ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಿಂಗೀತಂ ರಾವ್



 ಸಿಂಗೀತಂ ಶ್ರೀನಿವಾಸ ರಾವ್


ಸಿಂಗೀತಂ ಶ್ರೀನಿವಾಸ ರಾವ್ ಭಾರತೀಯ ಚಲನಚಿತ್ರರಂಗ ಕಂಡ ಮಹಾನ್ ನಿರ್ದೇಶಕ.   'ಪುಷ್ಪಕ ವಿಮಾನ'ದಂತಹ ಸಂಭಾಷಣೆ ಇಲ್ಲದ ಭಾಷಾತೀತ ಚಿತ್ರವನ್ನು ಸೃಜಿಸಿದ ಮಹಾನ್ ಪ್ರತಿಭಾವಂತರಿವರು. ನಿರ್ದೇಶಕರಾಗಿ ಮಾತ್ರವಲ್ಲದೆ ನಿರ್ಮಾಪಕ, ಚಿತ್ರಕಥೆಗಾರ, ಸಂಗೀತ ಸಂಯೋಜಕ, ಗಾಯಕ, ಗೀತ ರಚನಕಾರ ಮತ್ತು ನಟರಾಗಿ ಸಹಾ ಅವರು ಚಿತ್ರರಂಗದಲ್ಲಿ ಶೋಭಿತರಾದವರು.

ಸಿಂಗೀತಂ ಶ್ರೀನಿವಾಸ ರಾವ್, ಈಗಿನ ಆಂಧ್ರದ ಭಾಗವಾಗಿರುವ ಉದಯಗಿರಿಯಲ್ಲಿ,  ಕನ್ನಡನೆಲದ ಮಧ್ವ ಪರಂಪರೆಗೆ ಸೇರಿದ ಕುಟುಂಬದಲ್ಲಿ 1931ರ ಸೆಪ್ಟೆಂಬರ್ 21ರಂದು ಜನಿಸಿದರು. 

ಮದ್ರಾಸ್ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರ ಪದವಿ ಪಡೆದ ಸಿಂಗೀತಂ ಶ್ರೀನಿವಾಸರಾವ್,  1957ರಿಂದ 1965 ಅವಧಿಯಲ್ಲಿ ಸಹಾಯಕ ನಿರ್ದೇಶಕ ಮತ್ತು ಗಾಯಕರಾಗಿ ಹರೀಂದ್ರನಾಥ ಚಟ್ಟೋಪಾಧ್ಯಾಯ್, ಕೆ.ವಿ. ರೆಡ್ಡಿ, ಪಿಂಗಳಿ ನಾಗೇಂದ್ರರಾವ್ ಮುಂತಾದವರೊಂದಿಗೆ ಮಾಯಾ ಬಜಾರ್, ಪೆಳ್ಳಿ ನಾಟಿ ಪ್ರಮಾಣಾಲು, ಜಗದೇಕವೀರುನಿ ಕಥಾ, ಶ್ರೀಕೃಷ್ಣಾರ್ಜುನ ಯುದ್ಧಮ್, ಸತ್ಯ ಹರಿಶ್ಚಂದ್ರ ಮುಂತಾದ ಪ್ರಸಿದ್ಧ ತೆಲುಗಿನ ಚಲಚಿತ್ರಗಳಿಗೆ ಕೆಲಸ ಮಾಡಿದರು. ನಂತರದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದೀ ಮತ್ತು ಇಂಗ್ಲಿಷ್ ಭಾಷೆಗಳು ಸೇರಿದಂತೆ ಸುಮಾರು 60 ಚಿತ್ರಗಳಿಗೆ ನಿರ್ದೇಶನ ಮಾಡಿದರು.

ಹೊಸ ಅಲೆಯ ಚಿತ್ರಗಳಿಗೆ ಭಾಷ್ಯ ಬರೆದ ಪಟ್ಟಾಭಿರಾಮ ರೆಡ್ಡಿ ನಿರ್ದೇಶಿಸಿದ ಕನ್ನಡದ 'ಸಂಸ್ಕಾರ' ಚಿತ್ರಕ್ಕೆ ಸಿಂಗೀತಂ ಶ್ರೀನಿವಾಸರಾವ್ ಎಕ್ಸಿಕ್ಯೂಟೀವ್ ಡೈರೆಕ್ಟರ್ ಆಗಿದ್ದರು.

