ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್ಚೆಸ್ಕೆ


 ಎಚ್ಚೆಸ್ಕೆ


‘ಎಚ್ಚೆಸ್ಕೆ’ ಎಂಬ ಹೆಸರು ಕೇಳಿದವರಿಗೆ ಮೈಯೆಲ್ಲಾ ಕಣ್ಣಾದ ಶ್ರೇಷ್ಠ ಜೀವಿತ  ಜ್ಞಾನಭಂಡಾರವೆನಿಸಿದ್ದ ಹಿರಿಯರೊಬ್ಬರ ಭಾವಚಿತ್ರ ಮನದಲ್ಲಿ  ತುಂಬುತ್ತದೆ.  ನನ್ನನ್ನು ನನ್ನ ಕೆಲಸಕ್ಕೆ ಸದಾ ಪ್ರೇರಿಸುವ ಹೆಸರು ಎಚ್ಚೆಸ್ಕೆ 🌷🙏🌷

ಕನ್ನಡ ಪತ್ರಿಕೋದ್ಯಮದಲ್ಲಿ ಎಚ್ಚೆಸ್ಕೆ ಅವರಷ್ಟು ಸುದೀರ್ಘ ಅವಧಿಯವರೆಗೆ, ಬಹು ವ್ಯಾಪ್ತಿಯಲ್ಲಿ ಅಂಕಣದ ಕೆಲಸ ಮಾಡಿದವರು ಕಾಣಸಿಗುವುದು ಬಲು ಕಷ್ಟ. ಎಚ್ಚೆಸ್ಕೆ ಅವರ ಅಂಕಣಕ್ಕೆ ಸಿಲುಕದ ವಿಚಾರಗಳೇ ಇಲ್ಲ ಎನ್ನುವಷ್ಟು ಅವರ ಬರಹಗಳು ಪ್ರಸಿದ್ಧಿ ಪಡೆದಿದ್ದವು.  ಕನ್ನಡಿಗರಿಗೆ ತಮ್ಮ ಸಂಕ್ಷಿಪ್ತ ಸುಲಲಿತ ಬರಹಗಳ ಮೂಲಕ, ವೈವಿಧ್ಯಮಯ ವಿಚಾರಗಳ ಬಗೆಗೆ ಜ್ಞಾನವನ್ನು ನೀಡುತ್ತಾ, ಉತ್ತಮ ಅಭಿರುಚಿಯನ್ನು ಬೆಳೆಸಿದ ಎಚ್ಚೆಸ್ಕೆ ಅವರ ಅಂಕಣಗಳನ್ನು ಎಷ್ಟು ಪ್ರಶಂಸಿಸಿದರೂ ಕಡಿಮೆಯೇ.  ಬಹುಶಃ ಅವರು ಸಂಪಾದಿಸಿದ ಎಲ್ಲಾ ಬರಹಗಳನ್ನು ಒಟ್ಟುಗೂಡಿಸಿ ಪ್ರಕಟಿಸಿದಲ್ಲಿ ಅದು ಹಲವು ಸಂಪುಟಗಳ ಬೃಹತ್ ವಿಶ್ವಕೋಶವನ್ನು ಮೀರಿಸೀತು.

ಮೈಸೂರು ಜಿಲ್ಲೆ ಕೃಷ್ಣರಾಜನಗರ ತಾಲೂಕಿನ ಹಳೆಯೂರಿನಲ್ಲಿ 1920ರ ಆಗಸ್ಟ್  26ರಂದು  ಎಚ್ ಎಸ್ ಕೃಷ್ಣಸ್ವಾಮಿ ಅಯ್ಯಂಗಾರ್  ಜನಿಸಿದರು.  ತಮ್ಮ ಹುಟ್ಟಿದೂರಿನಲ್ಲೆ ಶಾಲಾ ವಿದ್ಯಾಭ್ಯಾಸ ಮುಗಿಸಿದ ಅಯ್ಯಂಗಾರ್ಯರು  ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯಟ್, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಕಾಂ, ಎಂ.ಕಾಂ ಮತ್ತು  ಬನಾರಸ್ ವಿಶ್ವವಿದ್ಯಾನಿಲಯದಿಂದ  ಎಂ.ಎ ಪದವಿಗಳನ್ನು ಗಳಿಸಿದರು. 

