ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ.ವಿ.ಸೀತಾರಾಮಯ್ಯ


 ಎಂ. ವಿ. ಸೀತಾರಾಮಯ್ಯ


ರಾಘವ, ಮೈ.ವೆಂ.ಸೀ. ಮುಂತಾದ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದ ವಿದ್ವಾಂಸರು  ಪ್ರೊ. ಎಂ.ವಿ.ಸೀತಾರಾಮಯ್ಯನವರು.

ಎಂ. ವಿ. ಸೀತಾರಾಮಯ್ಯನವರು 1910ರ  ಸೆಪ್ಟೆಂಬರ್ 9ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ವೆಂಕಟದಾಸಪ್ಪ. ತಾಯಿ ಸಾವಿತ್ರಮ್ಮ.  ಮೈಸೂರಿನ ಬನುಮಯ್ಯ ಪ್ರೌಢಶಾಲೆ, ಇಂಟರ್ ಮೀಡಿಯೆಟ್ ಕಾಲೇಜು ಮತ್ತು ಮಹಾರಾಜ ಕಾಲೇಜಿನಲ್ಲಿ ಶಿಕ್ಷಣ ಪಡೆದ ಎಂ. ವಿ. ಸೀತಾರಾಮಯ್ಯನವರು ಕನ್ನಡದಲ್ಲಿ  ಎಂ.ಎ. ಪದವಿ ಗಳಿಸಿದರು. 

ಸೀತಾರಾಮಯ್ಯನವರು ಓದುವ ದಿನಗಳಲ್ಲಿ ದೀರ್ಘ ಕವಿತೆಗಾಗಿ ಬಿ.ಎಂ.ಶ್ರೀ. ಸ್ವರ್ಣಪದಕ ಪಡೆದಿದ್ದರು. ಅವರಿಗೆ ಸಾಹಿತ್ಯದಷ್ಟೇ ಚಿತ್ರಕಲೆಯಲ್ಲೂ ಸಮಾನ ಆಸಕ್ತಿ. ಚಾಮರಾಜೇಂದ್ರ ಟೆಕ್ನಿಕಲ್ ಇನ್‌ಸ್ಟಿಟ್ಯೂಟಿನಲ್ಲಿ ಅರಮನೆಯ ಚಿತ್ರಕಾರರಾದ ಲಕ್ಷಣ ಕೃಷ್ಣ ಮತ್ತು ಕೆ. ವೆಂಕಟಪ್ಪನವರಿಂದ ಚಿತ್ರಕಲೆಯಲ್ಲಿ ಮಾರ್ಗದರ್ಶನ ಪಡೆದರು.  ಅಭಿನಯ ಕಲೆಯಲ್ಲೂ ಅವರು ರಾರಾಜಿಸಿದ್ದರು.

ಸ್ನಾತಕೋತ್ತರ ಪದವಿಯ ನಂತರ 1934-39ರ ಅವಧಿಯಲ್ಲಿ  ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯದರ್ಶಿಯಾಗಿ ಉದ್ಯೋಗ ಪ್ರಾರಂಭಿಸಿದ ಎಂ. ವಿ. ಸೀ ಅವರು, 1939-46ರ ಅವಧಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಕನ್ನಡ ನಿಘಂಟು ಕಚೇರಿಯಲ್ಲಿ ಸಹಾಯಕ ಸಂಪಾದಕರಾಗಿ, 1946ರಿಂದ ಬೆಂಗಳೂರು ಸರಕಾರಿ ಕಾಲೇಜಿನಲ್ಲಿ  ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದರು.  1963ರಲ್ಲಿ ರೀಡರ್ ಆಗಿ ಬಡ್ತಿ ಪಡೆದರು,  1967ರಲ್ಲಿ ನಿವೃತ್ತಿಯ ನಂತರ ಐದು ವರ್ಷಕಾಲ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ವಿಶ್ವವಿದ್ಯಾಲಯದ ಧನ ಸಹಾಯ ಆಯೋಗದ ಪ್ರಾಧ್ಯಾಪಕರಾಗಿ ಸಂಶೋಧನೆ ಮತ್ತು ಬೋಧನೆ ನಡೆಸಿದರು.  ತಮ್ಮ ಗುರುಗಳಾದ ವಿ. ಸೀತಾರಾಮಯ್ಯನವರ ಹೆಸರಿನಲ್ಲಿ ತಾವೇ ಒಂದು ಸಂಶೋಧನಾ ಕೆಂದ್ರವನ್ನು ತೆರೆದರು.  

ಎಂ. ವಿ. ಸೀತಾರಾಮಯ್ಯನವರು ರಚಿಸಿದ ಸಾಹಿತ್ಯ ವಿಪುಲವಾದದ್ದು ಜೊತೆಗೆ  ವೈವಿಧ್ಯಮಯದಿಂದ ಕೂಡಿದ್ದು. 

