ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಬ್ರಮಣಿಯನ್ ಸ್ವಾಮಿ


 ಸುಬ್ರಮಣಿಯನ್ ಸ್ವಾಮಿ 


ಸುಬ್ರಮಣಿಯನ್ ಸ್ವಾಮಿ ಖ್ಯಾತ ಅರ್ಥಶಾಸ್ತ್ರಜ್ಞರು ಮತ್ತು ರಾಜಕಾರಣಿ.  ಮಹಾನ್ ಬುದ್ಧಿಶಾಲಿ.  ಒಂದು ರೀತಿಯಲ್ಲಿ ಪಕ್ಷಾತೀತವಾಗಿ ಎಲ್ಲ ರಾಜಕೀಯ ಪಕ್ಷಗಳಲ್ಲಿನ ಭ್ರಷ್ಟತೆಗಳನ್ನು ಸತ್ಯನಿಷ್ಠತೆಯಿಂದ, ಅಸಾಮಾನ್ಯ ಧೈರ್ಯದಿಂದ ಬಯಲಿಗೆಳೆದವರು.  ಹಿಂದೂ ಧರ್ಮದ ಕುರಿತಾಗಲಿ, ರಾಜಕೀಯದಲ್ಲಾಗಲಿ, ಕಾನೂನಿನ ವಿಚಾರದಲ್ಲಾಗಲಿ, ಆರ್ಥಿಕ ಪರಿಸ್ಥಿತಿಯ ಕುರಿತಾಗಲಿ ಅವರಷ್ಟು ಆಳವಾಗಿ ಅರಿತವರು ಅಪರೂಪ. ಹಾಗಾಗಿ ಅವರನ್ನು ಸದಸ್ಯರಾಗಿ ಹೊಂದಿರುವ ಪಕ್ಷಕ್ಕೂ ಅವರನ್ನು ಇಟ್ಟುಕೊಂಡಿರುವುದು ಅಂದರೆ ಕೆಂಡವನ್ನು ಕಂಕುಳಲ್ಲಿ ಇಟ್ಟುಕೊಂಡಿರುವಂತೆ.

ಸುಬ್ರಮಣಿಯನ್ ಸ್ವಾಮಿ ಚೆನ್ನೈ ಸಮೀಪದ ಮೈಲಾಪುರ್ ಎಂಬಲ್ಲಿ 1939ರ ಸೆಪ್ಟೆಂಬರ್ 15ರಂದು ಜನಿಸಿದರು. ಇವರ ತಂದೆ ಸೀತಾರಾಮನ್ ಸುಬ್ರಮಣಿಯನ್ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯಲ್ಲಿ ಅಧಿಕಾರಿಯಾಗಿ ದೆಹಲಿಯ ಕೇಂದ್ರೀಯ ಸಂಖ್ಯಾ ಶಾಸ್ತ್ರ ಸಂಸ್ಥೆಯ ನಿರ್ದೇಶಕರಾಗಿ ಮತ್ತು ಭಾರತ ಸರ್ಕಾರದ ಅಂಕಿಅಂಶಗಳ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದವರು. ಅವರಿಗೆ ಅಂದಿನ ಕಾಲದ ಎಲ್ಲ ಪ್ರಸಿದ್ಧರೊಡನೆ ಒಡನಾಡಿತ್ವವಿತ್ತು.

ಸ್ವಾಮಿ ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಲ್ಲಿ ಗಣಿತ ಶಾಸ್ತ್ರದಲ್ಲಿ  ಸ್ನಾತಕೋತ್ತರ ಪದವಿ ಮತ್ತು  ಕೊಲ್ಕತ್ತಾದ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯಲ್ಲಿ ಸಂಖ್ಯಾಶಾಸ್ತ್ರದಲ್ಲಿನ ಸ್ನಾತಕೋತ್ತರ ಪದವಿ ಪಡೆದರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬಲ್ ಪುರಸ್ಕೃತ ಸೈಮನ್ ಕುಸ್ನೆಟ್ಸ್ ಅವರ ಮಾರ್ಗದರ್ಶನದಲ್ಲಿ 1965ರಲ್ಲಿ 'Economic Growth and Income Distribution in a Developing Nation' ಪ್ರಬಂಧ ಮಂಡಿಸಿ ಪಿಎಚ್.ಡಿ ಪಡೆದರು. ಹಾರ್ವರ್ಡ್ನಲ್ಲಿ ಗಣಿತ ಶಾಸ್ತ್ರದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಭಾರತೀಯ ಕುಟುಂಬದ ರೋಕ್ಸ್ನಾ ಅವರನ್ನು ಪ್ರೇಮಿಸಿ ವಿವಾಹವಾದರು.

