ಬಿ. ಎ. ಸನದಿ
ಬಿ. ಎ. ಸನದಿ
ಬಾಬಾ ಸಾಹೇಬ ಅಹಮದ್ ಸನದಿ ಅವರು ಸಾಹಿತಿಗಳಾಗಿ ಮತ್ತು ಆದರ್ಶ ಶಿಕ್ಷಕರಾಗಿ ಹೆಸರಾದವರು.
ಸನದಿ ಅವರು ಬೆಳಗಾವಿ ಜಿಲ್ಲೆಯ ಸಿಂಧೋಳಿ ಎಂಬ ಹಳ್ಳಿಯಲ್ಲಿ 1933ರ ಆಗಸ್ಟ್ 18ರಂದು ಜನಿಸಿದರು. ತಂದೆ ಅಹಮದ್ ಸಾಹೇಬ. ತಾಯಿ ಆಯಿಶಾಬಿ.
ಸನದಿ ಅವರ ಪ್ರಾರಂಭಿಕ ಶಿಕ್ಷಣ ಸಿಂಧೋಳಿಯಲ್ಲಿ ನಡೆಯಿತು. ನಾಲ್ಕನೆಯ ತರಗತಿಯಲ್ಲಿ ಪ್ರತಿಭಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೊರೆತ ಶಿಷ್ಯವೇತನದಿಂದ ಬೆಳಗಾವಿಯ ಜಿ.ಎ. ಹೈಸ್ಕೂಲಿನಲ್ಲಿ ಓದಿ, ಮುಂದೆ ಲಿಂಗರಾಜ ಕಾಲೇಜಿನಿಂದ 1954ರಲ್ಲಿ ಬಿ.ಎ. ಪದವಿ ಪಡೆದರು.
ಸನದಿ ಅವರು ಬೇಡಕಿಹಾಳ, ಶಮನೇವಾಡಿ ಹೈಸ್ಕೂಲುಗಳಲ್ಲಿ ಅಧ್ಯಾಪಕರಾಗಿ ವೃತ್ತಿ ಪ್ರಾರಂಭಿಸಿದರು. ಅಧ್ಯಾಪಕ ವೃತ್ತಿಯಲ್ಲಿದ್ದಾಗಲೇ ಬಿ.ಎಡ್ ಪದವಿ ಮತ್ತು ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದಿಂದ ಸಂಸ್ಕೃತ ಹಾಗೂ ಕನ್ನಡದಲ್ಲಿ ಸ್ನಾತಕೋತ್ತರ ಪದವಿಗಳನ್ನು ಗಳಿಸಿದರು. 1957ರಲ್ಲಿ ರಾಜ್ಯ ಸರಕಾರದ ಹುದ್ದೆಗೆ ಆಯ್ಕೆಯಾಗಿ ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಸಮಾಜ ಶಿಕ್ಷಣಾಧಿಕಾರಿಯಾಗಿ, ಬೆಂಗಳೂರಿನ ವಾರ್ತಾ ಇಲಾಖೆಯಲ್ಲಿ ಪಂಚಾಯತ್ ರಾಜ್ ಪತ್ರಿಕೆಯ ಸಹಾಯಕ ಸಂಪಾದಕರಾಗಿ, ಕಲಬುರ್ಗಿಯಲ್ಲಿ ವಿಭಾಗದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ, ಅಹಮದಾಬಾದಿನಲ್ಲಿ ಪಶ್ಚಿಮ ವಲಯದ ಪ್ರದರ್ಶನಾಧಿಕಾರಿಯಾಗಿ, 1972ರಲ್ಲಿ ಮುಂಬೈ ಆಕಾಶವಾಣಿಯ ಕುಟುಂಬ ಕಲ್ಯಾಣ ಅಧಿಕಾರಿಯಾಗಿ, ವಿಸ್ತರಣಾಧಿಕಾರಿಯಾಗಿ ಸೇವೆ ಸಲ್ಲಿಸಿ 1991ರಲ್ಲಿ ನಿವೃತ್ತರಾದರು.
