ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮುಂಡಾಜೆ ರಂಗನಾಥಭಟ್ಟ


 ಮುಂಡಾಜೆ ರಂಗನಾಥಭಟ್ಟರು


ಮುಂಡಾಜೆ ರಂಗನಾಥಭಟ್ಟರು ಕರ್ನಾಟಕ ರಂಗಭೂಮಿಯ ಭೀಷ್ಮರೆನಿಸಿದ್ದವರು.

ರಂಗನಾಥಭಟ್ಟರು 1886ರ ಆಗಸ್ಟ್ 18ರಂದು ದಕ್ಷಿಣಕನ್ನಡ ಜಿಲ್ಲೆಯ ಮುಂಡಾಜೆ ಗ್ರಾಮದಲ್ಲಿ ಜನಿಸಿದರು. ತಂದೆ ನಾರಾಯಣಭಟ್ಟರು, ತಾಯಿ ಲಕ್ಷ್ಮೀದೇವಿ. ಹೈಸ್ಕೂಲು ಓದುತ್ತಿದ್ದಾಗಲೇ ರಂಗನಾಥಭಟ್ಟರಿಗೆ ನಾಟಕದ ಹುಚ್ಚು ಹತ್ತಿತು. ಪಿಟೀಲು ವಿದ್ವಾಂಸ ಶಿವಪ್ಪ ಶ್ಯಾನುಭೋಗರ ನೆರವಿನಿಂದ ‘ಕರ್ನಾಟಕ ಮಿತ್ರಮಂಡಲಿ’ ಯಲ್ಲಿ ದೊರೆತ ಚಿಕ್ಕಪಾತ್ರದಿಂದ ಕ್ರಮೇಣ ದೇವೇಂದ್ರನ ಪಾತ್ರದವರೆಗೆ ಬಡ್ತಿ ದೊರೆಯಿತು. 

ಮುಂಡಾಜೆ ರಂಗನಾಥಭಟ್ಟರು ಸ್ವತಃ ಅಭ್ಯಾಸದಿಂದ ಸಂಗೀತ ಮತ್ತು ನಟನೆ ಕಲಿತರು. ಕರ್ನಾಟಕ ಮಿತ್ರಮಂಡಲಿಯ ತೀರ್ಥಹಳ್ಳಿ ಕ್ಯಾಂಪಿನಲ್ಲಿ ವಹಿಸಿದ ಸತ್ಯ ಹರಿಶ್ಚಂದ್ರನ ಪಾತ್ರಕ್ಕೆ ಪ್ರೇಕ್ಷಕರಿಂದ ಅಪಾರ  ಪ್ರಶಂಸೆ ಸಂದಿತು. ಮುಂದೆ ಧರ್ಮಸ್ಥಳದ ಚಂದ್ರಯ್ಯ ಹೆಗಡೆಯವರ ಅಪೇಕ್ಷೆಯ ಮೇರೆಗೆ ಶೂರಸೇನ, ಸತ್ಯವಿಜಯ, ಧ್ರುವ, ಬಕಾವಲಿ, ದ್ರೌಪದಿ ವಸ್ತ್ರಾಪಹರಣ ಮುಂತಾದ ನಾಟಕಗಳ ನಿರ್ದೇಶನ ಮಾಡಿದರು. ಗೆಳೆಯರು ಸ್ಥಾಪಿಸಿದ್ದ ಚಿತ್ರಕಲಾ ಥಿಯೇಟರಿನಲ್ಲಿ ಪ್ರಮುಖ ನಟರಾದರು. 

ಮುಂಡಾಜೆ ರಂಗನಾಥಭಟ್ಟರಿಗೆ ಸಿನಿಮಾ ನಟಿ ಪಂಡರಿಬಾಯಿಯವರ ತಂದೆ ರಂಗರಾಯರ ಸ್ನೇಹವಿತ್ತು. 1916ರಲ್ಲಿ ಸ್ವತಂತ್ರ ನಾಟಕ ಕಂಪನಿ “ಅಂಬಾ ಪ್ರಸಾದಿತ ನಾಟಕ ಕಂಪನಿ” ಪ್ರಾರಂಭ ಮಾಡಿದರು. ಶಿವರಾಮ ಕಾರಂತರ ಮೊದಲ ನಾಟಕ ಮತ್ತು ಪಿ. ಕಾಳಿಂಗರಾಯರು ಧ್ರುವನ ಪಾತ್ರವಹಿಸಿದ್ದು ಭಟ್ಟರ ಈ ಕಂಪನಿಯಲ್ಲೇ. 

ಮುಂಡಾಜೆ ರಂಗನಾಥಭಟ್ಟರು ಒಥೆಲೊ ನಾಟಕದ ಶೂರಸೇನ , ಕೀಚಕ, ಕೌರವ, ಭೀಮ, ದುಶ್ಯಾಸನ, ಕಂಸ, ಹಿರಣ್ಯಕಶಿಪು, ಪೃಥ್ವಿರಾಜ ಪಾತ್ರಗಳಲ್ಲಿ ದುಃಖ, ಕರುಣ, ವೀರ, ಶೃಂಗಾರ, ರೌದ್ರ, ಹಾಸ್ಯ ರಸಗಳ ಪ್ರದರ್ಶನದಿಂದ ಎಲ್ಎಡೆ ಜನಮೆಚ್ಚುಗೆ ಗಳಿಸಿದರು. ಮಹಾರಾಷ್ಟ್ರದಲ್ಲೂ ಅವರ ನಾಟಕಗಳ ಪ್ರದರ್ಶನ ಯಶಸ್ಸುಕಂಡಿತು. 

ಮುಂಡಾಜೆ ರಂಗನಾಥಭಟ್ಟರಿಗೆ ಸಂಗೀತನಾಟಕ ಅಕಾಡಮಿ ಗೌರವ, ಅನೇಕ ಸಂಘ ಸಂಸ್ಥೆಗಳಿಂದ ಅಭಿನಯ ಭೂಷಣ, ನಾಟ್ಯಕಲಾ ವಿಶಾರದ, ಮುಂತಾದ ಬಿರುದು ಮತ್ತು ಗೌರವಗಳು ಸಂದವು. 

ಮುಂಡಾಜೆ ರಂಗನಾಥಭಟ್ಟರು 1973ರ ಸೆಪ್ಟೆಂಬರ್ 2ರಂದು ನಿಧನರಾದರು.

Great theatre artiste Mundaje Ranganatha Bhat 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