ರಾಮರಾವ್ ನಾಯಕ್
ಪಂಡಿತ್ ರಾಮರಾವ್ ವಿ ನಾಯಕ್
ಪಂಡಿತ್ ರಾಮರಾವ್ ವೆಂಕಾಜಿರಾವ್ ನಾಯಕ್ ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದವರು.
ರಾಮರಾವ್ ವಿ ನಾಯಕ್ 1909ರ ಸೆಪ್ಟೆಂಬರ್ 28ರಂದು ಮೈಸೂರಿನಲ್ಲಿ ಜನಿಸಿದರು. ಅವರ ತಂದೆ ವೆಂಕಾಜಿರಾವ್ ನಾಯಕ್. ತಾಯಿ ಶ್ರೀಮತಿ ಲಕ್ಷ್ಮೀಬಾಯಿ. ಮೂಲತಃ ಇವರು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ನೀಲಗಿರಿ ಗ್ರಾಮದವರು.
ಚಿಕ್ಕ ವಯಸ್ಸಿನಲ್ಲಿ ಹಸಿರು ಹುಲ್ಲುಗಾವಲು, ಗೋವುಗಳು, ಕುರಿಗಳು ಮತ್ತು ಪಕ್ಷಿಗಳ ಕಡೆಗೆ ತುಂಬಾ ಆಕರ್ಷಿತರಾದ ಬಾಲಕ ರಾಮರಾವ್ ನಾಯಕ್ ಶಾಲೆಯಲ್ಲಿ ಕಲಿತದ್ದು ಕೇವಲ ಎರಡನೇ ತರಗತಿಯವರೆಗೆ ಮಾತ್ರ. ಬಾಲ್ಯದ ದಿನಗಳನ್ನು ಗೊಲ್ಲರ ಹಾಡುಗಳನ್ನು ಸವಿಯುವುದರಲ್ಲಿ ಕಳೆದ ಈ ಬಾಲಕನಿಗೆ ಮತ್ತೊಂದು ಆಕರ್ಷಣೆ ಊರಿನ ಗ್ರಾಮಾಫೋನ್ ರೆಕಾರ್ಡ್ ಅಂಗಡಿ ಆಗಿತ್ತು. ಅಂಗಡಿಯ ಒಡೆಯನಿಗೆ ತುಂಬಾ ಆಪ್ತನಾಗಿ ಸಹಕರಿಸುತ್ತ ತನಗೆ ಬೇಕಾದ ಗ್ರಾಮಾಫೋನ್ ರೆಕಾರ್ಡುಗಳಲ್ಲಿ ಸಂಗೀತ ಕೇಳುವ ಸೌಲಭ್ಯವನ್ನು ಗಿಟ್ಟಿಸಿಕೊಳ್ಳುತ್ತಿದ್ದ. ಜವಾರಾ ಬಾಯಿಯವರ ಸಂಗೀತ ಇವನಲ್ಲಿ ಅಪಾರ ಸ್ಪೂರ್ತಿ ತಂದಿತ್ತು. ಹೀಗೆ ಸಂಗೀತದಲ್ಲಿ ಅಪಾರ ಆಸಕ್ತಿಯಿದ್ದ ಬಾಲಕ ಎಳೆ ವಯಸ್ಸಿನಲ್ಲಿಯೇ ಕರ್ನಾಟಕ ಸಂಗೀತದಿಂದ ತನ್ನ ಅಭ್ಯಾಸವನ್ನು ಆರಂಭಿಸಿದ. ಅವರ ಮೊದಲ ಗುರು ಹಾರ್ಮೋನಿಯಂ ವಾದಕ ಶ್ರೀನಿವಾಸರಾವ್. ಕೇವಲ ಎರಡು ವರ್ಷಗಳ ಶ್ರದ್ಧೆಯ ಕಲಿಕೆಯ ಸಾಧನೆಯಿಂದಲೇ, ತಮ್ಮ ಗುರುಗಳು ನೀಡುತ್ತಿದ್ದ ಸಂಗೀತ ಶಿಕ್ಷಣ ಪಾಠಗಳಿಗೆ ತಾವೂ ಸಹಕರಿಸುವ ಮಟ್ಟಕ್ಕೇರಿದರು. ಸೈನ್ಯ ಸೇವೆಯಲ್ಲಿದ್ದ ತಮ್ಮ ತಂದೆ ಹಣಕಾಸಿನ ಕಷ್ಟಕ್ಕೆ ಸಿಲುಕಿದಾಗ ಇನ್ನೂ ಒಂಬತ್ತು ವಯಸ್ಸಿನ ರಾಮರಾವ್ ನಾಯಕ್ ಸಂಗೀತ ಪಾಠ ಹೇಳಿ ತಿಂಗಳಿಗೆ ಐದು ರೂಪಾಯಿ ಸಂಪಾದಿಸಿ ತಂದೆಗೆ ನೆರವಾಗತೊಡಗಿದ್ದರು.
