ಬಿ.ಕೆ.ಎಸ್. ವರ್ಮಾ
ಬಿ.ಕೆ.ಎಸ್. ವರ್ಮಾ
ಬಿ. ಕೆ. ಎಸ್. ವರ್ಮಾ ನಮ್ಮ ಕಾಲದ ಮಹಾನ್ ಕಲಾವಿದರಾಗಿ ಪ್ರಸಿದ್ದರಾದವರು. ಇಂದು ಎಲ್ಲೆಲ್ಲಿಯೂ ಶೋಭಿಸುತ್ತಿರುವ ಕನ್ನಡ ಮಾತೆಯನ್ನು ಚಿತ್ರಿಸಿದವರು ಸಹಾ ಈ ಬಿ ಕೆ ಎಸ್ ವರ್ಮಾ.
ಬಿ.ಕೆ. ಎಸ್ ವರ್ಮಾ 1949ರ ಸೆಪ್ಟೆಂಬರ್ 5ರಂದು ಬೆಂಗಳೂರು ಜಿಲ್ಲೆಯ ಅತ್ತಿಗುಪ್ಪೆ ಬಳಿಯಲ್ಲಿ ಜನಿಸಿದರು. ತಂದೆ ಕೃಷ್ಣಮಾಚಾರ್ಯ. ತಾಯಿ ಜಯಲಕ್ಷ್ಮಿ.
ಬುಕ್ಕಸಾಗರದ ಕೃಷ್ಣಮಾಚಾರ್ಯ ಶ್ರೀನಿವಾಸ ಎಂದಾಗಬೇಕಿದ್ದವರು ಬಿ.ಕೆ.ಎಸ್. ವರ್ಮಾ ಆದದ್ದು ಕಲಾಲೋಕದ ಮಹತ್ವದ ಸಂಭವವೇ ಸರಿ. ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ರಾಜಾ ರವಿವರ್ಮರ ಕಲಾಕೃತಿಗಳನ್ನು ಆರಾಧ್ಯಭಾವದಿಂದ ಅನುಭಾವಿಸಿದ ಶ್ರೀನಿವಾಸ ಎಂಬ ಅಂದಿನ ಹುಡುಗನ ಹೃದಯದಲ್ಲಿ, ನಾನೂ ಇಂಥಾ ಕಲಾವಿದನಾಗಬೇಕು ಎಂಬ ಸಂಕಲ್ಪ ಮಿಂಚಿ, ಆ ಹೆಸರಿಗೆ ವರ್ಮಾ ಎಂಬ ಹೆಸರಿನ ಸೇರ್ಪಡೆಯೂ ನಿರ್ಧಾರವಾಗಿಹೋಯಿತು. ಫಲವತ್ತಾದ ಕಲಾವಂತಿಕೆಯ ಹೃದಯದಲ್ಲಿ ಮೂಡಿದ ಆ ಬಿತ್ತನೆ ಮುಂದೆ ಮಹಾನ್ ಕಲಾವೃಕ್ಷವಾಗಿ ಬಿ.ಕೆ.ಎಸ್. ವರ್ಮಾ ಎಂಬ ಹೆಸರಿನಿಂದ ಕಲಾಲೋಕವನ್ನು ವಿಸ್ಮಯಗೊಳಿಸುತ್ತಾ ಸಾಗಿತು.
“ಇದ್ದುದನ್ನು ಇರುವ ಹಾಗೇ ಬರೆಯುವುದು ಚಾರ್ಟ್, ಅದನ್ನು ಅನುಭವಿಸಿ ಬರೆಯುವುದು ಆರ್ಟ್” ಎಂಬುದು ಬಿ.ಕೆ.ಎಸ್. ವರ್ಮಾ ಅವರು ಹೇಳುತ್ತಿದ್ದ ಮಾತು. ವರ್ಮಾ ಅವರಿಗೆ ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ತೀವ್ರ ಆಕರ್ಷಣೆಯಿತ್ತು. ಹೆತ್ತ ತಾಯಿ ತಂದೆಯರಿಗೆ ಮಗ ಇಂಜಿನಿಯರ್ ಡಾಕ್ಟರ್ ಆಗಬೇಕು ಎಂಬ ಹಂಬಲ. ಆದರೆ ಈ ಮಗನೋ ಬಿಳಿ ಶರ್ಟು, ಬಿಳಿ ಗೋಡೆ ಹೀಗೆ ಏನೇ ಕಂಡರೂ ಇದ್ದಿಲಿನಿಂದ ಚಿತ್ರ ಬಿಡಿಸಿ ಶಿಕ್ಷಕರು ಮತ್ತು ನೆರೆಹೊರೆಯವರಿಂದ ಬೈಗುಳ ತಿನ್ನುತ್ತಿದ್ದ. ಮನೆಯಲ್ಲಿ ಕೂಡಿಹಾಕಿದರೆ ಮನೆಯ ಕೋಣೆಯ ಇಂಚಿಂಚೂ ಚಿತ್ರಗಳು ತುಂಬಿಹೋದವು. ಹೀಗೆ ಕಲೆಯನ್ನು ಅಂತರಂಗದಲ್ಲಿ ತುಂಬಿಕೊಂಡು, ಅದನ್ನು ಆಸ್ವಾದಿಸಲು ಮತ್ತು ಅರ್ಥ ಮಾಡಿಕೊಳ್ಳಲು ಬಿ.