1982ರಲ್ಲಿ ಸಿಂಗೀತಂ ಅವರು ರಾಜ್‍ಕುಮಾರ್ ಅವರ 'ಹಾಲು ಜೇನು' ಚಿತ್ರ ನಿರ್ದೇಶಿಸಿದರು. ಈ ಚಿತ್ರವಲ್ಲದೆ ರಾಜ್‍ಕುಮಾರ್ ಅವರ ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಶ್ರಾವಣ ಬಂತು, ಜ್ವಾಲಾಮುಖಿ, ಭಾಗ್ಯದ ಲಕ್ಷ್ಮೀ ಭಾರಮ್ಮ ಮತ್ತು ದೇವತಾ ಮನುಷ್ಯ ಚಿತ್ರಗಳನ್ನೂ ನಿರ್ದೇಶಿಸಿದರು. ಇದಲ್ಲದೆ ಆನಂದ್, ಚಿರಂಜೀವಿ ಸುಧಾಕರ, ಕ್ಷೀರಸಾಗರ, ಟುವ್ವಿ ಟುವ್ವಿ ಟುವ್ವಿ ಮತ್ತು ಮೇಕಪ್ ಚಿತ್ರಗಳಿಗೂ ನಿರ್ದೇಶನ ಮಾಡಿದರು. ಶೃತಿ ಸೇರಿದಾಗ, ಸಂಯುಕ್ತ, ಬೆಳ್ಳಿಯಪ್ಪ ಬಂಗಾರಪ್ಪ ಚಿತ್ರಗಳಿಗೆ ಚಿತ್ರಕಥೆ ರಚಿಸಿದರು. ಪ್ರಸಿದ್ಧ ಸಂಗೀತ ನಿರ್ದೇಶಕರಾದ ಎಸ್. ರಾಜೇಶ್ವರ ರಾವ್ ಅವರ ಶಿಷ್ಯರಾದ ಸಿಂಗೀತಂ,  ಭಾಗ್ಯದ ಲಕ್ಷ್ಮೀ ಭಾರಮ್ಮ ಮತ್ತು ಸಂಯುಕ್ತ ಚಿತ್ರಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದರು.  ರಾಜ್‍ಕುಮಾರ್ ಮತ್ತು ಅವರ ಮೂವರೂ ಪುತ್ರರ ಚಿತ್ರಗಳನ್ನು ನಿರ್ದೇಶಿಸಿದ ಹೆಗ್ಗಳಿಕೆ ಸಿಂಗೀತಂ ಅವರದು.

ರಾಜ್‍ಕುಮಾರ್ ಅವರ ಚಿತ್ರಗಳ ನಿರ್ದೇಶನದ ಸಂದರ್ಭದಲ್ಲಿ ಪರಿಚಿತರಾದ ರಾಜ್ ಸಂಬಂಧಿ ಶೃಂಗಾರ್ ನಾಗರಾಜ್ ಅವರೊಂದಿಗಿನ ಸಹನಿರ್ಮಾಣದಲ್ಲಿ ಸಿಂಗೀತಂ ಶ್ರೀನಿವಾಸರಾವ್, ಪ್ರಸಿದ್ಧ 'ಪುಷ್ಪಕ ವಿಮಾನ' ಚಿತ್ರ ನಿರ್ಮಿಸಿ ನಿರ್ದೇಶಿಸಿದರು.

ರಾಜ್‍ಕುಮಾರ್ ಅವರ ಬಹುತೇಕ ಚಿತ್ರಗಳ ಛಾಯಗ್ರಾಹಕರಾದ ಬಿ.ಸಿ. ಗೌರಿಶಂಕರ್ ಅವರು ಸಿಂಗೀತಂ ಅವರ  ಪ್ರಸಿದ್ಧ 'ಮೈಖೇಲ್ ಮದನ ಕಾಮರಾಜನ್' ತಮಿಳು ಚಿತ್ರದಲ್ಲಿ ಛಾಯಾಗ್ರಹಣ ನಿರ್ವಹಿಸಿದರು.

ಕನ್ನಡ ಚಲನಚಿತ್ರ ಪತ್ರಕರ್ತರ ಸಂಘವು ಸಿಂಗೀತಂ ಶ್ರೀನಿವಾಸರಾವ್ ಅವರ ಕುರಿತು ವಿಶೇಷ ಜೀವನ ಚರಿತ್ರೆ ರೂಪಿಸಿ ಗೌರವಿಸಿತು. ಸಿಂಗೀತಂ ಶ್ರೀನಿವಾಸರಾವ್ ಅವರಿಗೆ 3 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸಂದವು. ಇದಲ್ಲದೆ ಅವರಿಗೆ ಎರಡು ರಾಷ್ಟ್ರಪ್ರಶಸ್ತಿಗಳು, ಏಳು ಆಂಧ್ರಪ್ರದೇಶ ಸರ್ಕಾರದ ನಂದಿ ಪ್ರಶಸ್ತಿ ಮತ್ತು ಅನೇಕ ಫಿಲಂಫೇರ್ ಪ್ರಶಸ್ತಿಗಳು ಸಂದವು. ಫಿಲಂ ಫೆಡರೇಷನ್ ಆಫ್ ಇಂಡಿಯಾದಿಂದ ಜೀವಮಾನ ಸಾಧನೆಯ ಪ್ರಶಸ್ತಿ ಸಹಾ ಅವರಿಗೆ ಸಂದಿದೆ.

