ರಂಗನಾಥ ದಿವಾಕರ
ರಂಗನಾಥ ದಿವಾಕರ
ಮಹಾನ್ ರಾಷ್ಟ್ರಭಕ್ತ, ಸ್ವಾತಂತ್ರ ಹೋರಾಟಗಾರ, ಆಧ್ಯಾತ್ಮ ಚಿಂತಕ, ವಿದ್ವಾಂಸ, ಬರಹಗಾರ, ಪತ್ರಕರ್ತ, ರಾಜಕಾರಣಿ ರಂಗನಾಥ ದಿವಾಕರರು ಕನ್ನಡ ನಾಡಿನಲ್ಲಿ ಜನಿಸಿದ ಮಹಾನ್ ರತ್ನಗಳಲ್ಲಿ ಒಬ್ಬರು.
ರಂಗನಾಥ ರಾಮಚಂದ್ರ ದಿವಾಕರರು 1894ರ ಸೆಪ್ಟಂಬರ್ 30 ರಂದು ಧಾರವಾಡದಲ್ಲಿ ಜನಿಸಿದರು. ತಂದೆ ರಾಮಚಂದ್ರ, ತಾಯಿ ಸೀತಾಬಾಯಿ. ದಿವಾಕರರು ಬೆಳಗಾವಿ, ಪುಣೆ, ಮುಂಬಯಿಯಲ್ಲಿ ಶಿಕ್ಷಣ ಪಡೆದು ಎಂ.ಎ ಪದವೀಧರರಾದರು.
ಗಾಂಧೀಜಿ, ತಿಲಕ, ಅರವಿಂದರಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ರಂಗನಾಥ ದಿವಾಕರರು ಅಪ್ಪಟ ಗಾಂಧಿವಾದಿಯಾಗಿ ಜೀವನವನ್ನು ಸಾಗಿಸಿದರು. ಸೆರೆಮನೆಯಲ್ಲಿಯ ಇವರ ಅನುಭವಗಳು ‘ಸೆರೆಯ ಮರೆಯಲ್ಲಿ’ ಎಂಬ ಪ್ರಸಿದ್ಧ ಕೃತಿಯಲ್ಲಿ ವ್ಯಕ್ತಗೊಂಡಿವೆ. ಭಾರತ ಸ್ವತಂತ್ರವಾದ ಬಳಿಕ ಕೇಂದ್ರ ಸರಕಾರದ ಸುದ್ಧಿ ಶಾಖೆ ಮಂತ್ರಿಯಾಗಿ, ಕರ್ನಾಟಕ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ, ಬಿಹಾರದ ರಾಜ್ಯಪಾಲರಾಗಿ ಹೀಗೆ ವಿವಿಧ ರೀತಿಯ ಜವಾಬ್ಧಾರಿಗಳನ್ನು ನಿರ್ವಹಿಸಿದ್ದರು. 1938ರಲ್ಲಿ ಬಳ್ಳಾರಿಯಲ್ಲಿ ಜರುಗಿದ 23ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು. ‘ಸಂಯುಕ್ತ ಕರ್ನಾಟಕ’ , ‘ ಕರ್ಮವೀರ’, 'ಕಸ್ತೂರಿ’ ಪತ್ರಿಕೆಗಳಿಗೆ ಸಂಪಾದಕರಾಗಿದ್ದರು. ‘ಲೋಕಶಿಕ್ಷಣ ಟ್ರಸ್ಟ’ ನ ಅಧ್ಯಕ್ಷರಾಗಿದ್ದರು. ಕೆಲ ಕಾಲ ’ಯುನೈಟೆಡ್ ಕರ್ನಾಟಕ’ ಎನ್ನುವ ಆಂಗ್ಲ ಪತ್ರಿಕೆಯನ್ನು ನಡೆಸಿದರು.
ಸಾಹಿತಿಯಾಗಿ ರಂಗನಾಥ ದಿವಾಕರರು ‘ಸೆರೆಯ ಮರೆಯಲ್ಲಿ’, ‘ಮಹಾತ್ಮರ ಮನೋರಂಗ’, ‘ವಚನಶಾಸ್ತ್ರ ರಹಸ್ಯ’, ‘ಹರಿಭಕ್ತಿಸುಧೆ’, ‘ಉಪನಿಷತ್ ಪ್ರಕಾಶ’, ‘ಉಪನಿಷತ್ ಕಥಾವಲಿ’, ‘ಗೀತೆಯ ಗುಟ್ಟು’, ‘ಕರ್ಮಯೋಗ’, ‘1857ರ ಸ್ವಾತಂತ್ರ್ಯ ಸಂಗ್ರಾಮ’, ‘ಕಾಂಗ್ರೆಸ್ ರತ್ನ ಮಹೋತ್ಸವ’, ‘ಗಾಂಧೀಜಿ’, 'ವಿಶ್ವಮೇಧ’, ‘ಕರನಿರಾಕರಣೆಯ ವೀರಕಥೆ’, ‘ಕರ್ನಾಟಕ ಏಕೀಕರಣ’, ‘ಜೈಹಿಂದ್’ (ಕ್ಯಾಪ್ಟನ್ ಲಕ್ಷ್ಮೀ ಅವರು ಬರೆದ ಪುಸ್ತಕದ ಅನುವಾದ) ಮುಂತಾದ ಅಮೂಲ್ಯ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ರಂಗನಾಥ ದಿವಾಕರರ ಆಂಗ್ಲ ಗ್ರಂಥಗಳೆಂದರೆ ‘ಸತ್ಯಾಗ್ರಹ’, ‘ಗ್ಲಿಂಪ್ಸಸ್ ಆಫ್ ಗಾಂಧೀಜಿ’, ‘ಉಪನಿಷತ್ ಇನ್ ಸ್ಟೊರೀಜ್ ಎಂಡ್ ಡೈಲಾಗ್’, ‘ಮಹಾಯೋಗಿ’, ‘ಭಗವಾನ್ ಬುದ್ಧ’, ‘ಕರ್ನಾಟಕ ಥ್ರೂ ಏಜಿಸ್(ಸಂಪಾದಿತ)’, ‘ರಾಮಕೃಷ್ಣ ಪರಮಹಂಸ’ ಮುಂತಾದವು.
ಫೋಟೋ ಕೃಪೆ: www.kamat.com
On the birth anniversary of Writer, freedom fighter, journalist, scholar, politician Ranganatha Diwakar
ಕಾಮೆಂಟ್‌ಗಳು