ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಿರುವನಂತಪುರದ ಶ್ರೀ ಪದ್ಮನಾಭ ಸ್ವಾಮಿ ದೇಗುಲ


 ತಿರುವನಂತಪುರದ ಶ್ರೀ ಪದ್ಮನಾಭ ಸ್ವಾಮಿ ದೇಗುಲ


ಕೇರಳದ ತಿರುವನಂತಪುರದ ಪೂರ್ವದ ಕೋಟೆಯ ಒಳಗೆ ಇರುವ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನವು ವಿಷ್ಣು ದೇವರಿಗೆ ಸಮರ್ಪಿತವಾಗಿದೆ. ಈ ದೇವಸ್ಥಾನವು ಕೇರಳ ಮತ್ತು ದ್ರಾವಿಡ ಶೈಲಿಯ ವಾಸ್ತುಶಿಲ್ಪದ ಸಮ್ಮಿಲನವಾಗಿದೆ.

ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಇತಿಹಾಸವು 8ನೇ ಶತಮಾನದ ಕಾಲಕ್ಕೆ ಸೇರಿದೆ. ಇದು ಭಾರತದಲ್ಲಿರುವ ವಿಷ್ಣುವಿಗೆ ಸಮರ್ಪಿಸಲಾದ ದೇವಾಲಯಗಳಲ್ಲಿ ಅಥವಾ ದಿವ್ಯ ದೇಶ‌ಗಳಲ್ಲಿ ಒಂದಾಗಿದೆ. ದಿವ್ಯ ದೇಶಗಳೆಂದರೆ ವಿಷ್ಣು ದೇವರ ಪವಿತ್ರ ನೆಲೆಬೀಡುಗಳಾಗಿದ್ದು ಅವುಗಳನ್ನು ತಮಿಳು ಆಳ್ವಾರರುಗಳ ಕೃತಿಗಳಲ್ಲಿ ನಮೂದಿತಗೊಂಡಿದೆ. ಈ ದೇವಸ್ಥಾನದ ಪ್ರಮುಖ ದೇವತೆ ಸರ್ಪದ ಮೇಲೆ ಒರಗಿದ ಮಲಗಿರುವ ಅನಂತ, ವಿಷ್ಣು ದೇವರಾಗಿದ್ದಾರೆ.

ತಿರುವಾಂಕುರ್ ರಾಜರಲ್ಲಿ ಸುಪ್ರಸಿದ್ಧ ರಾಜರಲ್ಲಿ ಒಬ್ಬರಾಗಿದ್ದ ಮಾರ್ತಾಂಡ ವರ್ಮರು ಈ ದೇವಸ್ಥಾನದ ಪ್ರಮುಖ ನವೀಕರಣ ಕೆಲಸವನ್ನು ಮಾಡಿಸಿದರು.  ಇದರ ಪರಿಣಾಮವೇ ಇಂದಿನ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ವಾಸ್ತುಶಿಲ್ಪವಾಗಿದೆ. ದೇವಸ್ಥಾನದಲ್ಲಿ ಮುರಾಜಪಮ್ ಮತ್ತು ಭದ್ರ ದೀಪಮ್ ಎಂಬ ಹಬ್ಬಗಳನ್ನು ಮಾರ್ತಾಂಡ ವರ್ಮರೇ ಪರಿಚಯಿಸಿದರು. ಮುರಾಜಪಮ್ ಇದರ ಅರ್ಥವೇನೆಂದರೆ ನಿರಂತರವಾಗಿ ಪ್ರಾರ್ಥನೆಗಳನ್ನು ಸಲ್ಲಿಸುವುದಾಗಿದೆ, ಇದನ್ನು ಪ್ರತಿ ಆರು ವರ್ಷಗಳಿಗೊಮ್ಮೆ ದೇವಸ್ಥಾನದಲ್ಲಿ ಇಂದಿಗೂ ಮುಂದುವರೆಸಿಕೊಂಡು ಬರಲಾಗುತ್ತಿದೆ.

