ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬನ್ನಂಜೆ


 ಬನ್ನಂಜೆ ಗೋವಿಂದಾಚಾರ್ಯರು


ಬನ್ನಂಜೆ ಗೋವಿಂದಾಚಾರ್ಯರು ನನ್ನನ್ನು ಅತ್ಯಂತ ಪ್ರಭಾವಿಸಿದ್ದ ಗುರುವರ್ಯರು.

ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಅಖಂಡ ವಿದ್ವತ್ತು, ಕೃತಿ, ಕಾರ್ಯ ಮತ್ತು  ಪ್ರವಚನಗಳಿಂದಾಗಿ ಲೋಕಮಾನ್ಯರಾಗಿದ್ದಾರೆ. ವೇದ, ಉಪನಿಷತ್ತು,  ಪುರಾಣ ಇತಿಹಾಸ ತತ್ವಗಳಲ್ಲಿ ಅವರದ್ದು ಅಸಾಮಾನ್ಯ ಪಾಂಡಿತ್ಯ.  ತಾವು ಅಪ್ರತಿಮ ಪಂಡಿತರಾಗಿದ್ದಾಗ್ಯೂ, ಸಾಮಾನ್ಯನನ್ನೂ ತಮ್ಮ ಆಕರ್ಷಣೀಯ ಕಥಾನಕಗಳು, ಹೃದಯವಂತಿಕೆ ಮತ್ತು ಸಜ್ಜನಿಕೆಗಳ ಮುಖೇನ  ಭಾರತೀಯ ಸಂಸ್ಕೃತಿಗಳತ್ತ, ಅವರು ಕೈ ಹಿಡಿದು ಕರೆದೊಯ್ಯುತ್ತಿದ್ದ ರೀತಿ ಅಪ್ಯಾಯಮಾನವಾದದ್ದು.  

ಬನ್ನಂಜೆ ಗೋವಿಂದಾಚಾರ್ಯರ ಪ್ರವಚನಗಳು ಹಲವಾರು ಒಣ ಮಡಿವಂತಿಕೆ, ವಿದ್ವತ್ತಿನ ಸೋಗು ಇವುಗಳನ್ನೆಲ್ಲಾ ಮೀರಿ ವಿಶ್ವದೆಲ್ಲೆಡೆ ಸಕಲ ರೀತಿಯ ಜನರನ್ನೂ ಆಕರ್ಷಿಸಿರುವಂತದ್ದು.  ಮಧ್ವ ತತ್ವ ಹಾಗೂ ಮಧ್ವ ವಿಚಾರಗಳಲ್ಲಿ ಅವರ ಅಧ್ಯಯನದ ಆಳ ಅಪಾರವಾದದ್ದು ಎಂದು  ಜನ ಭಾವಿಸುವುದು ಹೌದಾದರೂ, ಕೇವಲ ದ್ವೈತ ವಿಚಾರಗಳಷ್ಟಕ್ಕೇ ಅವರ ಪಾಂಡಿತ್ಯ ಸೀಮಿತಗೊಂಡಿರದೆ, ಅದ್ವೈತ, ವಿಶಿಷ್ಟಾದ್ವೈತ, ಇನ್ನಿತರ ಭಾರತೀಯ ಹಾಗೂ ವಿಶ್ವ ಚಿಂತನೆಗಳು, ಜಾನಪದ ಇತ್ಯಾದಿಗಳ ವಿಚಾರದಲ್ಲಿ ಅವರಿಗಿದ್ದ ಸಮಪ್ರಕಾರದ ಗೌರವಪೂರ್ಣ ಒಲವು, ಚಿಂತನೆಯ ಆಳ, ಬೆಳಕು ಚೆಲ್ಲುವಂತಹ ಪ್ರಖರತೆಯ ಅಸಾಮಾನ್ಯ ಪರಿಣತಿ ಇವೆಲ್ಲಾ ಸರಿಸಾಟಿಯಿಲ್ಲಂತದ್ದು.  ಕನ್ನಡ ಹಾಗೂ ಸಂಸ್ಕೃತ ಸಾರಸ್ವತ ಲೋಕಕ್ಕೆ ಅವರು ಅನೇಕ ಕೊಡುಗೆಗಳನ್ನಿತ್ತಿದ್ದಾರೆ.  ದೇಶ, ವಿದೇಶಗಳಲ್ಲಿ ಸಂಚರಿಸಿ ಭಾರತೀಯ ಸಾಂಸ್ಕೃತಿಕ ರಾಯಭಾರಿಯಾಗಿ ನಮ್ಮ ದೇಶೀಯ  ಪರಂಪರೆಗಳ ಶ್ರೇಷ್ಠತೆಯನ್ನು ಎಲ್ಲೆಡೆ ಪಸರಿಸುವಲ್ಲಿ ಆಚಾರ್ಯರು ಮನೋಜ್ಞವಾದ ಕೆಲಸ ಮಾಡಿದ್ದಾರೆ.  ಉಡುಪಿಯ ಅಷ್ಟಮಠಗಳ ಅಚಾರ್ಯರಿಗೂ ಇವರಲ್ಲಿ ಅಪಾರ ಗೌರವ, ಆಚಾರ್ಯ ಭಾವವಿದೆ ಎಂಬುದು ಇವರ ಶ್ರೇಷ್ಠತೆಯ ಪ್ರತೀಕವಾಗಿದೆ. 

