ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀಧರಮೂರ್ತಿ


 ಎನ್.ಎಸ್. ಶ್ರೀಧರಮೂರ್ತಿ

ಕನ್ನಡ ಬರಹ ಲೋಕದಲ್ಲಿ ಎನ್. ಎಸ್. ಶ್ರೀಧರಮೂರ್ತಿ ಪ್ರಖ್ಯಾತ ಹೆಸರು.  ಪತ್ರಕರ್ತರಾಗಿ, ಅಂಕಣಕಾರರಾಗಿ, ಪುಸ್ತಕ ಬರಹಗಾರರಾಗಿ ಅವರು ಮೂಡಿಸುವ ಲೇಖನಗಳ ಹಿಂದೆ ವಿಷಯವನ್ನು ಆಳವಾಗಿ ಅರಿತು,  ಓದುಗನಿಗೆ ಅಷ್ಟೇ ಆಪ್ತವಾಗಿ ತಲುಪಿಸುವ ವಿಶಿಷ್ಟ ಸ್ಪಂದನೆಯಿದೆ.


ಶ್ರೀಧರಮೂರ್ತಿ ಅವರು 1968ರ ಆಗಸ್ಟ್ 24ರಂದು ಜನಿಸಿದರು. ಅವರ ತಾತ ನುಲೇನೂರು ಶಂಕರಪ್ಪ ಆಧ್ಯಾತ್ಮ, ಸಂಗೀತ, ಸಾಹಿತ್ಯ, ಜ್ಯೋತಿಷ್ಯ ಹೀಗೆ ಹಲವು ನೆಲೆಗಳಲ್ಲಿ ಪ್ರಸಿದ್ಧರಾದ ವಿದ್ವಾಂಸರಾಗಿದ್ದವರು. ದೊಡ್ಡಪ್ಪ ಎನ್. ಎಸ್.ಚಿದಂಬರರಾವ್ ಮಹಾನ್ ಸಾಹಿತಿಗಳಾಗಿ ಪ್ರಸಿದ್ಧರು.  ತಂದೆ ಎನ್. ಎಸ್. ಸೀತಾರಾಮರಾವ್ ಕನ್ನಡದಲ್ಲಿ  ವಿಜ್ಞಾನ ಬರಹಗಳ ಲೋಕದಲ್ಲಿ ಮಹತ್ವದ ಕೆಲಸ ಮಾಡಿದವರಲ್ಲದೆ, ಗಣಿತಜ್ಞರೂ, ಸಂಗೀತಗಾರೂ, ವಾಗ್ಗೇಯಕಾರರೂ, ಲೇಖಕರೂ ಆಗಿ ಹೆಸರಾಗಿದ್ದರು.  ತಾಯಿ ಪ್ರೇಮಲೀಲಾ ಅವರು.  ಕುಟುಂಬದಲ್ಲಿ ಹರಿದ  ಈ ಬಳುವಳಿ ಶ್ರೀಧರಮೂರ್ತಿ ಅವರನ್ನು ಚಿಂತನೆ ಮತ್ತು ಬರಹಗಳಲ್ಲಿ ಪ್ರೇರಿಸಿದೆ.

ಶ್ರೀಧರಮೂರ್ತಿ ಅವರ ಪ್ರಾಥಮಿಕ ವಿದ್ಯಾಭ್ಯಾಸ ನಾರ್ವೆ ಎಂಬ ಗ್ರಾಮದಲ್ಲಿ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸ  ಹರಿಹರಪುರದ ಮಾಧ್ಯಮಿಕ ಶಾಲೆಯಲ್ಲಿ ನಡೆಯಿತು. ಅದೇ ಊರಿನ ಎಆರ್ಎಸ್ ಪಿಯು ಕಾಲೇಜಿನಲ್ಲಿ ಓದಿ ಮುಂದೆ ಶೃಂಗೇರಿಯ ಜೆಸಿಬಿಎಮ್ ಕಾಲೇಜಿನಲ್ಲಿ  ಓದಿ ಎಂಟನೇ ರ್‍ಯಾಂಕ್ ಸಾಧನೆಯೊಡನೆ  ಪದವಿ ಪಡೆದರು.  ಜೊತೆಗೆ ಕನ್ನಡ ಐಚ್ಛಿಕದಲ್ಲಿ ಅತಿ ಹೆಚ್ಚು ಅಂಕಕ್ಕಾಗಿ ತೀನಂಶ್ರೀ ಚಿನ್ನದ ಪದಕ ಪಡೆದರು. ಮುಂದೆ ಶ್ರೀಧರಮೂರ್ತಿ ಮಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಮತ್ತು ರ್‍ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದರು.

