ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹೆಚ್. ಎನ್. ಎ. ಪ್ರಸಾದ್


 ಹೆಚ್. ಎನ್. ಎ. ಪ್ರಸಾದ್


ಹೆಚ್. ಎನ್. ಎ. ಪ್ರಸಾದ್ ಅವರು ಪರಿಸರ ಸಂರಕ್ಷಣಾ ಕ್ಷೇತ್ರದಲ್ಲಿ ಸುದೀರ್ಘ ಕಾಲದಿಂದ ಗಣನೀಯ ಸೇವೆ ಸಲ್ಲಿಸುತ್ತ ಬಂದವರು. ಅವರೊಬ್ಬ ಮಹತ್ವದ ವನ್ಯಜೀವಿ ಛಾಯಾಗ್ರಾಹಕರು ಮತ್ತು ಬರಹಗಾರರು.

ಬೆಂಗಳೂರಿನವರಾದ ಪ್ರಸಾದ್ 1947ರ ಆಗಸ್ಟ್ 3ರಂದು ಜನಿಸಿದರು. ಬೆಂಗಳೂರಿನ ಕೋದಂಡರಾಮಪುರದ ಶಾಲೆಯಲ್ಲಿ ಓದಿ ಬಿ. ಎಮ್. ಎಸ್ ಕಾಲೇಜಿನಿಂದ  ಇಂಜಿನಿಯರಿಂಗ್ ಪದವಿ ಪಡೆದರು.

ಪ್ರಸಾದ್ ಅವರು ಇಂಜಿನಿಯರ್ ಆಗಿ ತಮ್ಮ ವೃತ್ತಿ ಜೀವನ ಸಾಗಿಸುತ್ತಲೇ ಪ್ರಕೃತಿ ಪ್ರೇಮದ ಆಸಕ್ತಿಯನ್ನು ಪೋಷಿಸಿಕೊಂಡು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತ ಬಂದವರು. 

ಹೆಚ್. ಎನ್. ಎ. ಪ್ರಸಾದ್ ಅವರು ಬರೆದಿರುವ 'ಟ್ರೇಲ್ಸ್ ಆಫ್ ವ್ಯಾನಿಷಿಂಗ್ ಟೇಲ್ಸ್' ಪುಸ್ತಕ ವನ್ಯಜೀವನ ಹಾಗೂ ವನ್ಯಜೀವಿ ಸಂರಕ್ಷಣೆಯಂಥ ಮಹತ್ತ್ವದ, ಗಂಭೀರ ವಿಷಯವನ್ನು ಲಲಿತಪ್ರಬಂಧದೋಪಾದಿಯಲ್ಲಿ ನಿರೂಪಿಸಿ ಓದುಗರನ್ನು ಅಪಾರವಾಗಿ ಆಕರ್ಷಿಸಿದೆ.  ವನ್ಯಜೀವಿಗಳ ಬಗೆಗಿನ ತಮ್ಮ ಆಸಕ್ತಿಯನ್ನು ಕುರಿತು ದೂರದೇಶದಲ್ಲಿರುವ ಮೊಮ್ಮಗನಿಗೆ ಕಥೆಯ ರೂಪದಲ್ಲಿ ಹೇಳಲು ಹೊರಟ ಪ್ರಸಾದರು ಅವನ್ನೆಲ್ಲ ಟಿಪ್ಪಣಿಗಳ ರೂಪದಲ್ಲಿ ಬರೆದಿಡಲು ಯೋಚಿಸಿದ್ದೂ ಒಂದು ಆಕಸ್ಮಿಕವೇ. ವೃತ್ತಿಯಲ್ಲಿ ಇಂಜಿನಿಯರ್ ಆದ ಪ್ರಸಾದ್ ಪ್ರವೃತ್ತಿಯಲ್ಲಿ ವನ್ಯಜೀವಿಪ್ರೇಮಿ. ತಮ್ಮ ತಾಂತ್ರಿಕ ಕೌಶಲವನ್ನೂ ವನ್ಯಜೀವಿ ಅಧ್ಯಯನಕ್ಕೆ ಒದಗಿಸಿರುವ ಪ್ರಸಾದ್, ಹೆಸರಾಂತ ಅರಣ್ಯಾಧಿಕಾರಿ ಚಿಣ್ಣಪ್ಪ ಹಾಗೂ ವನ್ಯಜೀವಿ ವಿಜ್ಞಾನಿ ಉಲ್ಲಾಸ ಕಾರಂತರೊಡನೆ ವನ್ಯಜೀವನದ ಪರಿಚಯ, ಅಧ್ಯಯನ, ಸಂಶೋಧನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದು ಅವರ ಅನುಭವಗಳಿಗೆ ರೋಮಾಂಚಕತೆಯ ಜೊತೆಗೆ ಅಧಿಕೃತತೆಯನ್ನೂ ತಂದುಕೊಟ್ಟಿವೆ. 