1936ರ ಆಗಸ್ಟ್ 3ರಂದು  ಬನ್ನಂಜೆಯಲ್ಲಿ ವಿದ್ವಾಂಸರಾದ ತರ್ಕಕೇಸರಿ ಶ್ರೀ ನಾರಾಯಣಾಚಾರ್ಯರ ಸುಪುತ್ರರಾಗಿ ಜನಿಸಿದ ಗೋವಿಂದಾಚಾರ್ಯರು  ಬಾಲ್ಯದಲ್ಲಿ ವೈದಿಕ ಶಿಕ್ಷಣವನ್ನು ತೀರ್ಥರೂಪರಿಂದಲೇ ಪಡೆದರು. ಮುಂದುವರೆದ ವಿದ್ಯಾರ್ಜನೆಯನ್ನು ಶ್ರೀ ಶ್ರೀ ವಿದ್ಯಾಮಾನ್ಯ ತೀರ್ಥಸ್ವಾಮೀಜಿ, ಕಲಿಯೂರು ಮಠ ಮತ್ತು ಹರಿಪಾದೈರ್ಯಗ ಶ್ರೀ ಶ್ರೀ ವಿದ್ಯಾ ಸಮುದ್ರ ತೀರ್ಥರು, ಕಾಣಿಯೂರು ಮಠ ಇವರಿಂದ ಪಡೆದರು. ಬಾಲ್ಯದಲ್ಲಿಯೇ ಬಹಳ ಪ್ರತಿಭೆಗಳಿಂದ ಮಿಂಚಿದ ಇವರು ಅನೇಕ ಲೇಖನಗಳನ್ನು ಬರೆಯುತ್ತಿದ್ದರು.

ಬನ್ನಂಜೆ ಗೋವಿಂದಾಚಾರ್ಯರು ಅನೇಕ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಜನಸಾಮಾನ್ಯರಿಗೆ ತಲುಪುವಂತೆ ಮಾಡಿದ್ದಾರೆ. ಹದಿಮೂರನೆಯ ಶತಮಾನದಲ್ಲಿ ಶ್ರೀ ಮಧ್ವಾಚಾರ್ಯರ ನೇರ ಶಿಷ್ಯರಾದ ಶ್ರೀ ಹೃಷೀಕೇಶತೀರ್ಥರು ರಚಿಸಿದ್ದ ಮಧ್ವಾಚಾರ್ಯರ ವ್ಯಾಖ್ಯಾನಗಳನ್ನು ಸುಮಾರು 2000 ಪುಟಗಳಷ್ಟು ಸುದೀರ್ಘವಾದ ಗ್ರಂಥರೂಪವಾಗಿ ಅಚ್ಚುಕಟ್ಟಾಗಿ ಓದುಗರ ಮುಂದಿಟ್ಟಿದ್ದಾರೆ.   ಮಧ್ವಾಚಾರ್ಯರ ಹಲವಾರು ಘನವೇತ್ತ ಕೃತಿಗಳೂ  ಕೂಡಾ ಈ ಗ್ರಂಥದ ಭಾಗವಾಗಿವೆ.   ಅವರ ‘ಆಚಾರ್ಯ ಮಧ್ವ: ಬದುಕು ಬರಹ’ ಕೃತಿಯನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಪ್ರಕಟಿಸಿದೆ.  

