ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹಾರ್ಮೋನಿಯಂ ಶೇಷಗಿರಿರಾವ್


 ಹಾರ್ಮೋನಿಯಂ ಶೇಷಗಿರಿರಾವ್


ಶೇಷಗಿರಿರಾವ್ ರಂಗಭೂಮಿ ಮತ್ತು ಚಲನಚಿತ್ರ ಸಂಗೀತ ಸಂಯೋಜನೆಯಲ್ಲಿ ದೊಡ್ಡ ಹೆಸರು. ಹಾರ್ಮೋನಿಯಂ ವಾದನದಲ್ಲಿ ಅಪೂರ್ವ ಪರಿಣತೆ ಸಾಧಿಸಿದ್ದುದರ ಜೊತೆಗೆ ಹಾರ್ಮೋನಿಯಂನ್ನು ಸುಲಭೋಪಯೋಗಿಯಾಗಿ ರೂಪಿಸಿದ ಕೀರ್ತಿ   ಶೇಷಗಿರಿರಾವ್‌ ಅವರದು.  ರಂಗಭೂಮಿಗೆ ಪ್ರಥಮವಾಗಿ ಹಾರ್ಮೋನಿಯಂ ತಂದ ಕೀರ್ತಿ ಹಾಗೂ ಕನ್ನಡ ಚಲನಚಿತ್ರಗಳಿಗೆ ಮೊದಲು ಹಿನ್ನೆಲೆ ಸಂಗೀತ ನೀಡಿದ ಕೀರ್ತಿ ಸಹಾ ಹಾರ್ಮೋನಿಯಂ ಶೇಷಗಿರಿರಾವ್ ಅವರದ್ದು.

ಶೇಷಗಿರಿರಾವ್ ಅವರು 1892ರ   ಆಗಸ್ಟ್ 5ರಂದು ಹಂಪಾಪುರದಲ್ಲಿ ಜನಿಸಿದರು.   ತಂದೆ ಪಾಪಚ್ಚಿ ಕೃಷ್ಣಾಚಾರ್ಯ. ತಾಯಿ ಕನಕಲಕ್ಷ್ಮಮ್ಮ. ಇನ್ನೂ ವಯಸ್ಸು ಎಂಟಿರುವಾಗಲೇ ಶೇಷಗಿರಿರಾಯರು  ಎ.ವಿ. ವರದಾಚಾರ್ಯರ ರತ್ನಾವಳಿ ಥಿಯಟ್ರಿಕಲ್‌  ಕಂಪೆನಿಗೆ ಸೇರಿ ಲೋಹಿತಾಶ್ವ, ಧ್ರುವ, ಪ್ರಹ್ಲಾದ  ಮುಂತಾದ ಬಾಲ ಪಾತ್ರಗಳನ್ನು ನಿರ್ವಹಿಸತೊಡಗಿದ್ದರು.  ಮುಂದೆ ಅವರು ಮಂದಾರವಲ್ಲಿ, ಮೋಹನ ಮುಂತಾದ ಹೆಣ್ಣು ಪಾತ್ರಗಳನ್ನೂ ನಿರ್ವಹಿಸಿ ಜನಪ್ರಿಯತೆ ಪಡೆದಿದ್ದರು.  ಬರ ಬರುತ್ತಾ ಅವರಿಗೆ  ಹಾರ್ಮೋನಿಯಂ ವಾದನದಲ್ಲಿ ಆಸ್ಥೆ ಬೆಳೆಯಿತು.   ವರದಾಚಾರ್ಯರ ಅಪೇಕ್ಷೆಯಂತೆ ಮುಂಬಯಿಯ ಚಮನ್‌ಲಾಲ್‌ ಬಳಿ ಹಾರ್ಮೋನಿಯಂ ಕಲಿಕೆ ಮಾಡಿದ್ದುದರ ಜೊತೆಗೆ, ಉಸ್ತಾದ್‌ ಕರೀಂಖಾನರಿಂದ ಹಿಂದುಸ್ತಾನಿ ಸಂಗೀತ ಮತ್ತು  ಮೈಸೂರು ವಾಸುದೇವಾಚಾರ್ಯರ ಬಳಿ ಕರ್ನಾಟಕ ಸಂಗೀತಾಭ್ಯಾಸ ಮಾಡಿದರು.

