ವಿನಾಯಕ ತೊರವಿ
ಪಂಡಿತ್ ವಿನಾಯಕ ತೊರವಿ
ಪಂಡಿತ್ ವಿನಾಯಕ ಮಲ್ಹಾರರಾವ್ ತೊರವಿ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಗ್ವಾಲಿಯರ್ ಘರಾನಾ ಮತ್ತು ಕಿರಾಣಾ ಘರಾನಾದ ಹಿರಿಯ ಸಾಧಕರಲ್ಲಿ ಒಬ್ಬರು.
ವಿನಾಯಕ ತೊರವಿಯವರು 1948ರ ಸೆಪ್ಟಂಬರ್ 4ರ ವಿನಾಯಕ ಚತುರ್ಥಿಯಂದು ರಾಣಿಬೆನ್ನೂರಿನಲ್ಲಿ ಜನಿಸಿದರು. ತಂದೆ ಕೀರ್ತನಕಾರರಾದ ಮಲ್ಹಾರರಾವ್ ತೊರವಿ ಅವರು. ತಾಯಿ ಅನುಸೂಯಾ ಬಾಯಿ ತೊರವಿ.
ವಿನಾಯಕ ತೊರವಿಯವರು ವೃತ್ತಿಯಿಂದ ಕೆನರಾ ಬ್ಯಾಂಕ್ನಲ್ಲಿ ಹಿರಿಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು.
ವಿನಾಯಕರಿಗೆ ಎಳವೆಯಿಂದಲೇ ಸಂಗೀತದಲ್ಲಿ ಆಸಕ್ತಿ ಮೂಡಿತು. ವಿದ್ವಾನ್ ತಮ್ಮಣ್ಣ ಗುರುವ ಅವರಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದು ನಾರಾಯಣ ದಂಡಾಪುರ ಮತ್ತು ನಾರಾಯಣ ಮಜುಂದಾರ್ ಅವರುಗಳಲ್ಲಿ ಹೆಚ್ವಿನ ಶಿಕ್ಷಣ ಪಡೆದರು. ಗುರುರಾವ್ ದೇಶಪಾಂಡೆಯವರಲ್ಲಿ ಗುರುಕುಲ ಪದ್ಧತಿ ಶಿಕ್ಷಣ ಪಡೆದ ವಿನಾಯಕರು, ಪಂಡಿತ್ ಭೀಮಸೇನ ಜೋಶಿ ಅವರಲ್ಲಿಯೂ ಶಿಷ್ಯತ್ವ ನಡೆಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಗೀತ ಸ್ನಾತಕೋತ್ತರ ಪದವಿ ರ್ಯಾಂಕ್ ವಿಜೇತರಾದ ವಿನಾಯಕ ತೊರವಿ ಅವರು ತಮ್ಮ ಈ ಅಧ್ಯಯನ ಕಾಲದಲ್ಲಿ ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು ಅವರುಗಳ ಮಾರ್ಗದರ್ಶನವನ್ನು ಕೂಡಾ ಅನುಭವಿಸಿದರು.
ಆಕಾಶವಾಣಿಯ ಉನ್ನತ ದರ್ಜೆಯ ಕಲಾವಿದರಾದ ವಿನಾಯಕ ತೊರವಿ ಅವರ ಸಂಗೀತ ಕಾರ್ಯಕ್ರಮಗಳು ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳಿಂದ ಹಲವಾರು ಬಾರಿ ಪ್ರಸಾರವಾಗಿವೆ.
