ಶ್ರೀನಿವಾಸರಾಯರು
ರೊದ್ದ ಶ್ರೀನಿವಾಸರಾಯರು
ರೊದ್ದ ಶ್ರೀನಿವಾಸರಾರು ಧಾರವಾಡದ ಕರ್ನಾಟಕ ಕಾಲೇಜಿನ ಸ್ಥಾಪನೆಯೂ ಒಳಗೊಂಡಂತೆ ಕನ್ನಡ ನಾಡಿಗೆ ಮಹತ್ವದ ಕೊಡುಗೆ ನೀಡಿದವರು. ಹಿಂದಿನ ಮುಂಬಯಿ ಕರ್ನಾಟಕ ಪ್ರದೇಶದಲ್ಲಿ ಕನ್ನಡದ ಅಭಿವೃದ್ಧಿಗಾಗಿ ಕಂಕಣಬದ್ಧರಾಗಿ ದುಡಿದ ಅವರು ಅಧ್ಯಾಪಕರಾಗಿ, ಇನ್‌ಸ್ಪೆಕ್ಟರಾಗಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದವರೂ ಮತ್ತು ಶಾಸನಸಭೆಯ ಸದಸ್ಯರಾಗಿ ಜನತೆಯ ಒಳಿತಿಗಾಗಿ ದುಡಿದವರೂ ಆಗಿದ್ದಾರೆ.
’ರೊದ್ದ’ ಅನಂತಪುರ ಜಿಲ್ಲೆಯ ಪೆನುಗೊಂಡದ ಬಳಿ ಇರುವ ಒಂದು ಗ್ರಾಮ. ಶ್ರೀನಿವಾಸರಾಯರ ಹಿರಿಯರು ವೃತ್ತಿ ಅರಸಿ ಧಾರವಾಡಕ್ಕೆ ಬಂದು ನೆಲೆಸಿದರು. ಶ್ರೀನಿವಾಸರಾಯರು ಕೋನೇರರಾಯ ಮತ್ತು ಸುಬ್ಬಮ್ಮ ದಂಪತಿಗಳ ಮಗನಾಗಿ 1850ರ ಸೆಪ್ಟೆಂಬರ್ 17ರಂದು ಜನಿಸಿದರು. ಶ್ರೀನಿವಾಸರಾಯರ ಪ್ರಾಥಮಿಕ ವಿದ್ಯಾಭ್ಯಾಸ ಮದಿಹಾಳದ ಒಂದು ಗಾಂವಠಿ ಶಾಲೆಯಲ್ಲಿ ಪ್ರಾರಂಭಗೊಂಡಿತು. ಆಗಿನ ದಿನಗಳಲ್ಲಿ ಮಾಸ್ತರರ ಮನೆಗಳೇ ಶಾಲೆಗಳಾಗಿದ್ದುವು. ಶಾಲೆಯಲ್ಲಿ ಶ್ರೀನಿವಾಸರಾಯರು ಕನ್ನಡ ಮತ್ತು ಮರಾಠಿ ಭಾಷೆಗಳನ್ನು ಕಲಿತರು. ಅನಂತರ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಇಂಗ್ಲಿಷ್ ಕಲಿತರು. ಅವರ ಮೇಧಾಶಕ್ತಿ, ಸ್ಮರಣಶಕ್ತಿಗಳು ಅದ್ಭುತವಾಗಿದ್ದವು.
ಮನೆಯ ಬಡತನ, ಚಿಕ್ಕ ವಯಸ್ಸಿನಲ್ಲೇ ಮದುವೆ, ಆಗಲೆ ಸಂಭವಿಸಿದ ತಂದೆಯ ಮರಣ ಶ್ರೀನಿವಾಸರಾಯರ ವಿದ್ಯಾಭ್ಯಾಸವನ್ನು ಕುಂಠಿತಗೊಳಿಸಿತು. ಅವರು ಕುಟುಂಬ ನಿರ್ವಹಣೆಗೆ ಸಂಪಾದಿಸಲೇ ಬೇಕಾಗಿತ್ತು. ಆದರೆ ಉದ್ಯೋಗಕ್ಕೆ ತಕ್ಕ ವಯಸ್ಸೂ ಆಗಿರಲಿಲ್ಲ. ಆಗ ಮನೆಯಲ್ಲಿ ಕೆಲವು ಹುಡುಗರಿಗೆ ಪಾಠ ಹೇಳಲು ಆರಂಭಿಸಿದರು. ಸ್ವಲ್ಪ ಕಾಲಾನಂತರ ಹುಬ್ಬಳ್ಳಿಯ ಬಾಸೆಲ್ ಮಿಷನ್ನಿನ ಆಂಗ್ಲ ವರ್ನಾಕ್ಯುಲರ್ ಶಾಲೆಯಲ್ಲಿ 15 ರೂಪಾಯಿ ಸಂಬಳದ ಮಾಸ್ತರಿಕೆ ದೊರಕಿತು. ಈ ಕೆಲಸಕ್ಕಾಗಿ ಅವರು ಧಾರವಾಡದಿಂದ ಹುಬ್ಬಳ್ಳಿಗೆ, ಹುಬ್ಬಳ್ಳಿಯಿಂದ ಧಾರವಾಡಕ್ಕೆ ಒಟ್ಟು 24 ಮೈಲಿಗಳ ದೂರ ನಡೆದು ಹೋಗಿ ಬರಬೇಕಾಗಿತ್ತು. ಆದರೆ ಮಕ್ಕಳಿಗೆ ಕಲಿಸುವ ಆಸಕ್ತಿ, ಕಾರ್ಯದಲ್ಲಿ ದಕ್ಷತೆ, ಅವರ ತೀಕ್ಷ್ಣ ಬುದ್ಧಿವಂತಿಕೆ ಅವರಿಗೆ ಅಧಿಕಾರಿಗಳ, ವಿದ್ಯಾರ್ಥಿಗಳ ಮೆಚ್ಚಿಕೆಯನ್ನು ಸಂಪಾದಿಸಿಕೊಟ್ಟವು.
