ಕ್ವಿಟ್ ಇಂಡಿಯಾ
ಹಿರಿಯರೊಬ್ಬರು ಮುಂದಿನ ಕೆಲವು ದಿನ ಸ್ವಾತಂತ್ರ್ಯ ಹೋರಾಟದಲ್ಲಿದ್ದ ಮಹನೀಯರ ಕುರಿತು ಬರೆಯಿರಿ ಎಂದು ಸೂಚಿಸಿದರು. ನಿನ್ನೆ ಮತ್ತು ಇಂದು ಕ್ವಿಟ್ ಇಂಡಿಯಾ ಚಳುವಳಿ ಬಗ್ಗೆ ಓದುತ್ತಿದ್ದೆ. ಆ ವಾತಾವರಣವನ್ನು ಕಣ್ಮುಂದೆ ತಂದುಕೊಳ್ಳುವ ಪ್ರಯತ್ನ ಮಾಡಿದೆ. ಚರಿತ್ರೆಯಲ್ಲಿ ಏನು ಸರಿ, ಏನು ಸರಿಯಲ್ಲ, ಯಾವುದು ಸತ್ಯ, ಯಾವುದು ಅಲ್ಲ ಎಂಬ ಗೊಂದಲಗಳ ಮೂಟೆ ನಾನು. ಹಾಗಾಗಿ ನಾನು ಸರಿ ಅಂತ ಏನನ್ನೂ ಹೇಳುತ್ತಿಲ್ಲ. ಒಂದು ಚಿತ್ರ ಮತ್ತು ಚಿಂತನೆ ಅಷ್ಟೇ.
ಆಗಸ್ಟ್ 1942ರಲ್ಲಿ ಮಹಾತ್ಮಾ ಗಾಂಧಿಯವರ ಮುಂದಾಳತ್ವದಲ್ಲಿ ‘ಬ್ರಿಟಿಷರೆ ಭಾರತ ಬಿಟ್ಟು ಹೊರಡಿ’ ಚಳುವಳಿ ನಡೆಯಿತು. ಸ್ವಾತಂತ್ರ್ಯ ಬೇಕು, ಬಂದರೆ ಹೇಗೆ ನಿಭಾಯಿಸುವುದು ಇತ್ಯಾದಿ ಗೊಂದಲ ಭಾರತದ ನಾಯಕತ್ವದಲ್ಲಿದ್ದರೆ, ಎರಡನೇ ವಿಶ್ವಮಹಾಯುದ್ಧದ ಭೀತಿಯಲ್ಲಿ ಸಿಲುಕಿದ್ದ ಬ್ರಿಟಿಷ್ ಆಡಳಿತಕ್ಕೆ ಹಲವು ಸವಾಲು ಸಂದಿಗ್ಧಗಳಿದ್ದ ಸನ್ನಿವೇಶವದು.
ಬ್ರಿಟಿಷರಿಗೆ ಭಾರತ ನೆಲ ತನ್ನದು ಎಂಬ ಆಪ್ತತೆ ಇಲ್ಲದೆ ನಾನು ಇದನ್ನು ಆಕ್ರಮಿಸಿದ್ದೇನೆ ಎಂಬ ಅಹಮಿಕೆ ಇತ್ತು. ನಾನು-ನೀನು ಪ್ರಶ್ನೆಗಳು ಬದುಕಲ್ಲಿ ಬರುವುದೇ ಹಾಗೆ. ಇಲ್ಲದಿದ್ದರೆ ಸ್ವಾತಂತ್ರ್ಯ ಎಂಬ ಪ್ರಶ್ನೆಯಾದರೂ ಏಕೆ ಬಂದೀತು? ಮನಸ್ಸುಗಳೇ ಹಾಗೆ ಆಳುತ್ತವೆ, ಅಳುತ್ತವೆ, ಒಡೆಯುತ್ತವೆ, ಓಡುತ್ತವೆ.
