ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಗೀತಾ ಕಟ್ಟಿ


 ಸಂಗೀತಾ ಕಟ್ಟಿ


ಸಂಗೀತಾ ಕಟ್ಟಿ ಕನ್ನಡ ನಾಡಿನ ಅಪೂರ್ವ ಪ್ರತಿಭಾವಂತ ಗಾಯಕಿ.  ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಭಾವಗೀತೆ, ಭಕ್ತಿಗೀತೆ, ಜಾನಪದ, ಸಿನಿಮಾ, ದೂರದರ್ಶನದ ಧಾರಾವಾಹಿ, ಫೇಸ್ಬುಕ್ ಲೈವ್ ಹೀಗೆ ಎಲ್ಲೇ ಸಂಗೀತಾ ಅವರ ಸಂಗೀತ ಮೂಡಿದರೂ ನಮ್ಮನ್ನು ಆತ್ಮೀಯವಾಗಿ ಹತ್ತಿರ ಮಾಡಿಕೊಳ್ಳುತ್ತದೆ.  ಎಲ್ಲಾ ಮಾಧ್ಯಮಗಳಿಗೂ ಸುಲಲಿತವಾಗಿ ಹೊಂದಿರುವ ಕನ್ನಡ ನಾಡಿನ ಅಪೂರ್ವ ಪ್ರತಿಭೆ ಸಂಗೀತ ಕಟ್ಟಿ ಎಂದರೆ ತಪ್ಪಾಗಲಾರದು.  ಹೀಗಾಗಿ ಸಂಗೀತ ಕಟ್ಟಿ ಸಂಗೀತಮಯರಾಗಿರುವವರು.

ಸಂಗೀತಾ ಅವರಿಗೆ ಸಂಗೀತ ಒಂದು ರೀತಿಯಲ್ಲಿ ದೈವದತ್ತವಾದದ್ದು.  ದಸರಾ ಸಂಭ್ರಮದ  ಸರಸ್ವತಿ ಹಬ್ಬದಂದು ಜನಿಸಿದ ಸಂಗೀತಾ ಅವರಿಗೆ ನಾದಸರಸ್ವತಿ ತಾನೇ ತಾನಾಗಿ ಜೊತೆಗೂಡಿದಳು.  ಇಂಗ್ಲಿಷ್ ದಿನಾಂಕದ ಪ್ರಕಾರ ಸಂಗೀತಾ ಕಟ್ಟಿ ಅವರು 1970ರ ಅಕ್ಟೋಬರ್ 7ರಂದು ಜನಿಸಿದರು.   

ಸಂಗೀತಾ ಅತೀ ಚಿಕ್ಕ ವಯಸ್ಸಿನಲ್ಲೇ ಸಂಗೀತದ ಪ್ರಾವೀಣ್ಯತೆ ತೋರಿದವರು.  ಸಂಗೀತದ ಹಿನ್ನೆಲೆಯುಳ್ಳ ತಂದೆ ತಾಯಂದಿರಿಗೆ ಜನಿಸಿದ ಸಂಗೀತಾ ಕಟ್ಟಿ ಪ್ರಾರಂಭದ ಪಾಠಗಳನ್ನು ತಂದೆಯಿಂದಲೇ ಪಡೆದರು. ಇವರು ಕೇವಲ ನಾಲ್ಕು ವರ್ಷದವರಿರುವಾಗ ಇವರ ಸಂಗೀತ ಜಾಣ್ಮೆಯನ್ನು ಪರೀಕ್ಷಿಸಿ, ಆನಂದಿಸಿ, ಆಶೀರ್ವದಿಸಿ, ತಮ್ಮ ಶಿಷ್ಯೆಯನ್ನಾಗಿಯೂ ಸ್ವೀಕರಿಸಿದವರು ಸಂಗೀತ ಲೋಕದ ದಿಗ್ಗಜರಾದ ನೌಷಾದ್ ಅಲಿ.  ಶ್ರೀ ಶೇಷಗಿರಿ ದಂಡಾಪುರ ಮತ್ತು ಪಂಡಿತ ಚಂದ್ರಶೇಖರ ಪುರಾಣಿಕಮಠ ಅವರಿಂದ ಆರಂಭಿಕ ತರಬೇತಿ ಪಡೆದ ಆಕೆ, ಹೆಚ್ಚಿನ ತರಬೇತಿಯನ್ನು ಕಿರಾಣಾ ಮತ್ತು ಗ್ವಾಲಿಯರ್ ಘರಾಣಾದ ಪದ್ಮಭೂಷಣ ಪಂಡಿತ ಬಸವರಾಜ ರಾಜಗುರು ಅವರಿಂದ ಸುಮಾರು ಹನ್ನೆರಡು ವರ್ಷಗಳ ಕಾಲ ಪಡೆದರು.  ಗುರು ಶಿಷ್ಯಪರಂಪರೆಯ ಸಂಗೀತ ಕಲಿಕೆಯಲ್ಲಿ  ಪದ್ಮವಿಭೂಷಣ ಗಾನಸರಸ್ವತಿ ದಿವಂಗತೆ ಶ್ರೀಮತಿ ಕಿಶೋರಿ ಅಮೋಣ್ಕರ್ ಅವರ ಮನೆಯಲ್ಲಿ, ಅವರ ಸನ್ನಿಧಾನದಲ್ಲೇ ವಾಸ್ತವ್ಯದಲ್ಲಿದ್ದು ಎಂಟು ವರ್ಷಗಳ ಸಂಗೀತ ಸಾಧನೆ ಮಾಡಿದ್ದನ್ನೂ ಸೇರಿ ಸುಮಾರು ಎರಡೂವರೆ ದಶಕಗಳ ಕಾಲ ಅವರ ಮಾತೃವಾತ್ಸಲ್ಯದ ನಿರಂತರ ಮಾರ್ಗದರ್ಶನವನ್ನು ಅಸ್ವಾದಿಸಿದರು.

