ಸುದೀಪ್
ಸುದೀಪ್
ನಟ, ನಿರ್ದೇಶಕ, ನಿರ್ಮಾಪಕ, ಹಾಡುಗಾರ, ಆಟಗಾರ, ಬಿಗ್ ಬಾಸ್ ಅಂತಹ ಕಿರುತೆರೆಯ ಪ್ರದರ್ಶನಗಳ ನಿರ್ವಾಹಕ ಹೀಗೆ ವಿವಿಧ ಮುಖಗಳ ಕನ್ನಡ ನಾಡಿನ ವಿಶಿಷ್ಟ ಕಲಾವಿದರಾದ ಸುದೀಪ್ ಇಂದು ರಾಷ್ಟ್ರಮಟ್ಟದಲ್ಲಿ ತಮ್ಮ ಖ್ಯಾತಿಯನ್ನು ವ್ಯಾಪಿಸಿರುವ ಪ್ರತಿಭೆಯಾಗಿದ್ದಾರೆ. ಕನ್ನಡದಲ್ಲಿ ನನ್ನ ಆಟೋಗ್ರಾಫ್, ಹುಚ್ಚ, ನಂದಿ, ಮುಸ್ಸಂಜೆ ಮಾತು, ಸ್ಪರ್ಶ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ, ಮಾಣಿಕ್ಯ, ಕೋಟಿಗೊಬ್ಬ-2, ಮುಕುಂದ ಮುರಾರಿ ಮುಂತಾದ ಹಲವಾರು ಪ್ರಸಿದ್ಧ ಚಿತ್ರಗಳಿಗೆ ಹೆಸರಾದ ಸುದೀಪ್ ಹಿಂದೀ ಚಿತ್ರಗಳಾದ ಫೂಂಕ್, ರಾನ್, ರಕ್ತ ಚರಿತ್ರ, ದಬಂಗ್ ಹಾಗೂ ತೆಲುಗಿನ ‘ಈಗ’ ಅಲ್ಲದೆ ‘ಕೋಟಿಗೊಬ್ಬ 2’ಚಿತ್ರವೂ ಸೇರಿದಂತೆ, ಅವರ ಹಲವು ತಮಿಳು ಚಿತ್ರಗಳ ಅವತರಣಿಕೆಗಳು, ಮುಂತಾದವುಗಳಿಂದ, ಭಾರತದೆಲ್ಲೆಡೆಯಲ್ಲಿ ಬೇಡಿಕೆ ಪಡೆದಿರುವ ಹಿರಿಮೆ ಹೊಂದಿದ್ದಾರೆ.
ಮೂಲತಃ ಶಿವಮೊಗ್ಗದವರಾದ ಸುದೀಪ್ 1973ರ ಸೆಪ್ಟೆಂಬರ್ 2ರಂದು ಜನಿಸಿದರು. ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಸುದೀಪ್ ಕಾಲೇಜಿನ ದಿನಗಳಲ್ಲಿ ವಿಶ್ವವಿದ್ಯಾಲಯ ಮಟ್ಟದ ಕ್ರಿಕೆಟ್ ಆಟಗಾರ ಆಗಿದ್ದರು. ದೂರದರ್ಶನದಲ್ಲಿ ‘ಪ್ರೇಮದ ಕಾದಂಬರಿ’ ಎಂಬ ಧಾರಾವಾಹಿಯ ಮೂಲಕ ನಟನೆಗಿಳಿದ ಸುದೀಪ್ ಚಲನಚಿತ್ರರಂಗಕ್ಕೆ ಬಂದದ್ದು ‘ತಾಯವ್ವ’ ಚಿತ್ರದ ಮೂಲಕ. ಅದಕ್ಕೆ ಮುಂಚೆ ಅವರು ನಟಿಸಿದ ‘ಓ ಕುಸುಮ ಬಾಲೆ’, ‘ಬ್ರಹ್ಮ’ ಚಿತ್ರಗಳಿಗೆ ಬಿಡುಗಡೆಯ ಭಾಗ್ಯ ದಕ್ಕಲಿಲ್ಲ. ಸುದೀಪರನ್ನು ತಮ್ಮ ‘ಪ್ರತ್ಯರ್ಥ’ ಎಂಬ ಚಿತ್ರದಲ್ಲಿನ ಕಿರು ಪಾತ್ರವೊಂದಕ್ಕೆ ಬಳಸಿದ್ದ ಸುನಿಲ್ ಕುಮಾರ್ ದೇಸಾಯಿ 'ಸ್ಪರ್ಶ’ ಚಿತ್ರದಲ್ಲಿ ಅವರಿಗೆ ನಾಯಕನ ಪಾತ್ರ ನೀಡುವುದರ ಮೂಲಕ ಯಶಸ್ವೀ ಬ್ರೇಕ್ ನೀಡಿದರು.
