ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಜೀವ್ ತಾರಾನಾಥ್


 ರಾಜೀವ್ ತಾರಾನಾಥ್


ಪಂಡಿತ್ ರಾಜೀವ್ ತಾರಾನಾಥರು ವಿಶ್ವದ ಶ್ರೇಷ್ಠ ಸರೋದ್ ವಾದಕರಲ್ಲೊಬ್ಬರಾಗಿ, ಅತ್ಯಂತ ಸರಳತೆಗೆ, ಮಾನವೀಯ ಮೌಲ್ಯಗಳಿಗೆ ಮತ್ತು ಶ್ರೇಷ್ಠ ಸಂಗೀತಕ್ಕೆ ಹೆಸರಾಗಿದ್ದ ನಮ್ಮ ಕನ್ನಡಿಗರು.  

ವಿಶ್ವದೆಲ್ಲೆಡೆ ಅಭಿಮಾನಿಗಳನ್ನು ಗಳಿಸಿದ್ದ ರಾಜೀವ್ ತಾರಾನಾಥರ ಕಛೇರಿಯೊಂದರ ಬಗ್ಗೆ ‘ಎಕ್ಸ್ಪ್ರೆಸ್’  ಪತ್ರಿಕೆ ಹೀಗೆ ಬರೆದಿತ್ತು: “ತಾರಾನಾಥರ ಸಂಗೀತವು ಹೃದಯದ ತಂತಿಗಳನ್ನು ಮೀಟುವಂತದ್ದಾಗಿದ್ದು, ಶ್ರೋತೃವರ್ಗ ಅವರ ಸಂಗೀತದ ಭಾವುಕತೆಯ ಆರ್ದ್ರತೆ  ಮತ್ತು ಸಮರ್ಥತೆಗೆ ಮೂಕವಾಗಿ  ತಲ್ಲೀನಗೊಂಡಿತ್ತು”.  ‘ಎಕನಾಮಿಕ್ ಟೈಮ್ಸ್’ ಹೇಳುತ್ತದೆ, “ರಾಜೀವ್ ತಾರಾನಾಥರು ಅದೆಷ್ಟು ಮೋಹಕ ಚೆಲುವನ್ನು ತಮ್ಮ ‘ಸ್ವರ’ ಮತ್ತು ದನಿಗಳಲ್ಲಿ ಬಿತ್ತರಿಸುತ್ತಾರೆ!  ಅವರ ಸಂಗೀತದ ಪ್ರತೀ ಸ್ತರವೂ ಮೋಹಕತೆಯ ಸುದೀರ್ಘ ಸುಮಧುರತೆಯ ಅನುಭಾವವನ್ನು ಉಳಿಸುತ್ತ ಮುನ್ನಡೆಯುವಂತದ್ದು.”  ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಎಡ್ವರ್ಡ್ ರೋತ್ ಸ್ಟೀನ್ ಅಭಿಪ್ರಾಯಿಸುತ್ತಾರೆ: “ರಾಜೀವ್ ತಾರಾನಾಥರ ಸಂಗೀತವು  ‘spiritual and spirited’ ಸಂಯೋಗದ ಲಕ್ಷಣಗಳುಳ್ಳಂತಹ ಔನ್ನತ್ಯವನ್ನು ಸ್ಫುರಿಸುವಂತಹವು.  ಅಂತರಾತ್ಮದ ಹುಡುಕಾಟವನ್ನು ಪ್ರಾತಿನಿಧಿಕವಾಗಿ ತಲುಪುವ ಪ್ರಾರ್ಥನಾ ರೂಪವಾಗಿ ಪ್ರಾರಂಭಗೊಳ್ಳುವ ಅವರ ಸಂಗೀತವು ನಾದಭವ್ಯತೆಗೆ ತೆರೆದುಕೊಳ್ಳುವ ರೀತಿ ಆಸಾಮಾನ್ಯವಾದುದು”.  ಹೀಗೆ ರಾಜೀವ್ ತಾರಾನಾಥರ ಸಂಗೀತ ವಿಶ್ವಸಮುದಾಯವನ್ನು ಸಂಗೀತದ ಅಧ್ಯಾತ್ಮದ ಎಳೆಯಿಂದ ನಾದವೈಭವದ ಅನಂತತೆಯವರೆಗೆ ವ್ಯಾಪಿಸಿಕೊಂಡಿದೆ.

