ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಿಷ್ಕಿಂಧಾಕಾಂಡ



ಶ್ರೀರಾಮಾಯಣ: ಕಿಷ್ಕಿಂಧಾಕಾಂಡ
(ನಮ್ಮ ತಂದೆ ಪಂಡಿತ ತಿರು ಶ್ರೀನಿವಾಸಾಚಾರ್ಯ ಅವರು ರಚಿಸಿದ 'ಸಂಗ್ರಹ ರಾಮಾಯಣ' ಕೃತಿಯಿಂದ)

ಕಿಷ್ಕಿಂಧಾರಾಜ್ಯಕ್ಕೆ ಮಹಾಬಲಶಾಲಿಯಾದ ವಾಲಿಯೆಂಬ ಕಪಿಯು ರಾಜನಾಗಿದ್ದನು. ವಾಲಿಯ ತಮ್ಮನೇ ಸುಗ್ರೀವನು. ಎಮ್ಮೆಯಾಕಾರದ ದುಂದುಭಿಯೆಂಬ ರಾಕ್ಷಸನನ್ನು ವಾಲಿಯು ಗರಗರನೆ ತಿರುಗಿಸಿ ಋಷ್ಯಮೂಕದಲ್ಲಿನ ಮತಂಗ ಋಷ್ಯಾಶ್ರಮದ ಕಡೆ ಎಸೆದುದ್ದರಿಂದ, ಆ ಋಷಿ ಕೊಟ್ಟ ಶಾಪದಿಂದ ವಾಲಿಗೆ ಅಲ್ಲಿಗೆ ಹೋಗಲಾಗುತ್ತಿರಲಿಲ್ಲ. ಹೀನ ದುಂದುಭಿಯು ಸತ್ತ ಕೆಲವು ಕಾಲಾನಂತರ ಅವನ ಮಗ ಮಾಯಾವಿಯೆಂಬ ರಾಕ್ಷಸನು ಸೇಡಿನಿಂದ ವಾಲಿಯನ್ನು ಯುದ್ಧಕ್ಕೆ ಕರೆದನು. ರಾವಣಾದಿ ರಕ್ಕಸರ ಸೊಕ್ಕನ್ನು ಮುರಿದಿದ್ದ ವಾಲಿಯು ಕೊಟ್ಟ ಪೆಟ್ಟನ್ನು ತಡೆಯಲಾರದೆ ಆ ಮಾಯಾವಿಯು ಒಂದು ಗುಹೆಯನ್ನ ಹೊಕ್ಕನು. ವಾಲಿಯು ಸುಗ್ರೀವನನ್ನು ಗುಹೆಯ ಬಳಿ ಕಾವಲಿಟ್ಟು, ತಾನು ಮಾಯವಿಯನ್ನು ಹಿಂಬಾಲಿಸಿ, ಮುಷ್ಠಿಯುದ್ಧ ಮಾಡತೊಡಗಿದನು. ಅವರಿಬ್ಬರಿಗೂ ಘೋರ ಯುದ್ಧವಾಯಿತು.

ಒಂದು ವರ್ಷ ಕಾಲವಾದರೂ ಗುಹೆಯಿಂದ ವಾಲಿಯು ಬಾರದಿದ್ದುದನ್ನು ಕಂಡು ಸುಗ್ರೀವನು ತನ್ನಣ್ಣನು ಸತ್ತಿರಬಹುದೆಂದು ಊಹಿಸಿ ಕಿಷ್ಕಿಂಧೆಗೆ ಬರಲು, ಅಲ್ಲಿಯ ಜನ ಸುಗ್ರೀವನನ್ನೇ ರಾಜನನ್ನಾಗಿ ಮಾಡಿದರು. ಸ್ವಲ್ಪಕಾಲದ ಮೇಲೆ ವಾಲಿಯು ಹಿಂತಿರುಗಿ ಬರಲು ಸುಗ್ರೀವನ ಸಮಾಧಾನ ಕೇಳದೆ ತಮ್ಮನನ್ನು ಕಿಷ್ಕಿಂಧೆಯಿಂದ ಹೊಡೆದೋಡಿಸುದದಲ್ಲದೆ, ಅವನ ಪತ್ನಿಯನ್ನು ತನ್ನ ಅಂತಃಪುರಕ್ಕೆ ಸೇರಿಸಿಕೊಂಡನು. ಆದಕಾರಣ ಸುಗ್ರೀವನು ಕಪಿಸೈನ್ಯದೊಡನೆ ಋಷ್ಯಮೂಕದಲ್ಲಿ ವಾಸಿಸುತ್ತಿದ್ದನು.