ಮುಂದೆ 2001ರಲ್ಲಿ ಬಿಡುಗಡೆಯಾದ ‘ಹುಚ್ಚ’ ಸುದೀಪರನ್ನು ದೊಡ್ಡ ಹೀರೋ ಆಗಿಸಿ, ಅವರಿಗೆ ಬೃಹತ್ ಅಭಿಮಾನಿ ಬಳಗವನ್ನೇ ಸೃಷ್ಟಿಸಲು ಮೊದಲು ಮಾಡಿತು. ನಂತರದ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಯಾವುದೇ ಪ್ರಖ್ಯಾತ ಕಲಾವಿದರಿಗೂ ಕೂಡಾ ಹೊರತಾಗಿಲ್ಲದ ಯಶಸ್ಸು ಸೋಲುಗಳ ಹಲವಾರು ಮಿಶ್ರತೆಗಳನ್ನು ಜೊತೆ ಜೊತೆಗೆ ಕೊಂಡೊಯ್ಯುತ್ತಿರುವ ಸುದೀಪ್, ಮೇಲ್ಕಂಡ ಹಲವಾರು ಯಶಸ್ವೀ ಚಿತ್ರಗಳ ಮೂಲಕ ತಮ್ಮ ಚಿತ್ರರಂಗದಲಿನ ಖ್ಯಾತಿಯ ಪಯಣವನ್ನು ದಿನೇ ದಿನೇ ಪ್ರವರ್ಧಮಾನಕ್ಕೆ ಕೊಂಡೊಯ್ಯುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇತರ ಭಾಷಾ ರಂಗದ ಪ್ರಖ್ಯಾತರಾದ ರಾಮ್ ಗೋಪಾಲ್ ವರ್ಮ, ರಾಮುಲು, ರಾಜಮೌಳಿ ಅಂತಹ ಪ್ರಖ್ಯಾತ ನಿರ್ದೇಶಕರಿಂದಲೂ ಆಹ್ವಾನಗಳನ್ನು ಪಡೆದು, ಆ ಆಹ್ವಾನಗಳಲ್ಲಿ ಪ್ರೇಕ್ಷಕರು ಮತ್ತು ವಿಮರ್ಶಕರು ಮೆಚ್ಚುವ ಸಾಧನೆಯನ್ನೂ ಸುದೀಪ್ ಮಾಡಿದ್ದಾರೆ. ಜೊತೆಗೆ ಅವರು ನಿರ್ದೇಶಿಸಿದ ‘ನನ್ನ ಆಟೋಗ್ರಾಫ್’, ‘ಮಾಣಿಕ್ಯ’ ಚಿತ್ರಗಳು ಅಪಾರ ಯಶಸ್ಸು ಕಂಡಿವೆ. ಈ ಚಿತ್ರಗಳೇ ಅಲ್ಲದೆ ಅವರು 73 ಶಾಂತಿ ನಿವಾಸ, ಜಸ್ಟ್ ಮಾತ್ ಮಾತಲ್ಲಿ, ವೀರ ಮದಕರಿ, ಕೆಂಪೇಗೌಡ ಮುಂತಾದ ಚಿತ್ರಗಳನ್ನೂ ಸಹಾ ನಿರ್ದೇಶಿಸಿದ್ದಾರೆ. ಹಲವಾರು ಗೀತೆಗಳಿಗೆ ಧ್ವನಿಯೂ ಆಗಿದ್ದಾರೆ.
ಹುಚ್ಚ, ನಂದಿ, ಸ್ವಾತಿ ಮುತ್ತು, ವೀರ ಮದಕರಿ, ವಿಷ್ಣುವರ್ಧನ ಮುಂತಾದ ಚಿತ್ರಗಳಿಗೆ ಸುದೀಪ್ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಚಲನಚಿತ್ರದಲ್ಲಷ್ಟೇ ಅಲ್ಲದೆ ಸುದೀಪ್ ಕನ್ನಡ ವಾಹಿನಿಯೊಂದಕ್ಕಾಗಿ ‘ಬಿಗ್ ಬಾಸ್’ ಎಂಬ ಇಂಗ್ಲಿಷ್ ಹೆಸರಿನ ಕಿರುತೆರೆಯ ಕಾರ್ಯನಿರ್ವಹಣೆಯಿಂದ ಕಿರುತೆರೆ ಪ್ರೇಮಿಗಳ ಮನೆಮಾತೂ ಆಗಿದ್ದಾರೆ. ಹಲವಾರು ಪ್ರಸಿದ್ಧ ಸಂಸ್ಥೆಗಳ ಜಾಹೀರಾತಿನಲ್ಲೂ ಸುದೀಪ್ ರೂಪದರ್ಶಿಯಾಗಿ ಮೂಡುತ್ತಾ ಬಂದಿದ್ದಾರೆ.
ಸುದೀಪ್ ಸರಳತೆಯೂ ಜನಪ್ರಿಯ. ತಮಗಾಗಿ ಡಾಕ್ಟರೇಟ್ ಕೊಡಲು ಬಂದ ವಿಶ್ವವಿದ್ಯಾಲಯ ಒಂದಕ್ಕೆ, "ನನಗಿಂತ ಸಾಧನೆ ಮಾಡಿದ ಅನೇಕ ಮಹನೀಯರಿದ್ದಾರೆ, ಅವರಿಗೆ ಕೊಡಿ" ಎಂದ ಹಿರಿಯತನ ಇವರದ್ದು.
ಎರಡು ದಶಕಗಳನ್ನು ಮೀರಿದ ಚಿತ್ರಜೀವನವನ್ನು ತಮ್ಮ ವೈವಿಧ್ಯಮಯ ಸಾಧನೆಗಳಿಂದ ಕ್ರಮಿಸಿರುವ ಸುದೀಪ್ ಅವರ ಚಿತ್ರ ಜೀವನ, ಮುಂದೆ ಕೂಡಾ ಸೃಜನಶೀಲತೆ, ಯಶಸ್ಸು, ಸಾಧನೆಗಳಿಂದ ಹೆಚ್ಚು ಹೆಚ್ಚು ಬೆಳಗುತ್ತಿರಲಿ ಎಂದು ಆಶಿಸುತ್ತಾ, ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಹೇಳೋಣ.
On the birthday of our popular actor Sudeep, Sudheep
ಕಾಮೆಂಟ್‌ಗಳು