ಎನ್ಕೆ ಕುಲಕರ್ಣಿ
ಎನ್ಕೆ ಕುಲಕರ್ಣಿ
ಸಾಹಿತ್ಯವಲಯದಲ್ಲಿ ಎನ್ಕೆ ಎಂದು ಪ್ರಸಿದ್ಧರಾದವರು ಎನ್ಕೆ ಕುಲಕರ್ಣಿ. ಧಾರವಾಡದವರಿಗೆಲ್ಲ 'ನಾನೀಕಾಕ' ಎಂದೇ ಅವರು ಆಪ್ತ ನೆನಪು.
ಎನ್ಕೆ ಕುಲಕರ್ಣಿಯವರು 1913ರ ಆಗಸ್ಟ್ 29ರಂದು ಗದಗದಲ್ಲಿ ಜನಿಸಿದರು. ತಂದೆ ಕೃಷ್ಣರಾವ್ ನರಸಿಂಹ ಕುಲಕರ್ಣಿ. ತಾಯಿ ಸೋನಕ್ಕ.
ಎನ್ಕೆ ಅವರ ಪ್ರಾರಂಭಿಕ ಶಿಕ್ಷಣ ಗದಗ, ಕುಮಟಾ, ಹಳಿಯಾಳಗಳಲ್ಲಿ ನಡೆಯಿತು. ಗದಗದ ಮುನಿಸಿಪಲ್ ಹೈಸ್ಕೂಲಿನಿಂದ ಮೆಟ್ರಿಕ್ಯುಲೇಷನ್, ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ, ಎಂ.ಎ. ಮತ್ತು ಬೆಳಗಾವಿಯ ಟೀಚರ್ಸ್ ಕಾಲೇಜಿನಿಂದ ಬಿ.ಟಿ. ಪದವಿ ಪಡೆದರು. ‘ಕುಮಾರವ್ಯಾಸ ಭಾರತ'ದ ಕುರಿತು ಮಹಾಪ್ರಬಂಧ ರಚಿಸಿದ್ದರು.
ಎನ್ಕೆ ಅವರು ಮೊದಲು ಉದ್ಯೋಗಕ್ಕಾಗಿ ಸೇರಿದ್ದು ಗದಗದ ಸಮಿತಿ ಹೈಸ್ಕೂಲಿನ ಶಿಕ್ಷಕರಾಗಿ. ನಂತರ ಕೆ.ಇ. ಬೋರ್ಡ್ ಹೈಸ್ಕೂಲಿನಲ್ಲಿ ಉಪಾಧ್ಯಾಯರಾದರು. ಮುಂಬಯಿ ಆಕಾಶವಾಣಿಯಲ್ಲಿ ಶಾಲಾ ಮಕ್ಕಳ ಕಾರ್ಯಕ್ರಮದಲ್ಲಿ ಅವರ ಪ್ರಥಮ ಭಾಷಣ ಪ್ರಸಾರವಾಯಿತು. ಇದೇ ಮುಂಬೈ ಆಕಾಶವಾಣಿ ನಿಲಯದ ಉದ್ಯೋಗಕ್ಕೆ ಸಿಕ್ಕ ಪ್ರವೇಶವಾಯಿತು. ಹೀಗಾಗಿ ಕನ್ನಡ ಸ್ಟಾಫ್ ಆರ್ಟಿಸ್ಟ್ ಆಗಿ ನೇಮಕಗೊಂಡರು. ಅಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿದರು. ನಂತರ ಧಾರವಾಡ, ಬೆಂಗಳೂರು ಆಕಾಶವಾಣಿ ಕೇಂದ್ರಗಳಲ್ಲಿ ಪ್ರೋಗ್ರ್ಯಾಂ ಎಕ್ಸಿಕ್ಯುಟಿವ್ ಆಗಿ ಕಾರ್ಯನಿರ್ವಹಿಸಿದರು.
