ಪ್ರೇಮ್ ಚೋಪ್ರಾ
ಪ್ರೇಮ್ ಚೋಪ್ರಾ
ಪ್ರೇಮ್ ಚೋಪ್ರಾ ಚಲನಚಿತ್ರರಂಗದ ಮಹಾನ್ ನಟರಲ್ಲೊಬ್ಬರು. ನಾನು ಮೊದ ಮೊದಲು ಇವರ ಚಿತ್ರಗಳನ್ನು ಕಂಡಾಗ ಇಷ್ಟು ಸುಂದರವಾಗಿ ಹೀರೋ ತರಹ ಇರುವ ವ್ಯಕ್ತಿಯನ್ನು ಯಾಕೆ ವಿಲನ್ ಮಾಡಿದರೊ ಎಂದುಕೊಳ್ಳುತ್ತಿದ್ದೆ. ಕಳೆದ 6 ದಶಕಗಳಿಂದ ಚಿತ್ರರಂಗದಲ್ಲಿರುವ ಅವರು ಹಿಂದೀ ಮತ್ತು ಪಂಜಾಬಿ ಭಾಷೆಗಳಲ್ಲಿನ ಸುಮಾರು 400 ಚಿತ್ರಗಳಲ್ಲಿ ನಟಿಸಿದ್ದಾರೆ.
ಪ್ರೇಮ್ ಚೋಪ್ರಾ 1935ರ ಸೆಪ್ಟೆಂಬರ್ 23ರಂದು ಲಾಹೋರ್‌ನಲ್ಲಿದ್ದ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ದೇಶ ವಿಭಜನೆಯ ಸಂದರ್ಭದಲ್ಲಿ ಇವರ ಕುಟುಂಬ ಸಿಮ್ಲಾಕ್ಕೆ ವಲಸೆ ಬಂತು. ತಂದೆ ರಣಬೀರ್‌ಲಾಲ್ ಅವರಿಗೆ ಮಗ ಡಾಕ್ಟರ್ ಅಥವಾ ಐಎಎಸ್ ಆಫೀಸರ್ ಆಗಬೇಕೆಂಬ ಕನಸಿತ್ತು. ತಾಯಿ ರೂಪರಾಣಿ. ಶಾಲೆ ಮತ್ತು ಕಾಲೇಜು ಶಿಕ್ಷಣವನ್ನು ಸಿಮ್ಲಾದಲ್ಲೇ ಮುಗಿಸಿದ ಪ್ರೇಮ್, ಪಂಜಾಬ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು.
ಪ್ರೇಮ್ ಶಾಲಾಕಾಲೇಜು ದಿನಗಳಲ್ಲೇ ನಾಟಕ, ನಟನೆಯ ಗೀಳು ಹಚ್ಚಿಕೊಂಡರು. ಪಾಲಕರ ವಿರೋಧದ ಮಧ್ಯೆಯೂ ನಟನೆಯ ಹುಚ್ಚು ಹಚ್ಚಿಕೊಂಡಿದ್ದ ಪ್ರೇಮ್ ಈ ಹುಚ್ಚಿನಿಂದ ಮುಂಬೈಗೆ ವಲಸೆ ಬಂದರು. ಆರಂಭದಲ್ಲಿ ಮುಂಬೈನ ವಿವಿಧ ಸ್ಟುಡಿಯೋಗಳಿಗೆ ಭೇಟಿ ನೀಡುತ್ತಿದ್ದರು. ಸಿಕ್ಕಿದ ಅವಕಾಶಗಳು ಅತ್ಯಲ್ಪ. ಪ್ರೇಮ್ ಬಂಗಾಳ, ಬಿಹಾರ ಮತ್ತು ಒರಿಸ್ಸಾದಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಪ್ರಸರಣ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ನಿಮಿತ್ತ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಸಿಕ್ಕ ಅಪರಿಚಿತನೊಬ್ಬ ‘ನಿನಗೆ ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ಇದೆಯಾ?’ ಎಂದು ಕೇಳಿದ್ದೇ ತಡ, ಆತನೊಡನೆ ರಣಜಿತ್ ಸ್ಟುಡಿಯೋಕ್ಕೆ ತೆರಳಿಯೇ ಬಿಟ್ಟರು. ನಿರ್ಮಾಪಕ ಜಗಜಿತ್ ಸೇಥಿ ಅವರು ತಮ್ಮ ಪಂಜಾಬಿ ಚಿತ್ರ ‘ಚೌಧರಿ ಕರ್ನೈಲ್ ಸಿಂಗ್’ನಲ್ಲಿ ಪ್ರೇಮ್‌ಗೆ ನಾಯಕ ಪಾತ್ರ ನೀಡಿದರು. ಪ್ರೇಮ್ ನಟಿಸಿದ ಈ ಚೊಚ್ಚಲ ಚಿತ್ರ ಹಿಂದೂ-ಮುಸ್ಲಿಂ ಸಮುದಾಯದ ಇಬ್ಬರು ಪ್ರೇಮಿಗಳ ಕಥೆಯನ್ನೊಳಗೊಂಡಿದ್ದಾಗಿತ್ತು. ಭಾರತ-ಪಾಕಿಸ್ತಾನ ವಿಭಜನೆಯ ಹಿನ್ನೆಲೆಯಲ್ಲಿ ಹೆಣೆಯಲಾದ ಈ ಚಿತ್ರ ಭರ್ಜರಿ ಯಶ ಕಂಡಿತು. ಈ ಚಿತ್ರ ಉತ್ತಮ ಚಿತ್ರ ಮತ್ತು ಶ್ರೇಷ್ಠ ನಟಿ ರಾಷ್ಟ್ರೀಯ ಪುರಸ್ಕಾರ ಗಳಿಸಿತು. ಈ ಚಿತ್ರ ಪೂರ್ಣಗೊಳ್ಳುವುದಕ್ಕೆ 3 ವರ್ಷ ಸಮಯ ತೆಗೆದುಕೊಂಡಿತು. ಈ ಚಿತ್ರಕ್ಕೆ 2,500 ರೂ ಸಂಭಾವನೆ ಪಡೆದ ಪ್ರೇಮ್ ಚೋಪ್ರಾ ಅವರ ಸಿನಿಮಾ ಪಯಣ ಹೀಗೇ ಮುಂದುವರಿಯಿತು.
ಮುಂದೆ ಸಪನಿ ಮತ್ತು ವೊ ಕೌನ್ ಥಿ, ಶಹೀದ್, ಮೈ ಶಾದಿ ಕರನೆ ಚಲಾ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಶಹೀದ್ ಚಿತ್ರದಲ್ಲಿ ಮನೋಜ್‌ಕುಮಾರ್ ಪ್ರೇಮ್‌ಗೆ ಒಳ್ಳೆಯ ಪಾತ್ರ ಕೊಟ್ಟಿದ್ದರು. ಮುಂದೆ ‘ಮೈ ಶಾದಿ ಕರನೆ ಚಲಾ’ ಚಿತ್ರದ ಚಿತ್ರೀಕರಣ ವೇಳೆ ಯಾರೋ ಒಬ್ಬರು, ‘ನಿನಗೆ ಹೀರೋಗಿಂತ ವಿಲನ್ ಪಾತ್ರ ಹೆಚ್ಚು ಸೂಕ್ತ’ ಅಂತ ಹೇಳಿದರು. ಮುಂದೆ ಅದೇ ನಿಜವಾಯ್ತು. ಮೇರಾ ಸಾಯಾ, ತೀಸ್ರೀ ಮಂಝೀಲ್ ಮತ್ತು ಉಪಕಾರ್ ಚಿತ್ರಗಳ ನಂತರ ಪ್ರೇಮ್‌ಗೆ ಖಳನಾಯಕ ಪಾತ್ರಗಳ ಸುರಿಮಳೆಯಾಯ್ತು. ನಿಶಾನ್, ಸಿಖಂದರ್ ಎ ಅಜಮ್, ಸಗಾಯ್, ಮೇರಾ ಸಾಯಾ ಚಿತ್ರಗಳಲ್ಲಿನ ಭರ್ಜರಿ ಯಶಸ್ಸಿನ ನಂತರ, 1967ರಲ್ಲಿ ಟೈಮ್ಸ್ ಆಫ್ ಇಂಡಿಯಾ ಕೆಲಸಕ್ಕೆ ಗುಡ್‌ಬೈ ಹೇಳಿದ ಪ್ರೇಮ್, ಪೂರ್ಣಪ್ರಮಾಣದಲ್ಲಿ ನಟನೆಯಲ್ಲಿ ತೊಡಗಿಕೊಂಡರು. 'ಬಾಬ್ಬಿ' ಚಿತ್ರದ ‘ಪ್ರೇಮ್ ನಾಮ್ ಹೈ ಮೇರಾ ಪ್ರೇಮ್ ಚೋಪ್ರಾ’ ಸಂಭಾಷಣೆಯಿಂದ ಅವರು ಪ್ರಸಿದ್ಧರಾದರು.