ಓದುವ ದಿನಗಳಲ್ಲೇ ಶ್ರೀಧರಮೂರ್ತಿ ಸಾಹಿತ್ಯಲೋಕದ ಗಮನ ಸೆಳೆದರು. ಅವರ ಮೊದಲ ವಿಮರ್ಶಾ ಲೇಖನ  'ಭಾರತ ಸಿಂಧು ರಶ್ಮಿ' ಕುರಿತು  1984ರಲ್ಲಿ ಪ್ರಕಟವಾದಾಗ,  ಸ್ವತ: ಗೋಕಾಕರೇ ಅದನ್ನು ಮೆಚ್ಚಿ ಪತ್ರ ಬರೆದಿದ್ದು  ಇವರಲ್ಲಿ ಆತ್ಮವಿಶ್ವಾಸ ತಂದಿತ್ತು. ಮುಂದೆ ಇವರ ಬರವಣಿಗೆಗಳು  ಹಲವು ರೂಪಗಳಲ್ಲಿ ಸಾಗಿತ್ತು. ಅದಕ್ಕೆ ರೂಪ ಕೊಟ್ಟು ವಿಮರ್ಶೆಯ ಹಾದಿಯಲ್ಲಿ ನಡೆಯುವಂತೆ ಮಾಡಿದವರು ಪ್ರೊ.ಕೀರ್ತಿನಾಥ ಕುರ್ತಕೋಟಿ ಅವರು. ಚೆನ್ನವೀರ ಕಣವಿಯವರು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. .  ಹೀಗೆ ಅವರು ಮುನ್ನೂರಕ್ಕೂ ಹೆಚ್ಚು ವಿಮರ್ಶಾ ಲೇಖನಗಳನ್ನು ಬರೆದಿದ್ದಾರೆ.  ಹಲವು ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ.  ಅವುಗಳಲ್ಲಿ ಆಯ್ದ 72 ಲೇಖನಗಳ ಸಂಕಲನ 'ಸಾಹಿತ್ಯ ಸಂವಾದ' ಕೃತಿಯಾಗಿ ಪ್ರಕಟಗೊಂಡು ಮೆಚ್ಚುಗೆ ಗಳಿಸಿದೆ. ‘ಕನ್ನಡ ಚಿತ್ರಗೀತೆಗಳ ಸಾಂಸ್ಕೃತಿಕ ಅಧ್ಯಯನ' ಇವರ ಸಂಶೋಧನಾ ಕೃತಿ. 

ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಶ್ರೀಧರಮೂರ್ತಿ  'ಮಲ್ಲಿಗೆ' ಮಾಸಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಬಂದರು.  ಸಾಂಸ್ಕೃತಿಕ ಪತ್ರಿಕೋದ್ಯಮದಲ್ಲಿ ವಿಶಿಷ್ಟ ರೀತಿಯಲ್ಲಿ ಕೆಲಸಮಾಡುತ್ತಾ ಬಂದಿರುವ ಅವರು ಮುಂದೆ  ನಾಡಿನ ಹಲವು  ಪತ್ರಿಕೆಗಳ ಮೂಲಕ ಕೆಲಸಮಾಡುತ್ತಾ ಬಂದಿದ್ದಾರೆ. ಚಲನಚಿತ್ರ ಇತಿಹಾಸದ ಕುರಿತಾಗಿಯಂತೂ ಅವರದ್ದು  ಆಳವಾದ ಅಧ್ಯಯನದ ಹಿನ್ನೆಲೆಯುಳ್ಳ ಪತ್ರಿಕಾ ಬರವಣಿಗೆಯಲ್ಲಿನ ವಿಫುಲ ಕೃಷಿ. ಅವರು ಭಾರತೀಯ ವಿದ್ಯಾಭವನದ ಪತ್ರಿಕೋದ್ಯಮ ಅಧ್ಯಯನ ವಿಭಾಗವಾದ  ‘ದಿ ಇನ್ಸ್ಟಿಟ್ಯೂಟ್ ಆಫ್ ಮೀಡಿಯಾ ಸ್ಟಡೀಸ್ ಅಂಡ್ ರಿಸರ್ಚ್'ನ ನಿರ್ದೇಶಕರಾಗಿ ಪತ್ರಿಕೋದ್ಯಮಕ್ಕೆ ಪ್ರತಿಭೆಗಳನ್ನು ಮೂಡಿಸುವ ಕಾಯಕವನ್ನು ಮಾಡುತ್ತಿದ್ದಾರೆ.