1942ರ ಜುಲೈ 14ರಂದು ಕಾಂಗ್ರೆಸ್ ಪಕ್ಷವು ಬ್ರಿಟನ್ನಿನಿಂದ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಗೊತ್ತುವಳಿ ಹೊರಡಿಸಿತು. ಈ ಬೇಡಿಕೆ ನೆರವೇರದಿದ್ದರೆ, ಅಸಹಕಾರ ಚಳುವಳಿಯನ್ನು ನಡೆಸುವುದಾಗಿಯೂ ಘೋಷಿಸಿತು. ಆದರೆ ಪಕ್ಷದಲ್ಲಿಯೇ ಹಲವಾರು ನಾಯಕರು ಇದನ್ನು ವಿರೋಧಿಸಿದರು. ಚಕ್ರವರ್ತಿ ರಾಜಗೋಪಾಲಾಚಾರಿಯವರು ಈ ಕಾರಣದಿಂದ ಹಲವಾರು ಪ್ರಾದೇಶಿಕ ನಾಯಕರುಗಳೊಂದಿಗೆ ಕಾಂಗ್ರೆಸ್ ಪಕ್ಷವನ್ನು ತೊರೆದರು. ಜವಾಹರಲಾಲ್ ನೆಹರು ಮತ್ತು ಮೌಲಾನಾ ಆಜಾದ್ ಈ ಗೊತ್ತುವಳಿಯನ್ನು ಟೀಕಿಸಿದರೂ ಗಾಂಧೀಜಿಯ ನಾಯಕತ್ವದಲ್ಲಿ ವಿಶ್ವಾಸ ಸೂಚಿಸಿದರು. ಸರ್ದಾರ್ ಪಟೇಲ್ ಮತ್ತು ಡಾ. ರಾಜೇಂದ್ರ ಪ್ರಸಾದ್ ಈ ನಿಲುವಳಿಯನ್ನು ಬಹಿರಂಗವಾಗಿ ಬೆಂಬಲಿಸಿದರು. ಆದರೆ ಬೇರೆ ಪಕ್ಷಗಳು ಇದಕ್ಕೆ ಸಹಮತ ಸೂಚಿಸಲಿಲ್ಲ.
ಎರಡನೇ ಮಹಾಯುದ್ಧ ಪ್ರಾರಂಭವಾದಾಗ, ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಮಿತಿಯು ಬ್ರಿಟಿಷ್ ಸರ್ಕಾರವನ್ನು ಸಮರ್ಥಿಸುವುದೆಂದೂ, ಇದಕ್ಕೆ ಪ್ರತಿಯಾಗಿ ಭಾರತಕ್ಕೆ ಸ್ವಾತಂತ್ರ್ಯ ಕೊಡಬೇಕೆಂದೂ ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸಿತು. ಅಹಿಂಸಾವಾದಿಯಾದ ಗಾಂಧೀಜಿಗೆ ಈ ನಿರ್ಣಯದ ಬಗ್ಗೆ ಒಲವಿರಲಿಲ್ಲ. ಅವರಿಗೆ ಯುದ್ಧವನ್ನು ಬೆಂಬಲಿಸುವ ಮನಸ್ಸಿರಲಿಲ್ಲ. ಹೀಗೆ ಹಲವು ಸಂದಿಗ್ದಗಳ ವಾತಾವರಣ. ಆದರೂ ಹೋರಾಟ ಮಾಡದೆ ವಿಧಿಯಿಲ್ಲ ಎನ್ನುವ ಸ್ಥಿತಿ. ಬ್ರಿಟಿಷ್ ಸರ್ಕಾರವಂತೂ ಇದಕ್ಕೆ ಬೆಲೆ ಕೊಡಲಿಲ್ಲ.
1942ರ ಆಗಸ್ಟ್ 8ರಂದು ಮುಂಬಯಿಯ ಗೊವಾಳಿಯ ಮೈದಾನ(ಈಗಿನ ಹೆಸರು ಆಗಸ್ಟ್ ಕ್ರಾಂತಿ ಮೈದಾನ)ದಲ್ಲಿ 'ಕ್ವಿಟ್ ಇಂಡಿಯಾ ಚಳುವಳಿಯು' ಗಾಂಧೀಜಿಯವರ 'ಮಾಡು ಇಲ್ಲವೆ ಮಡಿ' ಘೋಷಣೆಯೊಂದಿಗೆ ಪ್ರಾರಂಭವಾಯಿತು. ‘ನಾವು ಸಮರ್ಥರಿದ್ದೇವೆ ಭಾರತ ಬಿಟ್ಟು ಹೊರಡಿ' ಎಂಬುದು ಹೋರಾಟದ ಕೂಗಾಯಿತು. 'ಕ್ವಿಟ್ ಇಂಡಿಯಾ' ಎಂಬ ನುಡಿಯ ಕುರಿತಾಗಿ ಗಾಂಧೀಜಿ ಹಲವರೊಂದಿಗೆ ಹಲವು ರೀತಿಯಲ್ಲಿ ಚಿಂತಿಸಿದರು ಎಂದು ಓದುವಾಗ 'ಬ್ರಿಟಿಷರೆ ಭಾರತ ಬಿಟ್ಟು ತೊಲಗಿ' ಎಂಬುದು ಸರಿಯಾದ ಅನುವಾದವಲ್ಲವೇನೋ ಎಂದು ನನಗನ್ನಿಸಿತು. 'ಕ್ವಿಟ್ ಇಂಡಿಯಾ' ಘೋಷಣೆಯ 24 ಗಂಟೆಗಳೊಳಗೆ ಬಹುತೇಕ ಕಾಂಗ್ರೆಸ್ ನಾಯಕರು ಬಂಧಿತರಾಗಿ ಕೆಲವು ವರ್ಷಗಳನ್ನು ಜೈಲಿನಲ್ಲಿ ಕಳೆಯುವಂತಾಯ್ತು.