ಬಾಣಭಟ್ಟನ ಕಾದಂಬರಿ, ಕಾಳಿದಾಸನ ಶಾಕುಂತಲಾ, ಶೂದ್ರಕನ ’ಮೃಚ್ಛಕಟಿಕ’ ಇತ್ಯಾದಿ ಚಾರಿತ್ರಿಕ ಕೃತಿಗಳು ಇವರ ಅನುವಾದಿತ ಕೃತಿಗಳಲ್ಲಿ ಪ್ರಮುಖವಾದುವು. ಶ್ರೀ ಶ್ರೀ ತ್ರಿವಿಕ್ರಮಾಚಾರ್ಯದಾಸರ ’ಆನಂದಮಾಲಾ’, ತ್ರಿವಿಕ್ರಮ ಪಂಡಿತರ ’ವಾಯುಸ್ತುತಿ’, ’ವಿಷ್ಣುಸ್ತುತಿ’ ಇತ್ಯಾದಿ ಕೃತಿಗಳಿಗೆ ಟಿಪ್ಪಣಿಯನ್ನು ಬರೆದಿದ್ದಾರೆ. ಆರು ಉಪನಿಷತ್ತುಗಳಿಗೆ ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಮಧ್ವಾಚಾರ್ಯರ ಮಹಾಭಾರತದ ತಾತ್ಪರ್ಯ ವ್ಯಾಖ್ಯಾನ ಕೃತಿಯಾದ ’ಯಮಕ ಭಾರತ’ ಕೃತಿಗೆ ಟಿಪ್ಪಣಿಯನ್ನು ಬರೆದಿದ್ದಾರೆ. ಅಂತೆಯೇ ’ಭಾಗವತ ತಾತ್ಪರ್ಯ’ ಕೃತಿಗೂ ಟಿಪ್ಪಣಿ ಬರೆದಿದ್ದಾರೆ.  ಅನೇಕ ಸೂಕ್ತ ಮಂತ್ರಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಪುರುಷಸೂಕ್ತ, ಶ್ರೀ ಮದ್ಭಗವದ್ಗೀತೆ, ಶ್ರೀ ಸೂಕ್ತ, ಶಿವಸೂಕ್ತ, ನರಸಿಂಹ ಸ್ತುತಿ, ತಂತ್ರಸಾರ ಸಂಗ್ರಹ ಇತ್ಯಾದಿಗಳನ್ನು ಕನ್ನಡೀಕರಿಸಿದ್ದಾರೆ. ಬನ್ನಂಜೆ ಗೋವಿಂದಾಚಾರ್ಯರ ‘ಸಂಗ್ರಹ ಭಾಗವತ’ ಕೃತಿ  ಭಾಗವತದ ಕಥೆಗಳನ್ನು ಜನಸಾಮಾನ್ಯರ ಸಮೀಪಕ್ಕೆ ಕೊಂಡೊಯ್ಯುವ ಆಪ್ತ ಕೃತಿ ಎನಿಸಿದೆ.   ಬನ್ನಂಜೆಯವರು ಮಧ್ವಾಚಾರ್ಯರ ’ಮಧ್ವರಾಮಾಯಣ’, ರಾಜರಾಜೇಶ್ವರಿ ಯತಿಗಳ ಮಂಗಲಾಷ್ಟಕ ಇತ್ಯಾದಿ ಕೃತಿಗಳಿಗೆ ಕನ್ನಡದಲ್ಲಿ ಪುನರ್ಜನ್ಮ ನೀಡಿದ್ದಾರೆ.  ‘ಉಡುಪಿ ಕೃಷ್ಣನ ಕಂಡಿರಾ’ದಂತಹ ಸುಂದರ ಕೀರ್ತನೆಗಳನ್ನೂ ಅವರು ರಚಿಸಿದ್ದಾರೆ.  ಇವೆಲ್ಲಾ ಬನ್ನಂಜೆ ಗೋವಿಂದಾಚಾರ್ಯರ ನೂರಾರು ಕೃತಿಗಳಲ್ಲಿ ಕೆಲವು ಮಾತ್ರವಾಗಿವೆ. 

ಬನ್ನಂಜೆ ಗೋವಿಂದಾಚಾರ್ಯರು ನೂರಾರು ಬೃಹತ್ ಗ್ರಂಥಗಳನ್ನು ರಚಿಸಿರುವುದರ ಜೊತೆಗೆ ವಿವಿಧ ಪತ್ರಿಕೆಗಳು, ನಿಯತಕಾಲಿಕೆಗಳಿಗಾಗಿ ಸಹಸ್ರಾರು ಲೇಖನಗಳನ್ನು ಬರೆದಿದ್ದಾರೆ.  ಉದಯವಾಣಿಯ ಪ್ರಾರಂಭದ ಬಹಳಷ್ಟು ವರ್ಷಗಳಲ್ಲಿ ಅಲ್ಲಿನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ಪ್ರಾಚೀನ ಗ್ರಂಥಗಳನ್ನು ಉಳಿಸಿ ಪೋಷಿಸುವ ಕಾಯಕದಲ್ಲಿ ಅವರ ಮತ್ತು ಅವರ ಆಪ್ತ ಶಿಷ್ಯ ವೃಂದದ ಕಾಯಕ  ವಿಶ್ವದ ಪ್ರತಿಷ್ಠಿತ ಸಂಸ್ಥೆಗಳ ಸಹಯೋಗದಲ್ಲಿ ಸಂದಿದೆ.  

