ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಧೋನಿ ನಿವೃತ್ತಿ

ಮಹೇಂದ್ರ ಸಿಂಗ್ ಧೋನಿ ನಿವೃತ್ತಿ

ಕ್ರಿಕೆಟ್ ಲೋಕ ಕಂಡ ಅತ್ಯಂತ ಸಮಚಿತ್ತದ ಆಟಗಾರ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. ಒಂದು ವಯಸ್ಸಾದ ಮೇಲೆ ಆಟಗಾರ ತಂಡದಲ್ಲಿ ಆಡ್ತಾ ಇದ್ರೆ ಇವನು ಯಾವಾಗ ಹೋಗ್ತಾನೆ ಅಂತ ಬರೆಯೋ ಮಾಧ್ಯಮ ಅವ ನಿವೃತ್ತಿ ಘೋಷಿಸಿದರೆ, ಇಂಥಹ ಆಟಗಾರ ಮತ್ತೆಲ್ಲಿಂದ ಬರಬೇಕು ಅಂತ ದೊಡ್ಡ ದೊಡ್ಡ ಕಥೆ ಬರೆಯುತ್ತೆ!

ರಾಂಚಿಯಲ್ಲಿ ಮಧ್ಯಮ ವರ್ಗದ ಕುಟುಂಬದಿಂದ ಬಂದ ಧೋನಿ ಕ್ರಿಕೆಟ್ ಲೋಕದಲ್ಲಿ ಅಮೋಘ ಸಾಧನೆಗಳನ್ನು ಮಾಡಿದವರು. 1981ರಂದು ಜುಲೈ 7ರಂದು ಈ ಭೂಮಿಗೆ ಬಂದ ಈ ಹುಡುಗ ಕ್ರಿಕೆಟ್ ಹುಚ್ಚಿನ ನಮ್ಮ ದೇಶದ ಕ್ರೀಡಾಪ್ರೇಮಿಗಳ ಕಣ್ಮಣಿಯೇ ಆದವರು. ಬ್ಯಾಟಿಂಗ್, ವಿಕೆಟ್ ಕೀಪಿಂಗ್, ನಾಯಕತ್ವ ಈ ಮೂರರಲ್ಲೂ ಅಪೂರ್ವತೆ ತೋರಿದ ಈತನದು ಅಪೂರ್ವ ಸಮತೋಲನದ ವ್ಯಕ್ತಿತ್ವ.

ಒಬ್ಬ ನಾಯಕತ್ವಕ್ಕೆ ಬೇಕಿರೋದು ಏನು ಅಂತ ಹೇಳೋದು ಅತ್ಯಂತ ಕಷ್ಟ. ಆ ವಿಶ್ವಕಪ್ ಕ್ರಿಕೆಟ್ ಮುಗಿದ ನಂತರದಲ್ಲಿ ನನ್ನನ್ನು ಗೆಳೆಯರೊಬ್ಬರು ಕೇಳಿದರು. ವರ್ಲ್ಡ್ ಕಪ್ ಮ್ಯಾಚ್ ಎಲ್ಲಾ ನೋಡಿದ್ರಾ ಅಂತ. ಹೆಚ್ಚು ನೋಡಲಿಲ್ಲ. ನಾನು ನೋಡ್ತಿದ್ದಾಗ ಭಾರತ ಸೋತ್ರೆ ತುಂಬಾ ಬೇಜಾರಾಗುತ್ತೆ, ಅದ್ಕಕ್ಕೆ ಇತ್ತೀಚೆಗೆ ಕಡಿಮೆ ನೋಡ್ತಾ ಇದ್ದೇನೆ ಅಂದೆ. ಅದಕ್ಕೆ ಅವರು ಸುಂದರವಾಗಿ ಹೇಳಿದ್ರು. ನಿಮಗೆ ಭಾರತ ಸೋಲುತ್ತೋ ಗೆಲ್ಲುತ್ತೋ ಅಂತ ಗಾಬರಿ ಇತ್ತು. ಆದ್ರೆ ನೋಡಿ 'ಧೋನಿ'ಗೆ ಅದು ಇರ್ಲಿಲ್ಲ ಅಂತ. ಬಹುಶಃ ಅದಕ್ಕೇ ಇರ್ಬೇಕು ನಾಣ್ಣುಡಿ ಇರೋದು "ಅದೃಷ್ಟ ಎಂಬೋದು ಧೈರ್ಯವಂತನ ಹಿಂದೆ ಹೋಗುತ್ತೆ" ಅಂತ.

