ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಜಿತ್ ಹರೀಶಿ

ಅಜಿತ್  ಹರೀಶಿ 

ವೃತ್ತಿಯಲ್ಲಿ ವೈದ್ಯರಾದ ಡಾ. ಅಜಿತ್ ಹರೀಶಿ ಪ್ರವೃತ್ತಿಯಿಂದ ಬಹುಮುಖಿ ಬರಹಗಾರರಾಗಿ ಹೆಸರಾಗಿದ್ದಾರೆ.

ಡಾ. ಅಜಿತ್ ಹರೀಶಿ ಅವರ ಜನ್ಮದಿನ ಆಗಸ್ಟ್ 24.  ಇವರು  ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹರೀಶಿ ಗ್ರಾಮದವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಹುಟ್ಟೂರಿನ ಸರ್ಕಾರಿ ಶಾಲೆಗಳಲ್ಲಿ ನಡೆಸಿ ಪದವಿಪೂರ್ವ ಶಿಕ್ಷಣವನ್ನು ಶಿರಸಿಯಲ್ಲಿ  ಪಡೆದರು. ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯದಿಂದ ವೈದ್ಯಕೀಯ ಪದವೀಧರರಾದ  ಇವರು, ಆಕ್ಯುಪಂಕ್ಚರ್ ಚಿಕಿತ್ಸೆ  ಮತ್ತು ಹಿಪ್ನೋಥೆರಪಿಯಲ್ಲಿಯೂ ವಿಶೇಷ ಪರಿಣತಿ ಸಾಧಿಸಿದ್ದಾರೆ. 

ಹರೀಶಿಯಲ್ಲಿ ಖಾಸಗಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಅಜಿತ್ ಹರೀಶಿ ಅವರು ಬಹುಮುಖಿ ಬರಹ ಸಾಧನೆ ಮಾಡುತ್ತ ಬಂದಿದ್ದು ಇವರ ಕಥೆ, ಕವನ, ಅಂಕಣ ಬರಹ, ವೈದ್ಯಕೀಯ, ಸಾಮಾಜಿಕ ಮತ್ತು ಕ್ರೀಡಾ ಬರಹಗಳು ನಾಡಿನ ಎಲ್ಲ ನಿಯತಕಾಲಿಕಗಳಲ್ಲಿ ಶೋಭಿಸುತ್ತ ಬಂದಿವೆ. ಅವರ ಪ್ರಕಟಿತ ಕೃತಿಗಳಲ್ಲಿ ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು, ಕನಸಿನ ದನಿ ಮುಂತಾದ ಕವನ ಸಂಕಲನಗಳು; ಪರಿಧಾವಿ, ಉಪರಿ, ಕಾಮೋಲ ಮತ್ತು ಮೂಚಿಮ್ಮ ಕಥಾಸಂಕಲನಗಳು; ಆರೋಗ್ಯದ ಅರಿವು ಎಂಬ ಅಂಕಣ ಬರಹದ ಗುಚ್ಛ;  ರೋಗಗಳು ನಿಮಗೆಷ್ಟು ಗೊತ್ತು ಎಂಬ ಸಂಪಾದನೆ; ಕೃತಿಕರ್ಷ ಎಂಬ ವಿಮರ್ಶಾ ಕೃತಿ ಸೇರಿವೆ. ಜೊತೆಗೆ ಇವರ ಗಿಡ ಮರವಾದ ಕನಸು, ಸೆಲೆಕ್ಟ್ ಆಲ್ ಡಿಲೀಟ್, ಟೊಮ್ಯಾಟೊ ಕೆಚಪ್ ಇಬುಕ್ ಮತ್ತು ಆಡಿಯೋ ಬುಕ್‌ಗಳು ಮೈಲ್ಯಾಂಗ್ ಬುಕ್ಸ್‌ನಲ್ಲಿ ಬಂದಿವೆ. ಇವರ 'ತಿರುವು' ಕಥೆ ಹಿಂದಿ ಭಾಷೆಗೆ 'ಮೋಡ್' ಎಂಬ ಹೆಸರಿನಲ್ಲಿ  ಅನುವಾದಗೊಂಡಿದೆ. 'ಕಥಾಭರಣ' ಎಂಬ ಹಲವು ಪ್ರತಿಭಾನ್ವಿತರ ಕಥೆಗಳ ಸಂಕಲನವನ್ನೂ ಪ್ರಕಟಿಸಿದ್ದಾರೆ.‍

ಅಜಿತ್ ಹರೀಶಿ ಅವರಿಗೆ ಬಸವ ಪುರಸ್ಕಾರ, ಕಾವ್ಯ ಮಾಣಿಕ್ಯ, ಗುರುಕುಲ ಸಾಹಿತ್ಯ ಶರಭ, ತರಾಸು ರತ್ನ ರಾಜ್ಯಪ್ರಶಸ್ತಿಗಳು, ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನ ಸನ್ಮಾನ; ಕನ್ನಡ ಪ್ರತಿಲಿಪಿ ರಾಷ್ಟ್ರೀಯ ಹಾಗೂ ಕಿರುಗಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ;  ಸಂಪದ ಸಾಲು ಪತ್ರಿಕೆಯ ಜಾಗತಿಕ ಕವನ ಸ್ಪರ್ಧೆಯಲ್ಲಿ ಬಹುಮಾನ;  'ಕನ್ನಡಿಗಂಟದ ಬಿಂದಿ' ಕಥೆಗೆ ಮುಂಬೈನ ಕನ್ನಡ ಭವನ ಎಜುಕೇಷನ್ ಸೊಸೈಟಿಯವರ ರಾಷ್ಟ್ರೀಯ ಕಥಾ ಸ್ಪರ್ಧಾ ಪ್ರಥಮ ಬಹುಮಾನ, 'ಕನಸಿನ ದನಿ' ಕವನ ಸಂಕಲನಕ್ಕೆ 2021ರ ಸ್ವರ್ಣಿಮ ಭಾರತಿ ಸಾಹಿತ್ಯ ಸಮ್ಮಾನ್ ರವರ 'ವನರಾಗ ಶರ್ಮಾ ಪುಸ್ತಕ ಪ್ರಶಸ್ತಿ’, 'ಸುಮನ್ ಸೋಮಶೇಖರ ಕಸಾಪ ದತ್ತಿ ಪ್ರಶಸ್ತಿ' ಮುಂತಾದ ಅನೇಕ ಗೌರವಗಳು ಸಂದಿವೆ. 

ಡಾ. ಅಜಿತ್ ಹರೀಶಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Dr. Ajit Harishi 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