ರಾಜೀವ್ ತಾರಾನಾಥರು 1932ರ ಅಕ್ಟೋಬರ್ 17ರಂದು ಜನಿಸಿದರು.  ರಾಜೀವ್  ತಾರಾನಾಥರು ತಮ್ಮ ಪ್ರಾರಂಭಿಕ ಪಾಠಗಳನ್ನು ತಮ್ಮ ತಂದೆ ಪಂಡಿತ ತಾರಾನಾಥರಿಂದ ಪಡೆದರು.  ಕೇವಲ ಒಂಭತ್ತು ವರ್ಷದವರಿದ್ದಾಗ ಅವರು  ಪ್ರಥಮ ಸಂಗೀತ ಕಛೇರಿಯನ್ನು ನಡೆಸಿದರು.  ಇಪ್ಪತ್ತರ ತಾರುಣ್ಯದಲ್ಲಿ ಆಕಾಶವಾಣಿಯಲ್ಲಿ ಸಂಗೀತಗಾರರಾಗಿ ಹಾಡುತ್ತಿದ್ದರು.  

ರಾಜೀವ್ ತಾರಾನಾಥರು ಸಾಹಿತ್ಯದಲ್ಲಿ ಪಿಎಚ್.ಡಿ ಪದವಿ ಪಡೆದವರಾದರೂ, ತಮಗಿದ್ದ ಇಂಗ್ಲಿಷ್ ಪ್ರಾಧ್ಯಾಪಕತನವನ್ನು ತ್ಯಜಿಸಿ, ಸಂಗೀತವನ್ನು ಅಭ್ಯಸಿಸಲು ಕಲ್ಕತ್ತೆಗೆ ತೆರಳಿ ಅಲ್ಲಿ ಉಸ್ತಾದ್ ಅಲಿ ಅಕ್ಬರ್ ಖಾನರ ಶಿಷ್ಯರಾದರು.  2009ರ ವರ್ಷದಲ್ಲಿ ಅಲಿ ಅಕ್ಬರ್ ಖಾನರು ನಿಧನರಾಗುವವರೆಗೆ ರಾಜೀವ್ ತಾರಾನಾಥರು ಅವರ ಶಿಷ್ಯರಾಗಿಯೇ ಮುಂದುವರೆದಿದ್ದರು.  ಅಕ್ಬರ್ ಅಲಿ ಖಾನ್ ಅವರಲ್ಲದೆ ಪಂಡಿತ್ ರವಿಶಂಕರ್, ಶ್ರೀಮತಿ ಅನ್ನಪೂರ್ಣಾದೇವಿ, ಪಂಡಿತ್ ನಿಖಿಲ್ ಬ್ಯಾನರ್ಜಿ ಮತ್ತು ಉಸ್ತಾದ್ ಆಶಿಶ್ ಖಾನರ ಮಾರ್ಗದರ್ಶನವನ್ನು ಸಹಾ ರಾಜೀವ್ ತಾರಾನಾಥರು ಗಳಿಸಿಕೊಂಡವರು.  

1999-2000ವರ್ಷದಲ್ಲಿ ರಾಜೀವ್ ತಾರಾನಾಥರು ಭಾರತ ಸರ್ಕಾರದ ಉಚ್ಚಗೌರವವಾದ ಸಂಗೀತ ನಾಟಕ ಆಕಾಡೆಮಿ ಗೌರವವನ್ನು ಸ್ವೀಕರಿಸಿದರು.  1989ರಿಂದ 1992ರ ಅವಧಿಯಲ್ಲಿ ರಾಜೀವ್ ತಾರಾನಾಥರು ಫೋರ್ಡ್ ಪ್ರತಿಷ್ಠಾನದ ವಿದ್ವಾಂಸರಾಗಿ ಮೈಹಾರ್ – ಅಲ್ಲಾಉದ್ದಿನ್ ಘರಾಣಾದ ಸಂಗೀತ ಪದ್ಧತಿಗಳ ಕುರಿತಾಗಿ ಸಂಶೋಧನೆ ನಡೆಸಿ ಆ ಘರಾಣದ ಭೋಧನೆಗಳ ಕುರಿತಾದ ವಿದ್ವತ್ಪೂರ್ಣ ಗ್ರಂಥವನ್ನು ಪ್ರಕಟಿಸಿದರು.   