ಶ್ರೀಧರಮೂರ್ತಿ ಅವರು ತಮ್ಮ ಬದುಕಿನಲ್ಲಿ ಪೋಣಿಸಿಕೊಂಡಿರುವ ಅತ್ಮೀಯತೆಗಳು ಆಪ್ತವಾಗಿ ಮನಸೆಳೆಯುತ್ತವೆ.  ಅವರು ತಮ್ಮ ಒಂದು ಲೇಖನದಲ್ಲಿ ತಮ್ಮ ಹಿಂದೆ ಸರಿದ ದಾರಿಯನ್ನು ಹೀಗೆ ನೋಡಿದ್ದಾರೆ.  “ಒಮ್ಮೆ ಹಿಂದಿರುಗಿ ನೋಡಿದರೆ 'ಭರವಸೆಯ ವಿಮರ್ಶಕ' ಎಂದು ಉಬ್ಬಿಸಿ ನಾನು ಬೆಳೆಯಲು ಪ್ರೇರಣೆ ನೀಡಿದ ವಿ.ಕೃ.ಗೋಕಾಕ್, ಕಲ್ಲಾಗಿದ್ದ ನನ್ನನ್ನು ಉಳಿಯಿಂದ ಕೆತ್ತಿ ವಿಗ್ರಹವಾಗಿಸಿದ ಕೀರ್ತಿನಾಥ ಕುರ್ತುಕೋಟಿ, ವಾಗ್ವಾದಗಳ ಮೂಲಕವೇ ನನ್ನನ್ನು ಉತ್ತೇಜಿಸಿದ ಯು.ಆರ್.ಅನಂತಮೂರ್ತಿ, ಪತ್ರಿಕೋದ್ಯಮಕ್ಕೆ ನನ್ನನ್ನು ಕರೆ ತಂದ ಡಾ.ವಿಜಯ, ಸಿನಿಮಾ ನೋಡುವುದು ಹೇಗೆ ಎಂದು ಕಲಿಸಿದ ಎನ್.ವಿದ್ಯಾಶಂಕರ್, ಸ್ವರಗಳ ವಿರಾಟ್ ಸ್ವರೂಪ ಕಲಿಸಿದ ಜಿ.ಕೆ.ವೆಂಕಟೇಶ್, ರಾಗಗಳ ಬೆರಗು ತೋರಿಸಿದ ಟಿ.ಜಿ.ಲಿಂಗಪ್ಪ, ಚಿತ್ರಗೀತೆಗಳ ಕುರಿತು ನಿನ್ನಂತೆ ಬರೆಯುವವರು ಇನ್ನೊಬ್ಬರಿಲ್ಲ ಎಂದು ಹಸಿ ಸುಳ್ಳು ಹೇಳಿ ನಾನು ಲೇಖನಿ ಕೆಳಗಿಡದಂತೆ ಮಾಡಿದ ಕೆ.ಜೆ.ಯೇಸುದಾಸ್, ನಿಮ್ಮ ಬರಹ ನನಗೆ ಇಷ್ಟ  ಎಂದು ಅರಳಿಸಿ ಹುಡುಕಾಟಕ್ಕೆ ಹಚ್ಚಿದ ಡಾ. ರಾಜ್‍ಕುಮಾರ್, ಸ್ನೇಹಲೋಕದಲ್ಲೇ ಎಲ್ಲವನ್ನೂ ತಿಳಿಸಿದ ಡಾ.ವಿಷ್ಣುವರ್ಧನ್, ನನ್ನ ಗುರು ಮತ್ತು ಗುರುತೂ ಆಗಿರುವ ಆರ್.ಎನ್.ಜಯಗೋಪಾಲ್, ಬದುಕಲ್ಲೂ ಊಟದಲ್ಲೂ ರುಚಿ ಶುಚಿ ಇರಬೇಕು ಎಂದು ಕಲಿಸಿದ ಚಿ.ಉದಯಶಂಕರ್, ಅಧ್ಯಾತ್ಮ ಮತ್ತು ಚಿತ್ರಗೀತೆ ಒಂದೇ ಎಂಬಂತೆ ವಿವರಿಸಿ ಹೊಸ ಚಿಂತನೆ ಕಲಿಸಿದ ವಿಜಯನಾರಸಿಂಹ ಸದಾ ನನ್ನನ್ನು ಬೆನ್ನು ತಟ್ಟಿ ಹುರುಪು ಮೂಡಿಸಿದ ಚನ್ನವೀರ ಕಣವಿ, ಜಿ.ಎಸ್.ಶಿವರದ್ರಪ್ಪ, ಕೆ.ಎಸ್.ನಿಸಾರ್ ಅಹಮದ್, ಎಚ್.ಎಸ್. ವೆಂಕಟೇಶ ಮೂರ್ತಿ, ಬಯಸಿದ ಪುಸ್ತಕ ನೀಡುವ ಮಾಂತ್ರಿಕರಂತೆ ನಮ್ಮನ್ನೆಲ್ಲ ಪೊರೆದ ಚಿ.ಶ್ರೀನಿವಾಸ ರಾಜು, ಪ್ರತಿ ಭೇಟಿಯಲ್ಲಿಯೂ ಒಂದಲ್ಲ ಒಂದು ಹೊಸ ಚಿಂತನೆ ಕೊಡುವ ಹಂಸಲೇಖಾ .. ಒಂದೇ ಎರಡೇ ಎಂತಹ ಮೇರು ಪರ್ವತಗಳು.. ನನ್ನಂತಹ ಸಾಧಾರಣ ನಾರಿಗೂ ಬೆಲೆ ಬರುವಂತೆ ಮಾಡಿದ್ದು ಈ ಮಂದಾರ ಪುಷ್ಪಗಳು.. ಧನ್ಯವಾಗಿದೆ ನನ್ನ ಬದುಕು ಈ ಚೇತನಗಳಿಗೆ ನಾನು ಅನಂತ ಕೃತಜ್ಞ.. 
ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾನು ಋಣಿಯೋ
ತಿಳಿದು ನೋಡಿದರೆ ಬಾಳು ಎಂಬುದಿದು ಋಣದ ರತ್ನಗಣಿಯೋ”.  ಹೀಗೆ ಕಾಣಬಲ್ಲವರಿಗೆ ಮಾತ್ರವೇ ಬದುಕು ತನ್ನ ಚೆಲುವನ್ನು ಕಾದಿರಿಸಿಕೊಂಡಿರುವುದು.