ರಂಗಭೂಮಿಯ ಮೇಲೆ ಹಾರ್ಮೋನಿಯಂ ವಾದನವನ್ನು ತಂದ ಕೀರ್ತಿ ಶೇಷಗಿರಿರಾವ್ ಅವರದ್ದು.  ಅವರು ಹಾಡುಗಳಿಗೆ ಕರ್ನಾಟಕ ಸಂಗೀತದ ಜೊತೆಗೆ ಹಿಂದೂಸ್ತಾನಿ ರಾಗಗಳ ಅಳವಡಿಕೆಯನ್ನೂ ಮಾಡಲಾರಂಭಿಸಿದರು. ಪ್ರಹ್ಲಾದ, ಧ್ರುವ ಚರಿತ್ರೆ, ವಿಷ್ಣುಲೀಲೆ ಮುಂತಾದ ನಾಟಕಗಳಿಗೆ ನೀಡಿದ ಹಾರ್ಮೋನಿಯಂ ವಾದ್ಯ ಸಂಗೀತ ಅವರಿಗೆ ಅಪಾರ ಜನಪ್ರಿಯತೆಯನ್ನು ಗಳಿಸಿಕೊಟ್ಟಿತು.   ಶೇಷಗಿರಿರಾಯರು ಶ್ರೀ ರಘುರಾಮ ವಿಠಲರು ಎಂಬ  ಅಂಕಿತದಲ್ಲಿ  ಹಲವಾರು ದೇವರ ನಾಮಗಳನ್ನೂ ರಚಿಸಿದ್ದರು.

ಕನ್ನಡ ಚಲನಚಿತ್ರರಂಗದಲ್ಲೂ ಮೊದಲ ಸಂಗೀತ ನಿರ್ದೇಶಕರೆಂದು ಪಡೆದ ಖ್ಯಾತಿ ಹಾರ್ಮೋನಿಯಂ ಶೇಷಗಿರಿರಾವ್ ಅವರದ್ದು. ಕನ್ನಡದ ಎರಡನೇ ವಾಕ್ಚಿತ್ರವಾದ ಭಕ್ತಧ್ರುವ, ಚಿರಂಜೀವಿ, ಭಕ್ತ ಮಾರ್ಕಂಡೇಯ, ಜೀವನ ನಾಟಕ, ವಾಣಿ ಮುಂತಾದ ಚಿತ್ರಗಳಿಗೆ ಅವರು ಸಂಗೀತ ನೀಡಿದರು. ಕೊಲಂಬಿಯ ಗ್ರಾಮಾಫೋನ್‌ ಕಂಪನಿಯಿಂದ ಇವರ ಸೋಲೋ ಹಾರ್ಮೋನಿಯಂ ವಾದನದ ಹಲವಾರು ಧ್ವನಿಮುದ್ರಿಕೆಗಳು  ಬಿಡುಗಡೆಗೊಂಡು ಜನಪ್ರಿಯತೆ ಪಡೆದಿದ್ದವು. 

ಹಾರ್ಮೋನಿಯಂ ಶೇಷಗಿರಿರಾಯರಿಗೆ 1977ರಲ್ಲಿ ನಡೆದ ಕರ್ನಾಟಕ ಗಾನಕಲಾ ಪರಿಷತ್ತಿನ  ವಿದ್ವಾಂಸರ 7ನೇ ಸಮ್ಮೇಳನದಲ್ಲಿ ಸನ್ಮಾನ ಸಲ್ಲಿಸಲಾಗಿತ್ತು.

ಹಾರ್ಮೋನಿಯಂ ಶೇಷಗಿರಿರಾಯರು 1990ರ ಅಕ್ಟೋಬರ್ 7ರಂದು ತಮ್ಮ 99ನೇ ವಯಸ್ಸಿನಲ್ಲಿ ನಿಧನರಾದರು. 

On the birth anniversary of great name in theatre and film music, Harmonium Sheshagiri Rao  

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