ಪತ್ರಿಕಾ ಬರಹದಲ್ಲಿ ಆಸಕ್ತಿ ಬೆಳೆಸಿಕೊಂಡ ಎಚ್ಚೆಸ್ಕೆ  ಬೆಂಗಳೂರಿನ ‘ದೇಶ ಬಂಧು’  ಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿದರು.  ಹೀಗೆ ಪತ್ರಿಕೋದ್ಯಮವನ್ನು ವೃತ್ತಿಯನ್ನಾಗಿ ಸ್ವೀಕರಿಸಿದ ಎಚ್ಚೆಸ್ಕೆ, ಮುಂದೆ ತಿರುಮಲೆ ತಾತಾಚಾರ್ಯ ಶರ್ಮರ ‘ವಿಶ್ವಕರ್ನಾಟಕ’ ಪತ್ರಿಕೆಯಲ್ಲಿ ಕೆಲಸ ಮಾಡಿದರು. ಬೆಂಗಳೂರಿನಲ್ಲಿ ಒಟ್ಟು  20 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಕೆಲಸ ನಿರ್ವಹಿಸಿದ ಎಚ್ಚೆಸ್ಕೆ ಅಂದಿನ ಬೆಂಗಳೂರು ಜನಜೀವನದ ಕುರಿತು  ಮನೋಜ್ಞ ಲೇಖನಗಳನ್ನು ಬರೆದಿದ್ದಾರೆ.

ನಾಡಿನ ಅನೇಕ ದಿನಪತ್ರಿಕೆಗಳಲ್ಲಿ ಮತ್ತು ವಾರಪತ್ರಿಕೆಗಳಲ್ಲಿ ವಾಣಿಜ್ಯ ಮತ್ತು ವ್ಯಕ್ತಿ ವಿಷಯಕ್ಕೆ ಸಂಬಂಧಿಸಿದ ಅಂಕಣ ಬರಹಗಳು, ಆರ್ಥಿಕ ಚಿಂತನೆಗಳು, ಸಾಹಿತ್ಯ ವಿಮರ್ಶೆ, ಚುಟುಕಗಳು ಮತ್ತು ಪ್ರಬಂಧಗಳನ್ನು ಎಚ್ಚೆಸ್ಕೆ ಬರೆದರು.  2008ರ ವರ್ಷದಲ್ಲಿ ನಿಧನರಾದ ಎಚ್ಚೆಸ್ಕೆ ತಮ್ಮ ಕೊನೆಯ ದಿನಗಳವರೆವಿಗೂ  ‘ವಿಕ್ರಾಂತ ಕರ್ನಾಟಕ’ ವಾರಪತ್ರಿಕೆಯಲ್ಲಿ ಅಂಕಣವನ್ನು ಬರೆಯುತ್ತಿದ್ದರು.

1957ರಲ್ಲಿ ಮೈಸೂರಿಗೆ ಮರಳಿ ಬಂದ ಎಚ್ಚೆಸ್ಕೆ,   ಬನುಮಯ್ಯ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿ ನಿವೃತ್ತರಾಗುವವರೆಗೂ ಅಲ್ಲಿಯೇ ಕೆಲಸ ನಿರ್ವಹಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ  ದೇಜಗೌ ಅವರು  ಕುಲಪತಿಯಾಗಿದ್ದಾಗ ವಿಶ್ವಕೋಶ ಸಂಪುಟಗಳ ‘ಮಾನವಿಕ ವಿಭಾಗಕ್ಕೆ' ಎಚ್ಚೆಸ್ಕೆ ಕೆಲಸಕ್ಕೆ ಸೇರಿದರು. 36 ವರ್ಷ ‘ಸುಧಾ' ವಾರ ಪತ್ರಿಕೆಗೆ ಒಂದು ವಾರವೂ ತಪ್ಪದೆ ವ್ಯಕ್ತಿವಿಷಯವನ್ನು ಬರೆದರು.  ‘ಸುಧಾ’ ವಾರಪತ್ರಿಕೆಯಲ್ಲಿ ಅವರ ಲೇಖನಗಳನ್ನು ಅದರಲ್ಲಿ ಬರುವ ಕಥೆಗಳಿಗೂ ಮೀರಿದ ಉತ್ಸಾಹದಲ್ಲಿ  ಓದುಗ ವರ್ಗಕ್ಕೆ ನಾವೆಲ್ಲಾ ಸೇರಿದ್ದು, ಎಚ್ಚೆಸ್ಕೆ ಅವರ ಅಭಿಮಾನಿಗಳಾಗಿಬಿಟ್ಟಿದ್ದೆವು.  ಅಂದಿನ ದಿನಗಳಲ್ಲಿ  ದೂರದರ್ಶನದಲ್ಲಿ ಪ್ರಸಾರವಾದ ಒಂದು ಸಂದರ್ಶನದಲ್ಲಿ ಅವರು ಹೇಳಿದ್ದು ನೆನಪಾಗುತ್ತದೆ.  “ನಾನು ಓದಿದ ಸಂಗತಿಗಳಲ್ಲಿ ಮುಖ್ಯವಾದುದನ್ನೆಲ್ಲಾ ನಾನು  ಅಚ್ಚುಕಟ್ಟಾಗಿ ಒಂದೆಡೆ ಬರೆದಿಟ್ಟು ಕೊಂಡಿರುತ್ತೇನೆ.  ನಾನು ಮೆಚ್ಚಿದ ಹಲವಾರು ಪತ್ರಿಕೆಯ ಲೇಖನಗಳನ್ನು, ಚಿತ್ರಗಳನ್ನು ಬಹಳ ಶ್ರದ್ಧೆಯಿಂದ ಕಾಪಾಡಿಕೊಂಡು ಬರುತ್ತಿದ್ದೇನೆ.  ಇಂಥ ಶ್ರದ್ಧೆ ಮತ್ತು ಆಸಕ್ತಿಗಳು  ನಾನು ಬರೆಯುವ ಅಂಕಣಗಳಿಗೂ ನನ್ನನ್ನು ಬದ್ಧನನ್ನಾಗಿ ಮಾಡಿವೆ.”   

