ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎನ್. ನರಸಿಂಹಯ್ಯ


 ಎನ್. ನರಸಿಂಹಯ್ಯ


ಬಹುಶಃ ಹೆಚ್ಚು ಪತ್ತೇದಾರಿ ಕಾದಂಬರಿ ಕಾದಂಬರಿಗಳನ್ನು ಬರೆದವರು ಎನ್. ನರಸಿಂಹಯ್ಯನವರಿರಬೇಕು.  ನಾವು ಓದುವುದಕ್ಕೆಂದು ಲೈಬ್ರರಿಗಳಿಗೆ ಹೋದರೆ ಅತಿ ಹೆಚ್ಚು ಕಣ್ಣಿಗೆ ಬೀಳುತ್ತಿದ್ದುದು ನರಸಿಂಹಯ್ಯನವರು ರಚಿಸಿದ ಪುಟ್ಟ ಪುಟ್ಟ,  ಸುಲಭ ಓದಿಗೆ ದಕ್ಕುತ್ತಿದ್ದ ನರಸಿಂಹಯ್ಯನವರ ಪುಸ್ತಕಗಳು.

ಎನ್‌. ನರಸಿಂಹಯ್ಯನವರು 1925ರ ಸೆಪ್ಟೆಂಬರ್ 18ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಸಿ. ನಂಜಪ್ಪ, ತಾಯಿ ಯಲ್ಲಮ್ಮ. ತಂದೆ ಚಿತ್ರದುರ್ಗದ ಕಡೆಯ ಜನಪದ ಕವಿ. ಬ್ರಿಟಿಷರ ಬಗ್ಗೆ ಲಾವಣಿ ಕಟ್ಟಿ ಹಾಡಿದಾಗ ಇವರ ಕಾವ್ಯ ಶಕ್ತಿಗೆ ಮೆಚ್ಚಿದ ಬ್ರಿಟಿಷರು, ದುರ್ಗದ ವಂಶಸ್ಥರೆಂದು ಗೌರವಿಸಿ ಇವರಿಗೆ ಭೂಮಿ ಮಂಜೂರು ಮಾಡಿದ್ದರಂತೆ. ನರಸಿಂಹಯ್ಯನವರು ಓದಿದ್ದು ಕನ್ನಡ ನಾಲ್ಕನೆಯ ತರಗತಿಯವರೆಗೆ. ತಂದೆಯ ಅಕಾಲ ಮರಣದಿಂದ ಓದು ನಿಲ್ಲಿಸಿ ಕಾಫಿ ತೋಟದಲ್ಲಿ ಕೆಲಸಕ್ಕೆ ಸೇರಿದರು. ನಂತರ ಖಾಸಗಿ ಬಸ್‌ ಕ್ಲೀನರ್ ಆಗಿ, ಕಂಡಕ್ಟರಾಗಿ ಯಾವುದೂ ಸರಿಯಾಗದೆ ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಮೊಳೆ ಜೋಡಿಸುವ ಕೆಲಸಕ್ಕೆ ಸೇರಿದರು. ಹೀಗೆ ಮೊಳೆ ಜೋಡಿಸುತ್ತಲೇ ಕಾದಂಬರಿಗಳನ್ನು ಓದತೊಡಗಿದರು. ಮ. ರಾಮಮೂರ್ತಿಯವರು ಬರೆದಿದ್ದ ಪತ್ತೇದಾರಿ ಕಾದಂಬರಿ ಓದಿ ಪ್ರೇರೇಪಿತರಾದರು. ಖಾಸಗಿ ಬಸ್‌ ಕಂಡಕ್ಟರ್ ಆಗಿದ್ದಾಗಲೂ ಅಷ್ಟೆ. ಬಿಡುವಿನ ವೇಳೆಯಲ್ಲಿ ಸಿಕ್ಕಿದ ಪುಸ್ತಕಗಳನ್ನೂ ಓದುತ್ತಾ ಕೂಡುತ್ತಿದ್ದುದರಿಂದಲೇ ಇವರಲ್ಲಿ ಬರೆಯುವ ತುಡಿತ ಮೊಳಕೆಯೊಡೆಯಿತು. ಕಂಡಕ್ಟರ್ ಕೆಲಸಬಿಟ್ಟು ಲೈಬ್ರರಿಯನ್ನೇಕೆ ಪ್ರಾರಂಭಿಸಬಾರದೆಂದು ಯೋಚಿಸಿ ಲೈಬ್ರರಿಯನ್ನು ಪ್ರಾರಂಭಿಸಿಯೇ ಬಿಟ್ಟರು. ತಿಂಗಳಿಗೆ ಎಂಟಾಣೆ ಸದಸ್ಯತ್ವದ ಲೈಬ್ರರಿ ಕೆಲಕಾಲ ಚೆನ್ನಾಗಿಯೇ ನಡೆಯಿತು. ಲೈಬ್ರರಿಗೆ ಪುಸ್ತಕ ಕೊಳ್ಳಲು ಹೋಗುತ್ತಿದ್ದುದು ಟಿ. ನಾರಾಯಣ ಅಯ್ಯಂಗಾರ್ ಅವರ ಬಳಿಗೆ. ಅಯ್ಯಂಗಾರ್ ಅವರು ಪತ್ತೇದಾರಿ ಕಾದಂಬರಿಗಳನ್ನು ಪ್ರಕಟಿಸುತ್ತಿದ್ದುದರಿಂದ ಅವರ ಬಳಿ ಕೊಳ್ಳಲು ಹೋದಾಗ ಇವರಿಗೊಂದು ಕಲ್ಪನೆ ಮಿಂಚಿತು. ‘ನಾನು ಪತ್ತೇದಾರಿ ಕಾದಂಬರಿ ಬರೆದರೆ ಪ್ರಕಟಿಸುತ್ತೀರಾ’ ಎಂದರು. ‘ಏಕೆ ಆಗೋಲ್ಲ ಬರೆದುತನ್ನಿ’ ಎಂದರು ಅಯ್ಯಂಗಾರ್ಯರು. ಹೀಗೆ ಬರವಣಿಗೆ ಪ್ರಾರಂಭವಾಗಿ ಬರೆದ ಮೊದಲ ಪತ್ತೇದಾರಿ ಕಾದಂಬರಿ ಪುರುಷೋತ್ತಮನ ಸಾಹಸ (1952).