ಶ್ರೀನಿವಾಸರಾಯರ ವಿದ್ಯಾರ್ಜನೆಯ ಆಸೆ ಬತ್ತಿ ಹೋಗಲಿಲ್ಲ. ಶಿಕ್ಷಣವೃತ್ತಿಗೆ ಬೇಕಾದ ತರಬೇತಿ ಪಡೆಯಬೇಕೆಂದು ಬೆಳಗಾವಿ ಟ್ರೈನಿಂಗ್ ಕಾಲೇಜನ್ನು ಸೇರಿದರು. ಮೊದಲ ವರ್ಷದ ಪರೀಕ್ಷೆಯಲ್ಲಿ ಅಗ್ರಸ್ಥಾನದಿಂದ ಉತ್ತೀರ್ಣರಾದರು. ಆಗ ಅವರಿಗೆ ಮೆಟ್ರಿಕ್ಯುಲೇಷನ್ ಪರೀಕ್ಷೆಗೂ ಏಕೆ ಪ್ರಯತ್ನಿಸಬಾರದು ಎನಿಸಿತು. ಪರೀಕ್ಷೆಗೆ ಮುಂಬಯಿಗೆ ಹೋಗಬೇಕಾಗಿತ್ತು. ಒಂದಲ್ಲ, ಎರಡು ಸಲ ಪ್ರಯತ್ನಿಸಿ 1870ರಲ್ಲಿ ಪಾಸು ಮಾಡಿದರು. ಆಗ ಅವರು ತಮ್ಮ ತಾಯಿಯವರೊಡನೆ ಪುಣೆಯಲ್ಲೇ ನಿಂತರು. ಇವರ ಬುದ್ಧಿಮತ್ತೆಯನ್ನು ಮೆಚ್ಚಿಕೊಂಡಿದ್ದ ಟ್ರೈನಿಂಗ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಹುಯಿಲಗೋಳ ಭುಜಂಗರಾಯರ ನೆರವಿನಿಂದಾಗಿ ಅವರ ಓದು ಹೀಗೇ ಮುಂದುವರಿಯಿತು. ಡೆಕ್ಕನ್ ಕಾಲೇಜಿಗೆ ಸೇರಿ ಬಿ. ಎ. ಪದವಿ ಪಡೆಯಲು ತುಂಬಾ ಶ್ರಮಿಸಿದರು. ಆದರೆ ಕೌಟುಂಬಿಕ ಅಡಚಣೆಗಳಿಂದ ಅಭ್ಯಾಸ ಮಧ್ಯದಲ್ಲಿಯೇ ನಿಂತಿತು.