ಸುಬ್ರಮಣಿಯನ್ ಸ್ವಾಮಿ 1963ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವಾಗಲೇ ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಸೆಕ್ರೆಟರಿಯೇಟ್ನಲ್ಲಿ  ಸಹಾಯಕ ಆರ್ಥಿಕ ಅಧಿಕಾರಿಗಳಾಗಿ  ಕಾರ್ಯನಿರ್ವಹಿಸಿದ್ದರು. 1965ರಿಂದ ಹಾರ್ವರ್ಡ್ ವಿಶ್ವವಿದ್ಯಾಲಯದ  ಲೋವೆಲ್ ಹೌಸ್ ನಲ್ಲಿ ಭೋಧಕರಾಗಿ ಕಾರ್ಯನಿರ್ವಹಿಸಿದರು. 1969ರಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆದರು. ಅದೇ ಸಮಯದಲ್ಲಿ ಅವರಿಗೆ ಡೆಲ್ಲಿ ಸ್ಕೂಲ್ ಆಫ್ ಎಕಾನಾಮಿಕ್ಸನಲ್ಲಿ ಕಾರ್ಯನಿರ್ವಹಿಸಲು ಅಮರ್ಥ್ಯಸೇನ್ ಆಹ್ವಾನಿಸಿದರಾದರೂ ಭಾರತೀಯ ಆರ್ಥಿಕ ನೀತಿಯ ಕುರಿತು ಅವರು ತಳೆದಿದ್ದ ನಿಲುವಿನಿಂದಾಗಿ ಸ್ವಾಮಿ ಅವರಿಗೆ ನೀಡಿದ್ದ ಹುದ್ದೆ ಆಹ್ವಾನವನ್ನು ಕೊನೆಯ ಘಳಿಗೆಯಲ್ಲಿ ಹಿಂತೆಗೆದುಕೊಳ್ಳಲಾಯಿತು. 

ಸುಬ್ರಮಣಿಯನ್ ಸ್ವಾಮಿ 1969-1970ರ ಅವಧಿಯ ಕೆಲವು ತಿಂಗಳುಗಳವರೆಗೆ ದೆಹಲಿಯ  ಐಐಟಿಯಲ್ಲಿ ಗಣಿತ ಅರ್ಥಶಾಸ್ತ್ರದ ಪ್ರಾಧ್ಯಾಪಕ ಹುದ್ದೆ ಕೈಗೊಂಡರು. ಆದರೆ ಅವರನ್ನು ಐಐಟಿ ಬೋರ್ಡ್ ಆಫ್ ಗವರ್ನರ್ಸ್ ತಂಡ  ಉಚ್ಚಾಟಿಸಿತು.  1990ರಲ್ಲಿ ಅಷ್ಟೂ ವರ್ಷಗಳ ಸಂಬಂಳದೊಂದಿಗೆ ಸುಪ್ರೀಂಕೋರ್ಟ್ ಅವರಿಗೆ ಆ ಸ್ಥಾನವನ್ನು ಹಿಂದಕ್ಕೆ ಕೊಟ್ಟಿತು. ಈ ಮಧ್ಯೆ ಅವರು ಜನತಾಪಕ್ಷದ ಆಡಳಿತವಿದ್ದ ಸಮಯದಲ್ಲಿ ಐಐಟಿ ಬೋರ್ಡ್ ಆಫ್ ಗವರ್ನರ್ಸ್ ಮತ್ತು ಕೌನ್ಸಿಲ್ ಆಫ್ ಐಐಟಿ ಆಡಳಿತ ಮಂಡಳಿಯಲ್ಲಿ ಸದಸ್ಯರಾಗಿದ್ದರು. ಇಂದಿರಾಗಾಂಧೀ ಅವರ ಆಡಳಿತದೊಂದಿಗೆ ಸ್ವಾಮಿ ಅವರಿಗಿದ್ದ ಸೈದ್ದಾಂತಿಕ ತಿಕ್ಕಾಟ ಹೀಗೆ ಅವರ ವೃತ್ತಿಜೀವನದ ಮೇಲೆ ಗಾಢ ಛಾಯೆಯನ್ನು ಹೊಂದಿತ್ತು.  ಇಂದಿರಾಗಾಂಧೀ ಇವರನ್ನು ''Santa Claus with unrealistic ideas" ಎಂದು ಹೀಯಾಳಿಸಿ ಐಐಟಿ ಇಂದ ಉಚ್ಚಾಟನೆಗೊಳ್ಳುವಲ್ಲಿ ಪ್ರಧಾನಿಯಾಗಿ ಪ್ರಧಾನಪಾತ್ರ ವಹಿಸಿದ್ದರು.  ವಿರೋಧಪಕ್ಷವಾದ ಜನಸಂಘ ಇವರನ್ನು ರಾಜ್ಯಸಭೆಗೆ ಕಳುಹಿಸಿತು. 1974ರಿಂದ 1999 ಅವಧಿಯಲ್ಲಿ 5 ಬಾರಿ ಪಾರ್ಲಿಮೆಂಟ್ ಸದಸ್ಯರಾದರು. ತುರ್ತುಪರಿಸ್ಥಿತಿ ಸಮಯದಲ್ಲಿ ಬಂಧನಕ್ಕೆ ವಾರಂಟ್ ಇದ್ದರೂ ಕೈಗೆ ಸಿಗದೆ ಅಮೆರಿಕದಲ್ಲಿದ್ದು, ಒಮ್ಮೆ ಮಧ್ಯೆ ಪಾರ್ಲಿಮೆಂಟ್ ಆಧಿವೇಶನಕ್ಕೆಂದು ಬಂದು ಸಹಾ ಬಂಧನಕ್ಕೆ ಸಿಲುಕದೆ ಚಾಣಾಕ್ಷತೆಯಿಂದ ತಪ್ಪಿಸಿಕೊಂಡು ಹೋದರು. 