ಶ್ರೀಧರಮೂರ್ತಿ ಅವರ ಸಿನಿಮಾ ಕುರಿತ ಬರಹಗಳು ಗ್ಲಾಮರ್, ಗಾಸಿಫ್ ಸಾಮಾನ್ಯತೆಗಳನ್ನು ಮೀರಿದ ಸಾಂಸ್ಕೃತಿಕ ದರ್ಶನಗಳನ್ನು ಒಳಗೊಂಡದ್ದು.  ವಿಶ್ವ ಚಿತ್ರರಂಗ, ಭಾರತೀಯ ಚಲನಚಿತ್ರರಂಗದ ವ್ಯಾಪಕ ದೃಷ್ಟಿಯಲ್ಲಿ ಕನ್ನಡ ಚಿತ್ರರಂಗದ ಮಿತಿಗಳ ಜೊತೆಗೆ ವೈಶಿಷ್ಟ್ಯತೆ ಮತ್ತು ಹಿರಿಮೆಗಳನ್ನೂ ಎತ್ತಿ ತೋರುವ ಚೆಲುವು ಅವರ ಬರಹಗಳಲ್ಲಿವೆ.  ಅವರು ಬರೆಯದಿರುವ ಹಿರಿಯ ಕಿರಿಯ ಕಲಾವಿದ, ತಂತ್ರಜ್ಞರು ಇಲ್ಲವೇ ಇಲ್ಲವೇನೋ ಎಂಬಷ್ಟು ಬರಹಗಳನ್ನು ಕನ್ನಡ ಪತ್ರಿಕಾಲೋಕ ಕಂಡಿದೆ.

