ನೌಶಾದ್ ಅಲಿ
ನೌಶಾದ್ ಅಲಿ
ಭಾರತೀಯ ಚಿತ್ರರಂಗದಲ್ಲಿನ ತಮ್ಮ ವಿಶಿಷ್ಟ ಸುಮಧುರ ಸಂಗೀತ ಸಂಯೋಜನೆಗಳಿಂದ ಕೋಟ್ಯಾಂತರ ಹೃದಯಗಳನ್ನು ಅರಳಿಸಿದವರಲ್ಲಿ ನೌಶಾದ್ ಅಲಿ ಪ್ರಮುಖರು. ಶಾಸ್ತ್ರೀಯ ಸಂಗೀತದ ಸವಿಯನ್ನು ಚಿತ್ರಸಂಗೀತದಲ್ಲಿ ತಂದವರಾಗಿ ಅವರು ಪ್ರಖ್ಯಾತರು.
ನೌಶಾದ್ ಅಲಿ 1919ರ ಡಿಸೆಂಬರ್ 25ರ ಕ್ರಿಸ್‌ಮಸ್ ದಿನ ಲಖನೌನಲ್ಲಿ ಜನಿಸಿದರು. ಅವರ ತಂದೆ ವಾಹಿದ್ ಅಲಿ ಕೋರ್ಟಿನಲ್ಲಿ ಮುನ್ಷಿ ಅಗಿದ್ದರು. ನೌಶಾದ್ ಚಿಕ್ಕಂದಿನಲ್ಲಿ ಲಕ್ನೋದಿಂದ 25 ಕಿಲೋಮೀಟರ್ ದೂರದಲ್ಲಿದ್ದ ಬರಬಾಂಕಿ ಸಮೀಪದ ದೇವಾ ಷರೀಫ್ ವಾರ್ಷಿಕ ಉತ್ಸವದಲ್ಲಿ ಭಾಗಿಯಾಗುತ್ತಿದ್ದರು. ಅದು ಎಲ್ಲ ಪ್ರಸಿದ್ಧ ಸಂಗೀತಗಾರರೂ ಒಂದೆಡೆ ಕಾರ್ಯಕ್ರಮ ನೀಡುವ ತಾಣವಾಗಿತ್ತು. ಇದು ಚಿಕ್ಕಂದಿನಲ್ಲೇ ಇವರ ಮೇಲೆ ಸಂಗೀತದ ಪ್ರಭಾವ ಬೀರಿತು. ಅಲ್ಲಿ ಅವರು ಉಸ್ತಾದ್ ಗುರ್ಬತ್ ಅಲಿ ಯುಸುಫ್ ಅಲಿ, ಬಬ್ಬನ್ ಸಾಹೇಬ್ ಮುಂತಾದವರಿಂದ ಸಂಗೀತ ಕಲಿತರು. ಹಾರ್ಮೋನಿಯಂ ರಿಪೇರಿ ಮಾಡುತ್ತಿದ್ದರು. ಯುವ ಕಲಾವಿದರೊಂದಿಗೆ ನಾಟಕಗಳಿಗೆ ಸಂಗೀತ ನೀಡುತ್ತಿದ್ದರು. ಲಕ್ನೋದ ರಾಯಲ್ ಚಿತ್ರಮಂದರದಲ್ಲಿ ಮೂಕಿ ಚಿತ್ರಗಳನ್ನು ನೋಡುತ್ತಿದ್ದರು. ಅಂದಿನ ದಿನಗಳಲ್ಲಿ ಈ ಮೂಕಿ ಚಿತ್ರಗಳಿಗೆ ಹೊಂದುವಂತೆ ಚಿತ್ರಮಂದಿರದೊಳಗೆ ವಾದ್ಯಗಳನ್ನು ನುಡಿಸುವುದಕ್ಕೆ ಕಲಾವಿದರನ್ನು ನೇಮಿಸಿಕೊಳ್ಳುತ್ತಿದ್ದರು. ಈ ಪಾಲ್ಗೊಳ್ಳುವಿಕೆ ಚಲನಚಿತ್ರ ಸಂಗೀತದ ಸೂಕ್ಷ್ಮಗಳನ್ನು ಅರಿಯುವುದಕ್ಕೆ ನೌಶಾದ್ ಅವರಿಗೆ ಸಹಕಾರಿಯಾಯಿತು. ಅನೇಕ ಜಾನಪದೀಯ ಸಂಗೀತಗಳ ಪರಿಚಯವೂ ಅವರಿಗೆ ದಕ್ಕಿತ್ತು. 1931ರ ವೇಳೆಗೆ ಮಾತನಾಡುವ ಚಿತ್ರಗಳೂ ಬಂದು ನೌಶಾದ್ ಚಿತ್ರರಂಗದ ಮೋಡಿಗೆ ಅಪಾರವಾಗಿ ಸಿಲುಕಿದ್ದರು. ಸಂಪ್ರದಾಯಸ್ಥ ಅಪ್ಪ ಮನೆಯಲ್ಲಿ ಜಾಗ ಬೇಕು ಅಂದ್ರೆ ಸಂಗೀತ ಮತ್ತು ಸಿನಿಮಾ ಹುಚ್ಚಿನಿಂದ ಈಚೆ ಬರಬೇಕು ಅಂತ ತಾಕೀತು ಮಾಡಿದ್ರು. ನೌಶಾದ್ 1937ರಲ್ಲಿ ಮನೆಬಿಟ್ಟು ಮುಂಬೈ ಕಡೆ ಹೊರಟರು.
