ರೂಪಶಿಲ್ಪಿ ಬಸವಯ್ಯ
ರೂಪಶಿಲ್ಪಿ ಬಿ. ಬಸವಯ್ಯ
ಚಿಕ್ಕಂದಿನಲ್ಲಿ ನಾನು ಹಿರಿಯರೊಡನೆ ಮೈಸೂರು ಅರಮನೆಗೆ ಹೋಗಿದ್ದಾಗ ನಮ್ಮನ್ನು ಮಾರ್ಗದರ್ಶಿಸುತ್ತಿದ್ದವರು, "ಈಗ ನಾವು ಹೋಗುತ್ತಿರುವ ರೂಮಿನೊಳಗೆ ಮಹಾರಾಜರು ಕೂತಿದ್ದಾರೆ. ನಿಃಶಬ್ಧವಾಗಿರಬೇಕು, ಸರೀನಾ!" ಎಂದು ಬಾಗಿಲು ತೆರೆದರು. ಓಹ್ ಇಂದೂ ಅದನ್ನು ನಾ ಮರೆಯಲಾರೆ. ಬಹಳ ವರ್ಷಗಳ ಕಾಲ ಮಹಾರಾಜರು ಅದು ಹೇಗೆ ಅಷ್ಟು ಚೆನ್ನಾಗಿ ಡ್ರೆಸ್ ಮಾಡ್ಕೊಂಡು ಒಬ್ಬರೇ ಕೂತಿದ್ರು ಅಂತ ನನ್ನ ಮನದಲ್ಲಿತ್ತು. ಇಂದು ಈ ಮೂರ್ತಿಯನ್ನು ಮಾಡಿದವರು ಮಹಾನ್ ರೂಪಶಿಲ್ಪಿ ಬಿ. ಬಸವಯ್ಯನವರು ಎಂದು ತಿಳಿಯಿತು.
ಬಿ. ಬಸವಯ್ಯನವರು ಮಹಾನ್ ರೂಪಶಿಲ್ಪಿಗಳಾಗಿ ಪ್ರಸಿದ್ಧರಾದವರು.
ಬಸವಯ್ಯನವರು ಮೈಸೂರಿನ ಮಂಡಿ ಮೊಹಲ್ಲದ ಸೊಪ್ಪಿನಕೇರಿಯಲ್ಲಿ 1900ರ ಸೆಪ್ಟೆಂಬರ್ 15ರಂದು ಜನಿಸಿದರು. ತಂದೆ ಬೋರಯ್ಯನವರು, ತಾಯಿ ನಿಂಗಮ್ಮನವರು.
ಕಡುಬಡತನದ ಜೀವನದಲ್ಲಿ ಬಸವಯ್ಯನವರ ಓದು ಮಾಧ್ಯಮಿಕ ಶಾಲೆಯಲ್ಲಿ ಮುಕ್ತಾಯಗೊಂಡಿತು. ಸೋಮನಾಥಪುರ ನೋಡಿಬಂದ ನಂತರ ಕಲಾವಿದನಾಗಬೇಕೆಂಬ ಹಂಬಲ ಇವರಲ್ಲಿ ಮೂಡಿತು. ತಾವೇ ಸ್ವಯಂಭುವಾಗಿ ಕಲಿತು ಮಣ್ಣಿನ ಗೊಂಬೆಗಳನ್ನು ರಚಿಸಿದರು. ಇವರ ಕಲಾಭಿರುಚಿಯನ್ನು ಗುರುತಿಸಿದ ರಾಮಕೃಷ್ಣನ್ ಎಂಬ ಮಹನೀಯರು ಜಯಚಾಮರಾಜೇಂದ್ರ ಕಲಾ ಶಾಲೆಗೆ ಸೇರಿಸಿದರು. ಇಲ್ಲಿ ಬಸವಯ್ಯನವರು ರೂಪಶಿಲ್ಪದಲ್ಲಿ ಪರಿಣತಿ ಪಡೆದರು. ಮದರಾಸ್ ಸರಕಾರದಿಂದ ಹೈಯರ್ ಮಾಡೆಲಿಂಗ್, ಇಂಟರ್‌ಮೀಡಿಯೆಟ್ ಡ್ರಾಯಿಂಗ್, ಫ್ರೀ ಹ್ಯಾಂಡ್ ಪರೀಕ್ಷೆಗಳಲ್ಲಿನ ಯಶಸ್ವಿ ಸಾಧನೆ ಇವರದ್ದಾಯಿತು.
