ಗಿರಡ್ಡಿ ಗೋವಿಂದರಾಜ
ಗಿರಡ್ಡಿ ಗೋವಿಂದರಾಜ
ಡಾ. ಗಿರಡ್ಡಿ ಗೋವಿಂದರಾಜ ಅವರು ಕನ್ನಡ ಸಾಹಿತ್ಯ ವಿಮರ್ಶಾ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು. ನಾವು ನಮ್ಮ ಗೆಳೆಯರೊಡನೆ ನೀನಾಸಂ ಸಾಹಿತ್ಯ ಶಿಬಿರಗಳಲ್ಲಿ ಭಾಗವಹಿಸುವಾಗ ಗಿರಡ್ಡಿಯವರ ಉಪನ್ಯಾಸಗಳನ್ನು ಕೇಳುವುದೇ ಒಂದು ವಿಶಿಷ್ಟ ಅನುಭವ ಎನಿಸುತ್ತಿತ್ತು. ಅವರ ಉಪನ್ಯಾಸಗಳೆಂದರೆ ತಾನೇ ತಾನಾದ ನಿಃಶಬ್ಧತೆಯ ಆಸಕ್ತ ಕಿವಿಗಳ ವಾತಾವರಣ ಸೃಷ್ಟಿಯಾಗಿಬಿಡುತ್ತದೆ. ಯಾರ ಒಡನೆಯೇ ಆಗಲಿ ಯಾವುದೇ ಹಮ್ಮು ಬಿಗುಮಾನಗಳಿಲ್ಲದೆ ಬೆರೆಯುತ್ತಿದ್ದ ಅವರ ಸರಳ ಮನೋಭಾವ, ಅವರನ್ನು ಬಲ್ಲ ಎಲ್ಲರಿಗೂ ಅಪ್ಯಾಯಮಾನವಾದದ್ದು.
ರಾಯಚೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಅವರನ್ನು ಕಂಡಾಗ, ಕುವೆಂಪು ಭಾವ ಹುಟ್ಟಿಸಿದ ಇವರ ಮುಖಚರ್ಯೆ, ವರ್ಚಸ್ಸು ನೋಡಿ ಒಂದು ಕ್ಷಣ ನಾನು ಅಚಲನಾದಾಗ ಅವರೇ ಆಪ್ತವಾಗಿ ಮಾತನಾಡಿಸಿದರು. ಅಲ್ಲಿ ಅವರ ವಿಶೇಷ ಉಪನ್ಯಾಸ ಸಹಾ ಯಾವುದೇ ಪಂಥೀಯ ಭಾವಗಳಿಗೆ ಎಡೆಕೊಡದೆ ಚಿಂತನಾರ್ಹವಾಗಿತ್ತು.
ಗಿರಡ್ಡಿಯವರು 1939ರ ಸೆಪ್ಟಂಬರ 22ರಂದು ಗದಗ ಜಿಲ್ಲೆಯ, ರೋಣ ತಾಲೂಕಿನ, ಅಬ್ಬಿಗೇರಿಯಲ್ಲಿ ಜನಿಸಿದರು. ಅವರ ತಂದೆ ಅಂದಾನಪ್ಪನವರು. ತಾಯಿ ಸಂಗಮ್ಮನವರು. ಗಿರಡ್ಡಿಯವರ ಪ್ರಾರಂಭಿಕ ಶಿಕ್ಷಣ ಅಬ್ಬಿಗೇರಿ, ನರೇಗಲ್ಲ, ರೋಣಗಳಲ್ಲಿ ನೆರವೇರಿತು. ಜನ ಸಂಪರ್ಕದಲ್ಲಿ ಅತ್ಯಂತ ಮೃದುವಾದ ವ್ಯಕ್ತಿಯಾಗಿದ್ದರೂ, ವಿಚಾರ ಗಾಂಭೀರ್ಯದಲ್ಲಿ ಅತ್ಯಂತ ವೃತ್ತಿನಿಷ್ಠರಾಗಿದ್ದ ಗಿರಡ್ಡಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಇಂಗ್ಲಿಷ್ ಎಂ.ಎ ಪದವಿ, ಇಂಗ್ಲೆಂಡಿನ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದಿಂದ ಎಂ.ಎ. (ಭಾಷಾಶಾಸ್ತ್ರ) ಪದವಿ ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಶೈಲಿಶಾಸ್ತ್ರದಲ್ಲಿ ಪಿಎಚ್.ಡಿ. ಪದವಿ ಪಡೆದರು. ಅವರ ಅಧ್ಯಯನದ ವ್ಯಾಪ್ತಿ ಅತ್ಯಂತ ವಿಶಾಲವಾದದ್ದು ಮತ್ತು ಆಳವಾದದ್ದು.
