ಕಾಜೋಲ್
ಕಾಜೋಲ್
ಕಾಜೋಲ್ ಎಂದರೆ ಬೊಗಸೆ ಕಣ್ಣಿನ ಪ್ರೇಮತುಂಬಿದ ಹುಡುಗಿಯಾಗಿ ಇಷ್ಟವಾಗುವ ನಟಿ. ನನಗಂತೂ ಇಷ್ಟ 😊
ಕಾಜೋಲ್ ಜನಿಸಿದ್ದು 1974ರ ಆಗಸ್ಟ್ 5ರಂದು. ಕಾಜೋಲ್ ಮೊದಲ ಚಿತ್ರ 'ಬೇಕುದಿ'ಗೆ ನಟಿಸಲು ಬಂದಾಗ ಆಕೆ ಇನ್ನೂ ಶಾಲೆಯಲ್ಲಿ ಓದುತ್ತಿದ್ದರು. ಸಿನಿಮಾಗೆ ಬಂದ ಮೇಲೆ ಓದು ಅಷ್ಟೇ ಆಯ್ತು. ಕಾಜೋಲ್ ಅವರ ಕುಟುಂಬದ ತುಂಬಾ ಚಲನಚಿತ್ರದ ನಂಟೋ ನಂಟು. ಅವರ ತಂದೆ ಶೋಮು ಮುಖರ್ಜಿ ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದರು. ತಾಯಿ ತನುಜಾ, ದೊಡ್ಡಮ್ಮ ನೂತನ್, ಅಜ್ಜಿ ಶೋಭನಾ ಸಮರ್ಥ್ ಇವರೆಲ್ಲರೂ ಪ್ರಸಿದ್ಧ ಕಲಾವಿದೆಯರು.
ಚಿತ್ರರಂಗದಲ್ಲಿ ಕಾಜೋಲ್ ಮತ್ತು ಶಾರುಖ್ ಖಾನ್ ಜೋಡಿ ಬಹು ಯಶಸ್ವಿ. ಈ ಜೋಡಿ ನಟಿಸಿದ 'ಬಾಜಿಗರ್', 'ಕರಣ್ ಅರ್ಜುನ್', 'ದಿಲ್ವಾಲೆ ದುಲ್ಹಾನಿಯಾ ಲೆ ಜಾಯೆಂಗೆ', 'ಕುಚ್ ಕುಚ್ ಹೋತಾ ಹೈ', 'ಕಭಿ ಖುಷಿ ಕಭಿ ಗಮ್', 'ಮೈ ನೇಮ್ ಈಸ್ ಖಾನ್' ಎಲ್ಲವೂ ಜಯಭೇರಿ ಬಾರಿಸಿವೆ. 'ದಿಲ್ವಾಲೆ ದುಲ್ಹಾನಿಯಾ ಲೆ ಜಾಯೆಂಗೆ' ಅಬ್ಬಬ್ಬಬ್ಬ ಓಡ್ತಾನೇ ಇತ್ತು. ಈಗಲೂನಾ ಗೊತ್ತಿಲ್ಲ.
ಕಾಜೋಲ್ ಇತರರೊಂದಿಗೆ ನಟಿಸಿದ ಚಿತ್ರಗಳಲ್ಲಿ ಗುಪ್ತ್, ದುಷ್ಮನ್, ಇಷ್ಕ್, ಪ್ಯಾರ್ ಕಿಯಾ ತೋ ಡರ್ರ್ನಾ ಕ್ಯಾ, ಪ್ಯಾರ್ ತೋ ಹೋನಾ ಹಿ ಥಾ, ಹಮ್ ಆಪ್ಕೆ ದಿಲ್ ಮೇ ರೆಹತೇ ಹೈ ಮುಂತಾದವು ಸೇರಿವೆ. 'ಮಿನ್ಸಾರ ಕನವು' ಆಕೆ ಪ್ರಭುದೇವ, ಅರವಿಂದ ಸ್ವಾಮಿ ಜೊತೆ ನಟಿಸಿದ ಪ್ರಸಿದ್ಧ ತಮಿಳು ಚಿತ್ರ.
ಅಜಯ್ ದೇವಗನ್ ಅವರನ್ನು ವರಿಸಿದ ನಂತರ ಚಿತ್ರಗಳ ಆಯ್ಕೆಯನ್ನು ಗಣನೀಯವಾಗಿ ಕಡಿಮೆ ಮಾಡಿದ್ದರೂ ಕಾಜೋಲ್ ಅವರು ಫ಼ನಾ, ದಿಲ್ವಾಲೆ, ತನ್ಹಾಜಿ, ಹೀಗೆ ಆಗೊಮ್ಮೆ ಈಗೊಮ್ಮೆ ನಟಿಸುತ್ತಾ ಸದಾ ಲಕ್ಷಣವಾಗಿ ನಗುನಗುತ್ತಾ ಸುದ್ದಿ ಮಾಧ್ಯಮಗಳಲ್ಲಂತೂ ಮಿನುಗುತ್ತಿರುತ್ತಾರೆ.
ಕಾಜೋಲ್ ಆರು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಗೆದ್ದಿದ್ದು, ಪ್ರತಿಭೆ ಮತ್ತು ಜನಪ್ರಿಯತೆಗಳನ್ನು ಒಂದೂಡಿಸಿಕೊಂಡಿರುವ ಸಹಜ ಪ್ರತಿಭೆ. ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೂಡಾ ಸಂದಿದೆ.
On the birth day of Kajol
ಕಾಮೆಂಟ್‌ಗಳು