ಪ್ರೊ. ಎಚ್ಚೆಸ್ಕೆ ಅವರು ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ.  ‘ಕನ್ನಡದಲ್ಲಿ ವಿಡಂಬನಾ ಸಾಹಿತ್ಯ' ಎಂಬ ಅವರ ವಿಮರ್ಶಾತ್ಮಕ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ  ‘ಭಾಸ್ಕರ್ ರಾವ್ ಸ್ಮಾರಕ ' ಬಹುಮಾನ ಲಭಿಸಿತ್ತು.  ‘ಧವನದ ಕೊನೆ', ‘ಬಯಕೆಯ ಬಲೆ' ಮತ್ತು ‘ಕಳ್ಳ ಹೊಕ್ಕ ಮನೆ' ಎಚ್ಚೆಸ್ಕೆ ಅವರ ಮೂರು ಪ್ರಸಿದ್ಧ ಕಾದಂಬರಿಗಳು.   `ಮಾನವನ ಐಹಿಕಾಭ್ಯುದ್ಯಯ' ಮತ್ತು `ನಮ್ಮ ಶರೀರದ ರಚನೆ' ಎಚ್ಚೆಸ್ಕೆ ಅವರ ಭಾಷಾಂತರ ಕೃತಿಗಳು.

‘ಬದುಕು ಬೆಳಕು', ‘ಈ ತರಹದ ವ್ಯಕ್ತಿಗಳು', ‘ಬೆಳಕು ಚೆಲ್ಲಿದ ಬದುಕು' ಮತ್ತು ‘ಮಾನ್ಯರು ಸಾಮಾನ್ಯರು' ಎಚ್ಚೆಸ್ಕೆ ಅವರ ಪ್ರಸಿದ್ಧ ವ್ಯಕ್ತಿಚಿತ್ರಣ ಕೃತಿಗಳು. ಹಲವಾರು ಗಣ್ಯರ ಕುರಿತು ಅವರು  ವ್ಯಕ್ತಿ ಚಿತ್ರಗಳನ್ನು ಬರೆದಿದ್ದಾರೆ. 1983ರಲ್ಲಿ ಮೈಸೂರಿನಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಪ್ರಕಟಿಸಲಾದ ‘ಅವಲೋಕನ' ಸೇರಿದಂತೆ ಹಲವಾರು ಗ್ರಂಥಗಳನ್ನು  ಎಚ್ಚೆಸ್ಕೆ ಸಂಪಾದಿಸಿದ್ದಾರೆ. ಪ್ರೊ. ಎಚ್ಚೆಸ್ಕೆ ಅವರು ವಾಣಿಜ್ಯ ಮತ್ತು ಅರ್ಥಶಾಸ್ತ್ರ ವಿಷಯದಲ್ಲಿ ಕೂಡಾ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪುಸ್ತಕಗಳನ್ನು ಹೊರ ತಂದಿದ್ದಾರೆ. ಈ ಪೈಕಿ ಕನ್ನಡದಲ್ಲಿನ ಅವರ  ‘ನಮ್ಮ ಅಭಿವೃದ್ಧಿ ಯೋಜನೆ' ಕೃತಿಗೆ ರಾಜ್ಯ ಸರಕಾರದ ಪ್ರಶಸ್ತಿ ಲಭಿಸಿದೆ.

