ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅನಿಲ್ ಕುಂಬ್ಳೆ



 ಅನಿಲ್ ಕುಂಬ್ಳೆ


ಅನಿಲ್ ಕುಂಬ್ಳೆ ನಮ್ಮ ಮಹಾನ್ ಕ್ರಿಕೆಟ್ಟಿಗರು. ಅವರೊಬ್ಬ ವಿಶ್ವಶ್ರೇಷ್ಠ ಬೌಲರ್.‍

ಕುಂಬ್ಳೆ 1970ರ ಅಕ್ಟೋಬರ್ 17ರಂದು ಜನಿಸಿದರು. ಕುಂಬ್ಳೆ ಎಂದರೆ ಅದೆಂತದ್ದೋ ರೋಮಾಂಚನ.  ಬಾಲ್ ಹಿಡಿದು ಜಿಂಕೆಯಂತೆ ಚಿಮ್ಮುವ ಅವರ ಬೌಲಿಂಗ್ ವೈಖರಿಯನ್ನು ನೋಡುವುದೇ ಒಂದು ಸೊಗಸು.  ಬ್ಯಾಟಿಂಗ್ನಲ್ಲಿ ಕೂಡ ಭಾರತದ ಏಳು ವಿಕೆಟ್ ಪತನವಾಗಿದ್ದರೂ, ಇನ್ನೂ ಕುಂಬ್ಳೆ ಇದ್ದಾರೆ ನೋಡೋಣ ಇರಿ, ಎಂಬಷ್ಟು ಭರವಸೆ ಹುಟ್ಟಿಸುತ್ತಿದ್ದ  ಆಟಗಾರ.  ಭಾರತ ವಿಶ್ವ  ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಸ್ಥಾನದಲ್ಲಿ ಅಲಂಕೃತವಾಗಿತ್ತು ಈಗಲೂ ಆ ಸ್ಥಾನದಲ್ಲಿದೆ ಎಂದರೆ, ಕುಂಬ್ಳೆ ಅಂತಹ ಬೌಲರ್ ನೀಡಿದ ಅಮೋಘ ಕೊಡುಗೆ ಕೂಡ ಅದಕ್ಕೆ ಉತ್ತಮ ಬುನಾದಿ ಹಾಕಿದೆ ಎಂಬುದು ಎಲ್ಲ ಕ್ರೀಡಾಭಿಮಾನಿಗಳೂ ಒಪ್ಪುವ ವಿಷಯ.  

ಅಂದಿನ ದಿನದಲ್ಲಿ ಭಾರತದ ಪ್ರಮುಖ ಸ್ಪಿನ್ನರುಗಳೆಲ್ಲ ನಿವೃತ್ತಿ ಹೊಂದಿದಾಗ, ಆಯ್ಕೆದಾರರಾದ ರಾಜ್ ಸಿಂಗ್ ದುರ್ಗಾಪುರ್ ಆಶ್ಚರ್ಯವೋ ಎಂಬಂತೆ ಅನಿಲ್ ಕುಂಬ್ಳೆ ಅವರನ್ನು ಶ್ರೀಲಂಕಾ ವಿರುದ್ಧದ ಏಕ ದಿನ ಪಂದ್ಯ ಮತ್ತು ಇಂಗ್ಲೆಂಡ್ ಪ್ರವಾಸದ  ಟೆಸ್ಟ್ ತಂಡಕ್ಕೆ ಹೆಸರಿಸಿದ್ದರು. ಅಂದಿನ ಆ ಆಯ್ಕೆಯನ್ನು ಅತ್ಯಂತ ಸಮರ್ಥವಾಗಿ ಕಾಯ್ದುಕೊಂಡು ಬಂದ ಕುಂಬ್ಳೆ, ನಂತರ ತಾವಾಗಿಯೇ ನಿವೃತ್ತಿ ಘೋಷಿಸುವವರೆಗೆ ಹಿಂದಿರುಗಿ ನೋಡಿದ್ದೇ ಇಲ್ಲ. ಮೊದಲ ಸುತ್ತಿನಲ್ಲಿ ಸೋತು ಸುಣ್ಣವಾಗಿದ್ದ  ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡವನ್ನು ತಮ್ಮ ಸತ್ವಶಾಲಿ ನಾಯಕತ್ವ ಮತ್ತು ಬೌಲಿಂಗ್ನಿಂದ ಎರಡನೇ ಸುತ್ತಿನ ಪಂದ್ಯಗಳಲ್ಲಿ ಫೈನಲ್ ವರೆಗೆ ತಂದು ಪ್ರತಿಷ್ಟಿತ ತಂಡವನ್ನಾಗಿ ಮುನ್ನಡೆಸಿದವರು ಕೂಡಾ ಕುಂಬ್ಳೆ ಅವರೇ. ಮುಂದೆ ರಾಯಲ್ ಚಾಲೆಂಜರ್ಸ್, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಮುಂತಾದ ಐಪಿಎಲ್ ತಂಡಗಳಿಗೆ  ಅವರ ಸೇವೆ ಸಂದಿದೆ. ಕೆಲವರ್ಷದ ಹಿಂದೆ ಭಾರತೀಯ ಕ್ರಿಕೆಟ್ ತಂಡದ ತರಬೇತುದಾರ ಮಾರ್ಗದರ್ಶಕರೂ ಆಗಿದ್ದರು.