ಧೋನಿ ಇಪ್ಪತ್ತರ ಟೂರ್ನಿ ಗೆದ್ರು, ಒಂದು ದಿನದ ವಿಶ್ವ ಕಪ್ ಗೆದ್ರು, ಟೆಸ್ಟ್ ತಂಡಗಳಲ್ಲಿ ಭಾರತ ನಂಬರ್ ಒನ್ ಎಂದೆನಿಸಿಕೊಳ್ಳುವಾಗ ನಾಯಕರಾಗಿದ್ದರು, ಐಪಿಎಲ್ ಟೂರ್ನಿಯಲ್ಲಿ ನಿರಂತರವಾಗಿ ಪೈಪೋಟಿಯ ಸಾಧನೆ ನೀಡಿದ ತಂಡಕ್ಕೆ ನಾಯಕರಾಗಿದ್ರು. 2013ರ ವರ್ಷದ ಐ ಸಿ ಸಿ ಚಾಂಪಿಯನ್ಸ್ ಟ್ರೋಫಿಯನ್ನು ಅಜೇಯವಾಗಿ ಗೆದ್ದ ಭಾರತ ತಂಡದ ನಾಯಕರಾಗಿದ್ದರು. ಕೆಲವು ಬಾರಿ ಲಿ ಸೋಲು ಕೂಡಾ ಅವರ ನಾಯಕತ್ವದಲ್ಲಿ ಬಂತು. ಇದೆಲ್ಲಾ ಆದ್ರೂ ಅಯ್ಯೋ ಇಷ್ಟೆಲ್ಲಾ ಗೆದ್ದಾಗ ಎಲ್ಲಿ ಬಾಚಿದ್ದೆಲ್ಲಾ ಉದುರಿಹೊಗುತ್ತೋ ಎಂಬ ಆತಂಕ ಆಗ್ಲಿ, ಸೋತಾಗ ಮತ್ತೊಬ್ಬರನ್ನು ತೆಗಳುವ ಸ್ವಭಾವ ತೋರಿದ್ದಾಗಲಿ, ಇಷ್ಟೆಲ್ಲಾ ಆಯ್ತು ಇನ್ನೆನ್ನು ಎಲ್ಲಾ ಮುಗೀತು ಎಂಬ ಒಣ ವೇದಾಂತ ಆಗ್ಲಿ, ನಾನು ಅಂದ್ರೆ ಏನು ಅಂತ ಮೀಸೆ ತಿರುವುವ ಅಹಂ ಆಗ್ಲಿ ಇವೆಲ್ಲಾ ಯಾವುದೂ ಇಲ್ದೆ ಸಾಧಾರಣವಾಗಿ ಆಟದೊಂದಿಗೆ, ಬದುಕಿನೊಂದಿಗೆ, ಈ ಪ್ರಪಂಚದೊಂದಿಗೆ ಸಹಜವಾದ ತಾದ್ಯಾತ್ಮದಲ್ಲಿ ಮುಂದೆ ನಡೆದರು. ಐ ಪಿ ಎಲ್ ಮ್ಯಾಚ್ ಫಿಕ್ಸಿಂಗ್ ರಾದ್ಧಾಂತದಲ್ಲಿ ಎಷ್ಟೇ ಜನ ಎಷ್ಟೇ ಪ್ರಯತ್ನಪಟ್ಟರೂ ಧೋನಿ ಹೆಚ್ಚು ಮಾತಾಡಲಿಲ್ಲ.

ನಾಯಕತ್ವದಿಂದ ಮಾತ್ರ ತಂಡ ಗೆಲ್ಲುವುದಿಲ್ಲ ಎಂಬ ಮಾತುಗಳೂ ಇವೆ. ಆದರೆ ನಾಯಕತ್ವ ಎಂಬುದು ಎಲ್ಲ ಸಾಧಾರಣ ಅಂಶಗಳನ್ನೂ ಸಮಂಜಸವಾಗಿ ಬೆರೆಸುವ ಚೈತ್ಯನ್ಯ ಹೊಂದಿರುತ್ತದೆ. ಅಂತಹ ಚೈತನ್ಯವನ್ನು ತೋರಿದ ಮಹತ್ವದ ವ್ಯಕ್ತಿಗಳಾದ ಪಟೌಡಿ, ಕಪಿಲ್ ದೇವ್ ಜೊತೆಗೆ ಧೋನಿ ಖಂಡಿತವಾಗಿ ನಿಲ್ಲುತ್ತಾರೆ.

ಒಂದು ಜೆನ್ ಕಥೆಯಲ್ಲಿ ಒಬ್ಬ ಮಹರ್ಷಿಗಳ ಬಳಿಯಲ್ಲಿ ಒಬ್ಬ ಸೇನಾಧಿಕಾರಿ ಕೇಳಿದನಂತೆ "ನಾನು ನನ್ನ ತಂಡವನ್ನು ಹೇಗೆ ನಡೆಸಬೇಕು?" ಅಂತ. ಆ ಮಹರ್ಷಿ ನುಡಿದರಂತೆ "ನೀನು ಆ ತಂಡಕ್ಕೆ ನಾಯಕ ಎಂಬ ಭಾವವೇ ಬರದ ಹಾಗೆ!" ಅಂತ.