1977ರಲ್ಲಿ ಹುಟ್ಟಿದ ಜನತಾಪಕ್ಷದಲ್ಲಿ 2013ವರೆಗಿದ್ದ ಸುಬ್ರಮಣಿಯನ್ ಸ್ವಾಮಿ ನಂತರ ಭಾರತೀಯ ಜನತಾಪಕ್ಷಕ್ಕೆ ಬಂದರು. ಈ ಮಧ್ಯೆ ಅವರು 1990-91 ಅವಧಿಯಲ್ಲಿ ಯೋಜನಾ ಆಯೋಗದ ಸದಸ್ಯರಾಗಿ,  ಕೇಂದ್ರ ವಾಣಿಜ್ಯ ಮತ್ತು ಕಾನೂನು ಸಚಿವರಾಗಿದ್ದರು. ಪಿ ವಿ ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಅವರು ಚೇರ್ಮನ್ ಆಫ್ ಕಮಿಷನ್ ಆನ್ ಲೇಬರ್ ಸ್ಟಾಂಡರ್ಡ್ಸ್ ಅಂಡ್ ಇಂಟರ್ನ್ಯಾಷನಲ್ ಟ್ರೇಡ್ ಜವಾಬ್ದಾರಿ ನಿರ್ವಹಿಸಿದರು.

ಸುಬ್ರಮಣಿಯನ್ ಸ್ವಾಮಿ ಹಲವು ಹಗರಣಗಳನ್ನು ಬಹಿರಂಗಪಡಿಸಿ ಕಾನೂನು ಸಮರಗಳನ್ನು ಹೂಡಿ ಅನೇಕರ ಕುರ್ಚಿ ಅಲ್ಲಾಡಿಸಿದವರು.  ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ರಾಮಕೃಷ್ಣ ಹೆಗಡೆ ರಾಜಿನಾಮೆ ನೀಡಿದರು. ಜಯಲಲಿತ ಅಕ್ರಮ ಆಸ್ತಿ ಹಗರಣ, ಸೋನಿಯಾ ಗಾಂಧಿ ಪದವಿ, ಕಾಂಗ್ರೆಸ್ ಮುಖಂಡರ  ನ್ಯಾಷನಲ್ ಹೆರಾಲ್ಡ್ ಹಗರಣ, ಎ ಜೆ ಪಿ ಎಲ್  ಹಗರಣ; 2ಜಿ ಹಗರಣದಲ್ಲಿ ರಾಜಾ, ಕನೀಮೊಳಿ ಮುಂತಾದವರಿಗೆ ಸೆರೆವಾಸ ಹೀಗೆ ಸ್ವಾಮಿ ಅವರದ್ದು ಪ್ರಬಲರೊಂದಿಗೆ ಜಿದ್ದಾಜಿದ್ದಿ ಕಾನೂನು ಸಮರ.  ಹೀಗೆ ಸುಬ್ರಮಣಿಯನ್ ಸ್ವಾಮಿ ನಿರಂತರ ಹಲವು ರಾಜಕೀಯ ವ್ಯಕ್ತಿಗಳಿಗೆ ನಿದ್ರೆಕೆಡಿಸಿ, ಹಲವರಿಗೆ ಜಾಗರೂಕತೆ ಪಾಠ ಕಲಿಸುತ್ತಾ ಬಂದವರು. ದೇಗುಲಗಳು, ಹಲವು ಕಾನೂನುಗಳು ಹೀಗೆ ಹಲವು ರೀತಿಯಲ್ಲಿ ವ್ಯಾಜ್ಯ ಹೂಡುವುದರಲ್ಲಿಯೂ ಅವರಿಗೆ ಅಪಾರ ಆಸಕ್ತಿ.