ಹಕ್ಕಿಹಾಡು, ಆ ಚಿತ್ರಗಳು ಮತ್ತು ಇತರ ಕಥನ ಕವನಗಳು, ರಾಗ, ಅಶೋಕ ಚಕ್ರ, ವಿಶ್ವಜ್ಯೋತಿ ಬಾಪು, ರಾಷ್ಟ್ರರಥ, ಗೀತಭಾರತಿ, ಹಂಸಪಥ ಮೊದಲಾದವು ಸೀತಾರಾಮಯ್ಯನವರು15 ಕಾವ್ಯ ಕೃತಿಗಳು. ಹೂವಾಡಗಿತ್ತಿ, ಹಾವಾಡಿಗ, ಕೋಡಂಗಿ ಮಕ್ಕಳ ಕಾವ್ಯಕೃತಿಗಳು.

ಶಿಲಾಮುಖ, ಯೌವನ ಸುಧೆ, ಮಾರ್ಗದರ್ಶಕ, ರತಿದೇವಿ ಮತ್ತು ಇತರ ಕಥೆಗಳು, ಕರುಣಾಲಹರಿ, ಬಿಸಿಲು ಬೆಳದಿಂಗಳು ಮುಂತಾದವು  ಸೀತಾರಾಮಯ್ಯನವರ 10 ಕಥಾಸಂಕಲನಗಳಲ್ಲಿ ಸೇರಿವೆ.

ಭಾಗ್ಯಲಕ್ಷ್ಮೀ, ಮಾದನ ಮಗಳು, ಜೀವನದ ಜೊತೆಗಾತಿ, ಸ್ನೇಹದ ಕಾಣಿಕೆ, ತಾಯ ಬಯಕೆ ಮೊದಲಾದ 10 ಕಾದಂಬರಿಗಳನ್ನು ಸೀತಾರಾಮಯ್ಯನವರು ಪ್ರಕಟಿಸಿದ್ದಾರೆ. 

ಕನ್ನಡ ಜೀವನ ಚರಿತ್ರೆ, ಸಾಹಿತ್ಯ ಮತ್ತು ಚಿತ್ರಕಲೆ, ಜೈಮಿನಿ ಭಾರತ ಸಮೀಕ್ಷೆ ಮುಂತಾದವು  ಸೀತಾರಾಮಯ್ಯನವರ ಆರು ಸಮೀಕ್ಷೆ ಕೃತಿಗಳು. 

ಇದಲ್ಲದೆ 9 ನಾಟಕಗಳು; ಮುಗಿಲುಗಳು, ಹಿಡಿ ಹೂವು, ಹಿತಚಿಂತನ, ಬಾಳಿನ ಬುತ್ತಿ ಮುಂತಾದ ಪ್ರಬಂಧಗಳು; ವ್ಯಕ್ತಿಚಿತ್ರ, ಕಾವ್ಯ ಮೀಮಾಂಸೆ, ಗ್ರಂಥ ಸಂಪಾದನೆ, ಶಾಸ್ತ್ರಗ್ರಂಥ, ಜೀವನ ಚರಿತ್ರೆ ಸೇರಿ ಸೀತಾರಾಮಯ್ಯನವರು ಒಟ್ಟು ನೂರಕ್ಕೂ ಹೆಚ್ಚು ಕೃತಿ ಪ್ರಕಟಿಸಿದರು.  ತಮ್ಮ ಜೀವನ ಪರ್ಯಂತದಲ್ಲಿ ಹಲವಾರು ರೀತಿಯ ದೈಹಿಕ ತೊಂದರೆಗಳಲ್ಲಿ ಬದುಕು ನಡೆಸಿದ ಎಂ. ವಿ. ಸೀತಾರಾಮಯ್ಯನವರು ಮಾಡಿದ ಇಷ್ಟೊಂದು ಕಾಯಕ ಅಚ್ಚರಿ ಹುಟ್ಟಿಸುವಂತದ್ದು.  

