ಕಿರಂ ಅವರ ಬರಹಗಳು ಹಲವು ವ್ಯಾಪ್ತಿಗಳಲ್ಲಿವೆ. ನೀಗಿಕೊಂಡ ಸಂಸ, ಕಾಲಜ್ಞಾನಿ ಕನಕ, ಮಧ್ಯಮ ವ್ಯಾಯೋಗ (ಅನುವಾದ) ಇವು ನಾಟಕಗಳು.

ಕಿರಂ  ಪ್ರತಿಷ್ಠಿತ ಶಕ್ತಿ ಮತ್ತು ಕನ್ನಡ ಸಾಹಿತ್ಯ, ಮತ್ತೆ ಮತ್ತೆ ಬೇಂದ್ರೆ (ಸಂ: ಅಕ್ಷತಾ ಹುಂಚದಕಟ್ಟೆ), ತೆರೆದಪಠ್ಯ (ಸಂ: ನಟರಾಜ್ ಹುಳಿಯಾರ್) ಮುಂತಾದವು ಸೇರಿವೆ. 

ವಚನ ಕಮ್ಮಟ, ಆಪತ್ಕಾಲೀನ ಕವಿತೆಗಳು, ಕುವೆಂಪು ನುಡಿಚಿತ್ರ, ಬಹುರೂಪಿ ಮುಂತಾದವು ಕಿರಂಅವರ ಸಂಪಾದಿತ ಕೃತಿಗಳು.
 
ನೀನಾಸಂ ಸಾಹಿತ್ಯ ಕಮ್ಮಟಗಳಲ್ಲಿ ಕಿರಂ ಅವರು ಭಾಗವಹಿಸುತ್ತಿದ್ದ ರೀತಿ, ಸಾಹಿತ್ಯ ಉಪನ್ಯಾಸಗಳಲ್ಲಿ ತಾವೂ ತನ್ಮಯರಾಗಿ ಅಭ್ಯರ್ಥಿಗಳನ್ನೂ ತನ್ಮಯರಾಗಿಸುತ್ತಿದ್ದ ಕಿರಂ ಅವರ ಮಾತುಕತೆ ಮತ್ತು ಅವರ ಸರಳ ಆತ್ಮೀಯ ರೀತಿ ಮರೆಯಲಾಗದ್ದು. ಬೆಂಗಳೂರಿನಲ್ಲಿ ಎಚ್‍ಎಮ್‍ಟಿ ಕನ್ನಡ ಸಂಪದದ ಮುಖೇನ ನೀನಾಸಂ ಸಾಹಿತ್ಯ ಕಮ್ಮಟ ವ್ಯವಸ್ಥೆಗೊಳಿಸುವಾಗ ಅವರೊಡನೆ ಕಳೆದ ಆಪ್ತಕ್ಷಣಗಳು ಮರೆಯಲಾಗದ್ದು.  ಕಾವ್ಯದ ಕಡುಮೋಹಿಯಾಗಿದ್ದ ಕಿರಂ ಪ್ರತಿ ತಿಂಗಳು ಯುವ ಕವಿಗಳನ್ನು ಒಂದೆಡೆ ಸೇರಿಸಿಕವಿಗೋಷ್ಠಿಗಳನ್ನು ಮಾಡುತ್ತಿದ್ದರು.

ಪ್ರೊ. ಕಿ. ರಂ. ನಾಗರಾಜ ಅವರಿಗೆ ಡಾ. ಎಲ್. ಬಸವರಾಜು ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಎಸ್. ವಿ. ಪರಮೇಶ್ವರಭಟ್ಟ ಪ್ರಶಸ್ತಿ, ಡಾ. ಜಿ. ಎಸ್. ಶಿವರುದ್ರಪ್ಪ ಪ್ರಶಸ್ತಿ, ಕರ್ನಾಟಕ ಅಕಾಡೆಮಿ ಫೆಲೋಶಿಪ್, ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ಮಾನು ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, 2007ರ ಜಿಲ್ಲಾ ಸಾಹಿತ್ಯಸಮ್ಮೇಳನದ ಅಧ್ಯಕ್ಷತೆ, ಕೆಂಪೇಗೌಡ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.

ಕಿರಂ ಅವರು 2010ರ ಆಗಸ್ಟ್ 7ರಂದು ನಿಧನರಾದರು. ಅವರನ್ನು ಕೇಳಿದವರು ಅವರನ್ನು ಮರೆಯುವುದಿಲ್ಲ.

On Remembrance Day of great scholar Prof. Kittane Rangappa Nagaraj

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