ಮೂಲಕಿ ಖಾತೆಯಲ್ಲಿ ಕೆಲಕಾಲ ಕಾರಕೂನರಾಗಿ ಕೆಲಸ ಮಾಡಿದ ಶ್ರೀನಿವಾಸರಾಯರು ಮುಂದೆ ಕಾರವಾರದಲ್ಲಿ 45 ರೂಪಾಯಿ ಸಂಬಳದ ಉಪಾಧ್ಯಾಯರಾದರು. ಅವರು ಹೇಳುತ್ತಿದ್ದ ಪಾಠದ ವಿಷಯಗಳೆಂದರೆ ಗಣಿತ ಮತ್ತು ಇತಿಹಾಸ. ಈ ಶಿಕ್ಷಣವೃತ್ತಿಯಲ್ಲಿ ಅವರಿಗೆ ಎಷ್ಟು ಆಸಕ್ತಿಯಿದ್ದಿತೆಂದರೆ, ತಿಳಿಯದ, ಕಲಿಯಲು ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಉಚಿತವಾಗಿ ಪಾಠ ಹೇಳಿಕೊಡುತ್ತಿದ್ದರು. ಹೆಣ್ಣು ಮಕ್ಕಳಿಗೂ ಇಂಗ್ಲಿಷ್ ಕಲಿಸುವ ಅವರ ಮನೋವೃತ್ತಿ, ಹೆಂಗಸೂ ವಿದ್ಯಾವಂತಳಾಗಬೇಕೆಂಬ ಅವರ ಸುಧಾರಣೆಯ ಮನೋಭಾವವೇ ಆಗಿತ್ತು. ಕಾರವಾರದ ಹುಡುಗಿಯರ ಶಾಲೆಯಲ್ಲಿ ಇಂಗ್ಲಿಷ್ ಕಲಿಸುತ್ತಿದ್ದ ಅವರು ಶಾಲೆಯಿಂದ ಯಾವ ಸಂಭಾವನೆ - ವೇತನಗಳನ್ನೂ ಸ್ವೀಕರಿಸುತ್ತಿರಲಿಲ್ಲ. ಹಲವು ಶಾಲೆಗಳಲ್ಲಿ ಕೆಲಸ ಮಾಡಿದ ನಂತರ 1876ರಲ್ಲಿ ಸಹಾಯಕ ಡೆಪ್ಯುಟಿ ಶಿಕ್ಷಣ ತನಿಖಾಧಿಕಾರಿಗಳಾಗಿ ನೇಮಕರಾದರು.
ಶ್ರೀನಿವಾಸರಾಯರ ಮಾಸ್ತರ ಕೆಲಸ ಮತ್ತು ತನಿಖಾಧಿಕಾರಿ ಕಾರ್ಯನಿರ್ವಹಣೆ ಶಿಸ್ತಿನಿಂದ ಕೂಡಿತ್ತು. ವಿದ್ಯಾರ್ಥಿಗಳ ಬಗ್ಗೆ ಅವರು ವಹಿಸುತ್ತಿದ್ದ ಕಾಳಜಿ ಅಪಾರವಾಗಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕಲಿಯುವ ವಯಸ್ಸಿನಲ್ಲಿ ಆದಷ್ಟು ಚೆನ್ನಾಗಿ ಕಲಿಯಬೇಕೆಂಬುದು ಅವರ ಆಸೆಯಾಗಿತ್ತು. ಅದಕ್ಕಾಗಿ ಶಾಲೆಯಲ್ಲಷ್ಟೇ ಅಲ್ಲದೆ ಹಿಂದುಳಿದ ವಿದ್ಯಾರ್ಥಿಗಳಿಗೆ ಮನೆಯಲ್ಲೇ ಪ್ರತ್ಯೇಕವಾಗಿ ಪಾಠ ಹೇಳಿಕೊಡುತ್ತಿದ್ದರು. ಅವರು ಕಲಿಸುತ್ತಿದ್ದ ಪಾಠಗಳೆಂದರೆ ಕನ್ನಡ, ಇಂಗ್ಲಿಷ್, ಹಾಗೂ ಇಂಗ್ಲೆಂಡ್ ಮತ್ತು ಗ್ರೀಸ್ ದೇಶಗಳ ಚರಿತ್ರೆ. ಅವರ ಪಾಠವೆಂದರೆ ಹುಡುಗರಿಗೆ ಹೆಚ್ಚು ಆಸಕ್ತಿ. ಈ ಕಾರಣವನ್ನು ಉಪಯೋಗಿಸಿಕೊಂಡ ಶ್ರೀನಿವಾಸರಾಯರು ವಿದ್ಯಾರ್ಥಿಗಳ ನಡವಳಿಕೆಯನ್ನು ಗಮನಿಸುತ್ತಿದ್ದರು. ಶಾಲೆಯ ಹುಡುಗರಲ್ಲಿ ಕೆಟ್ಟ ಚಟ ಬೆಳೆಯದಂತೆ ಹೇಗೆ ನೋಡಿಕೊಳ್ಳುತ್ತಿದ್ದರೋ ಹಾಗೆಯೇ ತಾವು ನಿಂತ ಊರಿನ ಬಗ್ಗೆಯೂ, ಊರಿನ ಜನರ ಯೋಗಕ್ಷೇಮದ ಬಗ್ಗೆಯೂ ಆಸ್ಥೆ ವಹಿಸುತ್ತಿದ್ದರು.
