ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೀತಾಕಾಂತ್ ಮಹಾಪಾತ್ರಾ


 ಸೀತಾಕಾಂತ್ ಮಹಾಪಾತ್ರ


ಒಡಿಯಾ ಭಾಷಿಗರಾದ ಸೀತಾಕಾಂತ್ ಮಹಾಪಾತ್ರಾ ಸಾಹಿತಿಗಳಾಗಿ ಜ್ಞಾನಪೀಠ ಪುರಸ್ಕೃತರಾದವರು. ಒಡಿಯಾ ಮತ್ತು ಇಂಗ್ಲಿಷ್ ಸಾಹಿತಿಗಳಾದ ಅವರು ಐಎಎಸ್ ಅಧಿಕಾರಿಗಳಾಗಿ, ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷರಾಗಿ ಸಹಾ ಹೆಸರಾದವರು.

ಸೀತಕಾಂತ್ ಮಹಾಪಾತ್ರರು 
ಮಹಾನದಿಯ ಚಿತ್ರೋಟಪಾಲಾ ದಡದಲ್ಲಿರುವ ಮಹಾಂಗ ಎಂಬ ಹಳ್ಳಿಯಲ್ಲಿ 1937ರ ಸೆಪ್ಟೆಂಬರ್ 17ರಂದು ಜನಿಸಿದರು. ಸಾಂಪ್ರದಾಯಿಕ ವಾತಾವರಣವಿದ್ದ  ಮನೆಯಲ್ಲಿ ಮಹಾಪಾತ್ರರು ಭಗವದ್ಗೀತೆಯ ಒಡಿಯಾ ಆವೃತ್ತಿಯ ಅಧ್ಯಾಯವನ್ನು ಪಠಿಸುತ್ತಾ ಬೆಳೆದರು. ಕೊರುವಾ ಸರ್ಕಾರಿ ಪ್ರೌಡ ಶಾಲೆಯಲ್ಲಿ ಶಾಲಾ ಶಿಕ್ಷಣ ಪಡೆದ ನಂತರ, ಬಿ.ಎ.  ಹಿಸ್ಟರಿ ಆನರ್ಸ್ ಪದವಿಯನ್ನು ಉತ್ಕಲ್ ವಿಶ್ವವಿದ್ಯಾಲಯದಿಂದ 1957ರಲ್ಲಿ ಪಡೆದರು.  1959ರಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. 

ತಮ್ಮ ಓದಿನ ದಿನಗಳಲ್ಲಿ ಸೀತಾಕಾಂತ್ ಮಹಾಪಾತ್ರರು ವಿಶ್ವವಿದ್ಯಾಲಯ ಪತ್ರಿಕೆಯ ಸಂಪಾದಕರಾಗಿದ್ದರು. ಆ ದಿನಗಳಲ್ಲಿ ಅಂಗ್ಲ ಮತ್ತು ಒಡಿಯಾ ಭಾಷೆಗಳೆರಡರಲ್ಲೂ  ಬರೆಯುತ್ತಿದ್ದ ಅವರು  ಮುಂದೆ ತಮ್ಮ ಸ್ಥಳೀಯ ಭಾಷೆಯಲ್ಲಿ ಮಾತ್ರ ಕವನ ಬರೆಯಲು ನಿರ್ಧರಿಸಿದರು. ಮುಂದೆ ಅನೇಕ  ಪಾಂಡಿತ್ಯಪೂರ್ಣ ಕೃತಿಗಳನ್ನು  ಇಂಗ್ಲಿಷ್‌ನಲ್ಲಿಯೂ ಬರೆದರು. ಪೂರ್ವ ಭಾರತದ ಬುಡಕಟ್ಟು ಜನಾಂಗದವರನ್ನು ಕುರಿತು  ಹೋಮಿ ಭಾಭಾ ಫೆಲೋಶಿಪ್ನಲ್ಲಿ ಅಧ್ಯಯನ ನಡೆಸಿದರು.