ಸಂಗೀತಾ ಅವರು ರಸಾಯನಶಾಸ್ತ್ರ ಪದವಿಯಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಅವರು ಕನ್ನಡವಷ್ಟೇ ಅಲ್ಲದೆ ಹಿಂದಿ, ಇಂಗ್ಲೀಷ್ , ಮರಾಠೀ ಭಾಷೆಗಳನ್ನು ಚೆನ್ನಾಗಿ ಬಲ್ಲರು.  ಪತ್ರಿಕೆಗಳಲ್ಲಿ ಕನ್ನಡ ಇಂಗ್ಲಿಷ್ ಮತ್ತು ಹಿಂದೀ ಭಾಷೆಗಳಲ್ಲಿ ಸಂಗೀತದ ಕುರಿತು ವಿದ್ವತ್ಪೂರ್ಣ ಲೇಖನಗಳನ್ನು ಬರೆದಿದ್ದಾರೆ. ಅವರು ನಡೆಸಿದ ಸಂಗೀತ ಕಚೇರಿಗಳ ಸಂಖ್ಯೆ ಹಲವು ಸಹಸ್ರಗಳು.  ಅವರು ತಮ್ಮ ಮೊದಲ ಸಂಗೀತ ಕಚೇರಿಯನ್ನು ನಡೆಸಿದ್ದು ಇನ್ನೂ ನಾಲ್ಕು ವರ್ಷದ ಬಾಲೆಯಾಗಿದ್ದಾಗ. ಯುನೈಟೆಡ್ ಸ್ಟೇಟ್ಸ್ , ಯುನೈಟೆಡ್ ಕಿಂಗ್‌ಡಂ, ಅಮೆರಿಕ, ಕೆನಡಾ, ಅರಾಬ್ ರಾಷ್ಟ್ರಳು ಹಾಗೂ ಇನ್ನೂ ಅನೇಕ ದೇಶಗಳಲ್ಲಿ ಅವರು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಭಾರತದಲ್ಲಿ ಬಹುಮುಖ್ಯ ಸಂಗೀತ ಸಮಾರೋಹಗಳಲ್ಲಿ ಸಾಮಾನ್ಯವಾಗಿ ಅವರ ಕಾರ್ಯಕ್ರಮ ಇದ್ದೇ ಇರುತ್ತದೆ. ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಅವರು ಸಂಗೀತವನ್ನು ಕಲಿಸುತ್ತಿದ್ದರು.  ನಾವು ಸಂಗೀತ ಕಟ್ಟಿ ಅವರ ವೆಬ್ ಸೈಟಿಗೆ ಹೋದರೆ ಅವರು ನಡೆಸಿರುವ ಸಂಗೀತ ಕಚೇರಿಗಳು, ಅವರು ಜೊತೆ ಧ್ವನಿಗೂಡಿಸಿರುವ ದಿಗ್ಗಜರು, ಅವರು ವ್ಯಾಪಿಸಿರುವ ವಿಸ್ತಾರ ದಿಗ್ಭ್ರಮೆ ಮೂಡಿಸುವಷ್ಟಿದೆ.  ಯಾವುದೇ ಶ್ರೇಷ್ಠ ಸಂಗೀತಗಾರರ ಹುಟ್ಟುದಿನ, ಸ್ಮರಣೆಗಳಲ್ಲಿ ಅವರು ಸಂಯೋಜಿಸಿದ ಇಲ್ಲವೇ ಹಾಡಿದ ಗೀತೆಗಳನ್ನು ಲೀಲಾಜಾಲವಾಗಿ ಕಾರ್ಯಕ್ರಮಗಳಲ್ಲಿ ಇಲ್ಲವೇ ಶ್ರೋತೃ ಮಾಧ್ಯಮಗಳಲ್ಲಿ ಅವರು ಪ್ರಸ್ತುತ ಪಡಿಸುತ್ತ ಬಂದಿದ್ದಾರೆ.