ರಾಯರು ಅಗತ್ಯ ಬಿದ್ದಾಗಲೆಲ್ಲ ಸಾರ್ವಜನಿಕ ಸೇವಾ ಕಾರ್ಯಗಳಿಗೂ ಮನಸ್ಸಿಟ್ಟು ಸೇವೆ ಸಲ್ಲಿಸುತ್ತಿದ್ದರು. 1876-77ರಲ್ಲಿ ದೇಶದಲ್ಲಿ ತಲೆದೋರಿದ ‘ಕ್ಷಾಮ’ ಮರೆಯಲಾಗದ ಪೀಡೆ. ಮಳೆಯಿಲ್ಲದೆ ಜನ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗಲು ತೊಡಗಿದರು. ವಿಜಾಪುರ ಮೊದಲಾದ ಕಡೆಗಳಿಂದ ಲಕ್ಷಾಂತರ ಜನ ಧಾರವಾಡಕ್ಕೆ ಬಂದರು. ರೊದ್ದ ಶ್ರೀನಿವಾಸರಾಯರು ಕ್ಷಾಮ ನಿವಾರಕ ಸಂಘವನ್ನು ಸ್ಥಾಪಿಸಿ ಅತ್ಯಂತ ಶ್ರಮವಹಿಸಿ ಕ್ಷಾಮಪೀಡಿತರಿಗೆ ನೆರವು ನೀಡಿದರು.
1878ರಲ್ಲಿ ರಾಯರು ಧಾರವಾಡದ ಡೆಪ್ಯುಟಿ ಎಜ್ಯುಕೇಷನಲ್ ಇನ್ಸ್ಪೆಕ್ಟರ್ ಆಗಿ ನೇಮಿತರಾದರು. ರಾಯರು ವಯಸ್ಕರಿಗೆ ಓದುಬರಹ ಕಲಿಸಲು ರಾತ್ರಿ ಶಾಖೆಗಳನ್ನು ನಡೆಸಲು ಉತ್ತೇಜನ ಕೊಟ್ಟರು; ಸ್ತ್ರೀ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡುವಾಗ ಉತ್ತಮ ವಿದ್ಯಾರ್ಥಿನಿಯರಿಗೆ ಬಹುಮಾನ ಕೊಡಲು ಪುದುವಟ್ಟುಗಳನ್ನು ಏರ್ಪಡಿಸಿದರು. 1896ರಲ್ಲಿ ದೇಶದ್ಯಾಂತ ವ್ಯಾಪಿಸಿದ ‘ಪ್ಲೇಗ್‌ರೋಗ’ ವನ್ನು ತಡೆಗಟ್ಟಲು ಮತ್ತು ಪರಿಹಾರ ನೀಡಲು ರಾಯರು ಶಿಕ್ಷಕರ ಸೇವೆಯನ್ನು ಬಳಸಿಕೊಂಡು ಉತ್ತಮ ಸೇವೆಯನ್ನು ಸಲ್ಲಿಸಿದರು. ಅವರ ಕಾರ್ಯಾವಧಿಯಲ್ಲಿ ಧಾರವಾಡದಲ್ಲಿ ಶಾಲೆಗಳ ಸಂಖ್ಯೆ 167ರಿಂದ 668ಕ್ಕೆ ಏರಿತು. ಅವರ ಪ್ರೇರಣೆಯಿಂದ ಅವರ ಆಶ್ರಯದಲ್ಲಿದ್ದ ಶಿಕ್ಷಕರೂ ಅವರಷ್ಟೇ ಚಾಕಚಕ್ಯತೆಯಿಂದ ಕೆಲಸ ಮಾಡುತ್ತಿದ್ದರು.
ಶ್ರೀನಿವಾಸರಾಯರಿಗೆ 1898ರಲ್ಲಿ ಟ್ರೈನಿಂಗ್ ಕಾಲೇಜಿನ ಪ್ರಿನ್ಸಿಪಾಲರ ಸ್ಥಾನ ದೊರಕಿತು. ಟ್ರೈನಿಂಗ್ ಕಾಲೇಜಿನ ಪ್ರಿನ್ಸಿಪಾಲರಾಗಿ ಅವರು ಶಾಶ್ವತವಾದ ಮತ್ತು ಅವರ ಹೆಸರನ್ನು ಬಹುಕಾಲ ನೆನಸಿಕೊಳ್ಳುವಂಥ ಕೆಲಸಗಳನ್ನು ಮಾಡಿದರು. ಟ್ರೈನಿಂಗ್ ಕಾಲೇಜಿಗೆ ಪ್ರತ್ಯೇಕವಾದ ಕಟ್ಟಡಕ್ಕೂ, ವಿದ್ಯಾರ್ಥಿನಿಲಯಕ್ಕೂ ಹುಡುಗರ ಊಟ ತಿಂಡಿ ವ್ಯವಸ್ಥೆಗಳಿಗೂ ಭದ್ರ ತಳಪಾಯವನ್ನು ಹಾಕಿದರು.
ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆಯಿಂದ 1908ರಲ್ಲಿ ತಾವಾಗಿಯೇ ನಿವೃತ್ತಿ ಪಡೆದ ಶ್ರೀನಿವಾಸರಾಯರು ಮುಂದೆ ಮೂರು ಬಾರಿ ಮುಂಬಯಿ ಶಾಸನಸಭೆಯ ಸದಸ್ಯರಾಗಿ ಆಯ್ಕೆಗೊಂಡರು. ಸಮಾಜಕ್ಕೆ ಒಳ್ಳೆಯದಾಗುವ ರೀತಿಯನ್ನು ಯೋಚಿಸುತ್ತಿದ್ದ ಶ್ರೀನಿವಾಸರಾಯರು ತಮಗೆ ದೊರೆತ ಪ್ರಭಾವವನ್ನು ಸಮಾಜಕ್ಕಾಗಿ ಬಳಸಿದರು. ಶಾಸನಸಭಾ ಸದಸ್ಯರಾಗಿದ್ದ ಶ್ರೀನಿವಾಸರಾಯರು ತಮ್ಮ ಕನಸಾಗಿದ್ದ ಕರ್ನಾಟಕ ಕಾಲೇಜಿನ ಸ್ಥಾಪನೆಯನ್ನು ನನಸಾಗಿ ಮಾಡಲು ಬಹುವಾಗಿ ಯತ್ನಿಸಿದರು. ಅಂದಿನ ಕಾಲದಲ್ಲಿ ಕರ್ನಾಟಕದಲ್ಲೇ ಕಾಲೇಜು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲವಿರಲಿಲ್ಲ. ಮೈಸೂರಿನವರು ಮದರಾಸಿಗೆ ಹೋಗಬೇಕಿತ್ತು. ಉತ್ತರ ಕರ್ನಾಟಕದವರು ಪೂನಾ ಬೊಂಬಾಯಿಗಳಿಗೆ ಹೋಗಬೇಕಿತ್ತು. ಕನ್ನಡಿಗರಿಗೆ ಕನ್ನಡ ರಾಜ್ಯದಲ್ಲಿ ಪ್ರೌಢ ವಿದ್ಯಾಭ್ಯಾಸಕ್ಕೆ ಸೌಲಭ್ಯವಿಲ್ಲದಿದ್ದುದರಿಂದ ಅದನ್ನು ಆಗುಮಾಡಿಸಲು ರೊದ್ದರು ಮಾಡಿದ ಸಾಹಸ ಆಶ್ಚರ್ಯಕರವಾದದ್ದು. ಮೈಸೂರಿಗಾದಾರೋ ಅಂಥ ಕಾಲೇಜನ್ನು - ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಮಹಾರಾಜರ ಪ್ರೋತ್ಸಾಹ ಬೆಂಬಲ ದೊರಕುತ್ತಿತ್ತು. ಆದರೆ ಆಂಗ್ಲರ ಆಡಳಿತಕ್ಕೆ ಒಳಪಟ್ಟಿದ್ದ ಧಾರವಾಡ ಜಿಲ್ಲೆಯಲ್ಲಿ ಕಾಲೇಜು ಸ್ಥಾಪಿಸುವುದು ತುಂಬ ಪ್ರಯಾಸದ ಕೆಲಸವಾಗಿತ್ತು. ಈ ಕಾಲೇಜಿನ ಸ್ಥಾಪನೆಯ ಕಲ್ಪನೆ 1877ರಿಂದಲೇ ಆರಂಭವಾಯಿತಾದರೂ ಅದು ಕಾರ್ಯರೂಪಕ್ಕೆ ಮಾತ್ರ ಬರಲಿಲ್ಲ. ಆದರೆ ರೊದ್ದ ಅವರು ಶಾಸನಸಭಾ ಸದಸ್ಯರಾದ ಮೇಲೆ ತಮ್ಮ ಸದಸ್ಯತ್ವದ ಅವಧಿಯಲ್ಲಿ ಕಾಲೇಜನ್ನು ಸ್ಥಾಪಿಸಿಯೇ ತೀರುತ್ತೇನೆಂಬ ಹಠ ಹಿಡಿದಂತೆ ಕಾಣಿಸುತ್ತದೆ. 1904ರಲ್ಲಿ ಅವರು ಶಾಸನಸಭೆಯ ಸ್ವತಂತ್ರ ಸದಸ್ಯರಾಗಿ ಪ್ರಜೆಗಳಿಗಾಗಿ ಅನುಕೂಲ ಕಲ್ಪಿಸುವ ಹೊಣೆ ಹೊತ್ತ ಮೇಲೆ ಕಾಲೇಜಿನ ಬಗ್ಗೆ ತೀವ್ರವಾಗಿ ಕೆಲಸ ಮಾಡಲು ಆರಂಭಿಸಿದರು. 