ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಮ ಭಟ್ಟ

 ಉಪ್ಪಂಗಳ ರಾಮ ಭಟ್ಟ 


ಡಾ.ಉಪ್ಪಂಗಳ ರಾಮ ಭಟ್ಟ ಅವರು ಸಾಹಿತಿಗಳಾಗಿ ಹಾಗೂ ಮಹಾನ್ ವಿದ್ವಾಂಸರಾಗಿ ಹೆಸರಾಗಿದ್ದವರು.

ಎಂಜಿಎಂ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾಗಿದ್ದ ಡಾ.ಉಪ್ಪಂಗಳ ರಾಮಭಟ್ಟರು ಶ್ರೇಷ್ಠ ವ್ಯಾಕರಣ ವಿದ್ವಾಂಸರಾಗಿದ್ದರು.

ಭಟ್ಟರಿಗೆ ಆಪ್ತವಾಗಿದ್ದದ್ದು ಭಟ್ಟಾಕಲಂಕ ಮತ್ತು ಅಕಲಂಕ ದೇವ ಪ್ರತಿಪಾದಿತ ಭಾಷಾ ವ್ಯಾಕರಣ.  ಇವರ ಪಿಎಚ್‌.ಡಿ. ಸಂಶೋಧನ ಪ್ರಬಂಧವೂ ಇದಕ್ಕೆ ಸಂಬಂಧಿಸಿದ್ದು. ಭಟ್ಟಾಕಲಂಕ ಜೈನ ಕವಿ. ಈತನ ಗುರು ಅಕಲಂಕದೇವ. ಇವರು ಒಬ್ಬರಿರಬಹುದೆ ಎಂಬ ಜಿಜ್ಞಾಸೆಯನ್ನೂ ಭಟ್ಟರು ಮಾಡಿದ್ದರು.  ಕವಿ ಎಂದು ಆಡುಮಾತಿನಲ್ಲಿ ಬಂದಿದೆಯಾದರೂ, ಶಬ್ದಮಣಿ ದರ್ಪಣ, ಕವಿರಾಜಮಾರ್ಗ, ಕಾವ್ಯಾವಲೋಕನದಂತಹ ಲಾಕ್ಷಣಿಕ/ ವ್ಯಾಕರಣ ಗ್ರಂಥ 'ಶಬ್ದಾನುಶಾಸನ’ವನ್ನು ಬರೆದ ಕಾರಣ ಈತನೊಬ್ಬ ಲಾಕ್ಷಣಿಕ/ ವೈಯಾಕರಣ.

ರಾಮ ಭಟ್ಟರ ಮೊದಲ ಕೃತಿಯೂ 'ಕನ್ನಡ ವೈಯಾಕರಣ ಭಟ್ಟಾಕಲಂಕ’ ಆಗಿದೆ. ಕನ್ನಡ ವ್ಯಾಕರಣದ ಬಗ್ಗೆ ಸಂಸ್ಕೃತದಲ್ಲಿ ರಚಿಸಿದ ಭಟ್ಟಾಕಲಂಕನ 'ಶಬ್ದಾನುಶಾಸನ’ ಕುರಿತು ಸಂಶೋಧನೆ ನಡೆಸಿ ಪಿಎಚ್‌.ಡಿ. ಪಡೆದ ಕನ್ನಡದ ಮೊದಲ ಸಂಶೋಧಕರು ಇವರು.  ಛಂದಃಶಾಸ್ತ್ರಜ್ಞ ಸೇಡಿಯಾಪು ಕೃಷ್ಣ ಭಟ್ಟರು ಇದಕ್ಕೆ ಮುನ್ನುಡಿ ಬರೆದರು.   ಇದೇ ಕೃತಿಗೆ 1986ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತು. 

ರಾಮ ಭಟ್ಟರು ತಮ್ಮ ಪರೋಕ್ಷ ಗುರುವಿನ ಗೌರವಾರ್ಥ ಅಕಲಂಕ ಪ್ರತಿಷ್ಠಾನ ಸ್ಥಾಪಿಸಿ ಆ ಮೂಲಕ ವಿದ್ವಾಂಸರನ್ನು ಗೌರವಿಸುತ್ತಿದ್ದರು.

ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಮೂಲಕ ಕನ್ನಡ ವಿದ್ವಾಂಸರಾಗಿ ಉಡುಪಿಯಲ್ಲಿ ನೆಲೆನಿಂತ ರಾಮ ಭಟ್ಟರು ಹಿಂದಿಯಲ್ಲೂ ಪ್ರಾವೀಣ್ಯ ಪಡೆದವರು. ಅವರು ಹಿಂದಿಯ ಮಹಾಕವಿ ಮೈಥಿಲೀ ಶರಣ ಗುಪ್ತರ “ಪಂಚವಟಿ’ ಖಂಡಕಾವ್ಯವನ್ನು ಕನ್ನಡಕ್ಕೆ ಅನುವಾದಿಸಿದರು. ಇದೊಂದು ಸ್ವತಂತ್ರ ಕಾವ್ಯವೆಂಬಂತೆ ಕಂಡುಬರುತ್ತದೆ ಎನ್ನುವುದು ವಿದ್ವಾಂಸರ ಅಭಿಮತ.