ಶ್ರೀಧರಮೂರ್ತಿ ಅವರು ಬರೆದ ಸಿನಿಮಾ ಕೃತಿಗಳಲ್ಲಿ ಎಂ. ಆರ್. ವಿಠಲ್, ಬೆಳಕಿನ ಮಾಂತ್ರಿಕ ವಿ.ಕೆ. ಮೂರ್ತಿ, ಬಿ ಎಸ್ ರಂಗಾ, ಹೊನ್ನಪ್ಪ ಭಾಗವತರ್ ಕುರಿತ ಹೊನ್ನಪರ್ವತ, ಆರ್. ಎನ್. ಜಯಗೋಪಾಲ್, ಮಂಜುಳಾ ಎಂಬ ಎಂದೆಂದೂ ಮರೆಯದ ಹಾಡು, ಸಿನಿಮಾ ಎನ್ನುವ ನಾಳೆ, ಬೆಳ್ಳಿತೆರೆಯ ಬಂಗಾರದ ನೆನಪು, ಬೆಳ್ಳಿತೆರೆಯಲ್ಲಿ ಭಾರತೀಯ ಸೇನೆ, ನಾದದ ನೆರಳು, ವಿಷ್ಣುವರ್ಧನ್ ಕುರಿತ 'ಸಿಂಹಾವಲೋಕನ' ಮುಂತಾದ ಚಿತ್ರಣಗಳಿವೆ.  ಆರ್ ಎನ್ ಜಯಗೋಪಾಲ್ ಅವರ ಆಯ್ದ ಚಿತ್ರಗೀತೆಗಳ 'ನಗುವ ನಯನ ಮಧುರ ಮೌನ', ಕನ್ನಡ ಚಿತ್ರರಂಗದ ತಾತ್ವಿಕ ನೆಲೆಗಳು (ಟಿ. ಎಸ್ ನಾಗಾಭರಣರೊಂದಿಗೆ), ಎಚ್. ಎಸ್. ವೆಂಕಟೇಶಮೂರ್ತಿಯವರ ಚಿತ್ರಗೀತೆಗಳ 'ಹಾಡು ಮುಗಿಯುವುದಿಲ್ಲ' ಮುಂತಾದ ಸಂಪಾದನೆಗಳಿವೆ.  ಇನ್ನು ಪತ್ರಿಕೆಗಳಲ್ಲಿನ ಲೇಖನಗಳ ಮೂಲಕವಂತೂ ಅವರು ಅಪಾರ ಸಂಖ್ಯೆಯ ಕಲಾವಿದರು, ತಂತ್ರಜ್ಞರು ಮತ್ತು ಸಂಗೀತಜ್ಞರ ಪರಿಚಯ ಮಾಡಿದ್ದಾರೆ.  

ಶ್ರೀಧರಮೂರ್ತಿ ಅವರು 'ಚಾಣಕ್ಯ' ಎಂಬ ಜನಪ್ರಿಯ ಕೃತಿಯನ್ನೂ ಪ್ರಕಟಿಸಿದ್ದಾರೆ.  ಅವರ 'ಹಸಿರು ತೋರಣ' ವಿಶ್ವದ ಪ್ರಸಿದ್ಧ ಸಾಧಕರನ್ನು ಕುರಿತ ಜೀವನಗಾಥೆಯಾಗಿದೆ.

ಕಾವ್ಯ, ಕಥೆ, ಆಧ್ಯಾತ್ಮ ಚಿಂತನೆ, ಸಂಗೀತ, ಅಂಕಣ ಬರಹ  ಮುಂತಾದ ಇತರ ಪ್ರಕಾರಗಳಲ್ಲೂ ಶ್ರೀಧರಮೂರ್ತಿ ಸಾಕಷ್ಟು ಬರಹ ಮಾಡಿದ್ದಾರೆ.  'ಓ ಮನಸೇ' ಪತ್ರಿಕೆಯಲ್ಲಿ ಮೂಡಿಬರುತ್ತಿದ್ದ 'ಸುರ್ ಸಂಗೀತ್' ಚಲನಚಿತ್ರ ಸಂಗೀತದ ಚೆಲುವು ಒಲವುಗಳ ಕುರಿತೇ  ಹೇಳುವ ವಿಶೇಷ ಅಂಕಣ. ಶ್ರೀಧರಮೂರ್ತಿ ವಿವಿಧ ವಾಹಿನಿಗಳ ಮೂಲಕ, ಬಾನುಲಿ ನಿಲಯಗಳ ಮೂಲಕ ಚಿತ್ರಗೀತೆಗಳನ್ನು ಕುರಿತು ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. 