1909ನೆಯ ಫೆಬ್ರವರಿ 27ರಲ್ಲಿ ಸರ್ಕಾರಕ್ಕೆ ಮನವಿ ಒಪ್ಪಿಸಿದರು. ಸಂಬಂಧಪಟ್ಟವರ ಮೇಲೆ ಒತ್ತಡ ತಂದರು. ಶಾಸನಸಭೆಯಲ್ಲಿ ಪ್ರಸಂಗ ಬಂದಾಗ ತಮ್ಮ ವಾದವನ್ನು ಮಂಡಿಸುತ್ತ, ನಿರ್ಣಯ ಮಾಡುತ್ತಾ ಈ ಪ್ರಶ್ನೆ ಎಷ್ಟು ಮುಖ್ಯವಾದುದೆಂಬುದನ್ನು ಸರ್ಕಾರಕ್ಕೆ ಮನಗಾಣಿಸಿದರು. ರಾಯರ ವಾದದ ತೀವ್ರತೆಯನ್ನೂ ಧಾರವಾಡದಲ್ಲಿ ಒಂದು ಕಾಲೇಜು ಅವಶ್ಯಕ ಎಂಬ ಅಂಶವನ್ನೂ ಅರ್ಥಮಾಡಿಕೊಂಡ ಸರ್ಕಾರದವರು ರಾಯರ ಬಯಕೆಯನ್ನು ಈಡೇರಿಸಲು ಆಶಿಸಿದ್ದರೂ, ಸರ್ಕಾರದಲ್ಲಿ ಕಾಲೇಜನ್ನು ಆರಂಭಿಸಲು ಸಾಕಷ್ಟು ಹಣವಿಲ್ಲವೆಂದೂ ಮೂಲಧನವನ್ನೂ ವಾರ್ಷಿಕ ವೆಚ್ಚದ ಮೊಬಲಗನ್ನೂ ಕೊಡಿಸಿಕೊಟ್ಟರೆ, ಕಾಲೇಜನ್ನು ಸ್ಥಾಪಿಸಬಹುದೆಂದೂ ರಾಯರಿಗೆ ತಿಳಿಸಿದರು. ಶ್ರೀನಿವಾಸರಾಯರು ಸರಕಾರದ ತಿಳುವಳಿಕೆಯನ್ನು ಕಂಡು ಅಂಜಲಿಲ್ಲ. ಕಾಲೇಜಿನ ಸ್ಥಾಪನೆ ಈಗ ತಮ್ಮ ಕೈಲಿದೆ ಎಂದು ಅರಿತರು. ಅದಕ್ಕಾಗಿ ಪ್ರಯತ್ನಿಸಿದರು. ಒಂದು ಶಿಷ್ಟ ಮಂಡಲವನ್ನು ರಚಿಸಿಕೊಂಡರು. ಹಲವಾರು ಪ್ರತಿಷ್ಠಿತರ ಒಂದು ಸಂಘ ರೂಪುಗೊಂಡಿತು. ಸರ್ ನಾರಾಯಣ ರಾವ್ ಚಂದಾವರ್‌ಕರ್ ಅವರು ಅದರ ಅಧ್ಯಕ್ಷರಾದರು. ರಾಯರು ಚೇರಮನ್ ಆದರು. 1911ರಲ್ಲಿ ಧಾರವಾಡದ ಜನರಲ್ಲಿ ಆಗ್ರಹಪೂರ್ವಕ ವಿನಂತಿ ಸಲ್ಲಿಸಿ ಹಣ ಕೂಡಿಸಲು ಆರಂಭ ಮಾಡಿದರು. ಆದರೆ ಧನಸಂಗ್ರಹಕಾರ್ಯ ಅಷ್ಟು ಸುಲಭವಾಗಲಿಲ್ಲ. ಶ್ರೀಮಂತರು-ಬಡವರು, ಆ ಜಾತಿ ಈ ಜಾತಿ, ಪಟ್ಟಣಿಗರು-ಹಳ್ಳಿಗರು, ಆರ್ಟ್ಸ್ ಕಾಲೇಜೇ - ಸೈನ್ಸ್ ಕಾಲೇಜೇ, ಈ ಬೇಧಗಳು ತೊಡಕುಗಳಾಗಿ ಪರಿಣಮಿಸಿದುವು. ರೊದ್ದ ರಾಯರು ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆದು ಕೊಳ್ಳುವವರಲ್ಲ. ಶಾಸನಸಭೆಯಲ್ಲಿ ತಮ್ಮ ಸ್ನೇಹಿತರೆಲ್ಲರಿಂದ ಬೆಂಬಲ ದೊರಕಿಸಿಕೊಂಡರು. ಊರಿನ ಪ್ರಮುಖರಿಂದ ಆಶ್ವಾಸನೆಯನ್ನು ಪಡೆದುಕೊಂಡರು. ಆಗ ರಾವ್ ಬಹದ್ದೂರ್ ಅರಟಾಳ ಅವರು ಒಂದು ಲಕ್ಷ ರೂಪಾಯಿ ಕೂಡಿಸಿಕೊಡಲು ಭರವಸೆಯಿತ್ತರು. ಲಿಂಗಾಯಿತ ಸಮಾಜದವರು ಕಾಲೇಜಿಗಾಗಿ ಒಂದು ಲಕ್ಷ ರೂಪಾಯಿ ಕೊಡಲು ಒಪ್ಪಿಕೊಂಡರು. ಇನ್ನು ಕಾಲೇಜು ಸ್ಥಾಪನೆ ಆದಂತೆಯೇ ಎಂದುಕೊಂಡಿದ್ದಾಗ 1914ರ ಮೊದಲನೇ ಮಹಾ ಯುದ್ಧ ಅದಕ್ಕೆ ಅಡ್ಡಿಯಾಗಿ ಬಂದಿತು.
