ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಉಷಾ ಸುಂದರರಾಜ್


ಪ್ರಥಮ ಮಹಿಳಾ ಅರ್ಜುನ ಪ್ರಶಸ್ತಿ ವಿಜೇತೆ
ಉಷಾ ಸುಂದರ್‌ರಾಜ್


ಉಷಾ ಸುಂದರ್‌ರಾಜ್ ಅವರು ಏಳು ಬಾರಿ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್ ಆಗಿದ್ದ, ಪ್ರಥಮ ಮಹಿಳಾ ಅರ್ಜುನ ಪ್ರಶಸ್ತಿ ವಿಜೇತೆ.  ಅವರು ಮೈಸೂರು ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಹುದ್ದೆಯನ್ನೂ ನಿರ್ವಹಿಸಿದ್ದರು. ಇಂದು ಉಷಾ ಸುಂದರ್‌ರಾಜ್ ಅವರ ಸಂಸ್ಮರಣೆ ದಿನ.

ಉಷಾ  ಅವರು 1942ರ ಮಾರ್ಚ್ 1ರಂದು ಬೆಂಗಳೂರಿನಲ್ಲಿ ಜನಿಸಿದರು. ಮಲ್ಲೇಶ್ವರಂ ಹೆಣ್ಣು ಮಕ್ಕಳ ಪ್ರೌಢಶಾಲೆ, ಮೌಂಟ್ ಕಾರ್ಮಲ್ ಕಾಲೇಜು ಹಾಗೂ ಸೆಂಟ್ರಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದರು. ಇಂಗ್ಲಿಷ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1961ರಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ರೂಪುಗೊಂಡು ಸತತ 7 ವರ್ಷಗಳ ತನಕ ರಾಷ್ಟ್ರೀಯ ಅಗ್ರ ಶ್ರೇಯಾಂಕ ಪಟ್ಟಿಯಲ್ಲಿ ತಮ್ಮ ಹೆಸರನ್ನು ಉಳಿಸಿಕೊಂಡಿದ್ದರು. ಇದರಲ್ಲಿ ಸತತ 4 ಬಾರಿ ರಾಷ್ಟ್ರೀಯ ಅಗ್ರ ಶ್ರೇಯಾಂಕ ಪಟ್ಟಿಯಲ್ಲಿ 2ನೆಯ ಸ್ಥಾನವನ್ನು ಪಡೆದಿದ್ದರು. 5 ಬಾರಿ ಅಗ್ರ ಶ್ರೇಯಾಂಕ ಪಟ್ಟಿಯಲ್ಲಿ ಮೊದಲಿಗರಾಗಿದ್ದರು. ಕರ್ನಾಟಕ ರಾಜ್ಯದ ಚಾಂಪಿಯನ್ನಾಗಿ ರಾಜ್ಯ ರ್‍ಯಾಂಕಿಂಗ್ ಪ್ರಶಸ್ತಿಯನ್ನು ಸತತ 21 ವರ್ಷಗಳ ಕಾಲ ತಮ್ಮ ಹೆಸರಿನಲ್ಲಿ ಉಳಿಸಿಕೊಂಡಿದ್ದು ದಾಖಲೆಯಾಗಿದೆ. ಇವರ ಈ ಸಾಧನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇವರು ಕರ್ನಾಟಕ ರಾಜ್ಯದ ಮಹಿಳಾ ತಂಡದ ನಾಯಕಿಯಾಗಿ ರಾಷ್ಟ್ರೀಯ ಚಾಂಪಿಯನ್‍ಷಿಪ್‍ಗಳಲ್ಲಿ ಭಾಗವಹಿಸಿದ್ದರು. ಇವರು ಅನೇಕ ಬಾರಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಆಟಗಾರರಾಗಿ ಮತ್ತು ತಂಡದ ನಾಯಕರಾಗಿ ಭಾರತವನ್ನು ಮುನ್ನಡೆಸಿದ್ದರು. 