1980ರಲ್ಲಿ, ಪ್ರೇಮ್ ದೆಹಲಿಯಲ್ಲಿ ತಮ್ಮ ಮತ್ತು ತಂದೆಯ ಜಂಟಿ ಹೆಸರಲ್ಲಿ ಬಂಗಲೆ ಖರೀದಿಸಿ, ತಂದೆ ಹಾಗೂ ಸಹೋದರರೊಡನೆ ವಾಸಿಸತೊಡಗಿದರು. ತಂದೆ ರಣಬೀರ್‌ಲಾಲ್ ಸಾವನ್ನಪ್ಪುವ ಮುನ್ನಾ ದಿನ ಬರೆದಿಟ್ಟ ವಿಲ್ ಪ್ರೇಮ್ ಪಾಲಿಗೆ ಆಘಾತ ತಂದಿತ್ತು. ರಣಬೀರಲಾಲ್ ಅವರು ಪ್ರೇಮ್ ಸೋದರನ ಒತ್ತಾಯದ ಮೇರೆಗೆ ಈ ಮನೆಯನ್ನೂ ಸೇರಿ ಆಸ್ತಿಯನ್ನೆಲ್ಲಾ ಸಹೋದರರ ಹೆಸರಿಗೆ ಬರೆದಿದ್ದರು. ಇದಕ್ಕೆ ಪೂರಕವೆಂಬಂತೆ ಪ್ರೇಮ್ ಮುಂಬೈಯಲ್ಲಿ ಖರೀದಿಸಿದ್ದ ಇನ್ನೆರೆಡು ಬಂಗಲೆಗಳನ್ನು ಸಹೋದರರು ಇವರಿಗೆ ತಿಳಿಸದೇ ಅಗ್ಗದ ಬೆಲೆಗೆ ಮಾರಿಹಾಕಿದ್ದರು.
ನಟ ರಾಜೇಶ್ ಖನ್ನಾ ಜತೆಗೆ 19ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಖ್ಯಾತಿ ಪ್ರೇಮ್ ಅವರದು. ಅದರಲ್ಲಿ 15 ಚಿತ್ರಗಳು ಭರ್ಜರಿ ಯಶಸ್ಸು ಕಂಡವು. ‘ಸಿನಿಮಾಕ್ಕೆ ಯಾವ ನಾಯಕಿಯನ್ನು ತೆಗೆದುಕೊಂಡಿದ್ದೀರಿ ಎಂಬುದು ಮುಖ್ಯವಲ್ಲ , ಪ್ರೇಮ್ ಇದಾನೋ ಇಲ್ವೋ ಸಾಕು’ ಎಂದು ಆಪ್ತಮಿತ್ರ ರಾಜೇಶ್ ಖನ್ನಾ ನಿರ್ಮಾಪಕರಿಗೆ ಕೇಳುತ್ತಿದ್ದರಂತೆ. ದೋ ಅಂಜಾನೆ ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ, 2004ರಲ್ಲಿ ಜೀವಮಾನ ಸಾಧನೆಗಾಗಿ ಪ್ರಶಸ್ತಿ ಪಡೆದಿರುವ ಪ್ರೇಮ್, ಪಂಜಾಬಿ ಕಲಾ ಸಂಗಮ್, ಅಶೋಕಾ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾದರು.
ನಾನು ನಾಯಕನಾಗಬೇಕೆಂಬ ಆಸೆಯಿಂದಲೇ ಚಿತ್ರರಂಗಕ್ಕೆ ಬಂದವನು. ಮುಂಬೈ ನನಗೆ ನೂರೆಂಟು ಪಾತ್ರಗಳ ಅವಕಾಶ ಕೊಟ್ಟಿತು. ಆದರೆ ಅದೇಕೋ ಖಳ ನಾಯಕನ ಪಾತ್ರ ಹೆಚ್ಚು ಸೂಕ್ತವಾಯಿತು. ಹಾಗಂತ ನನಗೆ ಖಳನಾಯಕನ ಪಾತ್ರದ ಬಗ್ಗೆ ವಿಷಾದವಿಲ್ಲ ಎನ್ನುತ್ತಾರೆ.
ಪ್ರೇಮ್ ಚೋಪ್ರಾ ಅವರ ಪುತ್ರಿ ರಕಿತಾ ನಂದಾ ಅವರು 'ಪ್ರೇಮ್ ನಾಮ್ ಹೈ ಮೇರಾ, ಪ್ರೇಮ್ ಚೋಪ್ರಾ' ಎಂಬ ಜೀವನ ಚರಿತ್ರೆಯನ್ನು 2014ರಲ್ಲಿ ಪ್ರಕಟಿಸಿದ್ದಾರೆ.
ಬಹುತೇಕ ಹೀರೋಗಳಿಗಿಂತ ಸುಂದರನಾಗಿದ್ದ ಪ್ರೇಮ್ ಚೋಪ್ರಾ ಖಳನಟನಾಗಿ ಪ್ರಸಿದ್ಧನಾಗಿದ್ದೂ ಚಲನಚಿತ್ರರಂಗದ ವಿಸ್ಮಯಗಳಲ್ಲೊಂದು.
On the birth day of senior actor Prem Chopra
ಕಾಮೆಂಟ್‌ಗಳು