ಕೆ. ಎಸ್. ವರ್ಮರು ಮನೆ ಬಿಟ್ಟು ಹೊರಟಾಗ ಅವರಿಗೆ ಕೇವಲ ಎಂಟು ವರ್ಷ ವಯಸ್ಸು. ಓದು ನಿಂತು ಹೊದ್ದದ್ದು ಮೂರನೆಯ ತರಗತಿಗೆ. ಮಹಾನ್ ಕಲಾವಿದರಾದ ಶ್ರೀ ಎ.ಸಿ.ಹೆಚ್. ಆಚಾರ್ಯ ಮತ್ತು ಅ.ನ..ಸುಬ್ಬರಾಯರ ಪ್ರಭಾವವನ್ನು ಪಡೆದು ಡಿಪ್ಲೊಮಾ ಗಳಿಸಿದ್ದು ಮುಂದಿನ ದಿನಗಳಲ್ಲಿ. ‘ಪ್ರಜಾಮತ’ ವಾರಪತ್ರಿಕೆಯಲ್ಲಿ ಚಿತ್ರಕಲಾವಿದನಾಗಿ ವೃತ್ತಿ ಮಾಡಿದ್ದರು. 15ರ ಎಳೆ ಹರಯದಲ್ಲಿಯೇ ಹಿಂದಿಯ ‘ಆದ್ಮಿ’ ಚಲನಚಿತ್ರಕ್ಕೆ ಸಹಾಯಕ ಕಲಾನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಅಲೆಮಾರಿಯಾಗಿ ಹೋದೆಡೆಯಲ್ಲೆಲ್ಲ ಜನರನ್ನು ಆಕರ್ಷಿಸಿ ಬದುಕಲ್ಲಿ ಕಲಿತ ಪಾಠ ಮಹತ್ವದ್ದಾಗಿತ್ತು. ಅನೇಕ ಹಿರಿಯ ಕಲಾವಿದರು, ಸಾಹಿತಿಗಳು, ರಾಜ ಮಹಾರಾಜರುಗಳು, ಪ್ರಖ್ಯಾತ ಸಾಧಕರು ಹೀಗೆ ಅನೇಕರು ಇವರ ಕಲಾವಂತಿಕೆಗೆ ಮಾರುಹೋಗಿ ಪ್ರೋತ್ಸಾಹಿಸಿದವರು. ಇವರುಗಳಲ್ಲಿ ಸರ್ವೇಪಲ್ಲಿ ರಾಧಾಕೃಷ್ಣನ್, ವಿಜಯಲಕ್ಷ್ಮೀ ಪಂಡಿತ್, ಜಯಚಾಮರಾಜೇಂದ್ರ ಒಡೆಯರ್, ಶಿವರಾಮ ಕಾರಂತ, ಕುವೆಂಪು, ರೋರಿಚ್ – ದೇವಿಕಾರಾಣಿ ದಂಪತಿಗಳು, ರಾಜ್‍ಕುಮಾರ್, ಎಂ.ಜಿ.ಆರ್, ಅಮಿತಾಬ್ ಬಚ್ಚನ್, ರಜನೀಕಾಂತ್ ಮುಂತಾದ ಅನೇಕರಿದ್ದಾರೆ.
ಎಲ್ಲ ತರಹದ ದೇವತೆಗಳು, ಕನ್ನಡಾಂಬೆ, ಹಸಿರು ಉಳಿಕೆಗೆ ಹೃದಯ ಸ್ಪಂದನೆ ಮುಂತಾದ ಬಗೆ ಬಗೆಯ ದಿವ್ಯ ಚಿಂತೆನೆಗಳು ಬಿ.ಕೆ. ಎಸ್ ವರ್ಮಾರ ಕುಂಚದಲ್ಲಿ ಭವ್ಯತೆಯನ್ನು ಕಾಣುತ್ತಾ ಸಾಗಿದವು. ಶತಾವಧಾನಿ ಆರ್ ಗಣೇಶ್ ಅವರ ಅವಧಾನ ಕಾರ್ಯಕ್ರಮಗಳು, ಹಾಸ್ಯೋತ್ಸವ ಕಾರ್ಯಕ್ರಮಗಳು, ಕಾವ್ಯಗೋಷ್ಠಿಗಳು ಇಲ್ಲೆಲ್ಲಾ ಬಿ.ಕೆ.ಎಸ್. ವರ್ಮಾರ ಮಿಂಚಿನ ಕಲಾತ್ಮಕತೆ ಹೊರಹೊಮ್ಮುತ್ತಿದ್ದ ರೀತಿಯನ್ನು ಮೆಚ್ಚದ ರಸಿಕರೇ ಇಲ್ಲ. ಅಷ್ಟೊಂದು ವ್ಯಾಪ್ತಿ, ಹರಹು, ಜನಮನದ ಮುಟ್ಟುವಿಕೆ ಬಿ.ಕೆ.ಎಸ್. ವರ್ಮಾರಿಂದ ಆಗುಗೊಂಡಿತು.