ಸನದಿ ಅವರು ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಬರೆದ ಹಲವಾರು ಕವನಗಳು ಜಯಕರ್ನಾಟಕ, ಜಯಂತಿ, ನವಯುಗ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಇದೇ ಸಂದರ್ಭದಲ್ಲಿ ‘ಪತಿವ್ರತಾ ಪ್ರಭಾವ’ ಎಂಬ ನಾಟಕವನ್ನು ರಚಿಸಿದ್ದು ಸಿಂಧೋಳಿಯಲ್ಲಿ ಪ್ರದರ್ಶನಗೊಂಡು ಕವಿ, ನಾಟಕಕಾರರಾಗಿ ಪ್ರಖ್ಯಾತಿ ಪಡೆದರು. ಶಮನೇವಾಡಿಯಲ್ಲಿ ಹೈಸ್ಕೂಲು ಅಧ್ಯಾಪಕರಾಗಿದ್ದಾಗ ಸ್ನೇಹ ಪ್ರಕಾಶನದಿಂದ ಪ್ರಕಟಿಸಿದ ಮೊದಲ ಕವನ ಸಂಕಲನ ಆಶಾಕಿರಣ(1957). ನಂತರ ‘ನೆಲಸಂಪಿಗೆ’, ‘ತಾಜಮಹಲು’, ‘ಹಿಮಗಿರಿಯ ಮುಡಿಯಲ್ಲಿ’ ಇಂದ ಹಿಡಿದು ‘ನಮ್ಮ ಪ್ರೀತಿ’ಯವರೆಗೆ 18 ಕವನ ಸಂಕಲನಗಳು ಮತ್ತು THIRSTY WORDS ಎಂಬ ಒಂದು ಇಂಗ್ಲಿಷ್ ಕವನ ಸಂಕಲನ ಪ್ರಕಟಗೊಂಡವು.
ಆಕಾಶವಾಣಿಯ ಭಾವಗೀತೆಗಳ ಕಾರ್ಯಕ್ರಮದಲ್ಲಿ ಆಗಾಗ್ಗೆ ಕೇಳಿಬರುತ್ತಿದ್ದ ಸನದಿ ಅವರ ಪ್ರಸಿದ್ಧ ಗೀತೆ ‘ದಾರಿಯಮೊರೆ’ ಮನುಜ ಕುಲದ ಭಾವೈಕ್ಯತೆಯನ್ನು ಬಿಂಬಿಸುವಂತದ್ದು. ಈ ಕವನವು ಮಹಾರಾಷ್ಟ್ರ ಸರಕಾರದ ಪಿ.ಯು. ತರಗತಿಯ ಪಠ್ಯ ಪುಸ್ತಕದಲ್ಲೂ ಸೇರ್ಪಡೆಯಾಗಿತ್ತು. ಉದ್ಯೋಗ ನಿಮಿತ್ತ ಹಲವಾರು ಊರುಗಳಲ್ಲಿ ಸುತ್ತುತ್ತಾ, ಹೋದೆಡೆಯಲ್ಲೆಲ್ಲಾ ಕನ್ನಡ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದು, ಇತರರಿಗೆ ಪ್ರೋತ್ಸಾಹಿಸಿ, ತಾವೂ ಬೆಳೆದ ಸನದಿಯವರು ಮುಂಬಯಿ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. 1995ರ ವರೆಗೆ ಬರೆದ ಕವನಗಳ ಸಮಗ್ರ ಕಾವ್ಯ ಸಂಪುಟ ‘ಸೂರ್ಯಪಾನ’ವನ್ನು ಮುಂಬಯಿಯ ಭಾವನ ಪ್ರಕಾಶನವು ಹೊರತಂದಿತು. ನಂತರ ಬರೆದ ಕವನಗಳು ಐದು ಸಂಕಲನಗಳಲ್ಲಿ ಮೂಡಿವೆ.
ಸನದಿಯವರ 75ನೆಯ ವರ್ಷಾಚರಣೆಯ ಸಂದರ್ಭಕ್ಕಾಗಿ ‘ಬಿ.ಎ.ಸನದಿಯವರ 75 ಭಾವಗೀತೆಗಳು’ 2008ರಲ್ಲಿ ಪ್ರಕಟಗೊಂಡವು. ಇವರು ಬರೆದ ಹಲವಾರು ಕಥೆಗಳು ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ‘ನೀರಿಲ್ಲದ ನಲ್ಲಿ’ ಸಂಕಲನದಲ್ಲಿ 11 ಕಥೆಗಳಿದ್ದರೆ’, ಅನುಭವ ’ಸಂಕಲನದಲ್ಲಿ 7 ಕಥೆಗಳಿವೆ. ಗ್ರಾಮೀಣ ಸಂಸ್ಕೃತಿಯನ್ನೇ ಮೂಲದ್ರವ್ಯವಾಗಿಟ್ಟುಕೊಂಡು ಬರೆದ ಇವರ ಕಥೆಗಳಲ್ಲಿ ಮಾನವೀಯ ಮೌಲ್ಯಗಳು, ಜೀವನ ಶ್ರದ್ಧೆ ಮಹತ್ವದ ಅಂಶಗಳಾಗಿವೆ. ‘ನನ್ನದೊಂದ್ಮಾತು’ (1993) ಸನದಿಯವರ ಹರಟೆಗಳ ಸಂಕಲನ. ಈ ಸಂಕಲನದಲ್ಲಿ ಇಪ್ಪತ್ತೈದು ಹರಟೆಗಳಿವೆ. ಅತಿ ಸಾಮಾನ್ಯವೆನಿಸುವ ಸಣ್ಣ ಸಣ್ಣ ವಿಷಯಗಳನ್ನೇ ಆಯ್ಕೆಮಾಡಿಕೊಂಡು ಚರ್ಚೆಗೆ ಗುರಿಪಡಿಸಿ, ವ್ಯಂಗ್ಯದ ಮೊನಚಿನಿಂದ ಹರಟೆ ಮೂಡಿಸಿದ್ದಾರೆ.