ಮುಂದೆ ರಾಮರಾವ್ ನಾಯಕ್ ಸುಪ್ರಸಿದ್ಧ ನಾಟಕ ಕಂಪನಿಗಳಲ್ಲಿ ನಟರಾಗಿ ಸೇವೆ ಸಲ್ಲಿಸಿದರು. ಬಾಲ ಕಲಾವಿದನಾಗಿ “ಧ್ರುವ ಹಾಗೂ “ಪ್ರಹ್ಲಾದ”ನ ಪಾತ್ರಗಳಿಗೆ ಜೀವಕಳೆ ನೀಡಿ ಅಭಿನಯಿಸುತ್ತಿದ್ದರು. ಚಿಕ್ಕವರಿದ್ದಾಗ ಸ್ತ್ರೀ ಪಾತ್ರಗಳನ್ನೇ ಅವರು ಹೆಚ್ಚಾಗಿ ಮಾಡುತ್ತಿದ್ದು, ಅವು ತುಂಬಾ ಪ್ರಭಾವಾಶಾಲಿಯೂ ಮನೋಜ್ಞವೂ ಆಗಿರುತ್ತಿದ್ದವು. ಒಮ್ಮ ರಾಧೆಯ ಪಾತ್ರ ಮಾಡುವಾಗ, ಕೆಲವು ತುಂಟ ಹುಡುಗರು ಹಿಂಬಾಲಿಸಿ, ಹಳ್ಳಿಯೊಂದರಲ್ಲಿ ಕೀಟಲೆ ಮಾಡಿದುದೂ ಉಂಟು. ಗುಬ್ಬಿ ವೀರಣ್ಣ, ಹಿರಣ್ಣಯ್ಯ, ವರದಾಚಾರ್ ಕಂಪನಿಯಂತಹ ಆಗಿನ ಕಾಲದ ಸುಪ್ರಸಿದ್ಧ ನಾಟಕ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಅವರದು. ಸದಾರಮೆ ನಾಟಕದ ಕಳ್ಳನ ಪಾತ್ರದಲ್ಲಿ ಇವರ ನಟನೆಯನ್ನು ಕನ್ನಡ ರಂಗಭೂಮಿಯ ಅಧ್ವರ್ಯುಗಳು ಮೆಚ್ಚಿಕೊಂಡಿದ್ದರು. ಪ್ರೇಕ್ಷಕನ ನಾಡಿ ಮಿಡಿತವನ್ನು ರಂಗ ಮಂಚದ ಮೇಲೆ ಅಭಿನಯಿಸುವಾಗ ಮಾತ್ರ ಹಿಡಿಯಲು ಸಾಧ್ಯವೆನ್ನುತ್ತಿದ್ದರು.
ಮುಂದೆ ರಾಮರಾವ್ ನಾಯಕ್ ಸುಪ್ರಸಿದ್ಧ ಹಿಂದುಸ್ತಾನಿ ವಿದ್ವಾಂಸ ಪಂಡಿತ್ ಗೋವಿಂದ ವಿಠಲ ಭಾವೆ ಅವರಲ್ಲಿ ಹಲವು ವರ್ಷಗಳ ಕಾಲ ಹಿಂದುಸ್ತಾನಿ ಸಂಗೀತವನ್ನು ಅಭ್ಯಾಸ ಮಾಡಿದರು. ಅನಂತರ ಆಗ್ರಾ ಘರಾಣೆಯ ಶ್ರೇಷ್ಠ ಸಂಗೀತ ವಿದ್ವಾಂಸರಾಗಿದ್ದ ಸ್ವಾಮಿ ವಲ್ಲಭದಾಸರು ಹಾಗೂ ಉಸ್ತಾದ್ ಅತ್ತಾಹುಸೇನ್ ಖಾನ್ ಅವರಲ್ಲಿ ಕಠಿಣ ತರಬೇತಿ ಪಡೆದರು. ಇದಲ್ಲದೆ ರಾಮರಾವ್ ನಾಯಕ್ ಆಗ್ರಾ ಘರಾಣೆಯ ಅನನ್ಯ ಸಾಧಕರಾಗಿದ್ದ, ಮೇರು ಸದೃಶ ಉಸ್ತಾದ್ ಫಯಾಜ್ ಖಾನ್ ಅವರಲ್ಲಿ ಕಛೇರಿಯ ತಂತ್ರ ಸೂಕ್ಷ್ಮಗಳನ್ನು ಕರಗತ ಮಾಡಿಕೊಂಡರು.