ಮುಂದೆ ಬಸವಯ್ಯನವರು ಜಯ ಚಾಮರಾಜೇಂದ್ರ ಕಲಾಶಾಲೆಯಲ್ಲಿ ಮಾಡೆಲಿಂಗ್ ವಿಭಾಗದ ಅಧ್ಯಾಪಕರಾಗಿ ನೇಮಕಗೊಂಡರು. ಜೆ.ಜೆ. ಸ್ಕೂಲಿನಲ್ಲಿ ಕಲಿಯುವ ಆಸೆಯಿಂದ ಸರಕಾರಿ ವಿದ್ಯಾರ್ಥಿ ವೇತನ ಪಡೆದು ಮುಂಬಯಿಗೆ ಪಯಣ ಬೆಳೆಸಿದರು.
ಬಸವಯ್ಯನವರ ಕಲಾ ಪ್ರತಿಭಾ ಪ್ರದರ್ಶನಕ್ಕೆ ವಿಪುಲ ಅವಕಾಶಗಳು ಸಂದವು. ಬೆಂಗಳೂರು ನಗರಸಭೆಗಾಗಿ ಕೆಂಪೇಗೌಡ, ವಿಶ್ವೇಶ್ವರಯ್ಯನವರ ಪ್ರತಿಮೆಗಳ ರಚನೆಯಿಂದ ಗೌರವ ಸಂದವು. ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ಲಾಸ್ಟರ್ ಆಫ್ ಪ್ಯಾರಿಸ್ ಕೃತಿ, ಯುವರಾಜರ ಮತ್ತು ಮಹಾರಾಣಿಯವರ ರೂಪಶಿಲ್ಪ, ದಿವಾನ್ ಮಿರ್ಜಾ ಇಸ್ಮಾಯಿಲ್, ತಂಬೂಚೆಟ್ಟಿ, ವೀಣೆಶೇಷಣ್ಣ ಮೊದಲಾದವರ ಶಿಲ್ಪ ರಚನೆ, ಮದನ ಮೋಹನ ಮಾಳವೀಯ, ಲಾಲಾ ಲಜಪತರಾಯ್, ಲಾರ್ಡ್‌ವಿಲ್ಲಿಂಗ್‌ಡನ್, ಲೇಡಿವಿಲ್ಲಿಂಗ್‌ಡನ್ ಎದೆಮಟ್ಟದ ಚಂದ್ರಕಾಂತ ಶಿಲೆಯ ಶಿಲ್ಪರಚನೆ ಮುಂತಾದವುಗಳಿಂದ ಅವರಿಗೆ ಪ್ರಸಿದ್ಧಿ ಲಭಿಸಿತು.
ಬಸವಯ್ಯನವರು ನಾಲ್ವಡಿ ಕೃಷ್ಣರಾಜ ಒಡೆಯರಿಂದ ಆಸ್ಥಾನ ಶಿಲ್ಪಿಯಾಗಿ ನೇಮಕಗೊಂಡರು. ನಾಲ್ವಡಿ ಅವರ ಕಾಲಾನಂತರ ಬಸವಯ್ಯನವರಿಗೆ ಅರಮನೆಯಲ್ಲಿನ ಆಡಳಿತ ವಾತಾವರಣ ಹಿಡಿಸಲಿಲ್ಲವಂತೆ.
ಬಿ. ಬಸವಯ್ಯನವರು 1974ರ ನವೆಂಬರ್ 23ರಂದು ಈ ಲೋಕವನ್ನಗಲಿದರು.
On the birth anniversary of great sculptor B. Basavaiah
ಕಾಮೆಂಟ್‌ಗಳು