ಅನಿಲ್ ಕುಂಬ್ಳೆ   ಕರ್ನಾಟಕ ಕ್ರಿಕೆಟ್ ಸಂಸ್ಥೆಯನ್ನು ನಡೆಸುವ ಜವಾಬ್ಧಾರಿಯನ್ನು ಜನಪ್ರಿಯ ಬಹುಮತದಿಂದ ಗಳಿಸಿಕೊಂಡಿದ್ದರಾದರೂ ಒಂದು ಅವಧಿಯ ನಂತರದಲ್ಲಿ ಅದಕ್ಕೇ ಅಂಟಿಕೊಳ್ಳದೆ ಅಲ್ಲಿನ ಚುನಾವಣಾ ಸ್ಪರ್ಧೆಗಳಿಂದ ಹೊರಬಂದರು.    ಜೊತೆಗೆ ನಮ್ಮ ಅನಿಲ್ ಕುಂಬ್ಳೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ಲಿನ ಕ್ರಿಕೆಟ್ ಸಮಿತಿಯ ಚೇರ್ಮನ್ ಆಗಿ ಸಹಾ ಸರ್ವಾನುಮತದಿಂದ ಆಯ್ಕೆಗೊಂಡವರು.  

ಭಾರತೀಯ ಕ್ರಿಕೆಟ್ ತಂಡದ ಸದಸ್ಯನಾಗಿ ಕುಂಬ್ಳೆ ಅವರು ತೋರಿದ ಸಾಹಸಗಳು ಅಪೂರ್ವವಾದದ್ದು.  ದವಡೆ ಮುರಿದು ಪೂರ್ತಿ ತಲೆಗೆ ಬ್ಯಾಂಡೇಜ್ ಕಟ್ಟಿದ್ದಾಗ ಕೂಡ ತಂಡಕ್ಕಾಗಿ ಅಪೂರ್ವ ಬೌಲಿಂಗ್ ಮೆರೆದ ಕುಂಬ್ಳೆ ಅವರ ಕೆಚ್ಚೆದೆ ಅನನ್ಯ.  ವಿಶ್ವದ ಬ್ಯಾಟಿಂಗ್ ಸಾರ್ವಭೌಮ ಸಚಿನ್ ತೆಂಡೂಲ್ಕರ್ ಅವರಿಗೆ ಕುಂಬ್ಳೆ ಎಂದರೆ ಅಪಾರ ಪ್ರೀತಿ ಮತ್ತು ಗೌರವ.  ಅಂತೆಯೇ ಭಾರತದ ಎಲ್ಲ ಕ್ರಿಕೆಟ್ಟಿಗರು ಮತ್ತು ಕ್ರಿಕೆಟ್ ಪ್ರೇಮಿಗಳಿಗೆ ಕುಂಬ್ಳೆ ಎಂಬುದು ಆತ್ಮ ವಿಶ್ವಾಸ ಮತ್ತು ಉತ್ಕೃಷ್ಟ ಕ್ರೀಡಾಭಿಮಾನಗಳ ಸಂಕೇತ.