ಸೀತಾಕಾಂತ್ ಮಹಾಪಾತ್ರರು ಉತ್ಕಲ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದಲ್ಲಿ ಎರಡು ವರ್ಷಗಳ ಕಾಲ ಬೋಧನೆ ಮಾಡಿದರು. 1961ರಲ್ಲಿ ರಾಜ್ಯವ್ಯಾಪಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದು ಮೊದಲ ಓಡಿಯಾ ಆಗಿ ಐಎಎಸ್‌ಗೆ ಸೇರಿದರು.  ಸಂಸ್ಕೃತಿ ಸಚಿವಾಲಯ, ಭಾರತ ಸರ್ಕಾರದ ಕಾರ್ಯದರ್ಶಿ ಮತ್ತು ಯುನೆಸ್ಕೋದ ಸಾಂಸ್ಕೃತಿಕ ಅಭಿವೃದ್ಧಿಗಾಗಿ ಸಮಿತಿ ಸದಸ್ಯತ್ವ ಸೇರಿದಂತೆ ಹಲವಾರು ಪ್ರಮುಖ ಹುದ್ದೆಗಳನ್ನು ಅವರು ಅಲಂಕರಿಸಿದರು.  ಹಾರ್ವರ್ಡ್ ವಿಶ್ವವಿದ್ಯಾಲಯದ ಸೀನಿಯರ್ ಫೆಲೋ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಇಂಟರ್ನ್ಯಾಷನಲ್ ಅಕಾಡೆಮಿ ಆಫ್ ಪೊಯೆಟ್ಸ್‌ನ ಗೌರವ ಫೆಲೋ ಮತ್ತು ನವದೆಹಲಿಯ ರಾಷ್ಟ್ರೀಯ ಪುಸ್ತಕ ಟ್ರಸ್ಟ್‌ನ ಅಧ್ಯಕ್ಷತೆ ಮುಂತಾದ ಅನೇಕ ಗೌರವ ಸ್ಥಾನಗಳೂ ಅವರಿಗೆ ಸಂದಿದ್ದವು. 

ಸೀತಾಕಾಂತ್ ಮಹಾಪಾತ್ರರ ಮೊದಲ ಕವನ ಸಂಕಲನ ದೀಪ್ತಿ ಓ ದ್ಯುತಿ 1963ರಲ್ಲಿ ಪ್ರಕಟಗೊಂಡಿತು.  ಅಷ್ಟಪದಿ, ಸಬ್ದರ್ ಆಕಾಶ್, ಅರ ದ್ರಶ್ಯ, ಶ್ರೇಷ್ಠ ಕವಿತಾ ಮುಂತಾದವು ಅವರ ಇತರ ಪ್ರಮುಖ ಕಾವ್ಯಸಂಕಲನಗಳು. ಸಬ್ದ, ಸ್ವಪ್ನ ಓ ನಿರ್ವಿಕತ, 1990 ಮುಂತಾದವು ಪ್ರಬಂಧ ಸಂಗ್ರಹಗಳು. ಅನೇಕ ಸರತ, 1981 ಮುಂತಾದವು ಪ್ರವಾಸ ಕಥನಗಳು. ಉಷಾವಿಲಾಸ, 1996 ಮುಂತಾದವು ತಾಳೆಗರಿ ಮೇಲಿನ ಲಿಖಿತಗಳು.

ಸೀತಾಕಾಂತ್ ಮಹಾಪಾತ್ರರು ಇಂಗ್ಲಿಷಿನಲ್ಲಿ 
The ruined Temple and other poems, 1996 (poetry, translation); and Unending Rhythms (Oral poetry of Indian Tribals in translation) ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ.

ಸೀತಾಕಾಂತ್ ಮಹಾಪಾತ್ರರಿಗೆ ಹಲವು ಬಾರಿ ಒರಿಸ್ಸಾ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸರಲಾ ಪ್ರಶಸ್ತಿ, ಸಮಗ್ರ ಸಾಹಿತ್ಯ ಸಾಧನೆಗೆ ಜ್ಞಾನಪೀಠ ಪ್ರಶಸ್ತಿ ಪ್ರಶಸ್ತಿ, ಸಾರಾ ಆಕಾಶ್ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ, ಪದ್ಮವಿಭೂಷಣ ಮುಂತಾದ ಅನೇಕ ಗೌರವಗಳು ಸಂದಿವೆ.

On the birthday of eminent Indian poet and literary critic in Odia and English, Sitakanth Mahapatra 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