ಕಮಲಹಾಸನ್ ಅವರಿಗೆ ವಿಶಿಷ್ಟ ಪಾತ್ರಗಳನ್ನು ಸೃಷ್ಟಿಸಿದವರು ಸಿಂಗೀತಂ ಶ್ರೀನಿವಾಸರಾವ್. ಪುಷ್ಕಕ ವಿಮಾನ, ರಾಜಾ ಪಾರ್ವೈ, ಸೊಮ್ಮೊಕಡಿದಿ ಸೊಕ್ಕೊಕಡಿದಿ, ಅಪೂರ್ವ ಸಹೋದರರಗಳ್, ಮೈಕೇಲ್ ಮದನ ಕಾಮರಾಜನ್ ಮುಂತಾದ ಚಿತ್ರಗಳಲ್ಲಿ ಕಮಲಹಾಸನ್ ಪ್ರತಿಭೆಗೆ ಅವರು ನೀಡಿದ ಮೆರುಗು ಮಹತ್ವದ್ದು.

ಸಿಗೀತಂ ಶ್ರೀನಿವಾಸರಾವ್ ಅವರು ನಿರ್ಮಿಸಿದ ಆನಿಮೇಷನ್ ಚಿತ್ರಗಳಾದ 'ಸನ್ ಆಫ್ ಅಲಾದ್ದಿನ್' ಮತ್ತು 'ಘಟೋತ್ಗಜ್' ಸಹಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದವು. 

ಸಿಗೀತಂ ಅವರು ಪತ್ರಕರ್ತರಾಗಿ, ನಾಟಕರಚನಕಾರರಾಗಿ, ರಂಗನಿರ್ದೇಶಕರಾಗಿ ಸಹಾ ಕೆಲಸ ಮಾಡಿದ್ದಾರೆ. ಅನೇಕ ತೆಲುಗು, ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಹಿನ್ನೆಲೆ ಸಂಗೀತ (soundtrack) ನೀಡಿದ್ದಾರೆ. ಅವರ ಚಿತ್ರಾರ್ಜುನ ಎಂಬ ಕಥೆ ಇಂಗ್ಲಿಷಿಗೂ ಭಾಷಾಂತರಗೊಂಡು ಅಮೆರಿಕದ ಟೆಲಿವಿಷನ್ ಅಲ್ಲಿ ಮೂಡಿತ್ತು. ಅವರ ಸತ್ಯಕಥೆ ಆಧಾರಿತ ‘ಮಯೂರಿ’ ತೆಲುಗು ಚಿತ್ರ (ಹಿಂದಿಯಲ್ಲಿ ನಾಚೇ ಮಯೂರಿ) ಮತ್ತು ಕನ್ನಡದ ಮೂಲಕ ಮೂಡಿದ ಭಾಷಾತೀತ ಚಿತ್ರ 'ಪುಷ್ಪಕ ವಿಮಾನ' ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾದವು. ತೆಲುಗಿನ ಅವರ ಅಮೆರಿಕ ಅಮ್ಮಾಯಿ, ಅಮೆರಿಕ ಅಬ್ಬಾಯಿ, ಆದಿತ್ಯ ಮುಂತಾದವು ಸಹಾ ಅಸಾಮಾನ್ಯ ಬಾಕ್ಸಾಫೀಸ್ ಯಶ ಸಾಧಿಸಿದಂತಹವು.

ಹೀಗೆ ಸರ್ವರೀತಿಯ ಪ್ರತಿಭೆಯಲ್ಲಿ, ವಿಶಿಷ್ಟತೆಯಲ್ಲಿ, ಕಲಾತ್ಮಕತೆಯಲ್ಲಿ, ಹೊಸತನದಲ್ಲಿ, ಯಶಸ್ಸಿನಲ್ಲಿ, ಸಾಮಾನ್ಯರಿಂದ ಬುದ್ಧಿಜೀವಿಗಳವರೆಗಿನ ನಾಡಿಮಿಡಿತದಲ್ಲಿ, ಪ್ರಶಸ್ತಿ ಗಳಿಕೆಯಲ್ಲಿ, ಭಾಷೆಗಳ ಗಡಿಮೀರುವಿಕೆಯಲ್ಲಿ ಹೀಗೆ ಎಲ್ಲ ರೀತಿಯಲ್ಲಿ ಸಿಗೀತಂ ಶ್ರೀನಿವಾಸ ರಾಯರಂತೆ ಚಿತ್ರರಂಗದಲ್ಲಿ ಮಿನುಗಿದವರು ವಿರಳ ಎಂದರೆ ತಪ್ಪಾಗಲಾರದು.


On the birthday of great director and multifaceted talent Singeetam Sreenivasa Rao 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