ಆದರೆ ರಾಯರು ಆ ಅಡಚಣೆಯ ನಿವಾರಣೆಗೆ ಅತಿಶಯವಾಗಿ ಹೋರಾಟ ನಡೆಸಿದರು. ಹೊರಗಿನ ಯುದ್ಧಕ್ಕಿಂತ ರಾಯರ ಯುದ್ಧವೇ ಬಲಯುತವಾಗಿತ್ತು. 1917ನೆಯ ಜೂನ್ ತಿಂಗಳ 20 ನೆಯ ತಾರೀಖು ಬುಧವಾರ ಸಂಜೆ 5 ಗಂಟೆಗೆ ಕಾಲೇಜಿನ ಆರಂಭೋತ್ಸವ ನಾಲ್ಕು ಸಾವಿರ ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ರಾಯರು ಆಗ ಒಪ್ಪಿಸಿದ ವರದಿ ಅವರ ಪ್ರಯತ್ನದ ಸಾಹಸದ ದಾಖಲೆಯಾಗಿ ಇಂದಿಗೂ ಆಕರ್ಷಣೀಯವಾಗಿ ಉಳಿದಿದೆ
ರೊದ್ದ ಶ್ರೀನಿವಾಸರಾಯರು ಉಪಾಧ್ಯಾಯರಾಗಿ ಮಾತ್ರ ಕೆಲಸಮಾಡಲಿಲ್ಲ. ಅವರ ಸಾರ್ವಜನಿಕ ಸೇವಾದೃಷ್ಟಿ ಮತ್ತು ತತ್ಪರತೆಯನ್ನು ಮನಗಂಡ ಸರ್ಕಾರ ಅವರನ್ನು ಧಾರವಾಡದ ಮುನಿಸಿಪಾಲಿಟಿಯ ಸದಸ್ಯರನ್ನಾಗಿ ನಾಮಕರಣ ಮಾಡುತ್ತಲೇ ಬಂದಿತ್ತು. ಅವರು ಶಾಸನಸಭಾ ಸದಸ್ಯರಾಗಿದ್ದಾಗಲೇ 1912ರಲ್ಲಿ ಲೋಕನಿಯುಕ್ತ ಅಧ್ಯಕ್ಷರೂ ಆದರು. ಅವರ ಆಯ್ಕೆ ಸರ್ವಾನುಮತವಾದದ್ದು. ಅವರು 1917ರವರೆಗೆ ಅಧ್ಯಕ್ಷರಾಗಿದ್ದು ಅನೇಕ ಉಪಯುಕ್ತ ಸುಧಾರಣೆಗಳನ್ನು ಧಾರವಾಡ ನಗರಾಭಿವೃದ್ಧಿಯ ದೃಷ್ಟಿಯಿಂದ ಜಾರಿಗೆ ತಂದರು. ಸರ್. ಎಂ. ವಿಶ್ವೇಶ್ವರಯ್ಯನವರ ಸಲಹೆ ಪಡೆದು ನೀರಿನ ಸರಬರಾಜು ವ್ಯವಸ್ಥೆಯನ್ನು ಕೈಗೊಂಡರು. ಮಾರ್ಗಗಳ ಸುಧಾರಣೆಗೆ ಗಮನ ಕೊಟ್ಟರು. ಹೀಗೆ ಅವರ ಕಾರ್ಯಗಳು ಒಂದೊಂದೂ ಉಪಯುಕ್ತವೇ. 1912ರಲ್ಲಿ ಜಿಲ್ಲಾ ಲೋಕಲ್ ಬೋರ್ಡಿನ ಅಧ್ಯಕ್ಷರಾಗಿ, ಶಾಲೆಗಳ ಸ್ಥಾಪನೆ, ತಾಂತ್ರಿಕ ಅಥವಾ ಔದ್ಯೋಗಿಕ ಶಾಲೆಯ ಆರಂಭ ಮೊದಲಾದ ಅಗತ್ಯಗಳನ್ನು ಪೂರೈಸುವುದರಲ್ಲಿ ಅವರು ಶ್ರಮ ವಹಿಸಿದರು. ಡಿಸ್ಟ್ರಿಕ್ಟ್ ಲೋಕಲ್ ಬೋರ್ಡಿಗೆ ಇಂಥ ಅಧ್ಯಕ್ಷರು ದೊರಕಿದ್ದು ಧಾರವಾಡ ಡಿಸ್ಟ್ರಿಕ್ಟ್ ಬೋರ್ಡಿನ ಸುದೈವ ಎಂದು ಗವರ್ನರ್ ಅವರೇ ಅಭಿಪ್ರಾಯಪಟ್ಟಿದ್ದಾರೆ. ಅವರ ಲೋಕೋಪಯೋಗ ಮತ್ತು ಸಾರ್ವಜನಿಕ ಸೇವಾಕಾರ್ಯಗಳನ್ನೂ ಅವರ ಶಿಕ್ಷಣ ಚಾತುರ್ಯವನ್ನೂ ಅರಿತ ಸರ್ಕಾರದವರು ಬ್ರಿಟಿಷ್ ಸಾರ್ವಭೌಮರಿಗೆ ಶಿಫಾರಸು ಮಾಡಿ ಸಿ.ಐ.ಇ. ಪದವಿಯನ್ನು ಕೊಡಿಸಿದರು. ಈ ಪ್ರಶಸ್ತಿ ಪಡೆದವರಲ್ಲಿ ಕರ್ನಾಟಕದಲ್ಲಿ ಇವರೇ ಮೊದಲಿಗರು.