ಸನದಿ ಅವರು ಶಿಕ್ಷಕರಾಗಿ ತಾವು ಗಳಿಸಿದ ಅನುಭವಗಳಿಂದ ಮಕ್ಕಳ ಮನಸ್ಸನ್ನು ಮುದಗೊಳಿಸಲು ಆಡುತ್ತ ಕಲಿ, ಹಾಡುತ್ತ ಕಲಿ, ಮಾಡುತ್ತ ಕಲಿ ಎಂಬ ಹೊಸ ಶಿಕ್ಷಣ ಧ್ಯೇಯದಿಂದ ಮಕ್ಕಳ ಪದ್ಯಗಳನ್ನೂ ರಚಿಸಿದ್ದು ಅವು ‘ಗುಲಾಬಿಗೊಂಚಲು’, ‘ಗೃಹಪಂಚಮಿ’, ‘ಜಿಲೇಬಿ ಝಣ್ ಝಣ್’, ‘ಹೂವಿನ ಹುಡುಗಿ’,. ‘ಹೊಸಾ ಹೊಸಾ ಹೂವು’ ಮುಂತಾದ ಸಂಕಲನಗಳಲ್ಲಿ ಸೇರಿವೆ.
ಉರ್ದು ಮರಾಠಿ ಸಾಹಿತ್ಯದ ಪರಿಚಯವನ್ನೂ ಹೊಂದಿದ್ದ ಸನದಿ ಅವರ ವಿಮರ್ಶಾ ಕೃತಿಗಳೆಂದರೆ ಕಾಲಗತಿ ಪ್ರಕಾಶನಕ್ಕಾಗಿ ‘ಜನಕಾವ್ಯದೃಷ್ಟಿ’ ಮತ್ತು ‘ಕಲೆ ಮತ್ತು ಮನುಷ್ಯ ಸಂಸ್ಕೃತಿ’ ಹಾಗೂ ಸಿರಿನುಡಿ ಪ್ರಕಾಶನಕ್ಕಾಗಿ ‘ಇಲ್ಲಿ ಸಲ್ಲುವವರು’.
ಸನದಿ ಅವರು ಅನೇಕ ಹಿರಿಯ ಸಾಹಿತಿಗಳೊಡನೆ ಒಡನಾಟ ಹೊಂದಿದ್ದು, ಅವರುಗಳ ಅಂತರಾಳದ ವಿಚಾರಗಳನ್ನು ಆಪ್ತ ನೆಲೆಯಲ್ಲಿ ದಾಖಲಿಸಿರುವ ಕೃತಿ ‘ಗೌರವ’ (1993). ಇದರಲ್ಲಿ ಸಾಲಿ ರಾಮಚಂದ್ರರಾಯರು, ಬಸವರಾಜ ಕಟ್ಟೀಮನಿ, ಚನ್ನವೀರಕಣವಿ ಮುಂತಾದ ಇಪ್ಪತ್ತೊಂದು ಮಂದಿಯ ಬಗ್ಗೆ ಆಪ್ಯಾಯಮಾನವಾದ ಲೇಖನಗಳಿವೆ.
