ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹಿಂದೀ ದಿವಸ


‘ಹಿಂದೀ ದಿವಸ’ದಂತೆ ‘ಕನ್ನಡ ದಿವಸ’ಕ್ಕೂ  ಗೌರವವಿರಲಿ
Respect regional languages as well

ಇಂದು ಹಿಂದೀ  ದಿವಸ.  ನನಗೆ  ಒಂದಿಷ್ಟು  ಅರ್ಥವಾಗುವ  ಭಾಷೆ  ಕನ್ನಡವೊಂದೇ  ಎಂಬ  ಕುರಿತು  ‘ಕನ್ನಡ’ದ  ಪ್ರೀತಿ  ಹೆಚ್ಚಾದರೂ  ನನಗೆ  ಎಲ್ಲಾ  ಭಾಷೆಗಳ  ಬಗ್ಗೆ  ತುಂಬು ಗೌರವವಿದೆ.  ಮನುಷ್ಯ ಮನುಷ್ಯರ  ನಡುವಿನ  ಸಂವಹನಕ್ಕೆ  ಭಾಷೆ ಬೇರೆ  ಬೇರೆಯಾಗಿದ್ದರೂ  ಅದರ  ಹಿಂದಿರುವ  ಭಾವನಾತ್ಮಕ  ಮತ್ತು  ಆಧ್ಯಾತ್ಮಿಕ  ಏಕತೆ  ಒಂದೇ ಒಂದು.  ಹಾಗಾಗಿ  ನಮ್ಮ  ದೇಶದಲ್ಲಿ  ಹೆಚ್ಚು ಜನ  ಮಾತನಾಡುವ  ‘ಹಿಂದಿ’ ಭಾಷೆಯ ಕುರಿತು  ನನಗೆ  ತುಂಬು  ಗೌರವದ ಜೊತೆಗೆ  ನನ್ನ  ‘ಹಿಂದಿ’ ಭಾಷೆಯಲ್ಲಿನ  ಜ್ಞಾನ  ಇನ್ನೊಂದಿಷ್ಟು  ಚೆನ್ನಾಗಿರಬೇಕಿತ್ತು ಎಂಬ ಕೊರೆ ಸಹಾ ನಿರಂತರವಾಗಿ  ನನ್ನ  ಜೊತೆ ಇದೆ.   ಆದರೆ  ನಮ್ಮ  ಸರ್ಕಾರಿ ಮತ್ತು  ಸಾರ್ವಜನಿಕ ಸಂಸ್ಥೆಗಳಲ್ಲಿ  ‘ಹಿಂದೀ ದಿವಸ್’ ಎಂದು  ಸರ್ಕಾರ  ಮತ್ತು  ಸಂಸ್ಥೆಗಳ  ಖರ್ಚಿನಲ್ಲಿ  ಅಧಿಕೃತವಾಗಿ  ಕೆಲಸದ  ಸಮಯದಲ್ಲಿ ಮನರಂಜನಾತ್ಮಕ  ಕಾರ್ಯಗಳನ್ನು  ಪ್ರೋತ್ಸಾಹಿಸುವ  ಅಧಿಕಾರ ವರ್ಗ ‘ಕನ್ನಡ’ವೆಂದರೆ  ಕೆಂಡಾಮಂಡಲ ಪ್ರವೃತ್ತಿ  ತೋರುವುದು  ರೋಷ ಉಕ್ಕಿಸುತ್ತದೆ.  