ರಾಮರಾವ್ ನಾಯಕ್ ನಾಡಿನಾದ್ಯಂತ ಕಾರ್ಯಕ್ರಮಗಳನ್ನು ನೀಡಿದರಲ್ಲದೆ ಅನೇಕ ರಾಗಗಳಲ್ಲಿ ‘ಖಯಾಲ್’ಗಳನ್ನು ರಚಿಸಿದ್ದಾರೆ. ಕರ್ನಾಟಕ ಸಂಗೀತದ ಕಲ್ಯಾಣ ವಸಂತ ರಾಗದಿಂದ ಪ್ರಭಾವಿತರಾಗಿ ಅಪರೂಪದ ನಾಗರಂಜನಿ ಎಂಬ ನೂತನ ರಾಗವನ್ನು ಸಂಯೋಜಿಸಿದ್ದಾರೆ. ಉತ್ತಮ ವಜನ್ ತುಂಬಿದ ಸ್ವರೋಚ್ಚಾರ, ನಾದ ಗಾಂಭೀರ್ಯ, ಇಳುಕಲು ಸ್ವರಗಳಲ್ಲಿ ವಿಶೇಷ ಜಾಣ್ಮೆ, ಭಾವ ಪೋಷಕವಾದ ಸ್ವರ ಸಂಯೋಜನೆ ಪಂಡಿತ್ ರಾಮರಾವ್ ನಾಯಕರ ಗಾಯನದ ವೈಶಿಷ್ಟ್ಯಗಳಾಗಿದ್ದವು. ಆಕಾಶವಾಣಿಯ ರಾಷ್ಟ್ರೀಯ ಕಾರ್ಯಕ್ರಮದಲ್ಲಿ, ಮೈಸೂರು ದಸರಾ, ಕೇಂದ್ರ ಸಂಗೀತ ನಾಟಕ ಅಕಾಡೆಮಿಗಳಲ್ಲೂ ಅವರು ಕಾರ್ಯಕ್ರಮ ನೀಡಿದ್ದರು.
ಪಂಡಿತ್ ರಾಮರಾವ್ ವಿ. ನಾಯಕ್ ಅವರ ಗಾನ ಪ್ರೌಢಿಮೆಗೆ ಸಂದ ಗೌರವಗಳಲ್ಲಿ ಪ್ರಮುಖವಾದವುಗಳೆಂದರೆ ಗಂಧರ್ವ ಮಹಾ ವಿದ್ಯಾಲಯದಿಂದ ‘ಸಂಗೀತ ಕಲಾ ಭೂಷಣ’ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಧ್ಯ ಪ್ರದೇಶ ಸರ್ಕಾರದ ಪ್ರತಿಷ್ಠಿತ ತಾನ್‌ಸೇನ್ ಪ್ರಶಸ್ತಿ, ರಾಜ್ಯ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮುಂತಾದವು ಸೇರಿವೆ. ಮೈಸೂರಿನ ಹೆಮ್ಮೆಯ ಪುತ್ರರಾದ ರಾಮರಾವ್ ವಿ. ನಾಯಕ್ ಅವರಿಗೆ ಇತಿಹಾಸ ಪ್ರಸಿದ್ಧ ಮೈಸೂರು ಅರಮನೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಸಂಗೀತ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ “ರಾಜ್ಯ ಸಂಗೀತ ವಿದ್ವಾನ್” ಪ್ರಶಸ್ತಿ ನೀಡಿ 1995ರ ವರ್ಷದಲ್ಲಿ ಗೌರವಿಸಲಾಯಿತು.
ಅಪಾರ ಶಿಷ್ಯ ವೃಂದ ಹೊಂದಿದ್ದ ನಾಯಕರು ತಮ್ಮ ಪ್ರತಿಭಾಪೂರ್ಣ ಶಿಷ್ಯರಾದ ಮೀರಾ ಸಾವೂರ್, ಸೌವೂರ್, ಲಲಿತ್ ರಾವ್ ಮತ್ತು ಸುಧೀಂದ್ರ ಭೌಮಿಕ್ ಮುಂತಾದ ಪ್ರತಿಭಾವಂತರು ತಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ಮುಂದುವರಿಸಿಕೊಂಡು ಹೋಗುವ ಬಗ್ಗೆ ಅಪಾರ ಭರವಸೆಯನ್ನು ಹೊಂದಿದ್ದರು.
ಈ ಮಹಾನ್ ಸಂಗೀತ ವಿದ್ವಾಂಸರಾದ ಪಂಡಿತ್ ರಾಮರಾವ್ ನಾಯಕ್ 1998ರ ಅಕ್ಟೋಬರ್ 21ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.
ಮಾಹಿತಿ ಕೃಪೆ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಕಟಣೆಯಾದ ಕಲಾಚೇತನ ಕೃತಿಯಲ್ಲಿ ಎಂ. ಆರ್. ರಾಜಶೇಖರ್ ಅವರ ಲೇಖನ
Photo Courtesy: www.swarganga.org
On the birth anniversary of great musician Pandit Ramarao V Naik
ಕಾಮೆಂಟ್‌ಗಳು