ರಾಜೀವ್ ತಾರಾನಾಥರು ತಾವು ಹೊರಹೊಮ್ಮಿಸುತ್ತಿದ್ದ ರಾಗಗಳ ಕುರಿತಾಗಿ ಹೊಂದಿದ್ದ ಆಳವಾದ ಜ್ಞಾನ, ಸ್ವರ ಮಾಧುರ್ಯ, ಮತ್ತು ಸಂಗೀತ ಸಾಮರ್ಥ್ಯಕ್ಕೆ ಎಲ್ಲೆಡೆ ಗೌರವಿಸಲ್ಪಡುತ್ತಿದ್ದರು.  ತಾಂತ್ರಿಕ ಕೌಶಲ್ಯ, ಕಲ್ಪನಾ ಸಾಮರ್ಥ್ಯ, ಅನುಭೂತಿಯ ಸೌಂದರ್ಯ ಇವೆಲ್ಲಾ ಅವರ ಸೃಜನೆಗಳಲ್ಲಿ ಮೇಳೈಸಿದ್ದವು.   

ಭಾರತ ಮತ್ತು  ವಿದೇಶಗಳಲ್ಲೆಡೆಗಳಲ್ಲಿ ರಾಜೀವ್ ತಾರಾನಾಥರ ಸಂಗೀತ ಕಾರ್ಯಕ್ರಮಗಳು ನಿರಂತರವಾಗಿ ಜರುಗುತ್ತಿದ್ದವು.  ಆಸ್ಟ್ರೇಲಿಯಾ, ಯೂರೋಪ್, ಯೆಮೆನ್, ಅಮೆರಿಕ, ಕೆನಡಾ ಮುಂತಾದ ದೇಶಗಳಲ್ಲೆಲ್ಲಾ ಅವರ ಸಂಗೀತ ಕಾರ್ಯಕ್ರಮಗಳು ನಡೆದು ಅಪಾರ ಅಭಿಮಾನೀ ಬಳಗ ಅವರನ್ನು ಹಿಂಬಾಲಿಸಿತ್ತು.  ಹಲವೊಂದು ಪ್ರಖ್ಯಾತ ಚಲನಚಿತ್ರಗಳಿಗೂ ಸಂಗೀತ ನೀಡಿದ್ದ ರಾಜೀವ್ ತಾರಾನಾಥರ ನಿರ್ದೇಶನದಲ್ಲಿ ಮೂಡಿಬಂದ ಪ್ರಮುಖ ಚಿತ್ರಗಳೆಂದರೆ ಕನ್ನಡದ ಸಂಸ್ಕಾರ, ಪಲ್ಲವಿ, ಅನುರೂಪ, ಶೃಂಗಾರ ಮಾಸ,  ಪೇಪರ್ ಬೋಟ್, ಮಲಯಾಳಂನ ಕಾಂಚನ ಸೀತಾ ಮತ್ತು ಕಡಾವು ಮುಂತಾದವು.  

ರಾಜೀವ್ ತಾರಾನಾಥರ ಪ್ರಮುಖ ಪ್ರಕಟಣೆಗಳೆಂದರೆ ‘ಮನನ ಮೆಡಿಟೇಶನ್’: ಬಿಹಾಗ್ ಮತ್ತು ಭೈರವಿ ರಾಗಗಳು; ‘ಹಾರ್ಮೋನಿ’ ಸಿಂಧು ಭೈರವಿ ರಾಗಮಾಲಿಕೆ’, ‘ಕಾಫಿ ರಾಗ’ದ  ಹಲವು ಮುಖಗಳು; ರಸರಂಗ್; ‘ರಿಫ್ಲೆಕ್ಷನ್ಸ್ ಅರೌಂಡ್ ನೂನ್’ ತೋಡಿ ಮತ್ತು ಕಾಫಿ ರಾಗಗಳು; ಡೇ ಬ್ರೇಕ್ ಅಂಡ್ ಎ ಕ್ಯಾಂಡಲ್ ಎಂಡ್; ಭಾರತೀಯ ಶಾಸ್ತ್ರೀಯ ಸಂಗೀತ; ರಾಗ ನಟಭೈರೋ, ರಾಗ ಕೌಶಿ ಭೈರವಿ, ಭೈರವಿ; ಓವರ್ ದಿ ಮೂನ್ – ರಾಗ ಚಂದ್ರ ನಂದನ; ರಾಗ ಅಹಿರ್ ಭೈರವ್,  ರಾಗ ಚಾರುಕೇಶಿ;  ದಿ ಮ್ಯಗ್ನಿಫಿಸೆನ್ಸ್ ಆಫ್ ಯಮನ್ ಕಲ್ಯಾಣ್, ಇನ್ ದಿ ಮಾಸ್ಟರ್ಸ್ ಟ್ರೇಡಿಶನ್: ರಾಗ್ ಬಸಂತ್ ಮುಖಾರಿ, ರಾಗ್ ಕಿರ್ವಾಣಿ, ರಾಗ್ ಕೋಮಲ್ ದುರ್ಗಾ, ರಾಗ್ ಪುರಿಯಾ ಧನಶ್ರೀ  ಮುಂತಾದವು.  