ವನ್ಯಜೀವನದ ಛಾಯಾಗ್ರಹಣದ ಬಗೆಗಿನ ಪ್ರಸಾದರ ಆಸಕ್ತಿ ಅವರ ಪ್ರಕೃತಿ ಪ್ರೇಮಕ್ಕೆ ಮೆರುಗು ಇಟ್ಟಂತಿದೆ. ಆಫ್ರಿಕಾದ ಅರಣ್ಯದಲ್ಲಿ ಅವರು ಚಿತ್ರಿಸಿರುವ ಘೇಂಡಾಮೃಗವನ್ನು ಅಟ್ಟಿಸುವ ಉಷ್ಟ್ರಪಕ್ಷಿಗಳು, ಪ್ರವಾಸಿಗರನ್ನು ಬೆದರಿಸುವ ಆನೆ, ಬಲಿಪ್ರಾಣಿಯ ಬೇಟೆಯಲ್ಲಿ ಯಶಸ್ವಿಯಾದ ರಣಥಂಬೋರಿನ ಸಿಂಹ, ಸಾರಸ್ ಪಕ್ಷಿಗಳ ಪ್ರಣಯಕಲಹ ಇವೇ ಮುಂತಾದ ಅವರ ಚಿತ್ರಗಳು ಅಪಾರವಾಗಿ ಮನಸೆಳೆಯುತ್ತವೆ. 

ಪ್ರಸಾದ್ ಅವರು ಕಾಡಿನ ಚಿತ್ರಗಳನ್ನು ಸ್ವಾರಸ್ಯಕರವಾಗಿ ಬಣ್ಣಿಸುತ್ತಲೇ ವನ್ಯಜೀವನದ ಮೇಲೆ ಮಾನವಪ್ರಪಂಚದ ಒತ್ತಡ, ಕಾಡ್ಗಿಚ್ಚಿನಂತಹ ಮಾನವನಿರ್ಮಿತ ಅನಾಹುತಗಳಿಂದ ಕಾಡುಗಳ ಮೇಲಾಗುವ ಪರಿಣಾಮಗಳನ್ನು ಓದುಗರ ಅನುಭವಕ್ಕೆ ನಿಲುಕುವ ಹಾಗೆ ಮಾಡುತ್ತಾರೆ. ಉಲ್ಲಾಸ ಕಾರಂತರ ರೇಡಿಯೋಕಾಲರಿಂಗ್ ಅಧ್ಯಯನಕ್ಕೆ ಪ್ರಸಾದರವರ ಸಹಕಾರ, ಅರಣ್ಯಸಂರಕ್ಷಣೆಯಲ್ಲಿ ರಾಜಕಾರಣದ ತೊಡಕು, ಕಾಡಿನ ಬೆಂಕಿಯ ನಿಯಂತ್ರಣದ ತಲೆಬೇನೆ- ಮುಂತಾದ ವಿಷಯಗಳ ಅವರ ನಿರೂಪಣೆಗಳು  ಓದುಗರ ಮನಮುಟ್ಟುವಂತಿವೆ.  ವನ್ಯಜೀವನದ ಅಧ್ಯಯನದಲ್ಲಿ ಪ್ರಸಾದರಿಗೆ ಗುರುಸ್ಥಾನದಲ್ಲಿರುವ ಕೋಟ್ರಂಗಡ ಚಿಣ್ಣಪ್ಪನವರ ಜೀವನ, ವ್ಯಕ್ತಿತ್ವಗಳಿಗೆ ಸಂಬಂಧಿಸಿದ ಕುರಿತಾದ ಬರಹಗಳೂ ಮನಮುಟ್ಟುವಂತದ್ದು. ಅತ್ಯಂತ ಸರಳವಾದ ಇಂಗ್ಲಿಷ್ ಭಾಷೆಯ ಬಳಕೆ , ಅಂದವಾದ ಮುದ್ರಣ, ಆಪ್ತವಾದ ನಿರೂಪಣಾ ಶೈಲಿ, ಸೊಗಸಾದ ಚಿತ್ರಗಳು
ಪ್ರಸಾದ್ ಅವರ 'ಟ್ರೇಲ್ಸ್ ಆಫ್ ವ್ಯಾನಿಷಿಂಗ್ ಟೇಲ್ಸ್' ಕೃತಿಯ ವೈಶಿಷ್ಟ್ಯ.

ಸಂಗೀತ, ಸಾಹಿತ್ಯ, ಸಾಮಾಜಿಕ ಹೀಗೆ ಹಲವಾರು ವಿಚಾರಗಳು ಸೇರಿದಂತೆ ಹೆಚ್. ಎನ್. ಎ. ಪ್ರಸಾದ್ ಅವರ ಆಸಕ್ತಿ ಕ್ಷೇತ್ರಗಳ ವಿಶ್ವ ಬಲು ದೊಡ್ಡದು.  ಇವೆಲ್ಲಕ್ಕೂ ಮೆರುಗಿಟ್ಟಂತದ್ದು ಅವರ ಹಸನ್ಮುಖ ಸರಳ ಸಜ್ಜನಿಕೆಗಳೊಂದಿಗಿನ ದಣಿವರಿಯದ ಉತ್ಸಾಹ.

ಆತ್ಮೀಯ ಹಿರಿಯರಾದ ಹೆಚ್. ಎನ್. ಎ. ಪ್ರಸಾದ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು. 

Happy birthday Prasad Hna Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