ಎನ್ಕೆ ಬರಹಗಾರರಾಗಿ ಹಲವಾರು ಹಾಸ್ಯ ಪ್ರಹಸನ, ಕಾದಂಬರಿ, ನಗೆ ಸಂಕಲನಗಳನ್ನು ಪ್ರಕಟಿಸಿದರು. ನಡುಮನೆಯಲ್ಲಿ ಬೆಳ್ಳಿಹಬ್ಬ, ಅಧಃಪಾತ, ಸುಧಾರಿಸಿದ ಕಳ್ಳ, ಮುಂತಾದ 20ಕ್ಕೂ ಹೆಚ್ಚು ಏಕಾಂಕ, ರೇಡಿಯೋ, ದೊಡ್ಡ ನಾಟಕಗಳು; ಮುಂಗಾಲ್ ಪುಟಿಗೆ, ತ್ರಿಶೂಲಿಗಳು, ಪತಿಯಲ್ಲ ಪರಮವೈರಿ ಮುಂತಾದ ಹರಟೆಗಳು, ಬದುಕು ಕುತೂಹಲದ ಒಂದು ಸರಕು, ಎನ್ಕೆ ಬರಹಗಳು, ಮೋಡಕಾ ಬಜಾರ್, ಇದು ಬೆಂಗಳೂರು, ಎನ್ಕೆ ಲಲಿತ ಪ್ರಬಂಧಗಳು, ಎನ್ಕೇನ ಪ್ರಕಾರೇಣ ಮುಂತಾದ ಪ್ರಬಂಧಗಳು; ಗಾಳಿಗೀತ ಎಂಬ ಕಾವ್ಯ ಮುಂತಾದ ವೈವಿಧ್ಯ ಬರಹಗಳನ್ನು ಎನ್ಕೆ ನೀಡಿದ್ದಾರೆ.
ಎನ್ಕೆ ಅವರ ಕಾದಂಬರಿಗಳೆಂದರೆ ಸಾವಿನ ಉಡಿಯಲ್ಲಿ, ಎರಡನೆಯ ಸಂಬಂಧ, ವೈನಿ, ಕಲೋಪಜೀವಿ, ಗೌರಿಶಂಕರ, ಮೂರು ತಲೆಮಾರು, ಲಲಿತಾ, ವಿಧುರ ವೈರಾಗ್ಯ ಮುಂತಾದುವು.
ಎನ್ಕೆ ಅವರು ದತ್ತು ಮಾಸ್ತರ, ಸೋನಕ್ಕ, ವಾಮನರಾವ ಮಾಸ್ತರ, ಗರೂಡ ಸದಾಶಿವರಾಯರು, ಬಂಕಿಮ ಚಂದ್ರರು, ಸಾವಿರದ ವರಕವಿ ಬೇಂದ್ರೆ, ಗಂಗೂಬಾಯಿ ಹಾನಗಲ್ ಕುರಿತ 'ನನ್ನ ಬದುಕಿನ ಹಾಡು', ಶ್ರೀರಂಗ, ವಿ. ಕೃ. ಗೋಕಾಕ್ ಮುಂತಾದ ಅನೇಕ ವ್ಯಕ್ತಿಚಿತ್ರಣಗಳನ್ನೂ ಬರೆದಿದ್ದಾರೆ. ಇದಲ್ಲದೆ ವಿಮರ್ಶೆ, ಇತರ, ಅಪ್ರಕಟಿತ ಕೃತಿ ಸೇರಿ ಸುಮಾರು ನೂರರ ಸಂಖ್ಯೆಯ ಕೃತಿಗಳಿವೆ. ಎನ್ಕೆ ಅವರು ಚಲನಚಿತ್ರಗಳಿಗೂ ಸಂಭಾಷಣೆ, ಚಿತ್ರಕಥೆ ರಚನೆ ಮಾಡಿದ್ದರು.
ಎನ್ಕೆ ಕುಲಕರ್ಣಿ ಅವರಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ಕೇಂದ್ರ ಸರಕಾರದ ಬಹುಮಾನ, ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಪ್ರಶಸ್ತಿ, ಪ್ರೊ.ಸ.ಸ. ಮಾಳವಾಡ ಪ್ರಶಸ್ತಿ, ಮೂರು ಸಾವಿರ ಮಠ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗೊರೂರು ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ಅನೆಕ ಗೌರವಗಳು ಸಂದಿದ್ದವು. ಅವರ ಹಿತೈಷಿಗಳು ಅರ್ಪಿಸಿದ ಗೌರವ ಗ್ರಂಥ ‘ನಾನೀ'.
ಎನ್ಕೆ ಕುಲಕರ್ಣಿ ಅವರು 2005ರ ಏಪ್ರಿಲ್ 23ರಂದು ಈ ಲೋಕವನ್ನಗಲಿದರು.
On the birth anniversary great scholar, writer and AIR executive N. K. Kulkarni
ಅಬ್ದುತ
ಪ್ರತ್ಯುತ್ತರಅಳಿಸಿ