1750ರಲ್ಲಿ ಮಾರ್ತಾಂಡ ವರ್ಮರು ತಿರುವಾಂಕುರ್ ಸಾಮ್ರಾಜ್ಯವನ್ನು ಪದ್ಮನಾಭ ದೇವರಿಗೆ ಮೀಸಲಾಗಿರಿಸಿದರು. ಮಾರ್ತಾಂಡ ವರ್ಮರು,  ರಾಜ ಮನೆತನದವರು ದೇವರ ಪರವಾಗಿ ರಾಜ್ಯವನ್ನು ಆಳುವವರು ಎಂದು ನಂಬಿದ್ದರು ಮತ್ತು ಅವರು ಮತ್ತು ಅವರ ಸಂತತಿಯವರು ಪದ್ಮನಾಭನ ದಾಸರೆಂದು ಅಥವಾ ಪದ್ಮನಾಭ ದೇವರ ಸೇವಕರೆಂದು ಸಾಮ್ರಾಜ್ಯವನ್ನು ಮುನ್ನಡೆಸುತ್ತಿದ್ದರು. ಇದರ ನಂತರದಲ್ಲಿ ಪ್ರತಿಯೊಬ್ಬ ತಿರುವಾಂಕೂರ್ ರಾಜನ ಹೆಸರನ್ನೂ ಪದ್ಮನಾಭ ದಾಸ ಎಂಬ ಶೀರ್ಷಿಕೆಯಲ್ಲಿಯೇ ಕರೆಯಲಾಗುತ್ತಿತ್ತು. ತಿರುವಾಂಕುರ್ ಸಾಮ್ರಾಜ್ಯವು ಪದ್ಮನಾಭಸ್ವಾಮಿಗೆ ನೀಡುವ ದಾನ-ದತ್ತಿಗಳು ತ್ರಿಪದಿದಾನಮ್ ಎಂದು ಜನಪ್ರಿಯವಾಗಿವೆ.

ತಿರುವನಂತಪುರಮ್ ಕೇರಳದ ರಾಜಧಾನಿಯಾಗಿದ್ದು ಇದು ತನ್ನ ಹೆಸರನ್ನು ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಅತ್ಯಂತ ಪವಿತ್ರವಾದ ದೈವೀಗುಣದಿಂದ ಪಡೆದುಕೊಂಡಿದೆ.  ಇದು ಅನಂತ (ಅನಂತ ಸರ್ಪದ ಮೇಲೆ ಒರಗಿರುವ ದೇವತೆ) ಎಂದು ಸಹ ಜನಪ್ರಿಯವಾಗಿದೆ. ’ತಿರುವನಂತಪುರಮ್’ ಅಂದರೆ ಶ್ರೀ ಅನಂತ ಪದ್ಮನಾಭಸ್ವಾಮಿಯ ಪುರ ಎಂದರ್ಥ. ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನವು ಏಳು ಪರಶುರಾಮ ಕ್ಷೇತ್ರಗಳಲ್ಲಿ ಒಂದಾಗಿರುವ ಪ್ರದೇಶವಾಗಿದೆ ಎಂದು ನಂಬಲಾಗಿರುವ ಪ್ರದೇಶದಲ್ಲಿದೆ. ಇದು ಸ್ಕಂದ ಪುರಾಣ ಮತ್ತು ಪದ್ಮ ಪುರಾಣಗಳಲ್ಲಿ ಉಲ್ಲೇಖಗೊಂಡಿದೆ. ಈ ದೇವಸ್ಥಾನವು ’ಕಮಲ ತೀರ್ಥ’ ಎಂಬ ಅರ್ಥವನ್ನು ಹೊಂದಿರುವ ಪದ್ಮ ತೀರ್ಥಮ್ ಎಂಬ ಪವಿತ್ರವಾದ ಕೆರೆಯ ಸಮೀಪದಲ್ಲಿದೆ.

ಶ್ರೀ ಪದ್ಮನಾಭಸ್ವಾಮಿಯ ಪ್ರತಿಮೆಯು ತನ್ನ ರಚನೆಗೆ ಹೆಸರುವಾಸಿಯಾಗಿದೆ.  ಇದು 12008 ಸಾಲಿಗ್ರಾಮಗಳನ್ನು ಹೊಂದಿದೆ ಎಂದು ಹೇಳಲಾಗಿದೆ.  ಅವುಗಳನ್ನು ಗಂಧಕಿ ನದಿಯ ದಡದಿಂದ ತೆಗೆಯಲಾಗಿದ್ದು, ನೇಪಾಲದಿಂದ ತರಿಸಲಾಗಿದೆ. ಗರ್ಭಗುಡಿ ಅಥವಾ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಪವಿತ್ರ ಸ್ಥಳವು ಕಲ್ಲಿನ ಮೇಲ್ಚಾವಣಿಯ ಮೇಲೆ ನೆಲೆಯಾಗಿದೆ.   ಮುಖ್ಯವಾದ ಪ್ರತಿಮೆಯು ಸುಮಾರು 18 ಅಡಿ ಉದ್ದದ್ದಾಗಿದ್ದು,  ಇದನ್ನು ಮೂರು ವಿಭಿನ್ನ ಬಾಗಿಲುಗಳಿಂದ ನೋಡಬಹುದಾಗಿದೆ. ಮೊದಲನೆಯ ಬಾಗಿಲಿನಿಂದ ತಲೆ ಮತ್ತು ಎದೆಯ ಭಾಗವನ್ನು ನೋಡಬಹುದು; ಹಾಗೆಯೇ ಎರಡನೆಯ ಬಾಗಿಲಿನ ಮೂಲಕ ಕೈಗಳನ್ನು ಮತ್ತು ಮೂರನೆಯ ಬಾಗಿಲಿನ ಮೂಲಕ ಕಾಲುಗಳನ್ನು ವೀಕ್ಷಿಸಬಹುದು. 