ಏಷ್ಯನ್ ಚಾಂಪಿಯನ್ ಷಿಪ್, ವಿಶ್ವ ಚಾಂಪಿಯನ್‍ಷಿಪ್, ಕಾಮನ್‍ವೆಲ್ತ್ ಚಾಂಪಿಯನ್ ಷಿಪ್ - ಇವು ಉಷಾ ಅವರು ಭಾಗವಹಿಸಿದ್ದ ಕೆಲವು ಮುಖ್ಯ ಕ್ರೀಡಾಕೂಟಗಳು. ಕೀನ್ಯ ಹಾಗೂ ಉಗಾಂಡಗಳಿಗೆ ಭಾರತ ತಂಡ ಪ್ರವಾಸ ಕೈಗೊಂಡಾಗ ಇವರು ನಾಯಕಿಯಾಗಿದ್ದರು. ಇವರು ತರಬೇತುದಾರರಾಗಿಯೂ ಉತ್ತಮ ಕೆಲಸ ನಿರ್ವಹಿಸಿದ್ದರು. ಭಾರತೀಯ ಹೆಣ್ಣು ಮಕ್ಕಳ ತಂಡ ಜಪಾನ್ ಪ್ರವಾಸ ಕೈಗೊಂಡಾಗ ಮತ್ತು ಭಾರತೀಯ ಮಹಿಳೆಯರ ತಂಡ ಸಿಯೋಲ್ ಏಷ್ಯನ್ ಗೇಮ್ಸ್ ಹಾಗೂ ಚೀನದ ಏಷ್ಯನ್ ಚಾಂಪಿಯನ್‍ಷಿಪ್ ಪಂದ್ಯಾಟಗಳಲ್ಲಿ ಭಾಗವಹಿಸಿದ ಸಂದರ್ಭಗಳು 
ಪ್ರಮುಖವಾದವು.

ಭಾರತೀಯ ಟೇಬಲ್ ಟೆನ್ನಿಸ್ ಫೆಡರೇಷನ್ ಅನೇಕ ಸಂದರ್ಭಗಳಲ್ಲಿ ಉಷಾ ಸುಂದರರಾಜ್ ಅವರ ತಾಂತ್ರಿಕ ಪರಿಣತಿಯ ಅನುಭವದ ಪ್ರಯೋಜನ ಪಡೆದು೦ಕೊಂಡಿತ್ತು. ಇವರು ಭಾರತದ ಪ್ರತಿನಿಧಿಯಾಗಿ ಹಿರೋಷಿಮ ಮತ್ತು ನಾಗಸಾಕಿ ಹಾಗೂ ಒಸಾಕದಲ್ಲಿ ನಡೆದ ಮಹಿಳೆಯರ ಟೇಬಲ್ ಟೆನ್ನಿಸ್ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. 

ಉಷಾ ಸುಂದರರಾಜ್ ಅವರು ಕರ್ನಾಟಕದ ಪ್ರತಿಷ್ಠಿತ ಕ್ರೀಡಾಪುರಸ್ಕಾರವಾದ ಏಕಲವ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. 1996ರ ಅಟ್ಲಾಂಟಾ ಒಲಿಂಪಿಕ್ಸಿಗೆ ಕರ್ನಾಟಕದ ಪ್ರತಿನಿಧಿಯಾಗಿ ಹೋಗಿದ್ದರು. ಇವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ದೊರೆತಿದ್ದವು. 1966ರಲ್ಲಿ ಕರ್ನಾಟಕದ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ ದೊರೆತಿತ್ತು. ಇದೇ ವರ್ಷ ಭಾರತ ಸರ್ಕಾರ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿತ್ತು. ಈ ಪ್ರಶಸ್ತಿ ಪಡೆದ ಮಹಿಳೆಯರಲ್ಲಿ ಇವರೇ ಮೊದಲಿಗರು.

ಉಷಾ ಸುಂದರರಾಜ್ ಸ್ಟೇಟ್ ಬ್ಯಾಂಕಿನ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು.
ಉಷಾ ಸುಂದರರಾಜ್ ಅವರು ತಮ್ಮ 80 ವರ್ಷಗಳ ಬದುಕಿನ ಕ್ರೀಡೆಗೆ 2022ರ ಸೆಪ್ಟೆಂಬರ್ 5ರಂದು ವಿದಾಯ ಹೇಳಿದರು.  ಬದುಕೆಂಬ ಕ್ರೀಡೆಯಲ್ಲಿ ಎಲ್ಲ ದಾಖಲೆಗಳೂ ಅಳಿಸಿಹೋಗುತ್ತವೆ. ಎಂಥ ಸಾಧಕರೂ ಮಣ್ಣಾಗುತ್ತಾರೆ.  ಯಾರಿಗೂ ನೆನಪೂ ಆಗದಂತೆ ಮರೆಯಾಗಿಹೋಗುತ್ತಾರೆ. ಈ ಮಹಾನ್ ಚೇತನಕ್ಕೆ ನಮನ.

ಕೃತಜ್ಞತೆ: Sridhara Banavara

On Remembrance Day of First Lady Arjun awardee Usha Sunderraj 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