1942ರ ವೇಳೆಯಲ್ಲಿ ಬ್ರಿಟಿಷರು ಭಾರತದ ನಾಯಕರನ್ನು ಲೆಕ್ಕಿಸದೆಯೇ ಭಾರತದ ಸೇನೆಯನ್ನು ಎರಡನೇ ಮಹಾಯುದ್ಧದಲ್ಲಿ ಬಳಸಿಕೊಂಡರು. ಇದರಿಂದ ಕುಪಿತರಾದ ಸುಭಾಷ್ ಚಂದ್ರ ಬೋಸ್ ಭಾರತೀಯ ರಾಷ್ಟ್ರೀಯ ಸೇನೆಯನ್ನು ಜಪಾನೀಯರ ಸಹಾಯದಿಂದ ಒಗ್ಗೂಡಿಸಿದರು. ಈ ಸೇನೆಯು ಅಸ್ಸಾಂ, ಬಂಗಾಳ, ಮತ್ತು ಬರ್ಮಾ ಕಾಡುಗಳಲ್ಲಿ ಛಲದಿಂದ ಹೋರಾಡಿದರೂ ಜಪಾನೀಯರ ಸಹಾಯದ ಕೊರತೆಯಿಂದ ಮತ್ತು ಆಯುಧಗಳ ಕೊರತೆಯಿಂದ ಸೋತಿತು. ಆದರೂ ಬೋಸರ ಧೈರ್ಯ-ಸಾಹಸಗಳಿಂದ ಉತ್ತೇಜಿತರಾದ ಹೊಸ ಪೀಳಿಗೆಯ ಭಾರತೀಯರು ಕ್ವಿಟ್ ಇಂಡಿಯಾ ಚಳುವಳಿಯನ್ನು ಸೇರಿದರು. ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಚಳುವಳಿಗೆ ಬೆಂಬಲ ಸೂಚಿಸಿದವರಲ್ಲಿ ಗಾಂಧೀಜಿಯವರ ಅಹಿಂಸಾ ತತ್ವದ ವಿರೋಧಿಗಳಾದ ಕ್ರಾಂತಿಕಾರಿಗಳೂ ಸೇರಿದ್ದರು.
ಭಾರತೀಯ ಕಮ್ಯೂನಿಸ್ಟ್ ಪಕ್ಷ ಮತ್ತು ಹಿಂದೂ ಮಹಾಸಭಾ 'ಕ್ವಿಟ್ ಇಂಡಿಯಾ' ಚಳುವಳಿಯನ್ನು ವಿರೋಧಿಸಿದವು. ಮೊಹಮ್ಮದ್ ಅಲಿ ಜಿನ್ನಾರ ವಿರೋಧದ ಕಾರಣ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಬ್ರಿಟಿಷರ ಪರವಾಗಿ ನಿಂತರು. ಇದರಿಂದ ಮುಸ್ಲಿಂ ಲೀಗ್ ಪಕ್ಷಕ್ಕೆ ಪ್ರಾಂತೀಯ ಸರ್ಕಾರಗಳಲ್ಲಿ ಅಧಿಕಾರ ದೊರೆಯಿತು.
ಅಮೆರಿಕದ ಅಧ್ಯಕ್ಷರಾದ ಫ್ರಾಂಕ್ಲಿನ್ ರೂಸ್ವೆಲ್ಟ್ ಒಬ್ಬರು ಮಾತ್ರಾ ಬ್ರಿಟಿಷ್ ಪ್ರಧಾನಿ ವಿನ್ಸಟನ್ ಚರ್ಚಿಲ್ ಅವರಿಗೆ ಭಾರತೀಯರ ಕೆಲವು ಬೇಡಿಕೆಗಳನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದರು.