ದೇವಸ್ಥಾನದ ವಾಸ್ತುಶಿಲ್ಪವು ತನ್ನ ಕಲ್ಲಿನ ಮತ್ತು ಕಂಚಿನ ಕೆಲಸಗಳಿಗೆ ಪ್ರಸಿದ್ಧವಾಗಿದೆ. ದೇವಸ್ಥಾನದ ಒಳಭಾಗವು ಸುಂದರ ವರ್ಣಚಿತ್ರಗಳು ಮತ್ತು ಭಿತ್ತಿಚಿತ್ರಗಳಿಂದ ತುಂಬಿದೆ. ಅವುಗಳಲ್ಲಿ ಬೃಹತ್ ಗಾತ್ರದ ವಿಷ್ಣು ದೇವರು,  ನರಸಿಂಹ ಸ್ವಾಮಿ, ಮಹಾ ಗಣಪತಿ ಮತ್ತು ಗಜ ಲಕ್ಷ್ಮೀ ಚಿತ್ರಗಳು ಸೇರಿವೆ. ದೇವಸ್ಥಾನದ  ಧ್ವಜ ಸ್ಥಂಬವು ಸುಮಾರು 80 ಅಡಿ ಎತ್ತರವಿದ್ದು ,  ಬಂಗಾರ ಲೇಪಿತ ತಾಮ್ರದ ತಗಡುಗಳಿಂದ ಸುತ್ತಲ್ಪಟ್ಟಿದೆ. ದೇವಸ್ಥಾನವು ಬಲಿ ಪೀಠ ಮಂಟಪ ಮತ್ತು ಮುಖ ಮಂಟಪದ ರೂಪಗಳನ್ನು ಹೊಂದಿದೆ.

ಪೂರ್ವ ಭಾಗದಿಂದ ವಿಸ್ತರಿಸಿ ಪವಿತ್ರವಾದ ಗರ್ಭಗುಡಿಯ ಒಳಗೆ ಇರುವ ವಿಶಾಲವಾದ ಮೊಗಸಾಲೆಯು 365 ಸ್ಥಂಭಗಳನ್ನು ಹೊಂದಿದೆ ಮತ್ತು ಇದರಲ್ಲಿ ಕಾಲು ಭಾಗವು ಸುಂದರವಾದ ಗ್ರಾನೈಟ್ ಕಲ್ಲಿನ ಕೆತ್ತನೆಯನ್ನು ಹೊಂದಿದೆ. ಪೂರ್ವ ಭಾಗದಲ್ಲಿನ ಪ್ರಮುಖ ದ್ವಾರದ ಕೆಳಭಾಗದ ನೆಲ ಮಾಳಿಗೆ ಇದೆ, ಇದು ನಾಟಕ ಶಾಲಾ ಎಂದೇ ಜನಪ್ರಿಯವಾಗಿದೆ, ಇಲ್ಲಿ ಕೇರಳದ ಸಾಂಪ್ರದಾಯಿಕ ಕಲೆಯ ರೂಪವಾಗಿರುವ ಕಥಕ್ಕಳಿಯನ್ನು ಮೀನಮ್ ಮತ್ತು ತುಲಂ ಎಂಬ ಮಲೆಯಾಳಂ ತಿಂಗಳುಗಳಲ್ಲಿ ಆಚರಣೆಯ ರೂಪದಲ್ಲಿ ಪ್ರದರ್ಶಿಸಲಾಗುತ್ತಿದೆ.

ತಿರುವನಂತಪುರದಲ್ಲಿನ ರಾಜರಾಗಿದ್ದ ಸ್ವಾತಿ ತಿರುನಾಳ್ ಅವರ ಕೃತಿಗಳಲ್ಲಂತೂ  ಪದ್ಮನಾಭಸ್ವಾಮಿಯ ಕುರಿತಾದ ಭಕ್ತಿಪರವಶತೆ ಅನಂತ. 

Sri Padmnabhaswamy Temple, Thiruvanantapuram 🌷🙏🌷







ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