ಪತ್ತೇದಾರನೊಬ್ಬನನ್ನೂ ಸೃಷ್ಟಿಸಿ ಬರೆದ ‘ಪುರುಷೋತ್ತಮನ ಸಾಹಸ’ ಕಾದಂಬರಿ ಬಲು ಬೇಗ ಜನಪ್ರಿಯತೆಯನ್ನೂ ತಂದು ಕೊಟ್ಟಿತು. ನಂತರ ಬರೆದ ಕಾದಂಬರಿ ‘ಭಯಂಕರ ಬೈರಾಗಿ’. ಈ ಕಾದಂಬರಿಯ ಅನೇಕ ಸಾವಿರ ಪ್ರತಿಗಳು ಮಾರಾಟವಾಗಿ ದಾಖಲೆಯನ್ನೇ ನಿರ್ಮಿಸಿತು. ಆದರೆ ಆಗಿನ ಸಂದರ್ಭದಲ್ಲಿ  ಲೇಖಕನಿಗೆ ಸಲ್ಲುತ್ತಿದ್ದ ಸಂಭಾವನೆ ಎಂದರೆ ಕೇವಲ 25ರಿಂದ 50ರೂ.ಗಳು ಮಾತ್ರ. ಇವರ ಕಾದಂಬರಿಗಳಿಗೆ ಎಷ್ಟು ಬೇಡಿಕೆ ಬಂದಿತೆಂದರೆ ಬಳೇಪೇಟೆ, ಕಾಟನ್‌ ಪೇಟೆಯಲ್ಲಿ ಪ್ರಕಾಶಕರು ಅಲ್ಲೇ ಕೂಡಿಸಿಕೊಂಡು ಕಾದಂಬರಿ ಬರೆಸಿಕೊಂಡದ್ದೂ ಉಂಟು. ಒಂದು ನೂರು ಪುಟದ ಸ್ಟೂಡೆಂಟ್‌ ನೋಟ್‌ ಬುಕ್‌ನಲ್ಲಿ ಮುದ್ದಾದ ಅಕ್ಷರದಿಂದ ಬರೆದು ಮುಗಿಸಿದ ಕಾದಂಬರಿಗಳು ಜೇಬಳತೆಯ ಪುಸ್ತಕಗಳಾಗಿ ಪ್ರಕಟಗೊಳ್ಳತೊಡಗಿದವು. ಹೀಗೆ ಬೇಡಿಕೆ ಬೆಳೆಯುತ್ತಾ ಬಂದರೂ ಲೇಖಕನಿಗೆ ಸಿಕ್ಕ ಗೌರವಧನ ಅತ್ಯಲ್ಪ. 150 ಕಾದಂಬರಿಗಳವರೆವಿಗೂ ಬರೇ 50 ರೂ.ಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ನಂತರ ಸ್ನೇಹಿತರ ಸಲಹೆಯಂತೆ ಶೇ 10ರ ಗೌರವಧನಕ್ಕೆ ಬೇಡಿಕೆ ಇಟ್ಟರು. ಈ ಬೇಡಿಕೆಗೆ ಪ್ರಕಾಶಕರು ಒಪ್ಪದೆ ಇವರ ಕಾದಂಬರಿಗಳ ಪ್ರಕಟಣೆಯನ್ನೇ ನಿಲ್ಲಿಸಿದರು. ಕಡೆಗೆ ಸೋತ ಪ್ರಕಾಶಕರು ಒಪ್ಪಿದರೂ ಒಂದು ಸಾವಿರ ಪ್ರತಿ ಎಂದು ಹೇಳಿ ನಾಲ್ಕೈದು ಸಾವಿರ ಪ್ರತಿ ಮುದ್ರಿಸಿ ಅಲ್ಲೂ ತಮ್ಮ ಕುಠಿಲತೆಯನ್ನು ತೋರಿಸಿದರು. ಹೀಗೆ ನರಸಿಂಹಯ್ಯನವರ ಕಾದಂಬರಿಗಳಿಗೆ ಬೇಡಿಕೆ ದಿನೇ ದಿನೇ ಹೆಚ್ಚಾಗಿ ಏಕತಾನತೆಯನ್ನು ಮುರಿಯಲು ಪತ್ತೇದಾರಿ ಪುರುಷೋತ್ತಮನ ಹೆಸರಿನಲ್ಲಿ ನೂರಕ್ಕೂ ಹೆಚ್ಚು ಕಾದಂಬರಿಗಳನ್ನೂ ರಚಿಸಿದ ನಂತರ,  ಮಧುಸೂದನನ ಚತುರತೆಯನ್ನೂ ಓದುಗರಿಗೆ ಪರಿಚಯಿಸತೊಡಗಿದರು. ಇವನ ಹೆಸರಲ್ಲೂ ನೂರಾರು ಕಾದಂಬರಿಗಳನ್ನು ಬರೆದ ನಂತರ ಬಂದವರು ‘ಅರಿಂಜಯ’ ಹಾಗೂ 'ಗಾಳಿರಾಯ'. 