ಪ್ರೊಫೆಸರ್ ಎಂ. ವಿ. ಸೀತಾರಾಮಯ್ಯನವರು ತಮ್ಮ  ವಿದ್ವತ್ತು ಮತ್ತು ಸಂಶೋಧನೆಗಳಿಗಾಗಿ ಅಪಾರವಾಗಿ ಗೌರವಿಸಲ್ಪಟ್ಟಿದ್ದಾರೆ.  ವ್ಯಾಕರಣ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರವಾದದ್ದು ಎಂಬುದು ವಿದ್ವಾಂಸರ ಅಭಿಮತ.  ಪ್ರಾರಂಭಿಕ ಕನ್ನಡ ವ್ಯಾಕರಣದ ಕುರಿತಾದ ಅವರ ಕೃತಿಯು ಅಪಾರ ಜನಪ್ರಿಯತೆ ಹೊಂದಿದ್ದು ಇತರ ಭಾಷೆಗಳಿಗೆ ಸಹಾ ಅನುವಾದಗೊಂಡಿವೆ.  ಹಳಗನ್ನಡದ  ಶಬ್ದಮಣಿ ದರ್ಪಣದ ಬಗೆಗೆ ಸುದೀರ್ಘವಾದ ಅಧ್ಯಯನ ಕೈಗೊಂಡ ಎಂ ವಿ ಸಿ ಅವರು, ಅದರ ಕುರಿತಾದ ಒಂದು ಪರಿಷ್ಕೃತ ಕೃತಿಯನ್ನೂ ಪ್ರಕಟಿಸಿದರು. ಪ್ರೊ.ಎಂ. ವಿ. ಸಿ. ಅವರು ಶ್ರೀವಿಜಯನ ‘ಕವಿರಾಜಮಾರ್ಗ’ವನ್ನು ಕುರಿತು ಸಹಾ ಕೂಲಂಕಷ ಅಧ್ಯಯನ ನಡೆಸಿ ಅದರ ಕರ್ತೃತ್ವದ ಕುರಿತಾದ ಚರ್ಚೆಗೆ ಅಮೂಲ್ಯವಾದ ಮಾಹಿತಿ ಒದಗಿಸಿದ್ದಾರೆ. ಹಲವು ದಶಕಗಳಿಂದ ಉನ್ನತ ಅಧ್ಯಯನ ಮತ್ತು ಸಂಶೋಧನಾ  ಕಾರ್ಯಗಳಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಿರುವ ಬಿ.ಎಂ.ಶ್ರೀ ಪ್ರತಿಷ್ಠಾನದ ಬೆಳವಣಿಗೆಯಲ್ಲಿ  ಪ್ರೊ. ಎಂ.ವಿ. ಸೀತಾರಾಮಯ್ಯನವರ ಕೊಡುಗೆ ಮಹತ್ವಪೂರ್ಣವಾದುದು.  ಈ ಸಂಸ್ಥೆ ಎಂ.ಫಿಲ್, ಪಿಎಚ್.ಡಿ ಅಧ್ಯಯನಗಳಿಗೆ ಒತ್ತಾಸೆ ನೀಡುವುದರ ಜೊತೆಗೆ ವಿದ್ವತ್ಪೂರ್ಣ ಪ್ರಕಟಣೆಗಳಲ್ಲಿ ಸಹಾ ಪ್ರಧಾನ ಪಾತ್ರ ನಿರ್ವಹಿಸುತ್ತಿದೆ.  ಇದಲ್ಲದೆ ಹಸ್ತಲಿಪಿ ಶಾಸ್ತ್ರದ ಅಧ್ಯಯನಕ್ಕಾಗಿರುವ ಏಕೈಕ ಕೆಂದ್ರವಾದ ಈ ಪ್ರತಿಷ್ಠಾನಕ್ಕೆ ಹಸ್ತಲಿಪಿ ಶಾಸ್ತ್ರ ಅಧ್ಯಯನಕ್ಕಾಗಿನ ಎಂ. ವಿ. ಸಿ ಅವರ ಕೊಡುಗೆ ಅನನ್ಯವಾದದ್ದಾಗಿದೆ.  ಹೀಗಾಗಿ ಬಿ.ಎಂ.ಶ್ರೀ ಪ್ರತಿಷ್ಠಾನವು ಪ್ರೊ.ಎಂ.ವಿ. ಸೀತಾರಾಮಯ್ಯನವರ ಶತಾಬ್ಧಿವರ್ಷವನ್ನು ಹಸ್ತಲಿಪಿ ಶಾಸ್ತ್ರದ ವರುಷವನ್ನಾಗಿ ಆಚರಿಸಿತು. 

ಪ್ರೊ. ಎಂ. ವಿ ಸೀತಾರಾಮಯ್ಯನವರಿಗೆ ದೇವರಾಜ ಬಹದ್ದೂರ್ ಬಹುಮಾನ, ರಾಜ್ಯಸರಕಾರದ ಬಹುಮಾನ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಬಹುಮಾನ, ನಿಡುಮಾಮಿಡಿ ಶ್ರೀಗಳಿಂದ ಸ್ವರ್ಣಪದಕ ಬಹುಮಾನ ಮುಂತಾದ ಹಲವಾರು ಗೌರವಗಳು ಸಂದವು.  ಸ್ನೇಹಿತರು,  ಅಭಿಮಾನಿಗಳು ಅವರಿಗೆ ಅರ್ಪಿಸಿದ ಗೌರವ ಗ್ರಂಥ ‘ಆಸ್ವಾದ’.  ಅವರ  ಸಂಸ್ಮರಣ ಕೃತಿಗಳೂ ಪ್ರಕಟಗೊಂಡಿವೆ.

ಪ್ರೊ. ಎಂ. ವಿ. ಸೀತಾರಾಮಯ್ಯನವರು 1990ರ  ಮಾರ್ಚ್ 12ರಂದು ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.  

On the birth anniversary of great scholar Prof. M.V. Seetharamaiah

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