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕಲಾವಿಭಾಗದ ಮುಖ್ಯಸ್ಥರಾಗಿ 1995ರಿಂದ 2005ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ರಾಜೀವ ತಾರಾನಾಥರು ಮೈಸೂರಿನ ನಿವಾಸಿಯಾಗಿದ್ದು ತಮ್ಮ ಶಿಷ್ಯರಿಗೆ ಸಂಗೀತವನ್ನು ಧಾರೆ ಎರೆಯುತ್ತಿದ್ದರು.  ಇದಲ್ಲದೆ ಅವರು ವಿಶ್ವದ ಹಲವಾರು ವಿಶ್ವವಿದ್ಯಾಲಯಗಳಿಗೆ ಸಂದರ್ಶನ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು.  

ಪದ್ಮಶ್ರೀ ಪ್ರಶಸ್ತಿ, ಅಖಿಲ ಭಾರತ ಸಂಗೀತ ನಾಟಕ ಅಕಾಡೆಮಿ ಗೌರವ, ಟಿ. ಚೌಡಯ್ಯ ಪ್ರಶಸ್ತಿ, ಕರ್ನಾಟಕ ರಾಜ್ಯ ಮತ್ತು ಇತರೆಡೆಗಳ ಹಲವಾರು ಪ್ರಶಸ್ತಿ ಗೌರವಗಳು ರಾಜೀವ್ ತಾರಾನಾಥರನ್ನು ಅರಸಿಬಂದಿದ್ದವು.  ರಾಜೀವ್ ತಾರಾನಾಥರ ಜೀವನ ಮತ್ತು ಸಾಧನೆಗಳ ಕುರಿತಾದ ಪುಸ್ತಕ ಸಹಾ ಕನ್ನಡದಲ್ಲಿ ಪ್ರಕಟಗೊಂಡಿದೆ.   

ಕೆಲ ವರ್ಷದ ಹಿಂದೆ ಪಂಡಿತ್ ರಾಜೀವ್ ತಾರಾನಾಥರು ತಮ್ಮ ತಂದೆಯವರ ಹೆಸರಿನಲ್ಲಿ ಸ್ಥಾಪಿಸಿರುವ ಪಂಡಿತ್ ತಾರಾನಾಥ್ ಫೌಂಡೇಶನ್ನಿನ ಮೂಲಕ ‘ಇಂಪು ಶಾಸ್ತ್ರೀಯ ಸಂಗೀತೋತ್ಸವ’ವನ್ನು ಏರ್ಪಡಿಸುವುದರ ಮೂಲಕ ತಮ್ಮ ಸಂಗೀತವೂ ಒಳಗೊಂಡಂತೆ ದೇಶದ ಹಲವಾರು ಶ್ರೇಷ್ಠ ಸಂಗೀತಗಾರರ ಶಾಸ್ತ್ರೀಯ ಸಂಗೀತವನ್ನು ನನ್ನಂತಹ ಮೈಸೂರಿಗರಿಗೆ ಉಣಬಡಿಸಿದ್ದು ಹೃದಯದಲ್ಲಿ ಇನ್ನೂ ಆಪ್ತವಾಗಿ ಮಾರ್ದನಿಸುತ್ತಲೇ ಇದೆ.  ಆ ಸಂದರ್ಭದಲ್ಲಿ ಅವರನ್ನು ಕಂಡಾಗ ಅವರ ಸಂಗೀತ ಕೇಳಿ, ಕೈಮುಗಿದ ಪ್ರತಿಯೊಂದು ಹೃದಯದಲ್ಲಿ ಅವರು ಪ್ರವೇಶಿಸುತ್ತಿದ್ದಾರೇನೊ ಅನಿಸುತ್ತಿತ್ತು.  ಅವರ ಸಂಗೀತ ಮಾತ್ರವಲ್ಲ, ಅವರ ಉಪಸ್ಥಿತಿಯೇ ಅಷ್ಟೊಂದು ಪ್ರಭಾವಿಯಾಗಿತ್ತು.