ಒಟ್ಟಾರೆ ಶ್ರೀಧರ ಮೂರ್ತಿ ಅವರ ಪ್ರಕಟಿತ ಬರಹಗಳ ಸಂಖ್ಯೆ ಸುಮಾರು ನಾಲ್ಕು ಸಾವಿರ.ಕಥೆ, ಕವಿತೆ, ಕಾದಂಬರಿ, ವಿಮರ್ಶೆ..ಎಲ್ಲ ಸೇರಿ ಇದುವರೆಗೂ 52 ಕೃತಿಗಳು ಹೊರ ಬಂದಿವೆ. ಆಕಾಶವಾಣಿಯಲ್ಲಿ 500 ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ್ದಾರೆ. ವಿವಿಧ ವಾಹಿನಿಗಳಲ್ಲಿ ಸರಿ ಸುಮಾರು ಒಂದು ಸಾವಿರ ಚಿತ್ರಗೀತೆ ಆಧಾರಿತ ಕಾರ್ಯಕ್ರಮಗಳಿಗೆ ವಸ್ತು ಸಾಹಿತ್ಯ ನೀಡಿದ್ದಾರೆ. 

ಶ್ರೀಧರಮೂರ್ತಿ ಅವರಿಗೆ  ಆರ್.ಎನ್.ಆರ್ ಪುರಸ್ಕಾರ, ಆರ್ಯಭಟ ಪ್ರಶಸ್ತಿ, ಸುವರ್ಣ ಕರ್ನಾಟಕ ಪುರಸ್ಕಾರಗಳೂ ಸೇರಿದಂತೆ ಹಲವು ಗೌರವಗಳು ಸಂದಿವೆ.‍

ಶ್ರೀಧರಮೂರ್ತಿ ಅವರನ್ನು ಇದೆಲ್ಲ ಹೇಗೆ ಸಾಧ್ಯವಾಯಿತು ಅಂದರೆ "ನನ್ನ ಸಾಧನೆ ಬೆನ್ನ ಹಿಂದೆ ಇರುವದು ನನ್ನ ಮನ ಮೆಚ್ಚಿದ ಮಡದಿ ರಾಧಾ. ಅವಳು ಕುಟುಂಬದ ಎಲ್ಲ ಹೊಣೆಗಾರಿಕೆ ಹೊತ್ತ ಕಾರಣ ನಾನು ಇಷ್ಟೆಲ್ಲಾ ಮಾಡುವದು ಸಾಧ್ಯ ಆಗಿದೆ. ನನ್ನ ಮಗ ಭರತ್ ನನ್ನ ಭರವಸೆ ಕುಡಿ" ಎಂದು ತಾವು ನಂಬಿರುವ ಕೌಟುಂಬಿಕ ಮೌಲ್ಯಗಳನ್ನು ಎತ್ತಿ ತೋರುತ್ತಾರೆ. 

ನನಗಂತೂ ಶ್ರೀಧರಮೂರ್ತಿಗಳ ಆತ್ಮೀಯತೆ ನನಗೆ ಅನೇಕ ವಿಚಾರಗಳನ್ನು ತಿಳಿಯಲಿಕ್ಕೆ ಮತ್ತು ಕಲಿಯಲಿಕ್ಕೆ ಸಹಾಯ ಮಾಡಿವೆ.  ಅವರು ನನ್ನ ಪುಟದಲ್ಲಿ ಪ್ರಕಟಿಸಲು ಅಪಾರ ಮಾಹಿತಿ  ಚಿತ್ರಗಳು ಮತ್ತು ಲೇಖನಗಳನ್ನು ಅಕ್ಕರೆಯಿಂದ ನೀಡುತ್ತಾ ಬಂದಿದ್ದಾರೆ.

ಶ್ರೀಧರಮೂರ್ತಿಗಳ ಬರಹಗಳ ದರ್ಶನ ಭಾಗ್ಯ ನಮಗೆ ನಿರಂತರ ದಕ್ಕುತ್ತಿರಲಿ.  ಅವರಿಗೆ ಸುಖ, ಸಂತಸ ಸದಾ ಜೊತೆಗಿರಲಿ.  ಎಲ್ಲ ಗೌರವಗಳೂ ಅರಸಿ ಬರಲಿ ಎಂದು ಹಾರೈಸುತ್ತಾ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಹೇಳೋಣ.

Happy birthday Sreedhara Murthy Sir 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