ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಳಗಿ ಗೋಪಾಲ್


 ಮಳಗಿ ಗೋಪಾಲ್


ಮಳಗಿ ಗೋಪಾಲ್ ವ್ಯಂಗ್ಯಚಿತ್ರಗಾರಿಕೆಯಲ್ಲಿ ಹೆಸರಾದವರು.  ಅವರು ವಿಗ್ರಹಗಳನ್ನು ಮಾಡುವ, ತಬಲಾ ನುಡಿಸುವ ಮತ್ತು ಹಾರ್ಮೋನಿಯಂ ನುಡಿಸುವ ಹವ್ಯಾಸಗಳನ್ನು ಸಹಾ ಜೊತೆಗೆ ಅಪ್ತವಾಗಿ ಜೋಡಿಸಿಕೊಂಡಿದ್ದಾರೆ. ಸೆಪ್ಟೆಂಬರ್ 17 ಮಳಗಿ ಗೋಪಾಲರ ಹುಟ್ಟುಹಬ್ಬ.

ಮಳಗಿ ಗೋಪಾಲರು ಮೂಲತಃ ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ, ಹಿರೇಕೆರೂರು ತಾಲ್ಲೂಕಿನ ಚೀಕ್ಕೇರೂರ್ ಎಂಬ ಗ್ರಾಮದವರು. ಹೈಸ್ಕೂಲುವರೆಗೂ ಅಲ್ಲಿಯೇ ಶಿಕ್ಷಣ ಪಡೆದ ಗೋಪಾಲ್ ನಂತರ ಶಿವಮೊಗ್ಗದಲ್ಲಿ ಬಿಬಿಎಂ ಪದವಿ ಪಡೆದರು. 

ವೃತ್ತಿಯಲ್ಲಿ ಗೋಪಾಲರು 1982ರಿಂದ 1998ವರೆಗೆ ದಾವಣಗೆರೆ ಕಾಟನ್ ಮಿಲ್ಸ್ ಅಲ್ಲಿ ಉದ್ಯೋಗ ಮಾಡಿ, ನಂತರ ಬೆಂಗಳೂರಿನ ಮೈಕ್ರೋ ಲ್ಯಾಬ್ಸ್  ಎಂಬ ಫಾರ್ಮಾ ಕಂಪನಿಯಲ್ಲಿ ಜೂನ್ 2020ವರೆಗೆ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ.

ಗೋಪಾಲ್ ಅವರಿಗೆ ಚಿತ್ರ ಬರೆಯುವ ಹವ್ಯಾಸ ಅವರ  ತಂದೆಯವರ ಮಾರ್ಗದರ್ಶನದಿಂದ ಚಿಕ್ಕಂದಿನಿಂದಲೇ ಲಭಿಸಿತ್ತು. ಓದುವ ದಿನಗಳಲ್ಲಿ  ವ್ಯಂಗ್ಯ ಚಿತ್ರ ಬರೆಯುವ ಹವ್ಯಾಸ ಅವರ  ಸ್ನೇಹಿತ ಹಾಗೂ ಕಾಲೇಜ್ ಸಹಪಾಠಿ ಎಚ್. ಎಸ್. ವಿಶ್ವನಾಥ ಅವರಿಂದ ಅಂಟಿಕೊಂಡಿತ್ತು. ಆಗಲೇ ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಗೋಪಾಲರ ಚಿತ್ರಗಳು ಆಗಾಗ ಪ್ರಕಟವಾಗುತ್ತಿದ್ದವು.

ಮುಂದೆ ಉದ್ಯೋಗಕ್ಕೆ ಸೇರಿದ ಮೇಲೆ ಕೆಲ ವರ್ಷಗಳ ಕಾಲ ಬರೆಯುವುದನ್ನು ನಿಲ್ಲಿಸಿದ್ದ ಗೋಪಾಲ್ ಮತ್ತೆ 1994ರ ನಂತರದಲ್ಲಿ  ಪ್ರಾರಂಭಮಾಡಿದರು.   ಹೊಟ್ಟೆಪಾಡಿನ ಕೆಲಸದ ಮಧ್ಯೆ ಪ್ರವೃತ್ತಿಗೆ ಮಧ್ಯೆ ಮಧ್ಯೆ ಅಡೆತಡೆ ಬಂದಿದ್ದರೂ, ಅವರಲ್ಲಿ ಹುದುಗಿದ್ದ ಪ್ರತಿಭೆ ಆಗ್ಗಿಂದಾಗ್ಗೆ ಪುಟಿದೆದ್ದಿದೆ.  ವ್ಯಂಗ್ಯಚಿತ್ರಕಾರ ನಾಗನಾಥರ ಪ್ರೋತ್ಸಾಹ ಬೆಂಬಲಗಳ ಮೂಲಕ ತರಂಗ ಗುಂಪಿಗೆ ಪರಿಚಿತರಾದ ಮಳಗಿ ಗೋಪಾಲರ ರೇಖಾ ಚಿತ್ರಗಳು, ಇತ್ತೀಚಿನ ದಿನಗಳಲ್ಲಿ  ನಿರಂತರ ಹರಿದುಬರುತ್ತಿವೆ.

ಮಳಗಿ ಗೋಪಾಲರ  ಮತ್ತೊಂದು ವಿಶೇಷ ಪ್ರತಿಭೆ ಅಂದರೆ ಮಣ್ಣಿನ ಗಣೇಶ ಹಾಗೂ ಇತರ ಮೂರ್ತಿಗಳನ್ನು ಮಾಡುವದು.

ಮಳಗಿ ಗೋಪಾಲ್ ಅವರಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲೂ ಆಸಕ್ತಿ ಇದ್ದು ತಬಲಾ ನುಡಿಸುವ ಹವ್ಯಾಸವೂ ಅವರಿಗೆ ಚಿಕ್ಕಂದಿನಿಂದಲೇ ಜೊತೆಗೂಡಿದೆ. ಇದಕ್ಕೂ ಅವರ ತಂದೆಯವರೇ ಅವರಿಗೆ  ಪ್ರಥಮ ಗುರು. ನಂತರ ಕೆಲ ಗುರುಗಳ ಹತ್ತಿರ ಪಾಠಕ್ಕೆ ಹೋಗಿ ಕಲಿತದ್ದೂ ಉಂಟು. ಹಾರ್ಮೋನಿಯಂ ನುಡಿಕೆ ಸಹಾ ಗೋಪಾಲರಿಗೆ ತಿಳಿದಿದೆ.

"ನನಗೆ ತಿಳಿದಿರುವುದೆಲ್ಲ ಹವ್ಯಾಸಿ ಮಟ್ಟದಲ್ಲಿ " ಎಂಬುದು ಮಳಗಿ ಗೋಪಾಲರ ನಮ್ರನುಡಿ.

ಆತ್ಮೀಯ ಮಳಗಿ ಗೋಪಾಲರಿಗೆ ಹುಟ್ಟುಹಬ್ಬದ ಶುಭಾಶಯ ಹೇಳುತ್ತಾ ಅವರಿಗೂ ಅವರ ಕುಟುಂಬದವರಿಗೂ ಶುಭಹಾರೈಸೋಣ.

On the birthday of cartoonist and our affectionate friend Malagi Gopal 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