ಇತ್ತ ರಾಮಲಕ್ಷ್ಮಣರು ಧನುರ್ಧಾರಿಗಳಾಗಿ ಅತ್ತಕಡೆ ಬರುತ್ತಿರುವುದನ್ನು ದೂರದಿಂದಲೇ ಕಂಡ ಸುಗ್ರೀವನು ಅಂಜನೇಯನನ್ನು ಕರೆದು ಅವರ ವಿಷಯವನ್ನು ತಿಳಿದುಬರುವಂತೆ ಹೇಳಿಕಳುಹಿಸಿದನು. ಆಗ ಮಾರುತಿಯು ಸನ್ಯಾಸಿ ವೇಷದಲ್ಲಿ ಅವರ ಮುಂದೆ ಹೋಗಿ ಕುಶಲಪ್ರಶ್ನೆ ಮಾಡಿದನು. ರಾಮಲಕ್ಷ್ಮಣರ ವೃತ್ತಾಂತವನ್ನು ಕೇಳಿದ ತಕ್ಷಣ ಸಂತಸಗೊಂಡ ಹನುಮಂತನು ತನ್ನ ನಿಜಸ್ವರೂಪವನ್ನು ಧರಿಸಿ ಅವರನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಬಂದು ಸುಗ್ರೀವನ ಬಳಿ ಬಿಟ್ಟನು. ರಾಮನು ತನ್ನ ಪತ್ನಿಯಾದ ಸೀತೆಯನ್ನು ಹುಡುಕಿಕೊಂಡು ಅಲ್ಲಿಗೆ ಬಂದಿರುವುದಾಗಿ ಸುಗ್ರೀವನಿಗೆ ತಿಳಿಸಿ, ಈ ವಿಷಯದಲ್ಲಿ ಸುಗ್ರೀವನ ಸಹಾಯವನ್ನು ಕೇಳಿದನು. ಆಗ ಸುಗ್ರೀವನು ರಾಮನಿಗೆ ಸ್ವಲ್ಪದಿನಗಳ ಹಿಂದೆ ಕಪಿಗಳು ತನ್ನ ಕೈಗೆ ಕೊಟ್ಟಿದ್ದ ಆಭರಣಗಳ ಗಂಟನ್ನು ತೋರಿಸಿದನು. ಅದು ಸೀತೆಯದೆಂದು ಗುರುತಿಸಿದ ರಾಮನಿಗೆ ಪ್ರಿಯಪತ್ನಿಯ ನೆನಪಾಗಿ ದುಃಖ ಇಮ್ಮಡಿಸಿತು. ಆಗ ಸುಗ್ರೀವನು ರಾಮನನ್ನು ಸಮಾಧಾನಪಡಿಸಿ ತನಗೆ ವಾಲಿಯಿಂದಾದ ನೋವನ್ನು ಆತನಲ್ಲಿ ತೋಡಿಕೊಂಡನು.

ಹೀಗೆ ರಾಮಸುಗ್ರೀವರು ತಮ್ಮ ತಮ್ಮ ನಿಜಸಂಗತಿಗಳನ್ನು ಹೇಳಿಕೊಂಡು ಪರಸ್ಪರ ಸಹಾಯಮಾಡಲೊಪ್ಪಿ ಅಗ್ನಿಸಾಕ್ಷಿಯಾಗಿ ಸ್ನೇಹಮಾಡಿಕೊಂಡರು. ರಾಮನು ಸುಗ್ರೀವನಿಗೆ ರಾಜ್ಯ ಕೊಡಿಸುವ ವಾಗ್ದಾನಮಾಡಿದನು. ಸುಗ್ರೀವನಿಗೆ ತನ್ನ ಶಕ್ತಿಸಾಮರ್ಥ್ಯಗಳ ನಿವಾರಣೆಯಾಗಲೆಂದು ರಾಮನು ತನ್ನ ಕಾಲಬೆರಳಿನಿಂದಲೇ ಸಾವಿರ ಮೈಲಿಯ ದೂರಕ್ಕೆ ದುಂದುಭಿಯ ಕಳೇಬರವನ್ನು ಚಿಮ್ಮಿದನು. ಒಂದೇ ಬಾಣದಿಂದ ಏಳು ಸಾಲುವೃಕ್ಷಗಳನ್ನು ಸವರಿ ಬಿಸುಟನು. ಅಂತಹ ಅದ್ಭುತವಾದ ರಾಘವನ ಸಾಹಸವನ್ನು ಕಂಡು ಸುಗ್ರೀವನಿಗೆ ಆನಂದವಾಯಿತು.