ಬ್ರಿಟಿಷ್ ಸರ್ಕಾರ ಸ್ವಾತಂತ್ರ್ಯ ನೀಡಿಕೆ ವಿಚಾರದ ಪರಶೀಲನೆ ಯುದ್ಧ ಮುಗಿದ ನಂತರ ಮಾತ್ರಾ ಸಾಧ್ಯ ಎಂದು ಸ್ವಾತಂತ್ರ್ಯ ನೀಡಿಕೆಯ ಕುರಿತಾದ ಮಾತುಕತೆಗಳನ್ನು ನಿರಾಕರಿಸಿತು.
ಜಪಾನಿ ಸೇನೆಯು ಭಾರತದ ಬರ್ಮಾ ಗಡಿಯ ಬಳಿ ತಲುಪಿದ್ದನ್ನು ಕಂಡ ಬ್ರಿಟಿಷ್ ಆಡಳಿತ ಆಗಸ್ಟ್ 9ರಂದು ಗಾಂಧಿಯವರನ್ನು ಬಂಧಿಸಿದರು. ಕಾಂಗ್ರೆಸ್ಸಿನ ಎಲ್ಲ ರಾಷ್ಟ್ರೀಯ ನಾಯಕರನ್ನೂ ಬಂಧಿಸಲಾಯಿತು. ನಂತರ ಕಾಂಗ್ರೆಸ್ ಪಕ್ಷವನ್ನು ನಿಷೇಧಿಸಲಾಯಿತು. ಇದರಿಂದ ಜನರಲ್ಲಿ ಬ್ರಿಟಿಷ್ ವಿರೋಧಿ ಭಾವನೆ ಇನ್ನೂ ಹೆಚ್ಚಾಯಿತು.
ಸಂಘಟಿಸಲು ನಾಯಕರು ಲಭ್ಯರಿಲ್ಲದಿದ್ದರೂ ಬೃಹತ್ ಪ್ರಮಾಣದಲ್ಲಿ ವಿರೋಧ ಪ್ರದರ್ಶನ ಮತ್ತು ಧರಣಿಗಳು ಎಲ್ಲಡೆ ನಡೆದವು. ಆದರೆ ಎಲ್ಲ ವಿರೋಧಗಳು ಅಹಿಂಸಾತ್ಮಕವಾಗೇನೂ ಉಳಿಯಲಿಲ್ಲ. ಬಾಂಬುಗಳನ್ನು ಸ್ಫೋಟಿಸಲಾಯಿತು, ಸರ್ಕಾರೀ ಕಟ್ಟಡಗಳನ್ನು ಸುಡಲಾಯಿತು, ವಿದ್ಯುತ್ತನ್ನು ನಿಲ್ಲಿಸಲಾಯಿತು, ಸಾರಿಗೆ ಮತ್ತು ಸಂಪರ್ಕಗಳನ್ನು ಕಡಿಯಲಾಯಿತು. ಆದರೆ ಬ್ರಿಟಿಷರು ತ್ವರಿತವಾಗಿ ಪ್ರದರ್ಶನಕಾರರನ್ನು ಬಂಧಿಸಿದರು. ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಬಂಧಿಸಲಾಯಿತು, ಬೃಹತ್ ಪ್ರಮಾಣದಲ್ಲಿ ದಂಡಗಳನ್ನು ವಿಧಿಸಲಾಯಿತು, ಬಾಂಬುಗಳನ್ನು ವಿರೋಧಿಗಳ ಮೇಲೆ ಬಳಸಲಾಯಿತು, ಮತ್ತು ಪ್ರದರ್ಶನಕಾರರನ್ನು ಸಾರ್ವಜನಿಕವಾಗಿ ದಂಡಿಸಲಾಯಿತು. ಹಲವು ರಾಷ್ಟ್ರೀಯ ನಾಯಕರು ಭೂಗತರಾಗಿ ರೇಡಿಯೋ ಸ್ಟೇಷನ್ ಗಳಿಂದ ಜನರಿಗೆ ಸಂದೇಶ ಕೊಡುತ್ತಿದ್ದರು.