ಚಲನಚಿತ್ರ ಲೋಕಕ್ಕೂ ಆಚಾರ್ಯರು ಅಪಾರ ಕೊಡುಗೆಯನ್ನು ನೀಡಿದ್ದಾರೆ. ಶ್ರೀ ಜಿ.ವಿ. ಅಯ್ಯರ್ ಅವರ ಸಂಸ್ಕೃತ ಚಲನಚಿತ್ರ ’ಶ್ರೀ ಶಂಕರಾಚಾರ್ಯ’,  ಕನ್ನಡದ ’ಶ್ರೀ ಮಧ್ವಾಚಾರ್ಯ’, ತಮಿಳಿನ  ’ಶ್ರೀ ರಾಮಾನುಜಾಚಾರ್ಯ’ ಚಲನಚಿತ್ರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೊಡುಗೆಯನ್ನಿತ್ತಿದ್ದಾರೆ.   

ವಿಶ್ವದೆಲ್ಲೆಡೆ  ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಪ್ರವಚನಗಳು ಜನಮಾನಸವನ್ನು ನಿರಂತರವಾಗಿ ಸೆಳೆದಿದ್ದವು.  ಈ ಪ್ರವಚನಗಳು ಹಲವಾರುಶ್ರವ್ಯ ಮಾಧ್ಯಮಗಳಲ್ಲಿ ಸಹಾ  ಅಸಂಖ್ಯಾತ ಜನಸ್ತೋಮವನ್ನು ಪ್ರಭಾವಿಸುತ್ತಾ ಸಾಗಿವೆ.

ಆಚಾರ್ಯರನ್ನು  ಅನೇಕ ಗೌರವ, ಬಿರುದುಬಾವಲಿಗಳು  ಅರಸಿಕೊಂಡು ಬಂದಿದ್ದವು.  ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಶ್ರೇಷ್ಠ ಅನುವಾದಕ್ಕಾಗಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಣಿಪಾಲದ ಪ್ರತಿಷ್ಠಿತ ವಿದ್ಯಾ ಸಮೂಹದ ಫೆಲೋಷಿಪ್ ಮುಂತಾದ ಪ್ರತಿಷ್ಠಿತ ಗೌರವಗಳು ಅವರನ್ನರಸಿಬಂದಿದ್ದವು.    ಅದಮಾರು ಪೀಠವು ಅವರನ್ನು ’ವಿದ್ಯಾವಚಸ್ಪತಿ’ ಬಿರುದಿನಿಂದ ಆಶೀರ್ವದಿಸಿತ್ತು. ಕರ್ನಾಟಕ ಸರಕಾರವು ವೈದಿಕ ಕ್ಷೇತ್ರಕ್ಕಾಗಿನ  ಕೊಡುಗೆಗಳಿಗೆ ಇವರನ್ನು ಪುರಸ್ಕರಿಸಿತ್ತು.  ಫಲಿಮಾರು ಮಠವು ’ಪ್ರತಿಭಾಂಬುದಿ’ ಎಂಬ ಬಿರುದಿನಿಂದ ಆಶೀರ್ವದಿಸಿತ್ತು. ಅಖಿಲ ಭಾರತ ಮಾಧ್ವಮಹಾ ಮಂಡಲವು ‘ಶಾಸ್ತ್ರ ಸವ್ಯಸಾಚಿ’ ಎಂದು ಪುರಸ್ಕರಿಸಿತ್ತು. ಪೇಜಾವಾರ ಮಠವು, ಶ್ರೀಕೃಷ್ಣಾನುಗ್ರಹ ಪ್ರಶಸ್ತಿಪೂರ್ವಕವಾಗಿ ಆಶೀರ್ವದಿಸಿತ್ತು. ಕಬೀರಾನಂದ ಆಶ್ರಮದ ವತಿಯಿಂದ ನೀಡುವ ‘ಆರೂಢಶ್ರೀ’ ಪ್ರಶಸ್ತಿ ಅವರಿಗೆ ಸಂದಿತ್ತು.  ಸಾಹಿತ್ಯ ಸಾರ್ವಭೌಮ, ಸಂಶೋಧನ ವಿಚಕ್ಷಣ, ಪಂಡಿತ ಶಿರೋಮಣಿ, ಪಂಡಿತರತ್ನ, ವಿದ್ಯಾರತ್ನಾಕರ ಇತ್ಯಾದಿ ಇನ್ನೂ ಅನೇಕಾನೇಕ ಪ್ರಶಸ್ತಿಗಳು ಬಿರುದುಗಳು ಇವರನ್ನು ಆರಿಸಿಕೊಂಡು ಬಂದಿದ್ದವು.  ಅನೇಕ ವ್ಯಕ್ತಿಗಳು ಶ್ರೀಯುತರನ್ನು ಗುರು ಸ್ಥಾನದಲ್ಲಿರಿಸಿಕೊಂಡು ಬದುಕನ್ನು ಸಾರ್ಥಕಗೊಳಿಸಿ ಕಾರ್ಯಮಾಡುತ್ತಿದ್ದಾರೆ. 

