ಸದಾಶಿವ ಒಡೆಯರ್
ಸದಾಶಿವ ಒಡೆಯರ್
ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ ಮಹನೀಯರಲ್ಲಿ ಸದಾಶಿವ ಒಡೆಯರ್ ಪ್ರಮುಖರು.
ಸದಾಶಿವ ಒಡೆಯರ್ ಧಾರವಾಡದ ಮರೇವಾಡ ಗ್ರಾಮದಲ್ಲಿ 1924ರ ಆಗಸ್ಟ್ 7ರಂದು ಜನಿಸಿದರು. ತಂದೆ ಶಿವದೇವ ಒಡೆಯರ್, ತಾಯಿ ಗಿರಿಜಾದೇವಿ. ಸದಾಶಿವರ ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ ನಡೆಯಿತು. ಆಟದಲ್ಲಿ ಸದಾ ಮುಂದಿದ್ದ ಅವರಿಗೆ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಪ್ರಿಯವಾದ ಆಟಗಳಾಗಿದ್ದವು. ಅವರು ಧಾರವಾಡದಲ್ಲಿ 1945ರಲ್ಲಿ ಬಿ.ಎ. (ಆನರ್ಸ್) ಪದವಿ, 1947ರಲ್ಲಿ ಬೆಳಗಾವಿಯ ಲಾ ಕಾಲೇಜಿನಿಂದ ಎಲ್.ಎಲ್.ಬಿ. ಪದವಿ, 1948ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಮುಂತಾದ ವಿದ್ಯಾಸಾಧನೆಗಳನ್ನು ಮಾಡಿದರು.
ಅಹಮದಾಬಾದಿನ ಗುಜರಾತ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಎರಡು ವರ್ಷ ಸೇವೆ ಸಲ್ಲಿಸಿದ ಸದಾಶಿವ ಒಡೆಯರ್, 1949ರಲ್ಲಿ ಸ್ಥಾಪನೆಗೊಂಡ ಕರ್ನಾಟಕ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ರಿಜಿಸ್ಟ್ರಾರ್ ಆಗಿ ನೇಮಕಗೊಂಡರು. 1951ರಲ್ಲಿ ಸಹಾಯಕ ಕುಲಸಚಿವರಾಗಿ, 1957ರಲ್ಲಿ ಕುಲಸಚಿವರಾಗಿ, 1967-68ರಲ್ಲಿ ಉಪಕುಲಪತಿಗಳಾಗಿ ಕಾರ‍್ಯನಿರ್ವಹಿಸಿದರು.
ಸದಾಶಿವ ಒಡೆಯರ್ ಅಮೆರಿಕಾ, ಇಂಗ್ಲೆಂಡ್ ಫ್ರಾನ್ಸ್, ಜರ್ಮನಿ, ಇಟಲಿ, ಸ್ವಿಡ್ಜರ್‌ಲ್ಯಾಂಡ್, ಈಜಿಪ್ಟ್ ದೇಶಗಳಿಗೆ ವಿವಿಧ ಸಂದರ್ಭಗಳಲ್ಲಿ ಆಹ್ವಾನಿತರಾಗಿ ಅಲ್ಲಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಾತಾವರಣಗಳನ್ನು ಅವಲೋಕಿಸಿದರು. ಅಲ್ಲಿನ ಆಡಳಿತ ಪದ್ಧತಿ ಮತ್ತು ವಿಧಾನಗಳ ಉತ್ತಮ ಅಂಶಗಳನ್ನು ತಮ್ಮ ಆಡಳಿತ ಕ್ಷೇತ್ರದಲ್ಲೂ ತಂದು, ವಿಶ್ವವಿದ್ಯಾಲಯದ ಉನ್ನತಿಗೆ ನಿರಂತರ ಶ್ರಮವಹಿಸಿದರು.
ಸದಾಶಿವ ಒಡೆಯರ್ ಅವರ ಬರಹಗಳಲ್ಲಿ ‘ಜೀವನ ಕಲೆ’ ಪ್ರಬಂಧ ಸಂಕಲನ, ರವೀಂದ್ರ ದರ್ಶನ, ಇದು ಜೀವನ ಮುಂತಾದವು ಚಿಂತನಶೀಲ ಕೃತಿಗಳು. ಜೋನ್ ಆಫ್ ಆರ್ಕ್ ಮತ್ತು ಇತರ ನಾಟಕಗಳು ಅವರ ನಾಟಕಗಳ ಸಂಗ್ರಹ. ಇಂಗ್ಲಿಷ್‌ನಲ್ಲಿ The Light of other days, Trailing cloud ಕೃತಿಗಳನ್ನು ರಚಿಸಿದರು. Basveshwara Commemoration volume ಅವರ ಸಂಪಾದಿತ ಕೃತಿ.
ಸದಾಶಿವ ಒಡೆಯರ್ ಅವರ ರವೀಂದ್ರ ದರ್ಶನ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತ್ತು. ಅವರ ಐವತ್ತನೇ ಹುಟ್ಟುಹಬ್ಬಕ್ಕೆ ಹಿತೈಷಿಗಳು ಅರ್ಪಿಸಿದ ಗೌರವಗ್ರಂಥ ‘ಸವಿಸಂಚಯ'.
ಸದಾಶಿವ ಒಡೆಯರ್ 1996ರ ಸೆಪ್ಟಂಬರ್ 11ರಂದು ಈ ಲೋಕವನ್ನಗಲಿದರು.
On the birth anniversary of educationist and writer Sadhashiva Wodeyar
ಕಾಮೆಂಟ್‌ಗಳು