ದಸರಾ ಮಹೋತ್ಸವದ ದರ್ಬಾರ್ ಹಾಲ್, ಪುಣೆಯ ಸವಾಯಿ ಗಂಧರ್ವ ಸಂಗೀತ ಮಹೋತ್ಸವ, ಕೋಲ್ಕತ್ತಾದ ಸಂಗೀತ ಸಂಶೋಧನ ಅಕಾಡೆಮಿ, ದೆಹಲಿಯ ಭಾವೈಕ್ಯ ಸಂಗೀತ ಸಮಾವೇಶ, ಚನ್ನೈನ ಸಂಗೀತ ಮಹೋತ್ಸವ, ಸಾರ್ಕ್ದೇಶಗಳ ಅಂತಾರಾಷ್ಟ್ರೀಯ ಸಮಾವೇಶ, ಹೈದರಾಬಾದಿನ ರಾಷ್ಟ್ರೀಯ ಭಾವೈಕ್ಯ ಸಮಾವೇಶ ಸಂಗೀತೋತ್ಸವ, ಗ್ವಾಲಿಯರ್ನ ತಾನಸೇನ ಐದುನೂರನೇ ಜಯಂತಿ ಉತ್ಸವ ಮುಂತಾದವುಗಳಲ್ಲಿ ವಿನಾಯಕ ತೊರವಿ ಅವರ ಕಾರ್ಯಕ್ರಮಗಳು ನಡೆದವಲ್ಲದೆ ಯೂರೋಪ್, ಅಮೆರಿಕಾ ಸೇರಿದಂತೆ ಇಂದು ವಿಶ್ವದಾದ್ಯಂತ ಅವರ ಸಂಗೀತ ವ್ಯಾಪಿಸಿದೆ.
ಆಗ್ರಾ ಘರಾಣ ಮತ್ತು ಗ್ವಾಲಿಯರ್ ಘರಾಣದಲ್ಲಿ ವಿದ್ವತ್ ಮತ್ತು ಪಕ್ವತೆ ಗಳಿಸಿರುವ ವಿನಾಯಕ ತೊರವಿ ಅವರು, ಹಲವಾರು ಬಂದಿಶ್ ಮತ್ತು ತರಾನಗಳ ರಚನೆಯನ್ನು ಮಾಡಿದ್ದಾರೆ. ಸಂಗೀತ ನಾಟಕ ಅಕಾಡೆಮಿಯ ಸದಸ್ಯರಾಗಿ ಸಹಾ ಅವರ ಸೇವೆ ಸಂದಿದೆ.
ವಿನಾಯಕ ತೊರವಿ ಅವರು ಪಂಡಿತ್ ಗುರುರಾವ್ ದೇಶಪಾಂಡೆ ಸಂಗೀತಾ ಸಭಾ ಎಂಬ ಸಂಸ್ಥೆಯನ್ನು ಗಂಗೂಬಾಯಿ ಹಾನಗಲ್ ಅವರ ಉದ್ಘಾಟನೆಯಲ್ಲಿ 1983ರಲ್ಲಿ ಪ್ರಾರಂಭಿಸಿ ಅನೇಕ ಶಿಷ್ಯರನ್ನು ತಯಾರು ಮಾಡುತ್ತಲೂ ಬಂದಿದ್ದಾರೆ.
ರಾಜ್ಯ ಸಂಗೀತ ನಾಟಕ ಅಕಾಡಮಿಯ ಕಲಾತಿಲಕ, ಭಾರತ ಸರ್ಕಾರದ ಫೆಲೋಶಿಪ್, ಮುಂಬಯಿಯ ಸುರ್ಮಣಿ ಸುರಸಿಂಗಾರ್ ಪ್ರಶಸ್ತಿ, ಟಿ.ಚೌಡಯ್ಯ ಸ್ಮಾರಕ ಸಂಗೀತರತ್ನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮುಂಬೈ ಸ್ವರಸಾಧನಾ ಪ್ರಶಸ್ತಿ, ಮುಂಬೈ ಮ್ಯೂಸಿಕ್ ಫೋರಮ್ ಅವರ ಕಿರಾಣಾ ಘರಾನಾ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ವಿನಾಯಕ ತೊರವಿ ಅವರಿಗೆ ಸಂದಿವೆ.
On the birthday of classical vocalist Pandit Vinayak Torvi
ಕಾಮೆಂಟ್ಗಳು