ನೌಶಾದ್ 1940ರಲ್ಲಿ ‘ಪ್ರೇಮ್‌ನಗರ್’ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು. 1944ರಲ್ಲಿ ಬಂದ 'ರತ್ತನ್' ಅವರ ಪ್ರಥಮ ದೊಡ್ಡ ಯಶಸ್ಸು. ಆನಂತರ ಅವರು ಸಂಗೀತ ನೀಡಿದ 35 ರಜತ ಮಹೋತ್ಸವ, 12 ಸ್ವರ್ಣಮಹೋತ್ಸವ ಮತ್ತು 3 ವಜ್ರಮಹೋತ್ಸವ ಅಚರಿಸಿದ ಚಿತ್ರಗಳು ಮೂಡಿದವು.
‘ಬೈಜು ಬಾವ್ರಾ’, 'ಮದರ್ ಇಂಡಿಯಾ’, ‘ಮುಘಲ್-ಎ-ಆಜಂ’, 'ತಾಜ್‍ಮಹಲ್', 'ರಾಮ್ ಔರ್ ಶ್ಯಾಮ್, ‘ಗಂಗಾ ಜಮುನಾ’, ‘ಪಾಕೀಜಾ’, ‘ಅಂದಾಜ್’ ಮೊದಲಾದ ಚಿತ್ರಗಳು ಅವರನ್ನು ಜನಪ್ರಿಯತೆಯ ಉತ್ತುಂಗಕ್ಕೆ ಕೊಂಡೊಯ್ದಿದ್ದವು.
ನಲವತ್ತರ ದಶಕದಲ್ಲೇ ಕೀರ್ತಿಯ ಉತ್ತುಂಗಕ್ಕೇರಿದ ನೌಶಾದ್ ಅಲಿ ಅವರ ಜೀವನ ಹೂವಿನ ಹಾಸುಗೆಯೇನೂ ಆಗಿರಲಿಲ್ಲ. ಒಂದು ಕಾಲದಲ್ಲಿ ಅವರು ದಿಕ್ಕಿಲ್ಲದೇ ಫುಟ್ ಪಾತ್ ನಲ್ಲಿ ಅಡ್ಡಾಡುವ ದಿನಗಳೂ ಇದ್ದವಂತೆ. ಅಂಥ ಮುಳ್ಳುಗಳ ಮಧ್ಯವೇ ಇರಬೇಕು ಗುಲಾಬಿ ರೂಪು ತಳೆಯುವುದು.
ಹಿಂದಿ ಚಿತ್ರಗಳ ಸಂಗೀತ ಸಂಯೋಜನೆಯಲ್ಲಿ ಪಾಶ್ಚಿಮಾತ್ಯ ಸಂಗೀತ ಅಳವಡಿಕೆ, ಹಿಂದೂಸ್ತಾನಿ ಸಂಗೀತ ಪರಂಪರೆಯನ್ನು ಚಿತ್ರಗೀತೆಗಳಿಗೂ ವಿಸ್ತರಿಸಿದ್ದು, ಹಾಡಿನ ಮಧ್ಯೆ ಸಂಭಾಷಣೆಗಳ ಸೇರ್ಪಡೆಯಂಥ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದು ... ಹೀಗೆ ನೌಶಾದ್ ಅಲಿ ಹಿಂದಿ ಚಲನಚಿತ್ರ ಕ್ಷೇತ್ರದಲ್ಲಿ ನೂತನ ಭಾಷ್ಯವನ್ನೇ ಬರೆದರು. 67 ಚಿತ್ರಗಳಲ್ಲಿ 250ಕ್ಕೂ ಅಧಿಕ ಗೀತೆಗಳಿಗೆ ಅವಿಸ್ಮರಣೀಯ ಸಂಗೀತ ನೀಡಿದ್ದರು.
ಖ್ಯಾತ ಗಾಯಕರಾದ ಸುರೈಯಾ, ಉಮಾದೇವಿ ಹಾಗೂ ಮಹೇಂದ್ರ ಕಪೂರ್ ಅವರನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ನೌಶಾದ್ ಅವರಿಗೆ ಸಲ್ಲುತ್ತದೆ. ಲತಾ ಮಂಗೇಷ್ಕರ್ ಧ್ವನಿ ಮಧುರಗೊಳ್ಳುವಲ್ಲಿ ನೌಶಾದ್ ಪಾತ್ರ ಹಿರಿದು. ಇವರು ಸಂಗೀತ ನಿರ್ದೇಶಿಸಿದ ಗೀತೆಗಳು ಲತಾ ಮಂಗೇಷ್ಕರ್ ಧ್ವನಿಯಲ್ಲಿ ಅಪಾರ ಜನಪ್ರಿಯತೆ ಪಡೆದಿರುವುದು ಸಹಾ ಗಮನಾರ್ಹ ಸಂಗತಿ.
ಕವಿಯೂ ಆಗಿದ್ದ ನೌಶಾದ್ ಅಲಿ 'ಆತ್ವಾನ್ ಸುರ್' ಎಂಬ ಉರ್ದು ಕಾವ್ಯ ಸಂಕಲನವನ್ನು. ಪ್ತಕಟಿಸಿದ್ದರು.
ನೌಶಾದ್ ಅಲಿ ಅವರಿಗೆ ದಾದಾಸಾಹೇಬ್ ಫಾಲ್ಕೆ , ಪದ್ಮಭೂಷಣ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು.
ನೌಶಾದ್ ಅಲಿ 2006ರ ಮೇ 5ರಂದು ನಿಧನರಾದರು. ಅವರ ಹೆಸರು ಸಂಗೀತಲೋಕದಲ್ಲಿ ಅಮರ.
On the birth anniversary of great music director Noushad Ali
ಕಾಮೆಂಟ್‌ಗಳು