ಕಾಂಗ್ರೆಸ್ ಪಕ್ಷದ ನಾಯಕರು ಇಡೀ ಪ್ರಪಂಚದಿಂದ ಮೂರು ವರ್ಷಗಳ ಕಾಲ ಸಂಪರ್ಕ ಕಳೆದುಕೊಂಡರು. ಗಾಂಧೀಜಿಯವರ ಪತ್ನಿ ಕಸ್ತೂರ್ ಬಾ ಗಾಂಧಿ ಮತ್ತು ಕಾರ್ಯದರ್ಶಿ ಮಹಾದೇವ ದೇಸಾಯಿ ಮರಣದ ನಂತರ ಗಾಂಧಿಯವರ ಆರೋಗ್ಯ ಹದಗೆಟ್ಟಿತು. ಇದರ ಹೊರತಾಗಿಯೂ, ಮಹಾತ್ಮಾ ಗಾಂಧಿಯವರು 21 ದಿನಗಳ ಉಪವಾಸವನ್ನು ಕೈಗೊಂಡು ಚಳುವಳಿಯನ್ನು ಮುಂದುವರೆಸಲು ಅತಿಮಾನುಷ ಪ್ರಯತ್ನ ತೋರಿದರು. ಅವರ ಆರೋಗ್ಯ ಇನ್ನೂ ಹದಗೆಟ್ಟ ಕಾರಣ ಬ್ರಿಟಿಷರು ಗಾಂಧಿಯವರನ್ನು 1944ರಲ್ಲಿ ಬಿಡುಗಡೆಗೊಳಿಸಿದರೂ ಕೂಡ, ಅವರು ಎಲ್ಲಾ ಕಾಂಗ್ರೆಸ್ ನಾಯಕರ ಬಿಡುಗಡೆಗೆ ಒತ್ತಾಯಿಸಿ ಧರಣಿಯನ್ನು ಮುಂದುವರೆಸಿದರು.
ಚಳುವಳಿಯನ್ನು ಬ್ರಿಟಿಷರು ಹತ್ತಿಕ್ಕಿದ ಪರಿಣಾಮವಾಗಿ ಬಹಳ ಜನ ಪುರುಷರು ಮತ್ತು ಸ್ತ್ರೀಯರು ಸುದೀರ್ಘ ಹೋರಾಟ ನಡೆಸಿದರೂ ದಿನಗಳೆದಂತೆ 1944ರ ವೇಳೆಗೆ ಚಳುವಳಿ ಕಾವು ಕಳೆದುಕೊಂಡಿತ್ತು. ಬಂಧನಕ್ಕೊಳಗಾದವರ ಬಿಡುಗಡೆ ಸಾಧ್ಯವಾಗಿದ್ದು 1945ರ ವರ್ಷದಲ್ಲೇ.
ಹೋರಾಟದ ತಕ್ಷಣದ ಫಲಿತಾಂಶ ಲಭ್ಯತೆಯ ನಿಟ್ಟಿನಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಸೋಲನುಭವಿಸಿತು ಎಂದು ಹೇಳುವುದಿದೆ. ಹಾಗೆ ನೋಡಿದರೆ ಬ್ರಿಟಿಷ್ ಸರ್ಕಾರದ ವಿರುದ್ದ ಯಾವ ಹೋರಾಟವನ್ನೂ ಯಶಸ್ವಿ ಎಂದು ಹೇಳುವುದು ಹೇಗೆ? ನಮಗೆ 'ಸ್ವಾತಂತ್ರ್ಯ ಮುಖ್ಯ' ಎಂಬ ಹೋರಾಟವನ್ನು ಜೀವಂತವಾಗಿಡುವುದೇ ಸ್ವಾತಂತ್ರ್ಯ ಹೋರಾಟದ ಮೂಲ ಆಶಯವಾಗಿರುತ್ತದೆ. ಚಳುವಳಿಗೆ ಸಂಘಟನೆಯಲ್ಲಿದ್ದ ಕೊರತೆ, ಒಡಕು, ನಿರ್ದಿಷ್ಟ ಕಾರ್ಯಯೋಜನೆ ಇಲ್ಲದ್ದು ಇತ್ಯಾದಿ ಅನೇಕ ಕಾರಣಗಳನ್ನು ಕ್ವಿಟ್ ಇಂಡಿಯಾ ಚಳುವಳಿ ವಿಚಾರದಲ್ಲಿ ಕೂಡಾ ಹೇಳಲಾಗುತ್ತದೆ. ಬ್ರಿಟಿಷರು ಚಳುವಳಿಯನ್ನು ಬಲಯುತವಾಗಿ ನಸುಕಿಹಾಕಿದ್ದರು ಎಂಬುದಂತೂ ನಿಜ. ಪ್ರಾಂತೀಯ ರಾಜರುಗಳ ಆಡಳಿತವೂ ಬ್ರಿಟಿಷ್ ಇಚ್ಚೆಗೆ ಅನುಗುಣವಾಗಿ ಚಳುವಳಿಯನ್ನು ಹತ್ತಿಕ್ಕಿದ್ದವು.