ರಾಮನು ಕೊಟ್ಟ ಭರವಸೆಯಂತೆ, ಸುಗ್ರೀವನು ಕಿಷ್ಕಿಂಧೆಗೆ ಹೋಗಿ, ವಾಲಿಯನ್ನು ಯುದ್ಧಕ್ಕೆ ಕರೆದನು. ವಾಲಿಸುಗ್ರೀವರಿಗೆ ಘೋರ ಕಾಳಗವಾದಾಗ, ಒಂದೇ ರೀತಿಯಲ್ಲಿದ್ದ ಅಣ್ಣತಮ್ಮಂದಿರಲ್ಲಿ ರಾಮನಿಗೆ ಸುಗ್ರೀವನ ಗುರುತು ಹಚ್ಚಲಾಗಲಿಲ್ಲ. ಕಾಳಗದಲ್ಲಿ ವಾಲಿಯ ಹೊಡೆತ ತಾಳಲಾರದೆ ಸುಗ್ರೀವನು ದಾಶರಥಿಯ ಬಳಿಗೆ ನೊಂದು, ಬಂದು, ಸೋದರನನ್ನು ಕೊಲ್ಲದ ಕಾರಣವನ್ನು ಕೇಳಿದನು. ಆಗ ರಾಮನು ತನಗಾದ ಸಂಶಯವನ್ನು ತಿಳಿಸಿ ಮತ್ತೊಮ್ಮೆ ಪುಷ್ಪಮಾಲೆಯನ್ನು ಧರಿಸಿಕೊಂಡು ಸುಗ್ರೀವನು ವಾಲಿಯೊಡನೆ ಕಾಳಗ ಹೂಡುವಂತೆ ಪ್ರೇರೇಪಿಸಿದನು.

ಮತ್ತೊಮ್ಮೆ ವಾಲಿ ಸುಗ್ರೀವರಿಗೆ ಭಯಂಕರ ಯುದ್ಧ ನಡೆಯುತ್ತಿದ್ದಾಗ ರಘುವರನು ಒಂದೇ ಬಾಣದಿಂದ ವಾಲಿಯನ್ನು ಹೊಡೆದು ನೆಲಕ್ಕುರುಳಿಸಿದನು. ನೊಂದ ವಾಲಿಯ ಬಳಿ ರಾಮನು ಹೋದಾಗ ಅವನು ಅಧರ್ಮ ರೀತಿಯಲ್ಲಿ ತನ್ನನ್ನು ಕೊಂದ ಕಾರಣ ಕೇಳಲು, ರಾಮನು, ವಾಲಿಯು ತನ್ನ ತಮ್ಮನ ಪತ್ನಿಯನ್ನಪಹರಿಸಿ ಅಧರ್ಮದಲ್ಲಿ ನಡೆದ ಕಾರಣ ತಾನೂ ಅದಕ್ಕೆ ತಕ್ಕಂತೆ ಪ್ರತೀಕಾರ ಕೈಕೊಳ್ಳಬೇಕಾಯಿತೆಂದು ಹೇಳಿ ಒಪ್ಪಿಸಲು, ವಾಲಿಯು ಪರಲೋಕವನ್ನೈದಿದನು. ಬಳಿಕ ರಾಮಭದ್ರನು ವಾಲಿಪತ್ನಿಯಾದ ತಾರೆಯನ್ನು ಸಂತೈಸಿ ಅವನ ಪುತ್ರನಾದ ಅಂಗದನಿಂದ ಅಪರಕರ್ಮಗಳನ್ನು ಮಾಡಿಸಿದನು. ಕಡೆಗೆ ಸುಗ್ರೀವನಿಗೆ ಕಿಷ್ಕಿಂಧೆಯಲ್ಲಿ ಪಟ್ಟಾಭಿಷೇಕ ನಡೆಯಿತು.