ಗಿರಡ್ಡಿಯವರು ಹಾವೇರಿ ಜಿಲ್ಲೆಯ ಹನುಮನಮಟ್ಟಿಯಲ್ಲಿಯ ಗ್ರಾಮೀಣ ಮಹಾವಿದ್ಯಾಲಯ, ಧಾರವಾಡದ ಕರ್ನಾಟಕ ಕಾಲೇಜು, ಕಲ್ಬುರ್ಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿದ್ದರು. ನಂತರದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಹಾಗೂ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ 1999ರ ಮಾರ್ಚ್‍ನಲ್ಲಿ ನಿವೃತ್ತರಾದರು.
ಗಿರಡ್ಡಿಯವರು ಕಾವ್ಯ, ಕಥೆ, ಪರಿಚಯ, ವಿಮರ್ಶೆ, ಭಾಷಾ ಶಾಸ್ತ್ರ, ಸಂಪಾದನೆ, ನಾಟಕ ಹೀಗೆ ಸಮಸ್ತ ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯವಾದ ಕೃತಿಗಳನ್ನು ರಚಿಸಿದ್ದಾರೆ. 'ಶಾರದಾಲಹರಿ', 'ರಸವಂತಿ', 'ಮರ್ಲಿನ್ ಮನ್ರೋ' ಕಾವ್ಯ ಸಂಕಲನಗಳು. 'ಆ ಮುಖಾ - ಈ ಮುಖಾ', 'ಮಣ್ಣು', 'ಹಂಗು ಮತ್ತು ಇತರ ಕತೆಗಳು', 'ಒಂದು ಬೇವಿನಮರದ ಕಥೆ', 'ಆಯ್ದ ಕಥೆಗಳು' ಕಥಾಸಂಕಲನಗಳು.
ಗ್ರಂಥ ಸಂಪಾದನೆ, ವಿಮರ್ಶೆ, ಭಾಷಾ ಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಗಿರಡ್ಡಿಯವರ ಪ್ರಕಟಣೆಗಳು ಹಲವು ಬೃಹತ್ ಸಂಪುಟಗಳಷ್ಟು ಸುದೀರ್ಘವಾದುದು.
ಸಣ್ಣ ಕತೆಯ ಹೊಸ ಒಲವುಗಳು, ಜನಪದ ಕಾವ್ಯ, ನವ್ಯ ವಿಮರ್ಶೆ, ಕಾದಂಬರಿ: ವಸ್ತು ಮತ್ತು ತಂತ್ರ, ಸಾಹಿತ್ಯ ಮತ್ತು ಪರಂಪರೆ, ಇಂಗ್ಲೆಂಡಿನ ರಂಗಭೂಮಿ, ಸಾತತ್ಯ, ವಚನ ವಿನ್ಯಾಸ, ಕನ್ನಡ ಕಾವ್ಯಪರಂಪರೆ ಮತ್ತು ಬೇಂದ್ರೆಯವರ ಕಾವ್ಯ ಮುಂತಾದವು ಗಿರಡ್ಡಿಯವರು ಸಲ್ಲಿಸಿರುವ ಸಾಹಿತ್ಯದ ಪರಿಚಯಾತ್ಮಕ ವಿಮರ್ಶೆಗಳಾಗಿವೆ.
ಭಾಷಾಶಾಸ್ತ್ರ ಕನ್ನಡ ಡೈಗ್ಲಾಸಿಯ, Introduction to General Linguistics ಭಾಷೆಯ ಕುರಿತಾದ ವಿದ್ವತ್ ಪೂರ್ಣಕೃತಿಗಳು.