ಕುಂಬ್ಳೆ ಲೆಗ್ ಸ್ಪಿನ್ನರ್. ಅವರು ತಮ್ಮದೇ ಆದ ಬೌಲಿಂಗ್ ಶೈಲಿಗೆ ಹೆಸರುವಾಸಿ, ಇವರ ಗೂಗ್ಲಿ ಕ್ರಿಕೆಟ್ ಜಗತ್ತಿನಲ್ಲಿ ಸುಪ್ರಸಿದ್ಧ. ಇವರು ಮೊದಲು ಮಧ್ಯಮ ವೇಗದ ಬೌಲರ್ ಆಗಿ ಕ್ರಿಕೆಟ್ ಪ್ರವೇಶಿಸಿದ್ದು; ಇದು ಅವರಿಗೆ ಕೊಡುಗೆ ಎಂಬಂತೆ ವೇಗವಾಗಿ ಬೌಲ್ ಮಾಡಲು ಸಹಾಯಕವಾಗಿತ್ತು.  ಸಾಧಾರಣವಾಗಿ ಸ್ಪಿನ್ ಬೌಲರ್‌ಗಳು ಬಾಲ್ ಹಾಕುವ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಬೌಲ್ ಮಾಡುವ ಅನಿಲ್ ಕುಂಬ್ಳೆ, 619 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ. ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕುಂಬ್ಳೆ  ಪಾದಾರ್ಪಣೆ ಮಾಡಿದ್ದು ಎಪ್ರಿಲ್ 25, 1990ರಂದು, ಶ್ರೀಲಂಕಾ ಮೇಲಿನ ಪಂದ್ಯದಲ್ಲಿ. ಅದೇ ವರ್ಷ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟರು

ಭಾರತ 1992ರಲ್ಲಿ ದಕ್ಷಿಣ ಆಫ್ರಿಕ ಪ್ರವಾಸ ಮಾಡಿದಾಗ ಕುಂಬ್ಳೆ  ತಮ್ಮ ಗುಣಮಟ್ಟವನ್ನು ಸ್ಥಾಪಿಸಿ, 2ನೇ ಟೆಸ್ಟ್ನಲ್ಲಿ 8 ವಿಕೆಟ್‌ಗಳನ್ನು ಉರುಳಿಸಿದರು. ಅದೇ ವರ್ಷ ಇಂಗ್ಲೆಂಡ್ ಭಾರತಕ್ಕೆ ಪ್ರವಾಸ ಬಂದಾಗ, ಕೇವಲ 3 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಸರಾಸರಿ 19.8 ರನ್ನುಗಳಲ್ಲಿ ತೆಗೆದುಕೊಂಡರು. ಇವರು ಮೊದಲ 50 ವಿಕೆಟ್‌ಗಳನ್ನು ಕೇವಲ 10 ಟೆಸ್ಟ್ ಪಂದ್ಯಗಳಲ್ಲಿ ತೆಗೆದುಕೊಂಡರು.  ಕುಂಬ್ಳೆ ಇಂಥಹ ಸಾಧನೆಯನ್ನು ಮಾಡಿದ  ಭಾರತದ ಏಕೈಕ ಬೌಲರ್‌ ಆಗಿದ್ದಾರೆ. ಎರಪಳ್ಳಿ ಪ್ರಸನ್ನರವರಾದ ಮೇಲೆ 100 ಟೆಸ್ಟ್ ವಿಕೆಟ್‌ಗಳನ್ನು ಬಹು ಬೇಗ ಪಡೆದ ಎರಡನೆಯ ಭಾರತದ ಬೌಲರ್ ಕುಂಬ್ಳೆ. ಇವರು ಇದನ್ನು ಸಾಧಿಸಿದ್ದು 21 ಪಂದ್ಯಗಳಲ್ಲಿ (ಕರ್ನಾಟಕದವರೇ ಆದ ಪ್ರಸನ್ನ ಈ ಸಾಧನೆಯನ್ನು ಇಪ್ಪತ್ತೇ ಟೆಸ್ಟ್ ಪಂದ್ಯಗಳಲ್ಲಿ ಮಾಡಿದ್ದರು). ಒಂದು ದಿನದ ಪಂದ್ಯಗಳಲ್ಲಿ,  ಕುಂಬ್ಳೆ ಅವರ ಜೀವನದ ಅತುತ್ತಮ ಸಾಧನೆ ಬಂದದ್ದು ನವೆಂಬರ್ 27,  1993 ರಲ್ಲಿ ನಡೆದ  ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಹೀರೋ ಕಪ್ ಫೈನಲ್ ಪಂದ್ಯದಲ್ಲಿ.  ಈ ಪಂದ್ಯದಲ್ಲಿ  ಇವರು ಕೇವಲ 12 ರನ್‌ಗಳಿಗೆ 6 ವಿಕೆಟ್‌ಗಳನ್ನು ಉರುಳಿಸಿದರು. 