ಪತ್ತೇದಾರಿ ಪುರುಷೋತ್ತಮನ ಹೆಸರಿನಲ್ಲಿ ಬರೆದ ಪ್ರಮುಖ ಕಾದಂಬರಿಗಳೆಂದರೆ ಪತ್ತೇದಾರಿ ಪುರುಷೋತ್ತಮ , ವಿಚಿತ್ರ ಕೊಲೆಗಾರ, ಭಯಂಕರ ಬೈರಾಗಿ, ಮೃತ್ಯುವಿನೊಡನೆ ಹೋರಾಟ, ಕನ್ನಡಿಯ ಮುಂದೆ, ಹೊಸಲು ದಾಟದ ಗಂಡು, ಸಾವಿನ ಸೋಲು, ಮಿತ್ರದ್ರೋಹಿ, ರಾಣಿವಾಸದ ರಹಸ್ಯ, ಸಂಶಯದ ಸುಳಿಯಲ್ಲಿ, ಸೇಡಿನ ಸರ್ಪ, ಗಿಣಿಕಚ್ಚಿದ ಹಣ್ಣು, ಬೀದಿಯ ಪಾರಿವಾಳ, ಎರಡು ತಲೆ ಹಾವು, ಕಾಮದ ಗೊಂಬೆ, ಕಲಿಯುಗದ ಪಾಂಚಾಲಿ, ಕಾರ್ಮುಗಿಲ ಕತ್ತಲಲ್ಲಿ, ಪೂಜಾರಿಯ ಪುಂಡಾಟ ಮುಂತಾದವುಗಳು. 