ಸಣ್ಣ ಕತೆ, ಕನ್ನಡ ಕಥಾಸಂಕಲನ, ಆಧುನಿಕ ಕನ್ನಡ ಕಾವ್ಯ : ಉತ್ತರ ಕರ್ನಾಟಕದ ಕೊಡುಗೆ, ಮರೆಯಬಾರದ ಹಳೆಯ ಕತೆಗಳು, ಯುವಕಾವ್ಯ, ಯುವಕಥೆ, ಬಹುಮಾನಿತ ಕೃತಿಗಳ ನಾಲ್ಕು ಸಂಪುಟಗಳು, ಕೆ.ವಿ.ತಿರುಮಲೇಶರ ಸಾಹಿತ್ಯ, ಕನ್ನಡ ನವೋದಯ ಕಾವ್ಯ, ಕುಂ.ವೀ. ಅವರ ಕಥಾಸಾಹಿತ್ಯ, ಮಿರ್ಜಿ ಅಣ್ಣಾರಾಯರ ಸಾಹಿತ್ಯ, ಓದುವ ದಾರಿಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಸಾಹಿತ್ಯ ಪಾರಿಭಾಷಿಕ ಮಾಲೆ’ಯ 16 ಪುಸ್ತಕಗಳು, ಸಂಕ್ರಮಣ ಕಾವ್ಯ, ಹವ್ಯಾಸಿ ರಂಗಭೂಮಿಯ ಸಮಸ್ಯೆಗಳು, ದಶವಾರ್ಷಿಕ ವಿಮರ್ಶೆಗಳು, ‘ಶತಮಾನದ ಸಂಕಲನಗಳು’ ಮಾಲೆಯ 6 ಸಂಪುಟಗಳ ಪ್ರಧಾನ ಸಂಪಾದಕತ್ವ, ಸಮಗ್ರ ಸೃಜನ, ಸಮಗ್ರ ವಿಮರ್ಶೆ-1, ಸಮಗ್ರ ವಿಮರ್ಶೆ-2 ಇವೆಲ್ಲಾ ಅವರ ಸಂಪಾದನೆಯ ಬೃಹತ್ ಕೊಡುಗೆಗಳು.
ಗಿರಡ್ಡಿಯವರು ಕಲ್ಬುರ್ಗಿಯಲ್ಲಿದ್ದಾಗ ರಂಗಮಾಧ್ಯಮದಂತ ನಾಟಕ ಸಂಸ್ಥೆಯನ್ನು ನಿರ್ಮಿಸಿದ್ದರು. ನಾಟಕಗಳಲ್ಲಿ ಅಭಿನಯ ಮತ್ತು ನಿರ್ದೇಶನಗಳನ್ನು ಮಾಡಿದ್ದರು. ಪುಟ್ಟಣ್ಣ ಕಣಗಾಲರು ನಿರ್ದೇಶಿಸಿದ ಮೂರು ಕತೆಗಳ ಸಂಗಮವಾದ ಕಥಾಸಂಗಮ ಚಲನಚಿತ್ರದಲ್ಲಿ ಇವರ ಕತೆ ‘ಹಂಗು’ ಚಿತ್ರಣವಾಗಿದೆ. ‘ಹಂಗು’ ಕಥೆಯ ಹಿಂದಿ ರೂಪಾಂತರ ‘ಉಪಕಾರ’ ಎನ್ನುವ ಹೆಸರಿನಲ್ಲಿ ದಿಲ್ಲಿ ದೂರದರ್ಶನದ ಧಾರಾವಾಹಿ ಮಾಲಿಕೆಯಲ್ಲಿ ಪ್ರಸಾರವಾಯಿತು.
ಗಿರಡ್ಡಿಯವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವಾರು ಸಮಿತಿ, ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದವರು. ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದವರು. ಹಲವಾರು ಪ್ರಶಸ್ತಿಗಳು ಗಿರಡ್ಡಿಯವರಿಗೆ ಲಭ್ಯವಾಗಿದ್ದು, “ತಲಸ್ಪರ್ಶಿ" ಎನ್ನುವ ಅಭಿನಂದನ ಗ್ರಂಥವನ್ನು ಅವರಿಗೆ ಸಮರ್ಪಿಸಲಾಗಿದೆ.
2018ರ ಮೇ 11ರಂದು ಈ ಲೋಕವನ್ನಗಲಿದ ಗಿರಡ್ಡಿಯವರು ಯಾವುದೇ ಪಂಥೀಯ ಭಾವನೆಗಳಿಗೆ ಎಡೆಕೊಡದ ಶುದ್ಧ ಸಾಹಿತ್ಯ ಚಿಂತಕರುಗಳಿಗೆ ಅಳಿಯಲಾರದ ಮಧುರ ಸವಿನೆನಪು. ಈ ಮಹಾನ್ ಮಧುರತೆಗೆ ಹೃದಯಪೂರ್ವಕ ನಮನ.
On the birth anniversary of great scholar Dr. Giraddi Govindaraj
ಕಾಮೆಂಟ್‌ಗಳು