ಒಮ್ಮೆ ಅವರ ಜೀವನದಲ್ಲಿ,  ಅವರ ತಂದೆಯವರ ಕ್ಷಣವನ್ನು ಒಂದು ಪುಸ್ತಕದ ಘಟನಾವಳಿಯಲ್ಲಿ ಓದಿದ್ದು ಮನಸ್ಸಲ್ಲಿ ಆಗಾಗ ಮೂಡಿಹೋಗುತ್ತದೆ.  ಪಂಡಿತ್ ತಾರಾನಾಥರು ನಾಡಿನ ಮಹಾನ್ ಚೇತನ.  ಅವರು ಮಹಾನ್ ವೈದ್ಯ, ಸಮಾಜ ಸೇವಕ, ಹೋರಾಟಗಾರ, ಧರ್ಮಾತೀತ ಅಧ್ಯಾತ್ಮಿ.  ಒಂದು ದಿನ ಅವರ ಮನೆಗೆ ಯಾರೋ ಮಹನೀಯ ಬಂದು ಹೇಳಿದರಂತೆ.  ನೋಡು ನೀನು ನಿನ್ನ ಆಯಸ್ಸನ್ನು ನಿನ್ನ ಮಗನಿಗೆ ಕೊಟ್ಟು ಹೊರಡ್ತೀಯೊ, ಇಲ್ಲ ಕಳೆದುಕೋತೀಯೊ ಎಂಬರ್ಥದಲ್ಲಿ.  ಕೆಲವೇ ನಿಮಿಷದಲ್ಲಿ ಪಂಡಿತ್ ತಾರಾನಾಥರು ತಮ್ಮ ಕೊನೆ ಉಸಿರೆಳೆದುಕೊಂಡರಂತೆ.  ಇದನ್ನು ಕೇಶವರಾವ್ ಒಂದು ಪುಸ್ತಕದ ಸನ್ನಿವೇಶವಾಗಿ ಬರೆದಿದ್ದಾರೆ ಎಂದು ನನ್ನ ನೆನಪು. ನಾನು ನನ್ನ ಹಳೆಯ ಓದಿನ ನೆನಪು ಬರೆದಿರುವುದು ಇನಿತು ವೆತ್ಯಾಸ ಇರಬಹುದು.  ಆದರೆ ಅಂತಹ ತಂದೆಯ ಬದುಕನ್ನು ಶ್ರೇಷ್ಠ ರೀತಿಯಲ್ಲಿ ಬದುಕಿದ ಮಹನೀಯರು ನಮ್ಮ ರಾಜೀವ್ ತಾರಾನಾಥರು.

ರಾಜೀವ್ ತಾರಾನಾಥರು 2024ರ ಜೂನ್ 11ರಂದು ನಮ್ಮನ್ನಗಲಿದರು. ಅವರು ನಮ್ಮ ಮೈಸೂರಲ್ಲಿ ನೆಲೆಸಿದ್ರು.  ಇಂಥ ಒಬ್ಬರು ನಮ್ಮೂರಲ್ಲೇ ಇದ್ರು ಎಂಬ ಭಾವ ಏನೋ ನೆಮ್ಮದಿ ಕೊಡುತ್ತಿತ್ತು. ಏನ್ ಹೇಳೋದು...

ಜಯಂತಿ ತೇ ಸುಕೃತಿನೋ

ರಸಸಿದ್ಧಾಃ ಕವೀಶ್ವರಾಃ |

ನಾಸ್ತಿ ಯೇಷಾಂ ಯಶಃಕಾಯೇ

ಜರಾಮರಣಜಂ ಭಯಮ್ ||

“ಶಾಸ್ತ್ರೀಯ ಧರ್ಮಾನುಷ್ಠಾನಗಳಿಂದ ಪುಣ್ಯಶಾಲಿಗಳಾದ ಕವಿಶ್ರೇಷ್ಠರು, ವಿದ್ವಾಂಸರು, ರಸಸಿದ್ಧರೆನಿಸುವವರು ಲೋಕದಲ್ಲಿ ಶ್ರೇಷ್ಠರಾಗಿರುತ್ತಾರೆ. ಅವರುಗಳ ಕೀರ್ತಿಯೆಂಬ ಶರೀರದಲ್ಲಿ ಮುಪ್ಪು, ಸಾವುಗಳಿಂದಾಗುವ ಭಯವೆಂಬುದು  ಇರುವುದೇ ಇಲ್ಲ.” 

ಅಗಲಿದ ಮಹಾನ್ ಸಂಗೀತಕಾರರೂ ನಮ್ಮ ನಾಡಿನ ಹಿರಿಯ ವಿದ್ವಾಂಸರೂ ಆಗಿದ್ದ ಡಾ. ರಾಜೀವ್ ತಾರಾನಾಥ್ ಎಂಬ ಮಹಾನ್ ಚೇತನಕ್ಕೆ ಸಾಷ್ಟಾಂಗ ನಮನ 🌷🙏🌷

Greatest ambassador of music and human values Sarod Maestro Pandit Rajeev Taranath Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