ನಾನು  ಎಚ್ ಎಮ್ ಟಿ  ಸಂಸ್ಥೆಯಲ್ಲಿದ್ದಾಗ 1994ರ ವರ್ಷದಲ್ಲಿ  ಒಂದು 20-30 ಜನರ  ಕನ್ನಡದ  ಕಾರ್ಯಾಗಾರ ಮಾಡುವುದಕ್ಕೆ   ಸಭಾಂಗಣ  ಕೊಡಿ  ಎಂದಾಗ  ಅಲ್ಲಿನ  ಅಂದಿನ  ಆಡಳಿತ  ವರ್ಗ  ನಿರಾಕರಿಸಿತಲ್ಲದೆ,  ಆನಂತರದ  ಕೆಲವೇ ದಿನಗಳಲ್ಲಿ ಭರ್ಜರಿಯಾಗಿ ಮೂರು ನಾಲ್ಕು ದಿನಗಳ   ಹಿಂದೀ ದಿವಸ ಉತ್ಸವ  ನಡೆಸುವ  ನಿಟ್ಟಿನಲ್ಲಿ   ಉದ್ಯೋಗಿಗಳಿಗಾಗಿ  ಹಿಂದೀ ಚಲನಚಿತ್ರಗೀತೆ  ಅಂತ್ಯಾಕ್ಷರಿ ಗಾಯನ ಸ್ಪರ್ಧೆಯನ್ನೂ  ಒಳಗೊಂಡಂತೆ  ಹಲವು  ಕಾರ್ಯಕ್ರಮಗಳನ್ನು  ಪ್ರಕಟಿಸಿತು.  ಅಂದು  ನಮ್ಮ  ಎಚ್  ಎಮ್ ಟಿ ಯಲ್ಲಿ  ‘ಕನ್ನಡ  ಸಂಪದ’  ಮತ್ತು ‘ಕಾರ್ಮಿಕ ಸಂಘ’  ಇವೆರಡರಲ್ಲಿಯೂ  ಕಾರ್ಯದರ್ಶಿಯಾಗಿದ್ದ  ನಾನು  ಈ  ಕುರಿತು ಏಕೈಕಿಯಾಗಿ ಸಿಡಿದೆದ್ದು  ಹಿಂದೀ  ದಿವಸ್  ಕಾರ್ಯಕ್ರಮಕ್ಕೆ  ತಡೆ ಒಡ್ಡಿದ್ದೆ.  ಅಂದಿನ  ದಿನದಲ್ಲಿ  ಅದು  ನನ್ನ   ಹೊಟ್ಟೆಯ ಪಾಡಿನ  ಹುದ್ದೆಯನ್ನೇ  ಕಳೆದುಕೊಳ್ಳುವಂತಹ  ಸಾಧ್ಯತೆ ಇದ್ದರೂ  ಲೆಕ್ಕಿಸದೆ ಅದೆಂತದ್ದೋ  ಧೈರ್ಯದಲ್ಲಿ  ಮುನ್ನುಗ್ಗಿದ್ದ  ನನಗೆ,      ಅಚ್ಚರಿ ಎಂಬಂತೆ  ಎಲ್ಲೆಡೆ  ಇದ್ದ  ಸಾತ್ವಿಕ  ಬೆಂಬಲದ  ಕಾರಣ  ಏನೂ  ತೊಂದರೆ  ಆಗದೆ ‘ಹಿಂದೀ ದಿವಸ್’ ಆಚರಣೆ  ಆ  ವರ್ಷ  ನಡೆಯಲಿಲ್ಲ.      ‘ಹಿಂದೀ  ದಿವಸ’  ಆಚರಣೆಯಂತೆ  ನಮ್ಮ  ರಾಜ್ಯದಲ್ಲಿನ ಸಂಸ್ಥೆಗಳಲ್ಲಿ   ‘ಕನ್ನಡ  ಭಾಷೆ’ಯ ಆಚರಣೆಯೂ,  ಕೇವಲ  ಕನ್ನಡ  ಸಂಘಗಳು  ಮಾಡುವ  ಆಚರಣೆ  ಆಗದೆ  ಪ್ರತಿಯೊಂದು  ಸಂಸ್ಥೆಗಳು, ಕಚೇರಿಗಳಲ್ಲಿ   ಆಚರಿಸುವ ಆಪ್ತ  ಸಂಭ್ರಮವಾಗಬೇಕು  ಎಂಬುದು  ನನ್ನ  ಹೃದಯಪೂರ್ವಕ  ಅನಿಸಿಕೆ.

 

 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