ಶ್ರೀನಿವಾಸರಾಯರು ಬಾಲ್ಯದಲ್ಲಿ ಕಲಿತಿದ್ದು ಮರಾಠಿ, ಇಂಗ್ಲಿಷ್ ಮತ್ತು ಕನ್ನಡ. ವಿಶೇಷವಾಗಿ ಬೆಳೆಸಿಕೊಂಡದ್ದು ಇಂಗ್ಲಿಷ್. ಆದರೆ ಕನ್ನಡವನ್ನು ಅವರು ಮರೆಯಲೂ ಇಲ್ಲ, ಅಲಕ್ಷ್ಯಮಾಡಲೂ ಇಲ್ಲ. ಇಂಗ್ಲಿಷಿನಲ್ಲಿ ಬರೆದಂತೆ ಕನ್ನಡದಲ್ಲೂ ಕವಿತೆಗಳನ್ನು ಬರೆದಿದ್ದಾರೆ. ಮಾರ್ಸಡನ್ ಅವರ ಇತಿಹಾಸದ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದಾರೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯರಾಗಿದ್ದುಕೊಂಡು ಸಂಘದ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡಿದರು. ಹೊಸಪೇಟೆಯಲ್ಲಿ 1920ರಲ್ಲಿ ನಡೆದ 6ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತ್ಯದ ಮತ್ತು ನಾಡಿನ ಏಕೀಕರಣಕ್ಕಾಗಿ ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದರು. ‘ಕರ್ನಾಟಕವು ಛಿನ್ನವಿಚ್ಛಿನ್ನವಾಗಿ ಪರಭಾಷೆಯವರ ಅಧಿಕಾರಕ್ಕೆ ಒಳಪಟ್ಟಿರುವುದು ನಮ್ಮ ಭಾಷೆಯ ಅಧಃ ಪತನಕ್ಕೆ ವಿಶೇಷ ಕಾರಣವಾಗಿದೆ’ ಎಂದು ಕರ್ನಾಟಕದ ಅಂದಿನ ಸ್ಥಿತಿಯನ್ನು ವರ್ಣಿಸಿದರು. ಕನ್ನಡಿಗರಲ್ಲಿ ಕನ್ನಡದ ಬಗ್ಗೆ ಅಭಿಮಾನ ಮೂಡುವಂತೆ ಶ್ರಮಿಸಿದರು.
ರೊದ್ದ ಶ್ರೀನಿವಾಸರಾಯರು 79 ವರ್ಷಗಳವರೆಗೆ ಬದುಕಿದ್ದರು. 1926ರ ಆಗಸ್ಟ್ 4ರಂದು ದೈವಾಧೀನರಾದರು. ಅವರ ಅಂತಿಮ ಯಾತ್ರೆಗೆ ಸೇರಿದ್ದ ವಿವಿಧ ಮತದ ಜನದ ಗುಂಪು ಅವರ ಮಹಿಮೆಯನ್ನು ಸಾರುತ್ತಿತ್ತು. ಈ ಮಹಾನ್ ಚೇತನಕ್ಕೆ ನಮ್ಮ ನಮನ.
(ಮಾಹಿತಿ ಕೃಪೆ: ಆರ್. ಎಸ್. ರಾಮರಾವ್ ಅವರು ರೊದ್ದ ಶ್ರೀನಿವಾಸರಾಯರ ಕುರಿತು ರಚಿಸಿರುವ ಪುಸ್ತಕ, ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ. ಮುಖ್ಯ ಸಂಪಾದಕರು: ಎಲ್. ಎಸ್. ಶೇಷಗಿರಿರಾವ್; ಮತ್ತು ಕಣಜ)
On the birth annibersary of great educationalist and administrator Rodda Sreenivasa Rao
ಕಾಮೆಂಟ್‌ಗಳು