ಸುಬ್ರಮಣಿಯನ್ ಸ್ವಾಮಿಅನೇಕ ಗ್ರಂಥಗಳನ್ನು ಮತ್ತು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ...

Hindutva and National Renaissance; Virat Hindu Identity - Concept and its Power; Economic Growth in China and India, 1952–70; 

Indian economic planning: An alternative approach; 

Building a New India: An Agenda for National Renaissance; 

India's Labour Standards and the WTO Framework; 

India's economic performance and reforms: A perspective for the new millennium; 

Assassination of Rajiv Gandhi: Unanswered Questions and Unasked Queries; 

India's China perspective; Financial Architecture and Economic Development in China and India; 

Trade and Industry in Japan: A Guide to Indian Entrepreneurs and Businessmen; 

Sri Lanka in Crisis: India's Options; 

Kailas and Manasarovar after 22 years in Shiva's domain; 

Hindus Under Siege; Rama Setu: Symbol of National Unity; 

Terrorism in India: A Strategy of Deterrence for India's National Security; 

Corruption and Corporate Governance in India: Satyam, Spectrum & Sundaram; 

2G Spectrum Scam; 

Electronic Voting Machines: Unconstitutional and Tamperable;

Predictions and Meditations ಮುಂತಾದ ಅನೇಕ ಗ್ರಂಥಗಳಿವೆ.

ಸುಬ್ರಮಣಿಯನ್ ಸ್ವಾಮಿ ವಿಚಾರಗಳನ್ನೂ ಅದ್ಭುತವಾಗಿ ಪ್ರತಿಪಾದಿಸಬಲ್ಲರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತದ ಕ್ಲಿಷ್ಟ ಸಂವಿಧಾನ ಸ್ವರೂಪದಲ್ಲಿ, ಚುನಾವಣೆ ರಾಜಕಾರಣದಲ್ಲಿ ಭ್ರಷ್ಟಾಚಾರ ಹುಡುಕೋದು ಸುಲಭ.  ಹೋರಾಟ ಟೀಕೆಗಳು ಎಲ್ಲವೂ ಬುದ್ಧಿವಂತರಿಗೆ ಸುಲಭವೇ.  ತಾವಿರುವ ಪಕ್ಷದ ದಿಕ್ಕಿನಲ್ಲೇ ಅವರು ಗೋಲುಹೊಡೆದು ಗೊಂದಲ ಹುಟ್ಟಿಸುತ್ತಾರೆ.  ಸತ್ಯಕ್ಕಾಗಿ ಹೋರಾಡಲು ಏಕೆ ಹೆದರಬೇಕು ಎಂಬುದೇನೋ ಸರಿ.  ಆದರೆ ಬುದ್ಧಿವಂತರು ರಚನಾತ್ಮಕವಾಗಿ ನಿಂತು ಸಹಾ ಸಮಾಜದ ಒಳಿತಿಗಾಗಿ ಏನಾದರೂ ಮಾಡಬೇಕೇನೊ. ಬುದ್ಧಿವಂತಿಕೆಯ ವಾದ ಅನ್ಯಾಯವನ್ನು ಪ್ರತಿಭಟಿಸುತ್ತದೆ ನಿಜ.  ಆದರೆ, ಅದು ತನ್ನ ಪ್ರಭಾವಳಿಯಲ್ಲಿ ಅಹಂ ಬೆಳೆಸಿಕೊಂಡು ಒಡಕು ಅಸ್ಥಿರತೆಗಳನ್ನು ಹುಟ್ಟಿಹಾಕಿ, ಒಬ್ಬ ತಪ್ಪಿತಸ್ಥನ ಜಾಗದಲ್ಲಿ ಒಬ್ಬ ದರೋಡೆಕೋರನನ್ನು ತರುವ ಆಟದ ಅಂಗಣವನ್ನು ಮಾತ್ರವೇ ಕಾಣುವುದು ಹೆಚ್ಚು ಉಪಯುಕ್ತವಲ್ಲ. ಭಾರತದಂತಹ ಸಂಕೀರ್ಣ ದೇಶದಲ್ಲಿ ನಮಗೆ ಬೇಕಿರುವುದು ಪರಿಹಾರೋಪಾಯಗಳು. ಅದಕ್ಕೆ ಬುದ್ಧಿವಂತರು ಹೆಚ್ಚು ಆದ್ಯತೆ ನೀಡಬೇಕು.

On the birth day of economist and politician Dr. Subramanian Swamy 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