ವರ್ಷವಾರು ನೋಡಿದಲ್ಲಿ, ಕುಂಬ್ಳೆ ಆವರು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ್ದು 1996ರಲ್ಲಿ. ಈ ವರ್ಷದಲ್ಲಿ ಇವರು 61 ವಿಕೆಟ್‌ಗಳನ್ನು 20.24 ಸರಾಸರಿಯಲ್ಲಿ ಉರುಳಿಸಿದರು. ಒಟ್ಟಾರೆಯಾಗಿ ಅಂತರ ರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಕುಂಬ್ಳೆ 337 ವಿಕೆಟ್ ಪಡೆದಿದ್ದಾರೆ.

ಬ್ಯಾಟಿಂಗ್ನಲ್ಲಿ ಕೂಡ ಹಲವಾರು ಮಹತ್ವದ ಪಾತ್ರ ವಹಿಸಿದ್ದ ಕುಂಬ್ಳೆ ಅವರು ಕೆಲವೊಂದು ನಿರ್ಣಾಯಕ ಗೆಲುವುಗಳಲ್ಲಿ ಪ್ರಮುಖ ಪಾತ್ರ  ನಿರ್ವಹಿಸಿದ್ದರು.  ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಒಂದರಲ್ಲಿ ಶತಕ ಕೂಡ ಗಳಿಸಿ ತಾವೆಷ್ಟು ಸಾಮರ್ಥ್ಯಶಾಲಿ ಎಂಬುದನ್ನು ಕುಂಬ್ಳೆ  ಕ್ರಿಕೆಟ್ ಪಂಡಿತರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಒಂದು ಟೆಸ್ಟ್ ಇನ್ನಿಂಗ್ಸಿನಲ್ಲಿನ ಎಲ್ಲಾ ಹತ್ತು ವಿಕೆಟುಗಳನ್ನು ಪಡೆದ ವಿಶ್ವದ ಎರಡೇ ಬೌಲರುಗಳಲ್ಲಿ, ಅನಿಲ್ ಕುಂಬ್ಳೆ ಒಬ್ಬರಾಗಿದ್ದಾರೆ. ಇನ್ನೊಬ್ಬರು ಇಂಗ್ಲೆಂಡಿನ ಜಿಂ ಲೇಕರ್. ಈ ಸಾಧನೆಯನ್ನು ಕುಂಬ್ಳೆ ಫೆಬ್ರವರಿ 4ರಿಂದ ಫೆಬ್ರವರಿ 8, 1999ರಲ್ಲಿ ನವದೆಹಲಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮಾಡಿದರು. ಈ ವಿಶ್ವದಾಖಲೆಯ ಸಾಧನೆಯ ಸ್ಮರಣಾರ್ಥಕವಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲಿರುವ ಎಂ.ಜಿ.ರಸ್ತೆಯಲ್ಲಿನ ವೃತ್ತಕ್ಕೆ, ಅನಿಲ್ ಕುಂಬ್ಳೆ ವೃತ್ತ ಎಂದು ನಾಮಕರಣ ಮಾಡಲಾಗಿದೆ.

ಭಾರತದಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿರುವ ಬೌಲರ್ ಆದ ಅನಿಲ್ ಕುಂಬ್ಳೆ ಅವರು, 619 ವಿಕೆಟ್ ಗಳಿಸಿ ವಿಶ್ವದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರುಗಳ ಪೈಕಿ ನಾಲ್ಕನೆಯವರು.

ಅನಿಲ್ ಕುಂಬ್ಳೆ ‘ಜಂಭೋ’ ಎಂಬ ಅಡ್ಡಹೆಸರನ್ನು ಪಡೆದಿದ್ದಾರೆ. ಸ್ಪಿನ್ ಬೌಲಿಂಗ್ ಮಾಡಿಯೂ, ಸಾಮಾನ್ಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಬೌಲ್ ಮಾಡುವುದನ್ನು ಕರಗತ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಈ ಸಾಮರ್ಥ್ಯವನ್ನು  ‘ಜಂಬೋ ಜೆಟ್’ ಗೆ ಹೋಲಿಸಿ, ಇವರನ್ನು ಜಂಬೋ ಎಂದು ಕರೆಯಲಾಗುತ್ತದೆ. ಇದಲ್ಲದೇ, ಇವರ ಪಾದದ ಗಾತ್ರ ತುಂಬಾ ದೊಡ್ಡದಿರುವುದರಿಂದ ಅವರ ಟೀಂ ಮೇಟ್ ಗಳು ಈ ಹೆಸರನ್ನು ಇಟ್ಟಿದ್ದಾರೆ ಎಂದೂ ಹೇಳಲಾಗುತ್ತದೆ.

ಅನಿಲ್ ಕುಂಬ್ಳೆ ಅವರು ಕ್ರಿಕೆಟ್ ಮಾತ್ರವಲ್ಲದೆ ಛಾಯಾಗ್ರಹಣ, ಶಿಕ್ಷಣ ಮತ್ತು ವನ್ಯಜೀವಿ ಸಂರಕ್ಷಣೆ ಮುಂತಾದ ಹಲವಾರು ಸಂಘಟನೆಗಳಲ್ಲಿ  ಸಕ್ರಿಯರಾಗಿದ್ದಾರೆ.

1996ರಲ್ಲಿ ವಿಸ್ಡನ್ ವರ್ಷದ ಶ್ರೇಷ್ಠ ಕ್ರಿಕೆಟ್ಟಿಗ ಎಂಬ ಗೌರವ ಪಡೆದುದರ ಜೊತೆಗೆ ಭಾರತ ಸರ್ಕಾರದ ಪದ್ಮಶ್ರೀ  ಪ್ರಶಸ್ತಿ, ಅರ್ಜುನ ಪ್ರಶಸ್ತಿ, ಕರ್ನಾಟಕ ರಾಜ್ಯದ  ರಾಜ್ಯೋತ್ಸವ ಪ್ರಶಸ್ತಿಗಳನ್ನು ಕುಂಬ್ಳೆ ಪಡೆದಿದ್ದಾರಲ್ಲದೆ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಗೌರವವನ್ನೂ ಸ್ವೀಕರಿಸಿದ್ದಾರೆ.

"ಇಂತಹ ಮಹಾನ್ ಆಟಗಾರ ನಮ್ಮ ಕನ್ನಡಿಗ ಎಂಬ ಹೆಮ್ಮೆ ಸಂತೋಷ ನಮ್ಮದಲ್ಲವೆ!" ಕುಂಬ್ಳೆ ಸಾರ್ ನಿಮಗೆ ನಮ್ಮ ಆತ್ಮೀಯ ನಮನಗಳು ಮತ್ತು ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು.

On the birthday of our great cricketer Anil Kumble 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