ಈ ಸಮಯದಲ್ಲಿ ರಾಮಲಕ್ಷ್ಮಣರು ನಾಲ್ಕು ತಿಂಗಳಕಾಲ ಋಷ್ಯಮೂಕದಲ್ಲಿ ನೆಲೆಸಿದ್ದರು. ಮುಂದೆ ರಾಮಾಜ್ಞೆಯಂತೆ ಸುಗ್ರೀವನು ಸೀತಾನ್ವೇಷಣೆಯ ಪ್ರಯತ್ನಕ್ಕೆ ನೆರವಾಗಲು ತನ್ನ ಅಪಾರವಾದ ಕಪಿಸೈನ್ಯದೊಡನೆ ಬಂದು ಸಿದ್ಧನಾದನು. ಇತ್ತ ಸುಗ್ರೀವಾಜ್ಞೆಯಂತೆ ಬಲಶಾಲಿಗಳಾದ ಕಪಿದೂತರು ದಿಕ್ಕುದಿಕ್ಕಿಗೂ ಸೀತೆಯನ್ನು ಹುಡುಕಿಕೊಂಡು ಹೊರಟರು. ಮಹಾಬಲಶಾಲಿಯಾದ ಆಂಜನೇಯನಿಗೆ ರಾಮನು ತನ್ನ ಮುದ್ರಿಕೆಯುಂಗುರವನ್ನು ಕೊಟ್ಟು ಅದರಿಂದ ತನ್ನ ಕಡೆಯವನೆಂಬ ನಂಬುಗೆ ಸೀತೆಗೆ ಬರುವುದೆಂದು ಹೇಳಿ ಕಳುಹಿಸಿದನು. ವಾಯುಪುತ್ರನಾದ ಮಾರುತಿಯು ಅಂಗದ ಜಾಂಬವಂತರೇ ಮೊದಲಾದ ಹಲವು ಕಪಿವೀರರೊಂದಿಗೆ ದಕ್ಷಿಣತೀರಕ್ಕೆ ಹೊರಟನು. ಅವರೆಲ್ಲರೂ ಸುಗ್ರೀವನು ಕೊಟ್ಟ ಅವಧಿಯಲ್ಲಿ ಸೀತೆಯನ್ನು ಕಾಣಲಾರದೆ ವಿಂಧ್ಯಪರ್ವತದ ಕೆಳಗಿನ ಮಹೋದಧಿ ತೀರದಲ್ಲಿ ಸಾಯಲು ಸಿದ್ಧರಾಗಿ ಕುಳಿತಿದ್ದರು. ಆ ಸಮಯಕ್ಕೆ ಸರಿಯಾಗಿ ಆಹಾರಾರ್ಥವಾಗಿ ಬಂದ ಸಂಪಾತಿಯೆಂಬ ದೊಡ್ಡ ಹದ್ದನ್ನು ಕಂಡು ಮಾರುತಿಯು ರಾಮ ಕಾರ್ಯಕ್ಕಾಗಿ ಹೋರಾಡಿದ ಜಟಾಯುವಿನ ಮಾತೆತ್ತಿದನು. ಇದನ್ನು ಕೇಳಿ ಜಟಾಯುವಿನ ಅಣ್ಣನಾದ ಸಂಗಾತಿಗೆ ದುಃಖವುಗ್ಗಡಿಸಿ ಬಂದು ತನ್ನ ಪೂರ್ವ ವೃತ್ತಾಂತವನ್ನು ಆ ರಾಮದೂತರಿಗೆ ತಿಳಿಸಿ ಅಲ್ಲಿ ಸೇರಿರುವ ಕಾರಣವನ್ನು ಕೇಳಿದನು. ಸಂಪಾತಿಯು, ಸೀತೆಯು ಅಲ್ಲಿಗೆ ನೂರು ಯೋಜನ ದೂರದಲ್ಲಿ ಇರುವ ಲಂಕಾಪುರಿಯಲ್ಲಿರುವುದಾಗಿ ತಿಳಿಸಿದನು.

ಆಗ ಜಾಂಬವಂತನು ವಜ್ರದೇಹಿಯೂ ವಾಯುಪುತ್ರನೂ ಆದ ವೀರ ಆಂಜನೇಯನೊಬ್ಬನೇ ಲಂಕೆಗೆ ಹಾರಿಹೋಗಿ ಮತ್ತೆ ಹಿಂದಿರುಗಿ ಬರಲು ಸಮರ್ಥನೆಂದು ಸ್ತೋತ್ರ ಮಾಡಲು, ರಾಮದೂತನಾದ ಮಾರುತಿಯು ರಾಮಕಾರ್ಯಕ್ಕಾಗಿ ರಾಮಧ್ಯಾನ ಮಾಡುತ್ತ, ಮಹೇಂದ್ರ ಪರ್ವತದ ಮೇಲೆ ಹತ್ತಿನಿಂತನು.

ನಾಳೆ ಮುಂದುವರೆಯುವುದು ....




 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