ಬನ್ನಂಜೆ ಗೋವಿಂದಾಚಾರ್ಯರು 1979ರ ವರ್ಷದಲ್ಲಿ ಅಮೆರಿಕದ ಪ್ರಿನ್ಸ್ಟನ್ ನಗರದಲ್ಲಿ ಜರುಗಿದ  ‘ವರ್ಲ್ಡ್ ಕಾನ್ವರೆನ್ಸ್ ಆನ್ ರಿಲಿಜನ್ ಅಂಡ್ ಪೀಸ್’ ವಿಶ್ವ ಧಾರ್ಮಿಕ ಮತ್ತು ಶಾಂತಿ ಸಮ್ಮೇಳನದಲ್ಲಿ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಪ್ರತಿನಿಧಿಸಿದ್ದರು.  1980ರಲ್ಲಿ ನಡೆದ ವಿಶ್ವ ಸಂಸ್ಕೃತ ಮೇಳದಲ್ಲಿಯೂ ಭಾಗವಹಿಸಿದ್ದರು.  ದಕ್ಷಿಣ ಕನ್ನಡದಲ್ಲಿ ನಡೆದ ಸಂಸ್ಕೃತ ಪರಿಷತ್ತಿನ ಅಧ್ಯಕ್ಷತೆಯ ಗೌರವ ಅವರಿಗೆ ಸಂದಿತ್ತು.  ಉಡುಪಿಯ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಅವರಿಗೆ ಸಂದಿತ್ತು.  ವಿಶ್ವದಾದ್ಯಂತ ಅನೇಕ ಕವಿ ಸಮ್ಮೇಳನಗಳು, ಚರ್ಚೆಗಳು ಮತ್ತು ಉಪನ್ಯಾಸಗಳಲ್ಲಿ  ಅವರು  ನಿರಂತರವಾಗಿ  ಅಹ್ವಾನಿಸಲ್ಪಡುತ್ತಿದ್ದರು.  ಸಾಹಿತ್ಯಲೋಕದ ಶ್ರೇಷ್ಠ ಮಹಾನುಭಾವರ ಒಡನಾಟದಲ್ಲಿ ಸಹಾ ಬನ್ನಂಜೆ ಗೋವಿಂದಾಚಾರ್ಯರು ರಾರಾಜಿಸಿದ್ದರು.

ಈ ಮಹಾನ್ ವಿದ್ವಾಂಸರ ಭಾಗವತ ಉಪನ್ಯಾಸಗಳನ್ನು ಹಲವಾರು ದಿನಗಳವರೆಗೆ ಕೇಳಿ ಅವರ ಪಾದಧೂಳಿಯನ್ನು ಸ್ವೀಕರಿಸುವ ಸೌಭಾಗ್ಯ ನನ್ನದೂ ಆಗಿದೆ.  

ಈ ಮಹಾತ್ಮರು 2020ರ ಡಿಸೆಂಬರ್ 13ರಂದು ಈ ಲೋಕವನ್ನಗಲಿದರು.  ಇಂಥ ಮಹಾತ್ಮರನ್ನು ನಾವು ಕಂಡಿದ್ದೆವು, ಅವರನ್ನು ನಮಸ್ಕರಿಸಿದ್ದೆವು,ಮಾತನಾಡಿದ್ದೆವು, ಅವರ ಮಾತು ಕೇಳಿ ಪುನೀತಭಾವ ಅನುಭವಿಸಿದ್ದೆವು ಎಂಬುದೇ ನಮ್ಮ ಸೌಭಾಗ್ಯ 🌷🙏🌷

On the birth anniversary of my beloved  Guru  Bannanje Govindacharya

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