ಅವರು ಪುಟ್ಟ ಬಾಲೆಯಾಗಿದ್ದಾಗ ಹೊರಬಂದ ‘ದಾಸವಾಣಿ’ ಎಂಬ ಧ್ವನಿ ಸುರುಳಿ ಇರಲಿ, ‘ಈ ಹಸಿರ ಸಿರಿಯಲಿ ಮನಸು ಮೆರೆಯಲಿ’ ಅಂತಹ ಸುಂದರ ಚಿತ್ರಗೀತೆ ಇರಲಿ, ‘ಮಾಯಾ ಮೃಗ’, ‘ಮನ್ವಂತರ’, ‘ಮುಕ್ತ ಮುಕ್ತ ಮುಕ್ತ’ದಂತಹ ಧಾರಾವಾಹಿಗಳ ಶೀರ್ಷಿಕಾ ಗೀತಗಳಿರಲಿ, ಅವರ ಶುದ್ಧ ಶಾಸ್ತ್ರೀಯ ಸಂಗೀತ ಕಚೇರಿಗಳಿರಲಿ, ‘ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ’ಯಂತಹ ಭಾವಗೀತೆ ಇರಲಿ, ದೇಶಭಕ್ತಿಯ 'ವಂದೇ ಮಾತರಂ' ಪ್ರಸ್ತುತಿ ಇರಲಿ,  ಅವರು ತಮ್ಮ ಗಾನದಲ್ಲಿ ತಾವೇ ಲೀನವಾಗಿ ಕೇಳುಗರ ಹೃದಯಗಳನ್ನು ಆವರಿಸುವ ರೀತಿ ಆಧ್ಯಾತ್ಮಿಕ ರೀತಿಯ ಬೆಡಗಿನದ್ದು.  ‘ಮುಗಿಲ ಮಾರಿಗೆ ರಾಗ ರತಿಯ ನಂಜ ಏರಿತ್ತ’, ‘ನಾನು ಸರಸಿ ನೀನು ಅರಸ’, ‘ಶೃಂಗಾರ ಶ್ರೀ ಕೃಷ್ಣನ ಚಂದಾಗಿ ತೂಗಿರೆ ಜೋ ಜೋ’, ‘ಹತ್ತು ವರುಷದ ಹಿಂದೆ’ , ‘ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ’, ‘ಒಂದೇ ಬಾರಿ ನನ್ನ ನೋಡಿ’ ಮುಂತಾದ ಭಾವಗೀತೆಗಳನ್ನು ಸಂಗೀತಾ ಕಟ್ಟಿ  ಅವರ ಧ್ವನಿಯಲ್ಲಿ ಕೇಳುವುದೇ ಒಂದು ಸೊಗಸು.  ಈ ಅಪ್ಯಾಯಮಾನವಾದ ಧ್ವನಿಯಲ್ಲಿ ಮೂಡಿರುವ ಜಾನಪದ, ಭಕ್ತಿಗೀತೆಗಳೂ ಕೂಡಾ ಅನೇಕವಿವೆ.  ಬೇಂದ್ರೆಯವರ ಮಾಂತ್ರಿಕ ಸ್ಪರ್ಶದ ಸುಂದರ ಭಾವಗೀತೆಗಳಿಗೆ ಸಂಗೀತಾ ಕಟ್ಟಿ ಕಟ್ಟಿಕೊಡುವ ಅನುಭಾವ ಅತ್ಯಂತ ಆತ್ಮೀಯವಾದದ್ದು.  

ಸಂಗೀತ ಅವರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿಯೂ ಒಳಗೊಂಡಂತೆ ಅನೇಕ ಗೌರವಗಳು ಒಲಿದು ಬಂದಿವೆ.  ಅವರು ಇನ್ನೂ ಹೆಚ್ಚಿನದಕ್ಕೂ ಅರ್ಹರಿದ್ದಾರೆ.  ಅವರ ಮುಂದೆ ಇನ್ನೂ ವಿಶಾಲವಾದ ಸಂಗೀತ ವಿಶ್ವದಲ್ಲಿ ದೊಡ್ಡದಾದ ಸ್ಥಾನಗಳು ಕಾಯುತ್ತಿವೆ.  ಅವರು ಹೆಚ್ಚಿನದನ್ನು ಸಾಧಿಸುತ್ತಾರೆ ಎಂಬುದನ್ನು  ಅವರ ಈಗಾಗಲೇ ಕ್ರಮಿಸಿರುವ ಹಾದಿ ಹೇಳುತ್ತಿದೆ.  ಈ ಮಹಾನ್ ಗಾಯಕಿ ಮಹತ್ವದ್ದನ್ನು ಸಾಧಿಸಲಿ.  ಅವರ ಸಂಗೀತ ಮಾಧುರ್ಯವನ್ನು ಸುದೀರ್ಘ ಕಾಲದವರೆಗೆ ಸವಿಯುವ ಭಾಗ್ಯ ನಮಗಿರಲಿ ಎಂದು ಆಶಿಸುತ್ತಾ, ಸಂಗೀತಾ ಕಟ್ಟಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಹೇಳೋಣ.

On the birthday of our great singer in all forms of music Sangeeta Katti Surbahar 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