ವ್ಯವಹಾರಿಕ ಕನ್ನಡ, ವಾಣಿಜ್ಯ ಶಾಸ್ತ್ರ ಪರಿಚಯ (ಎರಡು ಸಂಪುಟಗಳಲ್ಲಿ), ಬ್ಯುಸಿನೆಸ್ ಇಂಗ್ಲಿಷ್ ಮತ್ತು ಆಡಳಿತ ಕನ್ನಡ, ಭಾರತದ ಭಾಷಾ ಸಮಸ್ಯೆ, ಬ್ಯಾಂಕಿನಲ್ಲಿ ಭಾಷೆ, ಬ್ಯಾಂಕು, ಪ್ರಜಾಪ್ರಭುತ್ವ, ಹಣದ ಮನೆ, ಬ್ಯಾಂಕಿಂಗ್ ಹೆಜ್ಜೆ ಗುರುತುಗಳು ಎಚ್ಚೆಸ್ಕೆ ಅವರ ಇನ್ನಿತರ ಕೃತಿಗಳು.

ಕನ್ನಡ ಸಾಹಿತ್ಯ ಲೋಕ ಎಚ್ಚೆಸ್ಕೆ ಅವರನ್ನು ಸರಿಯಾಗಿ ಪುರಸ್ಕರಿಸಿಲ್ಲ ಎಂಬ ಕೊರಗು ಅವರ ಅಭಿಮಾನಿಗಳಲ್ಲಿ ಸದಾ ಇತ್ತು.   ಆದರೆ ಎಚ್ಚೆಸ್ಕೆ ಎಂದೂ ಪ್ರಶಸ್ತಿಗಾಗಿ ಹಾತೊರೆದವರಲ್ಲ. ನಾಡು ನುಡಿಗಾಗಿ ತಮಗೆ ತಿಳಿದ ಎಲ್ಲಾ ರೀತಿಯಲ್ಲಿ ದುಡಿದ ಅವರು, ಅಮೂಲ್ಯವಾದ ಬರಹಗಳನ್ನು ನೀಡಿದವರು. ಎಚ್ಚೆಸ್ಕೆ ಅವರು ನಿಧನರಾಗುವ ಸ್ವಲ್ಪ ದಿನಗಳ ಮುಂಚೆ ಮೈಸೂರಿನ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ವತಿಯಿಂದ ಎಚ್ಚೆಸ್ಕೆ ಅವರಿಗೆ ಅಭಿನಂದನೆ ಹಾಗೂ ಅವರ ಜನ್ಮದಿನ ಆಚರಣೆ ಮಾಡಿ, ಅವರ ಸಮಗ್ರ ಪ್ರಬಂಧ ಕೃತಿ ಅನಾವರಣಗೊಳಿಸಲಾಯಿತು. ಇದು ಅವರಿಗೆ ಪ್ರಶಸ್ತಿಗಿಂತ ಹೆಚ್ಚಿನ ತೃಪ್ತಿಕೊಟ್ಟಿತು ಎಂಬುದು ಅವರ ಆಪ್ತರ ಅನಿಸಿಕೆ.

1980ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1986ರಲ್ಲಿ ಕನ್ನಡ ಪತ್ರಿಕಾ ಅಕಾಡೆಮಿ ಪ್ರಶಸ್ತಿ, 1997ರಲ್ಲಿ ಎಚ್. ಕೆ. ವೀರಣ್ಣಗೌಡ ಪ್ರಶಸ್ತಿ, 1998ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1989ರಲ್ಲಿ ವಿಶ್ವಮಾನವ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.  

ತಮ್ಮನ್ನು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಸದಾ ಗುರುತಿಸಿಕೊಂಡು ಸರಳ ಜೀವನ ನಡೆಸುತ್ತಿದ್ದ ಎಚ್ಚೆಸ್ಕೆ ಅವರನ್ನು ಅಂದು ನಡೆಯುತ್ತಿದ್ದ ಬೆಂಗಳೂರು, ಮೈಸೂರಿನ ಯಾವುದೇ ಸಾಂಸ್ಕೃತಿಕ ಸಮಾರಂಭಗಳಲ್ಲಿ ಕಾಣುವುದು ಸಾಮಾನ್ಯವಿತ್ತು.  ಸಾಂಸ್ಕೃತಿ ವಾತಾವರಣವೆಂದರೆ ಅವರಿಗೆ ಪ್ರಾಣ.  

ಎಚ್ಚೆಸ್ಕೆ 2008ರ ಆಗಸ್ಟ್ 29ರಂದು ಈ ಲೋಕವನ್ನಗಲಿದರು. ಈ ಮಹಾನುಭಾವರು ನನ್ನ ಕೈಂಕರ್ಯಕ್ಕೆ ಸದಾ ಪ್ರೇರಣೆ.

On the birthday of great columnist of our times H S Krishnaswamy Iyengar 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