ಮಧುಸೂದನನ ಚತುರತೆಯಲ್ಲಿ ಪತ್ತೇದಾರ ಮಧುಸೂದನ, ವಿಚಿತ್ರವಿಲಾಸಿನಿ, ಜಾದೂಗಾರ ಜಗದೀಶ, ಮಾಟಗಾತಿಯ ಮಗಳು, ಅವಳಿ ಜವಳಿ, ನೀಲಿಬಣ್ಣದ ಕೋಟು ಮೊದಲಾದವು. 

ನಂತರ ಬಂದ ಅರಿಂಜಯನ ವಿಕ್ರಮಗಳೆಂದರೆ ಪತ್ತೇದಾರ ಅರಿಂಜಯ, ಭೂಪತಿರಂಗ, ಮಸಣದಿಂದ ಮನೆಗೆ, ಪ್ರೇಮರಹಸ್ಯ, ಮೂಕರ್ಜಿ ಪತ್ರಗಳು. ಇದಾದ ನಂತರ ಬಂದ ಗಾಳಿರಾಯನ ಮಹತ್ಸಾಧನೆ ಎಂದರೆ ಪತ್ತೇದಾರ ಗಾಳಿರಾಯ ಮೊದಲಾದವುಗಳು. ಅಪರಾಧ ಜಗತ್ತಿನ ವಿವಿಧ ಮೂಲೆಗಳನ್ನೂ ಶೋಧಿಸಿ ಅಪರಾಧಿಯ ಜಾಣಾಕ್ಷತೆಯನ್ನೂ ಒಂದೆಡೆ ಪ್ರತಿಬಿಂಬಿಸುತ್ತಾ ಬಂದರೂ ಕಾನೂನು ಬದ್ಧ ಹಾಗೂ ನೈತಿಕ ಜಗತ್ತಿಗೆ ಗೆಲುವು ಎಂಬುದೇ ಇವರ ಪತ್ತೇದಾರಿ ಕಾದಂಬರಿಗಳ ಆಶಯವಾಗಿರುತ್ತಿದ್ದುವು.

ನರಸಿಂಹಯ್ಯನವರು ಬರೆದ ಸಾಮಾಜಿಕ ಕಾದಂಬರಿಗಳೆಂದರೆ ಮುತ್ತುಗದ ಹೂ, ಹಾದಿ ತಪ್ಪಿದ ಹೆಣ್ಣು, ಜೀವನ ಸಂಗಾತಿ, ಪಂಚವರ್ಣದ ಗಿಣಿ ಮೊದಲಾದವು. 

ಎನ್‌. ನರಸಿಂಹಯ್ಯನವರ ಸುಮಾರು 550 ಕ್ಕೂ ಹೆಚ್ಚು ಕಾದಂಬರಿಗಳನ್ನೂ ರಚಿಸಿದ್ದರೂ ಎರಡನೆಯ ಮುದ್ರಣ ಕಾಣದ ಕಾದಂಬರಿಗಳೇ ಇರಲಿಲ್ಲವಂತೆ. 

ದಾವಣಗೆರೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ (1992), ರಾಜ್ಯೋತ್ಸವ ಪ್ರಶಸ್ತಿ (1997), ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ (2006) ಮುಂತಾದ ಗೌರವಗಳು ಎನ್. ನರಸಿಂಹಯ್ಯನವರಿಗೆ ಸಂದಿದ್ದವು.

ಎನ್. ನರಸಿಂಹಯ್ಯನವರು 2011ರ ಡಿಸೆಂಬರ್ 25ರಂದು ನಿಧನರಾದರು.  ಓದೆಂಬುದು ಮನರಂಜನೆ ಆಗಿದ್ದ ಕಾಲದಲ್ಲಿ  ಜನಸಾಮಾನ್ಯರ ನಡುವೆ ಎನ್. ನರಸಿಂಹಯ್ಯನವರ ಹೆಸರು ಸದಾ ಗೋಚರಿಸುವಂತಿತ್ತು.

On the birth anniversary of common man’s detective novelist N. Narasimhaiah known for over 550 titles

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