ಪ್ರಸಕ್ತದಲ್ಲಿ ಹಾಗೂ ಸ್ವಲ್ಪ ಹಿಂದೆ, ಸಚಿನ್ ತೆಂಡುಲ್ಕರ್, ದ್ರಾವಿಡ್, ಲಕ್ಷ್ಮಣ್, ಗಂಗೂಲಿ, ಕುಂಬ್ಳೆ, ಸೆಹವಾಗ್, ಯುವರಾಜ್, ಹರಿಭಜನ್, ಜಹೀರ್ ಖಾನ್, ಅಂತಹ ಮೇಧಾವಿಗಳಿಂದ ಮೊದಲ್ಗೊಂಡ ಹಾಗೆ ಇಂದಿನ ದಿನಗಳಲ್ಲಿ ಕೇಳಿ ಬರುತ್ತಿರುವ ವಿರಾಟ್ ಕೊಹ್ಲಿ, ಶಿಖರ್ ಧವನ್, ರವೀಂದ್ರ ಜಡೇಜಾ, ಅಶ್ವಿನ್, ರೈನಾ, ರೋಹಿತ್ ಶರ್ಮ ಮುಂತಾದ ಆಟಗಾರರವರೆಗೆ ಎಲ್ಲ ವಿಧ ವಿಧಗಳ ವೈವಿಧ್ಯಗಳಿಗೆ ಒಂದು ಹಿತಮಿತವಾದ ಸ್ಪರ್ಶವನ್ನು ನೀಡಿ ಅದಕ್ಕೆ 'ನಾಯಕತ್ವ' ಎಂಬುದರ ಒಳ ಅರ್ಥವನ್ನು ತನ್ನ ಸಹಜತೆಯ ವ್ಯಕ್ತಿತ್ವದಲ್ಲಿ ಅಭಿವ್ಯಕ್ತಿಸಿದ ಧೋನಿಯ ಸಾಮರ್ಥ್ಯ ಮೆಚ್ಚುವಂತದ್ದು.

“2005ರ ವರ್ಷದಲ್ಲಿ ಇವರು ಜಯಪುರದಲ್ಲಿ ನೂರ ನಲವತ್ತೈದು ಎಸೆತಗಳಲ್ಲಿ 183 ರನ್ ಗಳಿಸಿದ ರೀತಿಗೂ, ಮುಂದೆ ನಡದ ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ 79 ಎಸೆತದಲ್ಲಿ ಗಳಿಸಿದ ಅಜೇಯ 91ರನ್ನಿನ ಜಯಪ್ರದ ಆಟಕ್ಕೂ ವೆತ್ಯಾಸವೇನಾದರೂ ಉಂಟೆ ಎಂದಿರುವ ಒಬ್ಬ ವ್ಯಾಖ್ಯಾನಕಾರರು ಹೇಳುತ್ತಾರೆ, ಏನೂ ವೆತ್ಯಾಸವಿಲ್ಲ, ವೆತ್ಯಾಸ ಮೂಡಿರುವುದು ಹಿರಿಮೆಯಲ್ಲಿ ಎಂದು."

ಕಾಲ ಎಂಬುದು ಒಂದೇ ತರಹ ಇರುವುದಿಲ್ಲ. ಯಾರೇ ಆದರೂ ಔಟಾಗಬೇಕು, ಇಲ್ಲವೇ ಪಂದ್ಯವೇ ಮುಗಿಯಬೇಕು; ರಿಟೈರಾಗಬೇಕು ಇಲ್ಲವೇ ರಿಜೆಕ್ಟ್ ಆಗಬೇಕಾಗುತ್ತೆ. ಇದು ಆಗೇ ಆಗುವಂತದ್ದು. ಇಷ್ಟಾದರೂ ಆಗ್ಗಿಂದಾಗ್ಗೆ ನಮ್ಮ ದೇಶದ ಕ್ರಿಕೆಟ್ ಪತಾಕೆಯನ್ನು ಹಿರಿಮೆಗೇರಿಸಿದ ಈ ಧೋನಿ ಎಂಬ ದೋಣಿಯ ಸಾಧನೆಯನ್ನು ಮರೆಯುವಂತಿಲ್ಲ. ಈ ಅಗಾಧತೆಯ ವ್ಯಕ್ತಿತ್ವಕ್ಕೆ ಅಭಿನಂದನೆ, ಆತ್ಮೀಯತೆ ಮತ್ತು ಪ್ರಸನ್ನತೆಯನ್ನು ಅಭಿವ್ಯಕ್ತಿಸೋಣ. ಧೋನಿ ನಿಮ್ಮ ಆಟವನ್ನು ಕಂಡ ನಾವೇ ಧನ್ಯರು. ನಿಮಗೆ ಶುಭವಾಗ್ಲಿ.

Best retiring day wishes for the most balanced wicket keeper, batsman and captain Mahendra Singh Dhoni

 

 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