ಬಿ.ಕೆ. ಎಸ್. ವರ್ಮಾರವರ ಕಲಾಕೃತಿಗಳು ವಿಶ್ವದೆಲ್ಲೆಡೆ ಆಶ್ರಯ ಪಡೆದಿವು. ಅವರ ಚಿತ್ರ ಪ್ರದರ್ಶನಗಳು ಎಲ್ಲೆಡೆ ಬೆಳಗಿದ್ದವು. 1986-87ರಲ್ಲಿ ವರ್ಮರ ಮೊದಲ ಏಕವ್ಯಕ್ತಿ ಪ್ರದರ್ಶನವನ್ನು ಡಾ.ರೋರಿಚ್ ಮತ್ತು ಶ್ರೀಮತಿ ದೇವಿಕಾರಾಣಿಯವರು ಉದ್ಘಾಟಿಸಿದರು. ದೇಶ-ವಿದೇಶಗಳಲ್ಲಿ ಅವರ ಚಿತ್ರಗಳು ಪ್ರದರ್ಶನಗೊಂಡವು. ಅವರ ಅಪರೂಪದ ದಾರ ಮತ್ತು ಉಗುರಿನ ಮುಖೇನ ಹೊಮ್ಮಿದ ಚಿತ್ರರಚನೆಗಳು ಜನಪ್ರಿಯಗೊಂಡವು. ‘ಕಾವ್ಯ-ಚಿತ್ರ’ ಮತ್ತು ‘ಗೀತ-ನೃತ್ಯ’ಗಳು ಅಪಾರ ಜನಮನ್ನಣೆ ಗಳಿಸಿದವು. ಚಿತ್ರಕಾರರಲ್ಲದೆ ಕವಿಯಾಗಿಯೂ ಅವರು ಹೆಸರುಮಾಡಿದ್ದರು.
ಬಿ.ಕೆ.ಎಸ್.ವರ್ಮಾ ಅವರ ಕಲಾಸೇವೆಯನ್ನು ಗುರುತಿಸಿ ಬೆಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರದಾನಿಸಿತ್ತು. ಪರಿಸರ ಪ್ರೇಮಕ್ಕೆ ಉದಾಹರಣೆಯಾದ ಅತ್ಯಂತ ಪ್ರಭಾವಿ ವರ್ಣಚಿತ್ರ 'ವೃಕ್ಷಮಾಲಿನಿ'ಗೆ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಸಂದಿತ್ತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜೀವ್ ಗಾಂಧೀ ಪ್ರಶಸ್ತಿ ಮತ್ತು ಅನೇಕ ಪ್ರತಿಷ್ಟಿತ ಸಂಸ್ಥೆಗಳ ಗೌರವಗಳು ಅವರಿಗೆ ಸಂದಿದ್ದವು.
ನಮ್ಮ ಆತ್ಮೀಯ ಚಿತ್ರ ಮಿತ್ರ Chithra Mitra ಅವರ ನೆರಳಿನಲ್ಲಿ ಬೆಳೆದ ಹುಡುಗ.
ಬಿ. ಕೆ. ಎಸ್. ವರ್ಮಾ 2023ರ ಫೆಬ್ರುವರಿ 6ರಂದು ನಿಧನರಾದರು. ಈ ಮಹಾನ್ ಕಲಾವಿದರ ಅಗಲಿಕೆ ತುಂಬಲಾರದ ನಷ್ಟ ಎಂಬುದು ಬರಿಯ ಮಾತಲ್ಲ. ಅದೊಂದು ಮೂಕ ಅಳಲು. ದೇಹ ಅಶಾಶ್ವತ. ಬಿ. ಕೆ. ಎಸ್. ವರ್ಮಾ ಅವರ ಕಲಾಸೇವೆ ಅಮರ.
On the birth anniversary of Great artiste B.K.S. Varma 🌷🙏🌷
ಕಾಮೆಂಟ್‌ಗಳು