ರಾಜಗುರು
ಶಿವರಾಮ ಹರಿ ರಾಜಗುರು
ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಗತ್ ಸಿಂಗ್ ಅವರನ್ನು ನೆನೆಯುವಾಗಲೆಲ್ಲಾ ಅವರ ಜೊತೆ ಪ್ರಾಣಾರ್ಪಣೆ ಮಾಡಿದ ಸುಖದೇವ್ ಮತ್ತು ಶಿವರಾಮ ಹರಿ ರಾಜಗುರು ಅವರ ನೆನಪೂ ಜೊತೆ ಜೊತೆಯಾಗಿ ಬರುತ್ತದೆ. ಈ ಯುವಕರು ಒಬ್ಬರಿಗೊಬ್ಬರು ಪೈಪೋಟಿ ಎಂಬಂತೆ ದೇಶಕ್ಕಾಗಿ ಹೋರಾಡುವುದರಲ್ಲಿ ಒಬ್ಬರನ್ನೊಬ್ಬರು ಮೀರಿಸುವ ಉತ್ಸಾಹದಲ್ಲಿ ಕ್ರಿಯಾಶೀಲರಾಗಿದ್ದರು.
ಈ ತ್ರಿಮೂರ್ತಿಗಳಲ್ಲಿ ಶಿವರಾಮ ಹರಿ ರಾಜಗುರು 1908ರ ಆಗಸ್ಟ್ 24ರಂದು ಜನಿಸಿದರು. ಊರು ಮಹಾರಾಷ್ಟ್ರದ ಪುಣೆಯ ಬಳಿಯಿರುವ ಖೇಡ್ ಗ್ರಾಮ. ಇಂದು ಆ ಗ್ರಾಮದ ಹೆಸರೇ 'ರಾಜ್ ಗುರು' ಎಂದೆನಿಸಿದೆ.
ಭಾರತೀಯ ಸಂಸ್ಕೃತಿಯವನ್ನು ಆಳವಾಗಿ ಅಭ್ಯಸಿಸಿದ ರಾಜಗುರು ದೇಶಸೇವೆಗೆ ಕಂಕಣಬದ್ಧರಾದರು. ಅಷ್ಟೊಂದು ಸುಸಂಸ್ಕೃತ ನಡವಳಿಕೆ, ವಿದ್ವತ್ಪೂರ್ಣ ಅಧ್ಯಯನವನ್ನು ರೂಢಿಸಿಕೊಂಡಿದ್ದರೂ ದೇಶಕ್ಕಾಗಿ ಅವರು ಪಿಸ್ತೂಲು ಹಿಡಿಯಲು ಹಿಂದೆ ಮುಂದೆ ನೋಡಲಿಲ್ಲ. ಸುಖದೇವ್ ಅವರಷ್ಟು ಕರಾರುವಾಕ್ಕಾಗಿ ಪಿಸ್ತೂಲು ಗುರಿಯಿಡುವವರು ಇಲ್ಲವೇ ಇಲ್ಲ ಎಂಬಷ್ಟು ಖ್ಯಾತಿ ಅವರದಾಗಿತ್ತು. ಲಾಲಾ ಲಜಪತರಾಯರು ಬ್ರಿಟಿಷ್ ಪೋಲೀಸ್ ಅಧಿಕಾರಿಗಳ ದೌರ್ಜನ್ಯಕ್ಕೆ ಒಳಗಾಗಿ ನಿಧನರಾದಾಗ ಅದರ ಸೇಡು ತೀರಿಸಲು ಈ ಮೂವರು ತರುಣರು ಜೆ. ಪಿ. ಸಾಂಡರ್ಸ್ ಎಂಬ ಬ್ರಿಟಿಷ್ ಅಧಿಕಾರಿಯನ್ನು ಕೊಂದರು. ಯಾವುದೇ ಖೇದ ಭಾವನೆಯಿಲ್ಲದೆ ಹಸನ್ಮುಖದಿಂದ ಈ ತ್ರಿಮೂರ್ತಿಗಳಾದ ಭಗತ್ ಸಿಂಗ್, ಸುಖದೇವ್ ಮತ್ತು ಶಿವರಾಮ ರಾಜಗುರು 1931ರ ಮಾರ್ಚ್ 23ರಂದು ತಮ್ಮನ್ನು ನೇಣಿಗೆ ಒಡ್ಡಿಕೊಂಡರು.
ಈ ಮಹಾತ್ಮರ ದೇಹಗಳನ್ನು ಫಿರೋಜ್ ಪುರ ಜಿಲ್ಲೆಯ ಸಟ್ಲೇಜ್ ನದೀತೀರದ ಹುಸ್ಸೇನ್ ವಾಲಾ ಎಂಬ ಗ್ರಾಮದಲ್ಲಿ ಸಮಾಧಿ ಮಾಡಲಾಯಿತು. 2008ರ ವರ್ಷದ ಆಗಸ್ಟ್ 24ರಂದು ರಾಜಗುರು ಅವರ ನೂರನೆಯ ವರ್ಷದ ಜನ್ಮಾಚರಣೆಯ ಸಂದರ್ಭದಲ್ಲಿ ಅಜೇಯ ಕ್ರಾಂತಿಕಾರಿ ರಾಜಗುರು ಎಂಬ ಅನಿಲ್ ವರ್ಮಾ ಅವರು ಮೂಡಿಸಿರುವ ಗ್ರಂಥವನ್ನು ಭಾರತ ಸರ್ಕಾರದ ಪ್ರಕಟಣಾ ವಿಭಾಗವು ಹೊರತಂದಿತು.
ಈ ಮಹಾನ್ ಭಾರತ ಪುತ್ರರ ಚೇತನಕ್ಕೆ ಭಕ್ತಿಯ ನಮನ 🌷🙏🌷
On the birth anniversary revolutionary freedom fighter Shivaram Hari Rajaguru 🌷🙏🌷
ಕಾಮೆಂಟ್‌ಗಳು