ಸಂಪಾದನೆ ಪ್ರಕಾರದಲ್ಲಿಯೂ ದುಡಿದಿರುವ ಸನದಿಯವರು ‘ವಿಜಯದುಂದುಭಿ’ (ಕವನ ಸಂಕಲನ), ‘ಸನ್ಮಾನ ಮತ್ತು ಮುಂಬಯಿ ಕಥೆಗಳು’ (ಕಥಾಸಂಕಲನ), ‘ತುಂಗಾತರಂಗ’, ‘ಶರಣ ಪ್ರಸಾದ’ ಮುಂತಾದ ಪ್ರಮುಖ ಸಂಪಾದಿತ ಕೃತಿಗಳಲ್ಲದೆ ‘ಬಂದೆಯಾ ಬಾರಾಯ’, ‘ನೀಲಾಂಬಿಕೆ’ ಎಂಬ ಎರಡು ನಾಟಕಗಳನ್ನೂ ರಚಿಸಿದ್ದಾರೆ. ಇದಲ್ಲದೆ ರಕ್ತಮಾಂಗಲ್ಯ (ಕಾದಂಬರಿ), ನಮ್ಮ ಭಾರತ ದೇಶ, ಭಗವಾನ್ ಮಹಾವೀರ, ತಾನಸೇನ, ಮಿರ್ಜಾಗಾಲಿಬ್, ಬಾಬಾಸಾಹೇಬ್ ಅಂಬೇಡ್ಕರ್, ಬಾಲ ಪಟ್ಟ ಫಜೀತಿ, ಕ್ರಿಯೆ ಮತ್ತು ಸಂಬಂಧ (ಜಿ.ಕೆ. ಭಾಷಣಗಳು) ಮುಂತಾದವು ಅನುವಾದಿತ ಕೃತಿಗಳು. ಸನದಿಯವರ ವಿವಿಧ ಪ್ರಕಾರದ ಸಾಹಿತ್ಯ ಚಟುವಟಿಕೆಗಳನ್ನು ಕುರಿತು ‘ಮಾನವ್ಯಕವಿ’ (ಗೌರೀಶಕಾಯ್ಕಿಣಿ), ‘ಸೋಪಾನ’ (ಡಾ. ತಾಳ್ತಜೆ ವಸಂತಕುಮಾರ್) ‘ಸನದಿ ಸಾಹಿತ್ಯ ಸಮೀಕ್ಷೆ’ (ಡಾ. ಗುರುಪಾದ ಮರಿಗುಬ್ಬಿ), ‘ಮಾನವ್ಯಕವಿ ಬಿ.ಎ. ಸನದಿ’ (ಬಿ.ವಿ. ಗುಂಜಟ್ಟಿ), ‘ಬಿ.ಎ. ಸನದಿ ಬದುಕು-ಬರೆಹ’ (ಡಾ.ಜಿ.ಎನ್. ಉಪಾಧ್ಯ) ಮುಂತಾದವರ ಕೃತಿಗಳು ಪ್ರಕಟವಾಗಿದ್ದರೆ ಇವರ ಜೀವನ ಸಾಧನೆ ಕುರಿತು ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ಸ್ನೇಹಸಂಪದ’ (1996).
ಸನದಿಯವರ ವೈವಿಧ್ಯಮಯ ಸಾಹಿತ್ಯ ಕೊಡುಗೆಗಾಗಿ ‘ತಾಜಮಹಲು’ ಕವನ ಸಂಕಲನಕ್ಕೆ ರಾಜ್ಯ ಸರಕಾರದ ಪ್ರಶಸ್ತಿ (1962), ‘ಪ್ರತಿಬಿಂಬ’ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ (1967), ‘ಧ್ರುವ ಬಿಂದು’ ಕವನ ಸಂಕಲನಕ್ಕೆ ಭಾರತ ಸರಕಾರದ ಪುರಸ್ಕಾರ (1969), ‘ಇಲ್ಲಿ ಸಲ್ಲುವವರು’ ವಚನ ವಿಮರ್ಶಾ ಕೃತಿಗೆ ಕಾವ್ಯಾನಂದ ಪುರಸ್ಕಾರ (1984) ಮುಂತಾದ ಪ್ರಶಸ್ತಿಗಳಲ್ಲದೆ ದೆಹಲಿಯ ಕರ್ನಾಟಕ ಸಂಘದಿಂದ ದೆಹಲಿ ಕನ್ನಡಿಗ ಪರವಾಗಿ ‘ಶ್ರೇಷ್ಠ ಹೊರನಾಡ ಕನ್ನಡಿಗ’ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ, ಎಸ್.ಎನ್. ಭೂಸನೂರಮಠ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಗುರುನಾರಾಯಣ ಪ್ರಶಸ್ತಿಗಳಲ್ಲದೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, 2015 ಸಾಲಿನ ಪ್ರತಿಷ್ಟಿತ ಪಂಪ ಪ್ರಶಸ್ತಿ ಮುಂತಾದ ಪುರಸ್ಕಾರಗಳು ಸಂದಿದ್ದವು.
ಬಿ. ಎ. ಸನದಿ ಅವರು 2019ರ ಮಾರ್ಚ್ 31ರಂದು ಈ ಲೋಕವನ್ನಗಲಿದರು.
ಕಾಮೆಂಟ್‌ಗಳು