ಆದರೆ, ಸ್ವಾತಂತ್ರ್ಯ ಎಂಬುದು ಸಂಭವಿಸುತ್ತದೆ ಎಂಬ ಎಂಬ ಹಲವು ಹೊಳಹುಗಳು ಚರಿತ್ರೆಯ ಅಂದಿನ ಪುಟಗಳಲ್ಲಿ ಕಾಣಬರುತ್ತದೆ. ಜೊತೆಗೆ ಸ್ವಾತಂತ್ರ್ಯ ಬಂದರೆ ಹೇಗೆ ಎಂಬ ಭಯ, ಬಂದರೆ ನನಗೇನು ಅಧಿಕಾರ ಸಿಗುತ್ತೆ ಎಂಬ ಸ್ವಾರ್ಥ, ದೇಶ ಎರಡು ಧರ್ಮೀಯರ ಮೊಂಡುತನಗಳಲ್ಲಿ ವಿಭಜನೆಯ ಹಾದಿ ಹಿಡಿದದ್ದು, ಯುದ್ಧ ಮತ್ತು ಅಹಿಂಸೆ ವಿಚಾರಗಳಲ್ಲಿ ಗಾಂಧಿಯವರ ಮುಂದೆ ಒಮ್ಮೆಲೆ ಎದ್ದ ದ್ವಂದ್ವ ಈ ಹಾದಿಯಲ್ಲಿ ಸೂಕ್ಷ್ಮವಾಗಿ ಹೊರಹೊಮ್ಮಿದಂತೆ ಸಹಾ ಕಾಣುತ್ತೆ.
ಮತ್ತೊಂದೆಡೆ ಬ್ರಿಟಿಷ್ ಸರ್ಕಾರಕ್ಕೆ ಯುದ್ಧದಲ್ಲಿ ಉಂಟಾದ ಅಪಾರ ನಷ್ಟದಿಂದ ಭಾರತವನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡು ನಿಭಾಯಿಸುವುದು ಕಷ್ಟಸಾಧ್ಯ ಅನಿಸಿ ಹೇಗೆ ಶಾಂತಿಯುತವಾಗಿ ಹಾಗೂ ಗೊಂದಲಗಳಿಲ್ಲದೆ ಭಾರತದಿಂದ ಕಾಲ್ತೆಗೆಯುವುದು ಎಂಬ ಸ್ಥಿತಿಗೆ ತಲುಪಿತ್ತು.
ಭಾರತೀಯರನ್ನು ತನಗಾಗಿ ಯದ್ಧದಲ್ಲಿ ದುಡಿಸಿಕೊಂಡ ಬ್ರಿಟಿಷ್ ಆಡಳಿತ, ಭಾರತದ ಸೈನ್ಯವನ್ನು ಸುವ್ಯವಸ್ಥಿತವಾಗಿ ಕಾಲದ ಅಗತ್ಯತೆಗೆ ತಕ್ಕಂತೆ ಆಧುನಿಕರಣ ಕೂಡಾ ಮಾಡಿರಲಿಲ್ಲ. ಇನ್ನುಳಿದಂತೆ ಕೈಗಾರಿಕೆಗಳಲ್ಲಾಗಲಿ ಜನಜೀವನದ ಉದ್ಧಾರದ ವಿಚಾರದಲ್ಲಾಗಲಿ, ಇದು ನನ್ನ ಜಾಗ ಚೆನ್ನಾಗಿ ಇಟ್ಟುಕೊಳ್ಳಬೇಕು ಇಲ್ಲಿನ ಜನ ಚೆನ್ನಾಗಿರಬೇಕು ಎಂದು ಯೋಚಿಸಿದಂತೆ ಕಾಣುವುದಿಲ್ಲ. ಪೂರ್ತಿ ಭಿಕಾರಿ ಮಾಡಿ ಇನ್ನು ನಾ ಹೊರಡುತ್ತೇನೆ ಎಂದು ತನ್ನ ಬುತ್ತಿಯನ್ನು ಕಟ್ಟಿಕೊಂಡು ಹೊರಡಲು ಕಾದಿದೆಯೇನೋ ಎಂಬಂತೆ ನಡೆದುಕೊಂಡಿತು.
Quit India movement and India - few thoughts
ಕಾಮೆಂಟ್‌ಗಳು