ರಾಮ ಭಟ್ಟರ ಕನ್ನಡ, ಹವ್ಯಕ, ತುಳು ಭಾಷೆಗಳ ಅಧ್ಯಯನಗಳ ಆಕರ ಗ್ರಂಥ 'ಮಾನಸ’. 'ಶಿವ ಮೆರೆದ ಹಳ್ಳಿ ಶಿವಳ್ಳಿ’, 'ಮಧ್ವವಿಜಯದಲ್ಲಿ ತುಳು ಶಬ್ದಗಳು’, 'ಹವ್ಯಕರಲ್ಲಿ ಅಡ್ಡ ಹೆಸರು’, “ಹವ್ಯಕರಲ್ಲಿ ತುಳು ಶಬ್ದಗಳು’, 'ಹವ್ಯಕ-ಒಳಭೇದಗಳು’, 'ಕನ್ನಡದ ಕೆಲವು ಪ್ರಾದೇಶಿಕ ವೈಶಿಷ್ಟ್ಯಗಳು’, 'ಹೊಸಗನ್ನಡದಲ್ಲಿ ಇತ್ತೀಚಿನ ಕೆಲವು ಪ್ರಯೋಗಗಳು’ ಹೀಗೆ ಅವರ ಹಲವು ಲೇಖನಗಳಲ್ಲಿ ಭಾಷೆ-ಸಂಸ್ಕೃತಿಗಳ ಕುರಿತ ವಿಶಿಷ್ಟ ಚಿಂತನೆಗಳಿವೆ

ರಾಮ ಭಟ್ಟರು ಕಾಸರಗೋಡಿನ ಬಹುಮುಖೀ ಭಾಷೆ, ಸಾಹಿತ್ಯ, ಶಾಸನ, ಭೌಗೋಳಿಕ ಕುತೂಹಲ, ಸ್ಮಾರಕಗಳು, ದೇವಸ್ಥಾನಗಳು, ಹಳೆಯ ನಾಣ್ಯ ಕಡತ, ಸಾಂಸ್ಕೃತಿಕ- ಸಾಹಿತ್ಯಿಕ- ಸಾಮಾಜಿಕ- ರಾಜಕೀಯ ಮಹತ್ವವೆಲ್ಲವನ್ನೂ 'ಗಡಿನಾಡು- ಕಾಸರಗೋಡು’ ಕೃತಿಯಲ್ಲಿ ಮೂಡಿಸಿದ್ದಾರೆ. ಅವರು ಜೀವನ, ಸಂಸ್ಕೃತಿ, ಸೃಷ್ಟಿ, ಇತಿಹಾಸ, ದೇವರು, ನಂಬಿಕೆ ಇತ್ಯಾದಿಗಳ ಬಗೆಗೆ ಕೀರ್ತನೆ, ಕಗ್ಗದ ಸಾಲಿಗೆ ಸೇರುವ ನಾಲ್ಕು ಪಾದಗಳ (ಚೌಪದಿ) ಮುಕ್ತಕಗಳನ್ನೂ (ಬಾಳನೋಟ) ಬರೆದರು. ಗಮಕ ಇವರ ಇನ್ನೊಂದು ಕಾರ್ಯವ್ಯಾಪ್ತಿ.
30ಕ್ಕೂ ಹೆಚ್ಚು ಪ್ರಕಟಿತ ಕೃತಿಗಳನ್ನು ಭಟ್ಟರು ಹೊರ ತಂದಿದ್ದರು, 'ಅಶ್ವತ್ಥ’, 'ಅಷ್ಟಮ’ ಇತ್ಯಾದಿ ಅವರ ಆರು ಸಂಪಾದಿತ ಕೃತಿಗಳಿವೆ. ಸೀತಾಪರಿತ್ಯಾಗ, ಬೇರಿಲ್ಲದ ಬಳ್ಳಿ, ಕಾರ್ಗಿಲ್‌ ವೀರ (ಕಿರು ನಾಟಕ), ಮಧ್ವಾಚಾರ್ಯರ ಜೀವನಯಾತ್ರೆಯನ್ನು ಒಳಗೊಂಡ 'ಆನಂದಾಯನ’ದಂತಹ ಅಪ್ರಕಟಿತ ಕೃತಿಗಳೂ ಇವೆ. ಪ್ರವಾಸಪ್ರಿಯರೂ ಆಗಿದ್ದ ಡಾ| ಭಟ್ಟರು ಪ್ರವಾಸದ ವೇಳೆ ಕಂಡುಬಂದ ಅನೇಕ ಕುತೂಹಲಗಳನ್ನು ಲೇಖನಕ್ಕೆ ಇಳಿಸಿ 'ಉದಯವಾಣಿ’ಗೆ ಕೊಡುತ್ತಿದ್ದರು.

ಉಪ್ಪಂಗಳ ರಾಮ ಭಟ್ಟರ ಸಾಹಿತ್ಯ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತಿನ ಡಾ.ಹಾ.ಮಾ.ನಾ ದತ್ತಿ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನದ ರನ್ನ ಸಾಹಿತ್ಯ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಮುಂತಾದ ಗೌರವಗಳೂ ಸಂದಿದ್ದವು.

ಉಪ್ಪಂಗಳ ರಾಮ ಭಟ್ಟರು 2021ರ ಆಗಸ್ಟ್. 24ರಂದು ಈ ಲೋಕವನ್ನಗಲಿದರು. 

ಮಾಹಿತಿ ಆಧಾರ: ಮಟಪಾಡಿ ಕುಮಾರಸ್ವಾಮಿ ಅವರ 'ಉದಯವಾಣಿ'ಯಲ್ಲಿನ ಲೇಖನ

On Remembrance Day of Uppangala Rama Bhat

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